Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಎಲ್ಲೆಲ್ಲೋ ಓಡುವ ಮನಸೇ ನೋವನ್ನೆಲ್ಲಿ ಬಚ್ಚಿಡುವೆ?

Wednesday, 30.05.2018, 3:03 AM       No Comments

| ರವೀಂದ್ರ ಎಸ್. ದೇಶಮುಖ್

ಹೃದಯವನ್ನು ಎಲ್ಲೆಲ್ಲೋ ಇಟ್ಟು ಹೊರಟರೆ ಲೈಫ್ ಜರ್ನಿ ರಾಂಗ್​ರೂಟಲ್ಲಿ ಸಾಗದೆ ಏನಾಗುತ್ತೆ ಹೇಳಿ? ವಾಟ್ಸ್​ಆಪ್​ಗೆ ಮೊನ್ನೆ ಬಂದ ಮೇಸೇಜ್- ‘ನಿಮ್ಮ ಟೂತ್​ಪೇಸ್ಟ್​ನಲ್ಲಿ ಉಪು್ಪ ಇದೆಯಾ ಅಂತ ಕೇಳುವ ಜನ ಸಿಕ್ತಾರೆ. ಆದ್ರೆ, ನಿಮ್ಮ ಮನಸ್ಸಲ್ಲಿ ನೋವು ಇದೆಯಾ ಅಂತ ಕೇಳೋ ಜನ ಎಲ್ಲಿದ್ದಾರೆ ಮಾರಾಯ್ರೆ’!! ನಿಜ, ಬದುಕು ದಿನದಿಂದ ದಿನಕ್ಕೆ ಕೃತಕವಾಗುತ್ತಿದೆ. ಯಂತ್ರಗಳನ್ನು ಹೆಚ್ಚೆಚ್ಚು ಬಳಸುತ್ತ ಮನುಷ್ಯ ತಾನೇ ಯಂತ್ರದಂತಾಗಿ ಬಿಟ್ಟಿದ್ದಾನೆ.

ಇತ್ತೀಚಿನ ವರದಿ ಪ್ರಕಾರ ಪ್ರಪಂಚದಲ್ಲಿ 30 ಕೋಟಿಗೂ ಹೆಚ್ಚು ಜನ ಗಂಭೀರ ಖಿನ್ನತೆಗೆ ಒಳಗಾಗಿದ್ದಾರಂತೆ. ಈ ಪೈಕಿ ಯುರೋಪಿನವರ ಸಂಖ್ಯೆ 8.30 ಕೋಟಿ. ಡಿಪ್ರೆಶನ್​ನಿಂದ ಜಾಗತಿಕ ಅರ್ಥವ್ಯವಸ್ಥೆಗೆ 67 ಲಕ್ಷ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ ಹೇಳಿದೆ. ಇನ್ನೂ ಆತಂಕದ ವಿಷಯ ಏನಪ್ಪ ಅಂದ್ರೆ 2005ರಿಂದ 2015ರ ಅವಧಿಯಲ್ಲಿ ಖಿನ್ನತೆ ರೋಗಿಗಳ ಸಂಖ್ಯೆ ಪ್ರತಿವರ್ಷ ಸರಾಸರಿ ಶೇಕಡ 18ರಷ್ಟು ಹೆಚ್ಚಾಗುತ್ತಿದೆ. ಮಾತ್ರವಲ್ಲ ಚಿಂತೆ ಮತ್ತು ಬೇಸರದಿಂದ ಪೀಡಿತರಾದವರ ಸಂಖ್ಯೆ 26 ಕೋಟಿಯ ಗಡಿ ದಾಟಿದೆ. ಈ ಚಿಂತೆ, ಬೇಸರವೇ ಕ್ರಮೇಣ ಖಿನ್ನತೆಯ ರೂಪ ಪಡೆದುಕೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಮೆರಿಕದ ಪರಿಸ್ಥಿತಿ ಮತ್ತಷ್ಟು ಶೋಚನೀಯ. ಅಲ್ಲಿನ ಪ್ರತಿ 5 ಜನರಲ್ಲಿ ಒಬ್ಬರು ಖಿನ್ನತೆಗೆ ಗುರಿಯಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಏಡ್ಸ್, ಕ್ಯಾನ್ಸರ್​ನಿಂದ ಸಾಯುವವರಿಗಿಂತ ಹೆಚ್ಚು ಜನರು ಖಿನ್ನತೆಯಿಂದಲೇ ಸಾಯುತ್ತಾರಂತೆ!!

ಅಯ್ಯೋ ದೇವರೇ ಯಾಕೆ ಈ ಪರಿಸ್ಥಿತಿ ಬಂತು? ಎಲ್ಲೆಲ್ಲೋ ಓಡೋ ಮನಸ್ಸು ಈಗ ಬರೀ ಚಿಂತೆ ಹಿಂದೆ ಓಡಲಾರಂಭಿಸಿದೆ ಏಕೆ? ಬೇರೆಯವರನ್ನು, ಪರಿಸ್ಥಿತಿಗಳನ್ನು, ವಿಧಿಯನ್ನು ಬಯ್ಯೋದರಲ್ಲಿ ನಾವು ನಿಸ್ಸೀಮರು ಬಿಡಿ. ಆದರೆ, ಜೀವನ ಎಂಬ ರೋಚಕ ಪಯಣಕ್ಕೆ ಅದೆಷ್ಟು ಮುಖವಾಡಗಳನ್ನು ತೊಡಿಸಿದ್ದೇವೆ, ಅದೆಷ್ಟು ಕೃತಕತೆ ಆವರಿಸಿಕೊಂಡಿದೆ, ಸ್ವಾರ್ಥ ಹೇಗೆ ಕೇಕೆಹಾಕಿ ಕುಣಿಯುತ್ತಿದೆ ಎಂದು ಎಂದಾದರೂ ಅವಲೋಕಿಸಿಕೊಂಡಿದ್ದೇವಾ?

‘ದಿನಾ ಬೆಳಗ್ಗೆ ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಅದು ನಮ್ಮನ್ನು ಸರ್​ಪ್ರೖೆಸ್ ಗೊಳಿಸುವಂತಿರಬೇಕು’- ಅಂದರೆ ದಿನವೂ ಖುಷಿಯ, ಅಚ್ಚರಿಯ ಹೊಸ ಅವತಾರವನ್ನೆತ್ತಬೇಕು ಎಂದೆಲ್ಲ ಹೇಳಲಾಗುತ್ತೆ. ಆದರೆ, ಅದೆಷ್ಟು ಮುಖಗಳಲ್ಲಿ, ಕಣ್ಣುಗಳಲ್ಲಿ ನೋವು, ನಿರಾಸೆ, ಆಕ್ರಂದನವೇ ತುಂಬಿಕೊಂಡಿದೆಯಲ್ಲ. ಜೀವನದ ಜತೆ ಮುಖಾಮುಖಿ ಆಗದೆ ಅದೆಷ್ಟೋ ಸಮಯವಾಯಿತಲ್ಲವೇ? ಅಂತರಂಗದ ಗೂಡು ಲಾಕ್ ಆಗಿದೆ, ಬಾಹ್ಯದಲ್ಲೆಲ್ಲ ಕೃತಕತೆಯ ಪ್ರಭಾವಳಿ ಆವರಿಸಿಕೊಂಡಿದೆ. ಬೇರೆಯವರಿಂದ ನಮ್ಮ ಅಪೇಕ್ಷೆಗಳು ಹೆಚ್ಚಾಗಿವೆ. ನಾವು ಮಾತ್ರ ಸೌಜನ್ಯವನ್ನೂ ಮರೆತಂತೆ ವರ್ತಿಸುತ್ತಿದ್ದೇವೆ.

ಜಗತ್ತಿನ ಪ್ರಸಕ್ತ ದೊಡ್ಡ ತಲ್ಲಣ ಯಾವುದು ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞರು ನೀಡಿರುವ ಉತ್ತರ- ‘ಪ್ರೀತಿ ಮತ್ತು ಸಂವಾದದ ಕೊರತೆ’! ನಮಗೆ ಎಲ್ಲವೂ ಬೇಕು, ಆದರೆ ಕೊಂಚ ಪ್ರೀತಿ ಹಂಚಲು ಅದೆಷ್ಟು ಚೌಕಾಶಿ ಮಾಡ್ತೇವೆ. ಈಗ ಏನೆಲ್ಲ ಇದ್ದರೂ ಅದು ಪ್ರೀತಿ ಮತ್ತು ಸಂವಾದ ಹುಟ್ಟುಹಾಕುತ್ತಿಲ್ಲ ಎಂದಾದರೆ ಸಾಗುತ್ತಿರುವ ದಾರಿಯನ್ನೊಮ್ಮೆ ಪರೀಕ್ಷಿಸಬೇಕು.

ಕೈಯಲ್ಲಿ ಸ್ಮಾರ್ಟ್​ಫೋನು, ಅದಕ್ಕೆ 4 ಜಿ ಕನೆಕ್ಷನ್ನು, ನೂರಾರು ವಾಟ್ಸ್​ಆಪ್ ಗ್ರೂಪ್​ಗಳು, ಅದರ ತುಂಬೆಲ್ಲ ಪರಿಚಯವೇ ಇರದ ಸ್ನೇಹಿತರು, ಯಾರಾದರೂ ಎದುರಿಗೆ ಸಿಕ್ಕಾಗ ನಾಲ್ಕು ಮಾತಿಗೂ ತಡವರಿಕೆ, ಓಡಾಡಲು ಗಾಡಿ, ಮೋಟಾರು ಮತ್ತೊಂದು ಮಗದೊಂದು… ಎಲ್ಲರಿಗಿಂತ ವೇಗವಾಗಿ ಸಾಗಬೇಕು, ಅದಕ್ಕಾಗಿ ಓಡುತ್ತಲೇ ಇರಬೇಕು…! ಆದರೆ ಗಮ್ಯ ಯಾವುದು, ಎಲ್ಲಿ? ಅದರ ಪರಿವೆ ಯಾರಿಗಿದೆ ಹೇಳಿ?

ನಾವೆಲ್ಲ ಬಾಲ್ಯದಲ್ಲಿ ಮೊಲ-ಆಮೆಯ ಕತೆ ಕೇಳಿದ್ದೇವೆ. ಪುಟಿದು ಓಡುವ ಮೊಲ ಓಟದಲ್ಲೇನೋ ಗೆಲ್ಲಬಹುದು. ಆದರೆ ಜೀವನದ ಓಟದಲ್ಲಿ ಅದಕ್ಕೆ ಇರುವ ಆಯಸ್ಸು ಕಡಿಮೆಯೇ. ಎಲ್ಲರೂ ಮೊಲದ ಧಾವಂತವನ್ನು ಗಮನಿಸುತ್ತಿದ್ದೇವೆಯೆ ಹೊರತು ಆಮೆಯ ನಿಧಾನ ಮತ್ತು ಸುರಕ್ಷಿತ ನಡಿಗೆಯನ್ನಲ್ಲ!

ಮನಸ್ಸುಗಳು ಏಕೆ ಭಾರವಾಗುತ್ತಿವೆ ಎಂದರೆ ಮಾತು-ಭಾವನೆಗಳ ವಿನಿಮಯವೇ ತುಟ್ಟಿಯಾಗಿ ಹೋಗಿದೆ. ದೇವಸ್ಥಾನದ ಪ್ರಾಂಗಣಗಳಲ್ಲಿ ಕುಳಿತ ನಿರಾಶ ಕಣ್ಣುಗಳು, ಪಾರ್ಕ್​ಗಳ ಬೆಂಚ್ ಮೇಲೆ ಮೂರ್ತಿಗಳಂತೆ ಕುಳಿತ ಜೀವಗಳು, ಆ ಕಾಲ ಎಷ್ಟು ಚೆನ್ನಾಗಿತ್ತಲ್ವ ಎಂದು ಹಲುಬುವ ಮುದುಕರು, ‘ನನ್ನನ್ನೇ ಮೊಬೈಲ್ ಅಥವಾ ಟಿ.ವಿ. ಸ್ಕ್ರೀನ್ ಮಾಡಿಬಿಡಪ್ಪ ದೇವ್ರೆ’ ಎಂದುಕೊಳ್ಳುವ ವಯಸ್ಕರು, ಚಾಟ್ ಟೈಪಿಸುತ್ತ ಟೈಪಿಸುತ್ತ ಮಾತುಗಳನ್ನೇ ಕಳೆದುಕೊಳ್ಳುತ್ತಿರುವ ಯುವಮನಸುಗಳು, ಮೈದಾನದಲ್ಲಿನ ಆಟ ಮರೆತು ಕಾರ್ಟೂನ್​ಗಳ ಪ್ರಪಂಚದಲ್ಲಿ ಮುಳುಗಿರುವ ಚಿಣ್ಣರು, ಬೆಳಗಾಗೆದ್ದರೆ ಎರಡು ತಾಸು ಟ್ರಾಫಿಕ್​ನಲ್ಲೇ ಸಾಯ್ಬೇಕು ಅಂತ ಗೋಳಾಡುತ್ತ ಸಿಲ್ಕ್​ಬೋರ್ಡ್ ಸಿಗ್ನಲ್ಲಲ್ಲೇ ತಿಂಡಿ ಬಾಕ್ಸ್ ಬಿಚ್ಚಿ ಬಾಯಿಗೆ ತುರುಕಿಕೊಳ್ಳುವ ನವದಂಪತಿ…. ಇಲ್ಲಿ ಮಾತಾಡಲು ಯಾರಿಗಿದೆ ಹೇಳಿ ಪುರುಸೊತ್ತು?

ಆದರೆ ಮಾತುಗಳಿಗೆ ಮನಸ್ಸನ್ನು ಪ್ರಫುಲ್ಲಗೊಳಿಸುವ, ಆಹ್ಲಾದಗೊಳಿಸುವ ಶಕ್ತಿ ಇದೆ. ಹಳ್ಳಿಯ ಅರಳಿಕಟ್ಟೆಗಳಾಗಲಿ, ಊರಿನ ಓಣಿಯ ಕಾಂಪೌಂಡ್ ಮುಂದಿನ ಕಟ್ಟೆಗಳಾಗಲಿ ಅವು ಮಾತಿನ ಮಂಟಪವನ್ನು ಸೃಷ್ಟಿಸಿ ಭಾವನೆಗಳ ಹರಿವಿಗೆ ಅನುವು ಮಾಡಿಕೊಟ್ಟು ಮನಸ್ಸನ್ನು ನಿರಾಳವಾಗಿಸುತ್ತಿದ್ದವು. ಈಗ ಮಾತಾಡಲೂ ಪ್ರತಿಷ್ಠೆ ಅಡ್ಡಿ! ಕಷ್ಟ ಹೇಳಿಕೊಂಡುಬಿಟ್ಟರೆ ನಮ್ಮನ್ನು ಕೀಳಾಗಿ ಕಾಣುತ್ತಾರೆ ಎಂಬ ಅವ್ಯಕ್ತ ಭಯ. ಎಲ್ಲರೊಂದಿಗೆ ಆಗದಿದ್ದರೂ ಕೆಲವೇಕೆಲವು ಆತ್ಮೀಯ ಜೀವಗಳ ಮುಂದೆ ಕಷ್ಟ-ಸುಖದ ಸಮಾಚಾರ ತೆರೆದಿಟ್ಟು, ಹಗುರವಾಗಬಹುದಲ್ಲವೇ?

ಸುಮ್ನೆ ಯೋಚಿಸಿ- ಭಾವನೆಗಳನ್ನು ಚೇತೋಹಾರಿಯಾಗಿಸಲು ನಾವೇನು ಮಾಡುತ್ತಿದ್ದೇವೆ? ಊಹೂಂ. ಭಾವನೆಗಳನ್ನು ಭಾರವಾಗಿಸಲು ಮಾತ್ರ ಏನೇನೋ ಮಾಡ್ತಿದ್ದೇವೆ. ಆತ್ಮೀಯರ, ಸ್ನೇಹಿತರ, ಕುಟುಂಬದವರ ಹುಟ್ಟುಹಬ್ಬ/ಮದುವೆ ವಾರ್ಷಿಕೋತ್ಸವದಂಥ ಸಂಭ್ರಮಕ್ಕೆ ಒಂದು ಫೋನ್ ಮಾಡಿ ಶುಭಾಶಯ ಹೇಳುವ ಸಂಪ್ರದಾಯವೇ ಕರಗುತ್ತಿದೆ. ಫೇಸ್​ಬುಕ್ ಗೋಡೆ ಮೇಲೋ,

ವಾಟ್ಸ್​ಆಪ್​ನ ಸಂತೆಯಲ್ಲೋ ‘ಹ್ಯಾಪಿ ಬರ್ತ್ ಡೇ’ ಅಂತ ಟೈಪಿಸಿಬಿಟ್ಟರೆ ‘ಜವಾಬ್ದಾರಿ’ ಮುಗಿದುಹೋಯ್ತು! ಆ ವ್ಯಕ್ತಿ/ಸಂಬಂಧ ನಮಗೇಕೆ ಮುಖ್ಯ, ನಮ್ಮ ಜೀವನದಲ್ಲಿ ಅವರಿಗೆ ಇರುವ ಪ್ರಾಮುಖ್ಯ- ಇದನ್ನೆಲ್ಲ ನಾಲ್ಕು ಶಬ್ದಗಳಲ್ಲಿ ಹೇಳಿದರೂ ಎದುರಿನ ಜೀವ ಖುಷಿಯ ಖಜಾನೆಯನ್ನು ನಿಮ್ಮ ಹೃದಯಕ್ಕೂ ರವಾನಿಸುತ್ತದೆ! ಪರಸ್ಪರ ಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ‘ನನ್ನ ಹಿತ ಬಯಸುವ, ನನ್ನನ್ನು ಪ್ರೀತಿಸುವ ಜನ ಇದ್ದಾರೆ’ ಎಂಬ ಭಾವನಾತ್ಮಕ ಬೆಂಬಲ ದೊರೆಯುತ್ತದೆ. ಇಂಥದ್ದೊಂದು ಎಮೋಷನಲ್ ಸಪೋರ್ಟ್ ದೊರೆತುಬಿಟ್ಟರೆ ಖಿನ್ನತೆಯ ಸಮಸ್ಯೆಯನ್ನು ಶೇ. 90ರಷ್ಟು ನಿವಾರಿಸಿ ಬಿಡಬಹುದು. ಏಕೆಂದರೆ, ಖಿನ್ನತೆಯ ಶುರುವಾತ್ ಆಗುವುದೇ ‘ನನಗೆ ಯಾರೂ ಇಲ್ಲ’, ‘ನನಗೆ ಪ್ರೀತಿ ಸಿಗುತ್ತಿಲ್ಲ’ ಎಂಬ ಕಳವಳದಿಂದ.

ಮಾತು ಮತ್ತು ಭಾವನೆಗಳಿಂದಲೇ ಅನನ್ಯ ಪ್ರಾಣಿ ಎನಿಸಿಕೊಂಡ ಮನುಷ್ಯ ಈ ಎರಡೂ ಸಂಗತಿಗಳನ್ನು ಕಳೆದುಕೊಂಡರೆ ಉಸಿರಾಡುವ ಯಂತ್ರವಾಗುತ್ತಾನಷ್ಟೇ. ಯಾವುದೂ ನಮ್ಮನ್ನು ಮುದಗೊಳಿಸುತ್ತಿಲ್ಲ, ಆಹ್ಲಾದಗೊಳಿಸುತ್ತಿಲ್ಲ ಎಂದರೆ ಜೀವನೋತ್ಸಾಹ ನಿಲ್ದಾಣದಿಂದ ತುಂಬ ದೂರ ನಿರ್ಗಮಿಸಿದ್ದೇವೆ ಎಂದರ್ಥ. ಸಣ್ಣ-ಸಣ್ಣ ಸಂಗತಿ, ಅನುಭವ, ಖುಷಿಗಳೇ ಜೀವನದ ಹಾದಿಯನ್ನು ಸುಂದರಗೊಳಿಸೋದು. ಸಮಸ್ಯೆಯೆಂದರೆ, ಬಹುತೇಕರಿಗೆ ಇಂದು ಸಣ್ಣದರಲ್ಲಿ ಸಂತೃಪ್ತಿಯೇ ಇಲ್ಲ. ಎಲ್ಲವೂ ಬೃಹತ್ ಪ್ರಮಾಣದಲ್ಲೇ ಬೇಕು.

ಸೂರ್ಯೋದಯದ ಸೊಬಗು, ಸೂರ್ಯಾಸ್ತದ ಮುದ, ಮಳೆಯ ಇಂಪಾದ ಸದ್ದು, ಹೂವಿನ ವಯ್ಯಾರ, ಮಣ್ಣಿನ ವಾಸನೆ, ಮಾತಿನ ಸುಖ, ನಡಿಗೆಯ ಚೈತನ್ಯ… ಇದನ್ನೆಲ್ಲ ಬಿಡಿಬಿಡಿಯಾಗಿ ಅಥವಾ ಒಟ್ಟಾಗಿ ಅನುಭವಿಸಿದ ಸಾಮಾನ್ಯರೇ ಕವಿಗಳಾಗಿದ್ದಾರೆ, ಕಲಾವಿದರಾಗಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಮಾನವರಾಗಿದ್ದಾರೆ. ಆದರೆ, ಈ ಅನುಭವಗಳನ್ನೇ ದೂರವಿಟ್ಟು ಅಹಂನ ಕೋಟೆಯನ್ನು ಸೃಷ್ಟಿಸಿಕೊಂಡರೆ, ಸ್ವಾರ್ಥದ ಬೇಲಿ ಹಾಕಿಕೊಂಡರೆ ಜೀವನದ ಹಾಡು ಶ್ರುತಿ ತಪ್ಪದಿರುತ್ತದೆಯೆ?

ಸಂಬಂಧಕ್ಕೂ ಜೀವನಕ್ಕೂ ಬೆಲೆ ಕೊಡೋದನ್ನು ರೂಢಿಸಿಕೊಂಡರೆ ಎಲ್ಲವೂ ಸರಾಗ. ಅಮೆರಿಕದ ಅತಿದೊಡ್ಡ ಬ್ಯಾಂಕ್ ಜೆಪಿ ಮಾರ್ಗನ್​ನ ಸಿಇಒ ಜೆಮಿ ಡೈಮನ್- ‘ಕುಟುಂಬಕ್ಕೆ ನೀಡಿರುವ ಪ್ರಥಮ ಆದ್ಯತೆಯೇ ನನ್ನ ಯಶಸ್ಸಿನ ರಹಸ್ಯ’ ಎಂದಿದ್ದಾರೆ! ಪರಿವಾರಕ್ಕೆ ಮಹತ್ವ ಕೊಡದೆ ಜೀವನ ಗ್ರೇಟ್ ಆಗಲು ಸಾಧ್ಯವಿಲ್ಲ ಎನ್ನುವ ಮಾರ್ಗನ್ ಆಸ್ತಿಮೌಲ್ಯ 8,900 ಕೋಟಿ ರೂ. ಆದರೆ, ಅದಕ್ಕಿಂತಲೂ ಮಿಗಿಲಾದ ಸಂಪತ್ತನ್ನು ಅವರು ಕುಟುಂಬಖುಷಿಯಲ್ಲಿ ಕಂಡುಕೊಂಡಿದ್ದಾರೆ. ‘ಜೀವನದಲ್ಲಿ ವೈಫಲ್ಯ ಹೊಂದುವುದು ಮಾಮೂಲಿ. ಆದರೆ ಸೋತ ಮಾತ್ರಕ್ಕೆ ಮೈದಾನವನ್ನೇ ಬಿಡುವುದು ಮಾತ್ರ ಸರಿಯಲ್ಲ’ ಎನ್ನುವ ‘ದ ಸ್ಟ್ರೀಟ್’ ಎಂಬ ವಿತ್ತೀಯ ವೆಬ್​ಸೈಟ್​ನ ಸ್ಥಾಪಕ ಜಿಮ್ ಕ್ರೇಮರ್ ತಮ್ಮ ಕಷ್ಟಕಾಲದಲ್ಲಿ ಸಹಕರಿಸಿದ ಸ್ನೇಹಿತರನ್ನು ಈಗಲೂ ಸ್ಮರಿಸಿಕೊಳ್ಳುತ್ತಾರೆ ಮತ್ತು ಗೆಳೆಯರ ಜತೆ ಸಾಕಷ್ಟು ಸಮಯ ಕಳೆಯುತ್ತಾರೆ. ಖುಷಿ ಇಂಥ ಸಂಗತಿಗಳಲ್ಲೇ ಇದೆ ಅಲ್ಲವೆ?

‘ಯೇ ಮುಶ್ಕಿಲೇ, ಯೇ ಕಶ್ಮಕಶ್, ಯೇ ಜದ್ದೆಜಹದ್, ಯೇ ದುಶ್ವಾರಿಯಾ ಎ ಜಿಂದಗಿ ತು ಲಾಖ್ ನಖರೇ ದೀಖಾ… ತುಝುಸೇ ಇಶ್ಕ ಹೈ ತೋ ಹೈ’

(ಕಷ್ಟಕೋಟಲೆಗಳು, ತಾಪತ್ರಯಗಳು, ಪ್ರಯತ್ನಗಳು, ಮುನಿಸುಗಳು… ಓ ಜೀವನವೇ ನೀನು ಲಕ್ಷ ಕೀಟಲೆಗಳನ್ನು ಮಾಡು. ನಿನ್ನ ಮೇಲೆ ಪ್ರೀತಿ ಇದೆ ಎಂದರೆ ಇದೆಯಷ್ಟೆ) ಎಂಬ ಕವಿ ಗುಲ್ಜಾರ್ ಮಾತುಗಳು ಅದೆಷ್ಟು ಅರ್ಥಪೂರ್ಣ!

ಜೀವನದ ಜಂಜಾಟದಲ್ಲಿ ಎಲ್ಲೋಲ್ಲೋ ಓಡೋಣ. ಆದರೆ ಚಿಂತೆಗಳನ್ನು ಮಾತ್ರ ಈಗಷ್ಟೇ ಅಡಿಯಿಟ್ಟಿರುವ ಮುಂಗಾರು ಮಳೆಯಲ್ಲಿ ಕರಗಿಸಿ ಬಿಡುವ. ಮತ್ತೇನು ಯೋಚನೆ, ಎದ್ದು ನಡೆಯಿರಿ… ಅಷ್ಟೇ!!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top