Friday, 16th November 2018  

Vijayavani

Breaking News

ಈ ತರುಣರ ಶಕ್ತಿ, ಸಾಧನೆಗೆ ಪ್ರಧಾನಿಯೇ ಹೆಮ್ಮೆಪಟ್ಟರು…!

Wednesday, 27.06.2018, 3:05 AM       No Comments

ಠಿಣಾತಿಕಠಿಣ ಸಮಸ್ಯೆಗಳಿರಲಿ, ಆಶಾವಾದವೆಲ್ಲ ಸೋತು ಸೃಷ್ಟಿಯಾದ ನಿರಾಸೆಯ ವಾತಾವರಣವೇ ಇರಲಿ… ಇದಕ್ಕೆಲ್ಲ ಸೋಲಿನ ರುಚಿ ಉಣಿಸುವ ತಾಕತ್ತು ಇರೋದು ಯಾರಿಗಂತೀರಿ? ನಿಸ್ಸಂದೇಹವಾಗಿ ಅದು ತರುಣಚೈತನ್ಯವೇ. ದೇಶವನ್ನು ದಾಸ್ಯದಿಂದ ಮುಕ್ತಗೊಳಿಸುವ ಛಲಕ್ಕೆ ನಗುನಗುತ್ತ ನೇಣಿಗೇರಿ, ಮತ್ತೆ ಇದೇ ಮಣ್ಣಲ್ಲಿ ಹುಟ್ಟಿಬರುತ್ತೇನೆ ಎಂದು ದೇಶಭಕ್ತಿಯ ಪರಮವೈಭವ ಪ್ರದರ್ಶಿಸಿದವರು ಇನ್ನೂ ಸರಿಯಾಗಿ ಮೀಸೆ ಮೂಡದ ತರುಣರೇ. ಸ್ವಾತಂತ್ರ್ಯಪ್ರಾಪ್ತಿಯ ನಂತರ ಹಲವು ರಂಗಗಳನ್ನು ಸಶಕ್ತಗೊಳಿಸಿ ಭಾರತದ ವರ್ಚಸ್ಸನ್ನು ಜಗದಗಲ ತಲುಪಿಸಿದ ಶಕ್ತಿ ಈ ಪರಮ ಯೌವನವೇ. ಈಗಲೂ, ರಾಜ್ಯ-ರಾಷ್ಟ್ರದ ಮುಂದೆ ಎಷ್ಟೊಂದು ಜ್ವಲಂತ ಸಮಸ್ಯೆಗಳಿವೆಯೆಲ್ಲ ಎಂಬ ಉದ್ಗಾರ ಹೊಮ್ಮಿದಾಗ ಪರಿಹಾರಕ್ಕೆ ಮತ್ತೊಬ್ಬರತ್ತ ಬೊಟ್ಟು ತೋರಿಸದೆ ಕಾಯಾ, ವಾಚಾ, ಮನಸಾ ದುಡಿಯುತ್ತಿರುವ, ಪರಿವರ್ತನೆಯ ಹೊಸ ಪಥವನ್ನು ಆವಿರ್ಭಾವಗೊಳಿಸಿ ಬೆರಗು-ಪ್ರೇರಣೆ ತುಂಬುತ್ತಿರುವ ಕರ್ನಾಟಕದ ಯುವಶಕ್ತಿಗೆ ದೇಶವೇ ಹೆಮ್ಮೆಪಡುತ್ತಿದೆ, ಪ್ರಧಾನಿಯೂ ಬೆನ್ನುತಟ್ಟಿದ್ದಾರೆ! ಹೌದು, ನಿಮ್ಮ ಊಹೆ ಸರಿ, ತರುಣರ ಕಣಕಣದಲ್ಲೂ ಸೇವೆಯ ಕಿಡಿ ಹೊತ್ತಿಸಿರುವ ಯುವಾ ಬ್ರಿಗೇಡ್ ಸಮಾಜವನ್ನು ಸಶಕ್ತಗೊಳಿಸುವ ಸಾರ್ಥಕ ಮಾದರಿಯನ್ನು ದೇಶಕ್ಕೆ ಪರಿಚಯಿಸಿದೆ. ‘ಯೂತ್ ಆರ್ ಯೂಸ್​ಲೆಸ್’ ಎಂದು ಹಲುಬುವವರಿಗೆ ತನ್ನ ಕಾರ್ಯದ ಮುಖೇನವೇ ಉತ್ತರ ಕೊಟ್ಟಿದೆ.

ಕಲ್ಯಾಣಿ ಸ್ವಚ್ಛತೆ, ನದಿಗಳ ಪುನರುಜ್ಜೀವನದಿಂದ ಹಿಡಿದು ಯುವಕರ ಸ್ವಾವಲಂಬನೆವರೆಗೂ ಕಾರ್ಯವ್ಯಾಪ್ತಿ ಹಿಗ್ಗಿಸಿಕೊಂಡಿರುವ ಯುವಾ ಬ್ರಿಗೇಡ್​ಗೆ ಈಗ 4 ವರ್ಷದ ಸಂಭ್ರಮ! ಈ ಅವಧಿಯಲ್ಲಿ ಸಂಘಟನೆ ಕರ್ನಾಟಕದ ಗಡಿ ದಾಟಿ ಆಂಧ್ರ, ಮಹಾರಾಷ್ಟ್ರ, ಕೇರಳಕ್ಕೂ ತಲುಪಿ, ಸಮಾಜಮುಖಿ ಕಾರ್ಯಗಳಿಗೆ ಶರವೇಗ ತುಂಬಿದೆ. ಸಾವರ್ಕರ್​ರ ಪ್ರಖರ ಭಾಷಣ ಕೇಳಿದ ಬಳಿಕ ಮದನ್​ಲಾಲ್ ಧಿಂಗ್ರಾ ‘ದೇಶಕ್ಕಾಗಿ ನಾನೇನು ಮಾಡ್ಬೇಕು ಹೇಳಿ? ನನಗೆ ಏನಾದರೂ ಕೆಲಸ ಕೊಡಿ’ ಎಂದಿದ್ದನಂತೆ. ರಾಷ್ಟ್ರವಾದದ ಹಿರಿಮೆ-ಗರಿಮೆಯನ್ನು, ನಮ್ಮ ಸೈನಿಕರ ಶೌರ್ಯ-ತ್ಯಾಗವನ್ನು ವಿವರಿಸುತ್ತ ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರೆ ಭಾಷಣದ ಬಳಿಕ ‘ಅಣ್ಣಾ, ನಾವು ಸಮಾಜಕ್ಕೆ ಏನು ಮಾಡಬಹುದು, ನಮಗೆ ಏನಾದರೂ ಕೆಲಸ ಕೊಡಿ’ ಎನ್ನುವ ನೂರಾರು ಯುವದನಿಗಳು ಹೊಸ ಭರವಸೆಯನ್ನೇ ಹುಟ್ಟುಹಾಕಿದವು.

ಈ ಶಕ್ತಿಯನ್ನೇ ರಚನಾತ್ಮಕ ದಿಕ್ಕಿನಲ್ಲಿ ಕರೆದುಕೊಂಡು ಹೋಗಬೇಕು, ಮುಖ್ಯವಾಗಿ ನಾನು, ನನ್ನ ಮನೆ ಎಂಬ ಚೌಕಟ್ಟಿಗೆ, ಸ್ವಾರ್ಥಕ್ಕೆ ಸೀಮಿತವಾಗಿರುವ ಯುವಸಮೂಹವನ್ನು ಸಮಾಜನಿರ್ವಣದಲ್ಲಿ ತೊಡಗಿಸಬೇಕು ಎಂಬ ಮಹೋನ್ನತ ಉದ್ದೇಶವೇ ಯುವಾ ಬ್ರಿಗೇಡ್​ನ ಹುಟ್ಟಿಗೆ ಕಾರಣವಾಗಿದ್ದು. ತೀರಾ ಅಸಂಭವ ಎನಿಸುವ ಕೆಲಸಗಳನ್ನು ಸಾಧ್ಯ ಮಾಡಿ ತೋರಿಸಿದಾಗ ಈ ಯುವಕರ ಶಕ್ತಿಗೆ ಸಮಾಜ ಮೋಡಿಯಾಗಿದ್ದಷ್ಟೆ ಅಲ್ಲ ‘ನಿಮ್ಮ ಜತೆ ನಾವಿದ್ದೇವೆ, ತುಂಬ ಒಳ್ಳೆ ಕೆಲಸ ಮಾಡ್ತಿದೀರಪ್ಪ’ ಅಂತ ಬೆನ್ನುತಟ್ಟಿದೆ. ಕಲ್ಯಾಣಿಗಳಿಗೆ ನೀಡಿದ ಕಾಯಕಲ್ಪದಿಂದ ಮತ್ತೆ ಅಂತರ್ಜಲದ ಬುಗ್ಗೆ ಕಾಣಿಸಿಕೊಂಡಾಗ ಖುದ್ದು ಪ್ರಧಾನಿಯೇ ಟ್ವೀಟ್ ಮಾಡಿ ಅಭಿನಂದಿಸಿದರು. ಹತ್ತು ಸಾವಿರ ಯುವಕರ ದೊಡ್ಡಪಡೆಯಲ್ಲಿ ಅಹಂನ ತಾಕಲಾಟವಿಲ್ಲ, ಪ್ರಚಾರದ ಹಂಗಿಲ್ಲ. ಈ ಸಂಘಟನೆ ಪ್ರತಿಭಟನೆ, ಧರಣಿಗೂ ಇಳಿಯುವುದಿಲ್ಲ. ಸುರಾಜ್ಯವನ್ನು ಸ್ವರಾಜ್ಯವಾಗಿಸಬೇಕೆ ಹೊರತು ಧರಣಿಗಳಿಂದ ಪರಿಹಾರ ಸಾಧ್ಯವಿಲ್ಲ ಎಂಬ ಅಚಲ ನಂಬಿಕೆ. ರಾಜ್ಯ ಸಂಚಾಲಕ ಚಂದ್ರಶೇಖರ್ ನೇತೃತ್ವದಲ್ಲಿ, ಚಕ್ರವರ್ತಿ ಸೂಲಿಬೆಲೆ ಮಾರ್ಗದರ್ಶನದಲ್ಲಿ ಮುನ್ನುಗ್ಗುತ್ತಿರುವ ಯುವ ಸಂಘಟನೆ ಸಕಾರಾತ್ಮಕ ಬದಲಾವಣೆಯ ದೊಡ್ಡ ಭರವಸೆಯನ್ನು ಮೂಡಿಸಿದೆ.

ಕಾರ್ಯದ ಸ್ವರೂಪವೇ ಎಷ್ಟೊಂದು ಚೇತೋಹಾರಿಯಾಗಿದೆ ನೋಡಿ. ನಾಲ್ಕು ಮುಖ್ಯ ವಿಭಾಗಗಳಲ್ಲಿ ಯುವಾ ಬ್ರಿಗೇಡ್ ಕಾರ್ಯನಿರ್ವಹಿಸುತ್ತಿದೆ. ಮೊದಲನೆಯದು ಮಹಾರಕ್ಷಕ-ಮನುಷ್ಯ ಮತ್ತು ಸಮಾಜ ತನಗೆ ಉಪಕಾರ ಮಾಡಿದವರನ್ನೇ ಬೇಗ ಮರೆತುಬಿಡುತ್ತದೆ. ಹೀಗೆ ಅಸಂಖ್ಯರ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳದಷ್ಟು ಸಮುದಾಯ ಕೃತಘ್ನವಾಗಬಾರದು. ಆದ್ದರಿಂದ, ಮರೆತುಹೋದ ಮಹಾಶೂರರನ್ನು ಸ್ಮರಿಸಿಕೊಂಡು, ಆ ಜೀವನಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವುದೇ ಮಹಾರಕ್ಷಕ ಪರಿಕಲ್ಪನೆಯ ಉದ್ದೇಶ. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಗ್ರೇಟ್ ಹೀರೋ ತಾತ್ಯಾ ಟೋಪೆಯ 200ನೇ ಜಯಂತಿಯನ್ನು ರಾಜ್ಯಾದ್ಯಂತ ಯುವ ಬ್ರಿಗೇಡ್ ಆಚರಿಸಿದಾಗಲೇ, ಸಾವಿರಾರು ವಿದ್ಯಾರ್ಥಿಗಳಿಗೆ ಟೋಪೆ ಎಷ್ಟು ಮಹಾನ್ ಎಂಬುದು ಅರಿವಿಗೆ ಬಂತು. ತಾತ್ಯಾ ಜೀವನಾಧಾರಿತ ವಿಡಿಯೋವನ್ನು ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಪ್ರದರ್ಶಿಸಲಾಯಿತು. ‘ನೇತಾಜಿಯೊಂದಿಗೆ ನಾಲ್ಕು ಹೆಜ್ಜೆ’ ಕಾರ್ಯಕ್ರಮದ ಮುಖೇನ ಆಜಾದ್ ಹಿಂದ್ ಬಗೆಗೆ ಅರಿವು ಬಿತ್ತಲಾಯಿತು. ಸಿಡಿಲಸಂತ ಸ್ವಾಮಿ ವಿವೇಕಾನಂದರ ಜಯಂತಿ ಎರಡು ಸಾವಿರ ಶಾಲೆಗಳಲ್ಲಿ ಆಚರಿಸಲ್ಪಟ್ಟಾಗ ಅದೆಷ್ಟೋ ವಿದ್ಯಾರ್ಥಿಗಳಲ್ಲಿ ವಿವೇಕದ ಹೊಸಕಿರಣ ಜಾಗೃತವಾಯಿತು. ಸೈನಿಕರನ್ನು ಪರಿಚಯಿಸುವ ಕಾರ್ಯಕ್ರಮಗಳಂತೂ ನಿರಂತರವಾಗಿ ಸಾಗಿವೆ. 1965ರ ಯುದ್ಧಕ್ಕೆ 50 ವರ್ಷ ತುಂಬಿದ ಹೊತ್ತನ್ನು ಬಹುತೇಕರು ಮರೆತಿದ್ದಾಗ ಯುವಾ ಬ್ರಿಗೇಡ್ ಈ ಕುರಿತು ರಾಜ್ಯಾದ್ಯಂತ ಮಾತನಾಡಿತು. ಇದೆಲ್ಲದರ ಪರಿಣಾಮ ಯುವಕರ ಐಕಾನ್​ಗಳು ಈಗ ಯಾವುದೋ ರೀಲ್ ಹೀರೋಗಳಾಗದೆ ವಿವೇಕಾನಂದ, ತಾತ್ಯಾ, ಸಾವರ್ಕರ್​ರಂಥ ರಿಯಲ್ ಹೀರೋಗಳಾಗಿದ್ದಾರೆ. ರಾಷ್ಟ್ರೀಯತೆಯ ಮಂತ್ರ ಹೃದಯದಲ್ಲಿ ಅನುರಣಿಸಿ, ಉತ್ಕರ್ಷದ ಪಥ ಅನಾವರಣಗೊಂಡಿದೆ. ಸೈನಿಕರಾಗಬಯಸುವ ಅಸಂಖ್ಯ ಯುವಕರು ನೇಮಕಾತಿ ರ್ಯಾಲಿಗಳಲ್ಲಿ ಸೌಲಭ್ಯಗಳಿಲ್ಲದೆ ಪರದಾಡುವದನ್ನು ಗಮನಿಸಿ ಇಂಥ ರ್ಯಾಲಿಗಳಲ್ಲಿ ಉಚಿತ ವಸತಿ, ಊಟದ ವ್ಯವಸ್ಥೆಯನ್ನು ಸಂಘಟನೆ ಮಾಡಿದೆ/ಮಾಡುತ್ತಿದೆ. ಜತೆಗೆ, ಸೈನಿಕರಾಗಬಯಸುವವರಿಗೆ ಉಚಿತ ತರಬೇತಿಯನ್ನೂ ನೀಡುತ್ತಿದೆ.

ಮತ್ತೊಂದು ವಿಶಿಷ್ಟ ಪ್ರಯತ್ನ ‘ವಿತ್ತಶಕ್ತಿ’. ಯುವಕರಿಗೆ ಉದ್ಯೋಗಾವಕಾಶಗಳ ಮಾಹಿತಿ, ನವೋದ್ಯಮಗಳ ಮಾಹಿತಿ, ಸ್ಟಾರ್ಟಪ್ ಸಾಧಕರೊಡನೆ ಸಂವಾದ ಹೀಗೆ ಯುವಸಮೂಹವನ್ನು ಸ್ವಾವಲಂಬಿ, ಸಶಕ್ತವಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯೋಗ ನಡೆದಿದೆ. ಇಡೀ ಸಮಾಜ, ರಾಷ್ಟ್ರಕ್ಕೆ ಶಾಪವಾಗಿ ಕಾಡುತ್ತಿರುವುದು ಜಾತಿ-ಮತ-ಪಂಥಗಳ ನಡುವಿನ ಕಲಹ, ಘರ್ಷಣೆ. ಇದಕ್ಕೆ ಪರಿಹಾರ ವ್ಯಷ್ಟಿ-ಸಮಷ್ಟಿಯ ಮನಸ್ಸಲ್ಲಿ ಸದ್ಭಾವನೆ ಅರಳಿಸುವುದು. ಯುವಾ ಬ್ರಿಗೇಡ್​ನ ಮೂರನೇ ಮುಖ್ಯ ಯೋಜನೆ ‘ಸದ್ಭಾವನಾ’. ಜಾತಿಯ ಸಂಕೋಲೆಗಳನ್ನು ಮುರಿದು ಮಾನವೀಯತೆಗೆ ಮತ್ತಷ್ಟು ಬಲ ತುಂಬುವ ಯತ್ನ ಇದು. ಸಮಾಜದ ಮಹಾಪುರುಷರನ್ನು ಮತ್ತು ಅವರ ಸಂದೇಶಗಳನ್ನು ‘ಸದ್ಭಾವನಾ’ ಒಂದೇ ವೇದಿಕೆಗೆ ತರುತ್ತಿದೆ. ಸಂಗೀತ ಮತ್ತು ಜೀವನಮೌಲ್ಯದ ಮೇರುಶಕ್ತಿಗಳಾದ ಪಂಡಿತ್ ಪುಟ್ಟರಾಜ ಗವಾಯಿ ಮತ್ತು ಸಂತ ಶಿಶುನಾಳ ಷರೀಫರ ಸಂದೇಶಗಳನ್ನು ಒಂದೇ ವೇದಿಕೆ ಮುಖಾಂತರ ರಾಜ್ಯದ ಉದ್ದಗಲಕ್ಕೂ ಪಸರಿಸಿದಾಗ ಮೂಡಿದ ಭಾವನಾತ್ಮಕ ಬಂಧ ಹೃದಯದಲ್ಲಿ ಪ್ರೀತಿಯ ಸೆಲೆ ಮೂಡಿಸಿತು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸ್ವಾಮಿ ವೀವೆಕಾನಂದ, ಬಾಬು ಜಗಜೀವನ್ ರಾಮ್ ಮತ್ತು ಸಾವರ್​ಕರ್… ಹೀಗೆ ಎಲ್ಲ ಮನಸ್ಸುಗಳನ್ನು ಒಂದೆಡೆ ತರುವ ಪ್ರಯತ್ನಕ್ಕೆ ಸಮುದಾಯವು ‘ಸದ್ಭಾವನೆ’ ನೆಲೆಗಟ್ಟಿನಲ್ಲಿಯೇ ಮನತುಂಬಿ ಸ್ವಾಗತಿಸಿತು.

ಸ್ವಾತಂತ್ರೊ್ಯೕತ್ಸವ ರಾಷ್ಟ್ರದ ದೊಡ್ಡಹಬ್ಬ, ಉತ್ಸವ. ತನ್ನಿಮಿತ್ತ ಧ್ವಜಾರೋಹಣವನ್ನು ಮಂದಿರ, ಮಸೀದಿ, ಚರ್ಚ್​ಗಳ ಆವರಣದಲ್ಲಿ ನೆರವೇರಿಸಿದಾಗ ಮೊಳಗಿದ ಮಂತ್ರ ಒಂದೇ- ‘ವಂದೇ ಮಾತರಂ (ತಾಯಿ ವಂದಿಸುವೆ). ನಾಲ್ಕನೇ ಮುಖ್ಯ ಆಯಾಮ ‘ಡಿಜಿಟಲ್ ಸಂಸ್ಕಾರ’. ಸಾಮಾಜಿಕ ಮಾಧ್ಯಮಗಳು ಪ್ರಭಾವಿ ಶಕ್ತಿ ಹೊಂದಿದ್ದರೂ, ಅದು ಬೇಡದ ವಿಷಯಗಳಿಗೆ ಹೆಚ್ಚು ಬಳಕೆಯಾಗುತ್ತಿದೆ. ಇದನ್ನು ತಪ್ಪಿಸಿ, ಸಾಮಾಜಿಕ ಪರಿವರ್ತನೆಯ ಮಾಧ್ಯಮವಾಗಿ ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಡಿಜಿಟಲ್ ಸಂಸ್ಕಾರ ಹರಡಲಾಗುತ್ತಿದೆ. ಯುವಾ ಬ್ರಿಗೇಡ್ ನಾಡಿನ ಮನೆಮಾತಾಗಿದ್ದು, ತರುಣರ ಮನಸ್ಸು ಗೆದ್ದಿದ್ದು ಕಲ್ಯಾಣಿ ಸ್ವಚ್ಛತೆ, ನದಿಗಳ ಸ್ವಚ್ಛತೆ ಮತ್ತು ಸಸಿಗಳನ್ನು ನೆಡುವ ‘ಪೃಥ್ವಿಯೋಗ’ ಕಾರ್ಯಕ್ರಮದ ಮೂಲಕ. ಕಲ್ಯಾಣಿ ಸ್ವಚ್ಛತೆಯಲ್ಲಂತೂ ಸಾವಿರಾರು ಕೈಗಳು ಕೆಲಸ ಮಾಡಿದ ಫಲ ಮತ್ತೆ ಅಲ್ಲಿ ಜಲವೈಭವ ಸೃಷ್ಟಿಯಾಗಿದೆ. ಬತ್ತಿಹೋಗಿದ್ದ 120ಕ್ಕಿಂತ ಹೆಚ್ಚು ಕಲ್ಯಾಣಿಗಳು ಮತ್ತೆ ಜೀವ ಪಡೆದುಕೊಂಡಿವೆ. ಅದಕ್ಕಿಂತಲೂ ಹೆಚ್ಚಾಗಿ ಮನುಷ್ಯ-ಜಲಸಂಸ್ಕೃತಿಯ ಮಹೋನ್ನತೆಯನ್ನು ಸಾರುತ್ತಿವೆ. ರಾಯಚೂರಿನಲ್ಲಿ ಪೂರ್ತಿ ಬತ್ತಿಹೋಗಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ ಬಳಿಕ ಅಲ್ಲಿ ಅಂತರ್ಜಲ ಉಕ್ಕಿ ಹರಿದಿದೆ. ಗದಗ(ಕುಮಾರವ್ಯಾಸ ಸ್ನಾನ ಮಾಡಿದ ಕಲ್ಯಾಣಿ)ನ ಕಲ್ಯಾಣಿಯಂತೂ 276 ದಿನಗಳ ನಿರಂತರ ಶ್ರಮದಾನದ ಮೂಲಕ ಪುನರುಜ್ಜೀವನಗೊಂಡಿದ್ದು, ಅಲ್ಲೂ ಅಂತರ್ಜಲದಿಂದ ತುಂಬಿಕೊಂಡಿದೆ. ನಾಡಿನ ಜೀವನಾಡಿಯಾದ ಕಾವೇರಿ ನದಿ ವಿಷಯ ಬಂದಾಗ ಭಾವುಕರಾಗುತ್ತೇವೆ, ಅದೆಷ್ಟೋ ಜನ ರಸ್ತೆಗಿಳಿದು ‘ಹೋರಾಟ’ ಮಾಡುತ್ತಾರೆ. ಆದರೆ, ಕಾವೇರಿಯ ಒಡಲಿಗೆ ಇಳಿದು ಅಲ್ಲಿನ ಕಲ್ಮಷವನ್ನು, ಕಸವನ್ನು ಹೊರಹಾಕುವವರು ಯಾರು? ಎಂಬ ಪ್ರಶ್ನೆ ಎದುರಾದಾಗಲೂ ಆ ಸವಾಲನ್ನು ಸ್ವೀಕರಿಸಿದ ಯುವಾ ಬ್ರಿಗೇಡ್ (www.yuvabrigade.net/) ನ ಭೂತೋ ಎಂಬಂತೆ ಕಾರ್ಯನಿರ್ವಹಿಸಿತು. ಕಾವೇರಿಯ ಒಡಲಿನಿಂದ 250 ಟನ್​ಗೂ ಹೆಚ್ಚಿನ ಕಸ ಹೊರಬಂದಾಗ, ನಾವು ನದಿಗಳನ್ನು ಹೇಗೆ ಇರಿಸಿಕೊಂಡಿದ್ದೇವೆ ಎಂಬ ಕರಾಳದರ್ಶನ ಅನಾವರಣಗೊಂಡಿತು. ಹಸಿವು, ನಿದ್ದೆ ಬಿಟ್ಟು ಕಾವೇರಿ ಸ್ವಚ್ಛತೆಯಲ್ಲಿ ತೊಡಗಿದ ನೂರಾರು ಯುವಕರು ಕಡೆಗೆ ದೊಡ್ಡ ಯುದ್ಧ ಗೆದ್ದಂತೆ ಸಂಭ್ರಮಿಸಿದರು.

ಸುಳ್ಯದ ಪಯಸ್ವಿನಿ, ಕೊಲ್ಲೂರಿನ ಸೌಪರ್ಣಿಕಾ, ನಂಜನಗೂಡಿನ ಕಪಿಲಾ, ದಕ್ಷಿಣ ಕನ್ನಡದ ನೇತ್ರಾವತಿ ನದಿ… ಪ್ರತಿ ಸ್ವಚ್ಛತೆಯಲ್ಲೂ ಟನ್​ಗಟ್ಟಲೇ ಕಸ ಹೊರತೆಗೆಯಲಾಯಿತು. ಜಲ ಸಾಕ್ಷರತೆ ನಿಟ್ಟಿನಲ್ಲಿ ನಾಡಿನ ದೊಡ್ಡ ಅಭಿಯಾನವಾಗಿ ಇದು ಬದಲಾಯಿತು. ಸಮಾಜದ ಅವಿಭಾಜ್ಯ ಅಂಗವಾಗಿರುವ ನಾವು ಸಮಾಜದ ಒಂದಾದರೂ ಕೊರತೆ ನಿವಾರಿಸುವ ಸಂಕಲ್ಪ ತೊಟ್ಟರೆ ನಾಡು ನಂದನವನವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರ ಮನೋಧರ್ಮವನ್ನೇ ಬದಲಾಯಿಸಿ, ಸೇವೆಯ ಶಕ್ತಿ ತೋರಿಸಿಕೊಟ್ಟಿರುವ ಯುವಾ ಬ್ರಿಗೇಡ್ ಸಾಧನೆ ಪ್ರೇರಣೆಯ ಮಹಾಬೆಳಕು. ಆ ಬೆಳಕು ನಾಡಿನೆಲ್ಲೆಡೆ ಪ್ರಜ್ವಲಿಸುವಂತಾಗಲಿ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top