Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಈ ಹಳ್ಳಿಯ ಪಿರಮಿಡ್​ಗಳಲ್ಲಿದ್ದಾರೆ ಸೀಕ್ರೆಟ್ ಸೂಪರ್​ಸ್ಟಾರ್ಸ್!

Wednesday, 13.06.2018, 3:05 AM       No Comments

ಬದುಕಿಗೆ ನೂರೆಂಟು ಆಸೆ, ಕನವರಿಕೆಗಳು. ‘ನಾನು ಹೀಗಾಗಬೇಕು, ಹಾಗಾಗಬೇಕು…’ ಎಂಬ ಮನಸ್ಸಿನ ತುಮುಲಕ್ಕೆ ಸ್ವಾರ್ಥ ವೇಗವರ್ಧಕವಿದ್ದಂತೆ. ಆದರೆ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಇನ್ನೇನು ಪಟ್ಟ ಏರಲು ಕ್ಷಣ ಇರುವಾಗಲೇ ‘14 ವರ್ಷ ವನವಾಸಕ್ಕೆ ಹೋಗಬೇಕು’ ಎಂಬ ಸ್ಥಿತಿ ಸೃಷ್ಟಿಯಾದಾಗ ಅದೇ ಖುಷಿಯ ಭಾವದಲ್ಲಿ ನಾರುಮುಡಿ ಉಟ್ಟು ಹೊರಟುಬಿಟ್ಟನಲ್ಲ! ಸುಖ-ಸಂಪತ್ತು ಎಲ್ಲ ತೊರೆದು ಅರಣ್ಯಕ್ಕೆ ತೆರಳಿದರೂ ಅಲ್ಲೇ ಧರ್ಮ ಉದಯಿಸಿದ, ಸ್ವರ್ಗವನ್ನೇ ನಿರ್ವಿುಸಿದ. ಇದರ ಹಿಂದಿದ್ದ ಶಕ್ತಿ ನಿಸ್ವಾರ್ಥ ಮನಸ್ಸು ಮತ್ತು ಅದಮ್ಯ ಅಂತಃಕರಣ.

ಈ ರಾಮ (ಎಂ.ಆರ್.ರಾಮಮೂರ್ತಿ) ಖ್ಯಾತ ವಿಜ್ಞಾನಿ! ಆ ಕಾಲದಲ್ಲೇ ಐಐಟಿಯಲ್ಲಿ ಓದಿದವರು. ಬಿ.ಎಸ್​ಸಿ, ಬಿ.ಇ, ಎಂಟೆಕ್ ವ್ಯಾಸಂಗ ಮಾಡಿ ಬಾಹ್ಯಾಕಾಶ ವಿಜ್ಞಾನಿಯಾಗಿ ಪ್ರತಿಷ್ಠಿತ National Aerospace Laboratories (NAL)ನ ಡೆಪ್ಯೂಟಿ ಡೈರೆಕ್ಟರ್ ಆಗಿ ಸ್ವಯಂನಿವೃತ್ತಿ ಪಡೆದರು. ಉನ್ನತ ವ್ಯಾಸಂಗ, ಉನ್ನತ ಹುದ್ದೆ ಎಲ್ಲ ಇದ್ದರೂ ಮರಳಿಬಂದದ್ದು ಸಣ್ಣಹಳ್ಳಿಗೆ, ಹುಟ್ಟೂರಿನ ಮಣ್ಣಿನ ಸೊಗಡಿಗೆ. ಆ ಹಳ್ಳಿ ಇಂದು ದೇಶದ ಜ್ಞಾನವಲಯದ ಗಮನ ಸೆಳೆಯುತ್ತಿದೆ, ಸಮಾಜಕ್ಕೆ ಉತ್ತಮ ಕೊಡುಗೆ ಕೊಡಬೇಕು ಎಂದು ಹಂಬಲಿಸುವವರಿಗೆ ಪ್ರೇರಣೆ ತುಂಬುತ್ತಿದೆ. ಅದೆಲ್ಲಕ್ಕಿಂತಲೂ ಮುಖ್ಯವಾಗಿ, ಹಳ್ಳಿಯ ಬಡಮಕ್ಕಳಿಗೆ ಉತ್ತಮ ಶಿಕ್ಷಣ, ಜೀವನಮೌಲ್ಯ ನೀಡುವ ಮೂಲಕ ಹೊಸ ಬೆಳಕು ಹರಿಸಿದೆ. ನೆಲದ ನಕ್ಷತ್ರಗಳು ಬೆಳಗುವಂತೆ ಮಾಡಿದೆ.

ತೊರೇಪಾಳ್ಯ! ಹಚ್ಚಹಸಿರಿನ ಮಡಿಲಿನಲ್ಲಿ ನೆಲೆಸಿರುವ ಹಳ್ಳಿ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಬರುವ ಈ ಹಳ್ಳಿ ಬೆಂಗಳೂರಿನಿಂದ ಬರೀ 50 ಕಿ.ಮೀ. ಅಂತರದಲ್ಲಿದೆ. ಇಲ್ಲಿನ ಪಾರಂಗ ವಿದ್ಯಾಕೇಂದ್ರ ಹಲವು ಪವಾಡಗಳನ್ನೇ ಸಾಕಾರಗೊಳಿಸಿ, ಜ್ಞಾನದ ಶಕ್ತಿಯನ್ನು ಸಾರುತ್ತಿದೆ. ಪಾರಂಗದ ಹಿಂದಿರುವ ಮೂಲಶಕ್ತಿ, ಅದರ ಸ್ಥಾಪಕ ಹಾಗೂ 72ರ ಇಳಿವಯಸ್ಸಲ್ಲೂ ಮಕ್ಕಳಿಗೆ ಪಾಠ ಮಾಡುತ್ತ ಪಾದರಸದಂತಿರುವ ವಿಶಿಷ್ಟ ವ್ಯಕ್ತಿ ಎಂ.ಆರ್.ರಾಮಮೂರ್ತಿ. ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದ 5-6 ಎಕರೆ ಜಮೀನು, ತಮ್ಮ ನಿವೃತ್ತಿ ಬಳಿಕ ಬಂದ ಹಣ, ಉಳಿತಾಯದ ದುಡ್ಡು, ಶ್ರಮ, ಸೃಜನಶೀಲತೆ ಇದೆಲ್ಲವನ್ನೂ ಧಾರೆ ಎರೆದು ಪಾರಂಗದಲ್ಲಿ ಸೀಕ್ರೆಟ್ ಸೂಪರ್​ಸ್ಟಾರ್​ಗಳನ್ನು ತಯಾರು ಮಾಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದಾರೆ.

ಈಗೀಗ ಶಾಲೆ ಎಂದೊಡನೆ ಮಣಭಾರದ ಸ್ಕೂಲ್​ಬ್ಯಾಗ್​ಗಳು, ದೊಡ್ಡ-ದೊಡ್ಡ ಕಾಂಕ್ರಿಟ್ ಕಟ್ಟಡಗಳು, ಎದೆ ನಡುಗಿಸುವ ಫೀಸುಗಳೇ ನೆನಪಾಗುತ್ತವೆ. ಆದರೆ, ಪಾರಂಗ ಎಂದೊಡನೆ ಪಿರಾಮಿಡ್ಡುಗಳು, ಹಸಿರು, ಮಕ್ಕಳ ಮುಗ್ಧತೆ-ಪ್ರತಿಭೆ, ಶಿಕ್ಷಕರ ಸೇವಾಭಾವ, ರಾಮಮೂರ್ತಿಯವರ ಶ್ರಮ-ಸಾಹಸ ಕಣ್ಮುಂದೆ ಬರುತ್ತದೆ. ಇಲ್ಲಿ ಅಧ್ಯಾತ್ಮವೂ ಇದೆ, ನಿಸ್ವಾರ್ಥ ಮನಸ್ಸುಗಳ ಸೊಬಗೂ ಇದೆ.

ಹೌದು, ತೊರೇಪಾಳ್ಯದಲ್ಲಿ ಪಾರಂಗ (ಪಾರಂಗ ಎಂದರೆ ಆನಂದದಿಂದ ಸುಗುಣಾನಂದದೆಡೆಗೆ) ನಿರ್ವಿುಸಿರುವ ವಿದ್ಯಾಕೇಂದ್ರ ದೇಶದ ಮೊದಲ ಪಿರಮಿಡ್ ಶಾಲೆ. ಪಿರಮಿಡ್ ಎಂದಾಕ್ಷಣ ನಮ್ಮ ನೆನಪಿನ ಬಂಡಿ ಈಜಿಪ್್ತ ಮುಂತಾದ ದೇಶಗಳತ್ತ ಓಡುತ್ತದೆ. ಪಿರಮಿಡ್​ಗಳಿಗೆ ವೈಜ್ಞಾನಿಕ ಮಹತ್ವವಿದ್ದು, ಏಕಾಗ್ರತೆ ಹೆಚ್ಚಿಸಲು, ಮನಸ್ಸಿನ ವೇಗ ನಿಯಂತ್ರಿಸಿ ನೆಮ್ಮದಿ ಒದಗಿಸಲು ಪೂರಕ. ಮಕ್ಕಳು ಕಾಂಕ್ರಿಟ್ ಕಾಡಿನಲ್ಲಿ ಓದುವ ಬದಲು ಆಹ್ಲಾದ ಭಾವ ಒದಗಿಸುವ ಪಿರಮಿಡ್​ನಲ್ಲಿ ಓದಿದರೆ ಅವರ ವ್ಯಕ್ತಿತ್ವ-ಶಿಕ್ಷಣ ಎರಡೂ ಪರಿಣಾಮಕಾರಿಯಾಗುತ್ತದೆ ಎಂಬ ಚಿಂತನೆಯಿಂದ ಇದು ರೂಪುಗೊಂಡದ್ದು.

ಇಂಥದ್ದೊಂದು ವಿದ್ಯಾಕೇಂದ್ರ ಆರಂಭಿಸಲು ಒದಗಿದ ಪ್ರೇರಣೆ ಕೂಡ ಸ್ವಾರಸ್ಯಕರ. ಶಿಕ್ಷಣ ಸೌಲಭ್ಯ ನಗರಮಕ್ಕಳಿಗೆ ಸುಲಭವಾಗಿ ಕೈಗೆಟುಕುತ್ತಿದ್ದರೂ ಅರಿವಿನ ಕೊರತೆ, ಭೌಗೋಳಿಕ ಪರಿಸರದ ಸಮಸ್ಯೆ, ಜಾಗೃತಿಯ ಕೊರತೆ ಹೀಗೆ ಮುಂತಾದ ಕಾರಣಗಳಿಂದ ಹಳ್ಳಿಯ ಮಕ್ಕಳು ಅವಕಾಶವಂಚಿತರಾಗುತ್ತಿದ್ದಾರೆ. ಅದರಲ್ಲೂ, ಗ್ರಾಮೀಣ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಲು ಪಡಿಪಾಟಿಲು ಅನುಭವಿಸಬೇಕಾಗುತ್ತದೆ. ಈ ಅಸಮಾನತೆ ಹೋಗಲಾಡಿಸಿ ಹಳ್ಳಿಯ ಪ್ರತಿಭೆಗಳನ್ನು ಬೆಳಗಿಸಬೇಕು ಎಂಬ ಪ್ರಬಲ ಆಕಾಂಕ್ಷೆ ಅಷ್ಟೆ ಅಲ್ಲದೆ ಒಳತುಡಿತವೊಂದು ಸದಾ ಕಾಡುತ್ತಿತ್ತು ರಾಮಮೂರ್ತಿಯವರಿಗೆ. ಈ ಕನಸಿನ ಬೀಜ ಮೊಳಕೆಯೊಡೆದದ್ದು 1998ರ ಸೆಪ್ಟೆಂಬರ್ 28ರಂದು. ತಮ್ಮ ಮನೆ ಮುಂದಿನ ಮೂರು ಕೋಣೆಗಳಲ್ಲಿ ಪ್ರೌಢಶಾಲೆ ಆರಂಭಿಸಿದ ರಾಮಮೂರ್ತಿ ವಿದ್ಯಾರ್ಥಿನಿಯರ ಪ್ರವೇಶಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಆ ಬಳಿಕ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣದಿಂದ ಹಳ್ಳಿಮಕ್ಕಳು ವಂಚಿತರಾಗಬಾರದೆಂದು ಸಂಕಲ್ಪಿಸಿ ಆ ಶಾಲೆಗಳನ್ನೂ ತೆರೆಯಲಾಯಿತು. 5-6 ಎಕರೆ ವಿಶಾಲವಾದ ಜಾಗದಲ್ಲಿ ಕಟ್ಟಡ ನಿರ್ಮಾಣ ಆರಂಭಿಸಿದಾಗ ಅದು ಪೂರ್ತಿಯಾಗಿ ಪರಿಸರಸ್ನೇಹಿ ಆಗಿರಬೇಕೆಂದು ಪಿರಮಿಡ್ ಮಾದರಿ ಅನುಸರಿಸಲಾಯಿತು. 2005ರಲ್ಲಿ ಐದು ಪಿರಮಿಡ್ ತರಗತಿಕೋಣೆಗಳು ತಲೆಎತ್ತಿದವು. ಪ್ರಸಕ್ತ, 11 ಪಿರಮಿಡ್ ಕ್ಲಾಸ್​ರೂಂಗಳಿದ್ದು, ಎಲ್​ಕೆಜಿಯಿಂದ 10ನೇ ತರಗತಿವರೆಗೆ 600 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ವಿಶೇಷವೆಂದರೆ ಇವರೆಲ್ಲ ಗ್ರಾಮೀಣ ಭಾಗದವರು, ಬಡತನ, ಸಂಕಷ್ಟಗಳೊಡನೆ ಹೋರಾಟ ಮಾಡುತ್ತಿರುವವರು. ಈ ತರಗತಿಗಳನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮ. ಮೇಲ್ಛಾವಣಿಗೆ ಹಂಚು ಅಳವಡಿಸಲಾಗಿದ್ದು, ಬೆಳಕಿಗಾಗಿ ನಾಲ್ಕೈದು ಪಾರದರ್ಶಕ ಗಾಜುಗಳನ್ನು ಹಾಕಲಾಗಿದೆ. ವಿದ್ಯುತ್, ಫ್ಯಾನು ಇದ್ಯಾವುದರ ಹಂಗಿಲ್ಲದೆ ನಿಸರ್ಗದ ಸಾನಿಧ್ಯದಲ್ಲಿ ಈ ತರಗತಿಗಳು ನಡೆಯುತ್ತವೆ. ಕ್ಲಾಸ್​ರೂಂಗಳ ಸುತ್ತಲೂ ಹಸಿರು ಆವರಿಸಿಕೊಂಡಿದೆ ಅಲ್ಲದೆ ತರಗತಿಯ ಮೂರು ದಿಕ್ಕಿನಲ್ಲಿ ಸಸಿಗಳನ್ನು ಬೆಳೆಸಲಾಗಿದೆ. ಹೊರಗಡೆ ಆಟವಾಡಲು ವಿಶಾಲವಾದ ಸ್ಥಳವಿದೆ. ಈ ಪ್ರಯೋಗವನ್ನು, ವಿಶಿಷ್ಟ ಮಾದರಿಯನ್ನು ವೀಕ್ಷಿಸಲೆಂದೆ ದೇಶದ ಬೇರೆ-ಬೇರೆ ರಾಜ್ಯಗಳ, ಪ್ರಾಂತ್ಯಗಳ ಜಿಜ್ಞಾಸುಗಳು ‘ಪಾರಂಗ’ಕ್ಕೆ ಭೇಟಿ ನೀಡುತ್ತಾರೆ.

ಇಲ್ಲಿನ ಶಿಕ್ಷಕರ ಸೇವಾಭಾವವು ಸ್ವಾರ್ಥಮನಸ್ಸುಗಳ ಕಣ್ಣುತೆರೆಸುವಂಥದ್ದು. 25 ಶಿಕ್ಷಕರು ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳೊಂದಿಗೆ ಒಂದಾಗಿ ಬೆರೆತು ಮನಮುಟ್ಟುವಂತೆ ಬೋಧನೆ ಮಾಡುತ್ತಿದ್ದಾರೆ. ಯಾರಿಗೆಲ್ಲ ಶಾಲೆ ಮುಖ ನೋಡುವುದೇ ಕಷ್ಟ ಎಂಬ ಸ್ಥಿತಿಯಿತ್ತೋ, ಶೈಕ್ಷಣಿಕವಾಗಿ ಯಾರೂ ಮಾರ್ಗದರ್ಶನ ಮಾಡದಂಥ ದುಸ್ಥಿತಿ ಇತ್ತೋ ಅಂಥ ಮಕ್ಕಳೆಲ್ಲ ಪಾರಂಗ ವಿದ್ಯಾಕೇಂದ್ರಕ್ಕೆ ಬಂದು ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಈ ಶಾಲೆ ಎಸ್ಸೆಸ್ಸೆಲ್ಲಿಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದೆ. ಈ ವರ್ಷವೂ ಈ ಸಾಧನೆ ಮರುಕಳಿಸಿದ್ದು, ಏಳು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದರೆ, 17 ಮಕ್ಕಳು ಫಸ್ಟ್​ಕ್ಲಾಸ್​ನಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ಯ ಸರ್ಕಾರದ ಪಠ್ಯಕ್ರಮದಂತೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಂದ ಕೇವಲ ಸಾಂಕೇತಿಕ ಶುಲ್ಕ ಪಡೆಯುತ್ತಿದ್ದು ದಾನಿಗಳು ಹಾಗೂ ಸಂಘ-ಸಂಸ್ಥೆಗಳ ನೆರವಿನಿಂದ ಸಂಸ್ಥೆ ನಡೆಯುತ್ತಿದೆ. ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯವಿದೆ.

ಇಲ್ಲಿ ಕೇವಲ ಪಾಠ ಮಾಡುವುದಿಲ್ಲ. ಪ್ರತಿ ವಿದ್ಯಾರ್ಥಿಯ ವ್ಯಕ್ತಿತ್ವವೂ ಆಮೂಲಾಗ್ರವಾಗಿ ಅಭಿವೃದ್ಧಿಹೊಂದುವಂತೆ ತರಬೇತಿ ನೀಡಲಾಗುತ್ತದೆ. ಯೋಗ, ಧ್ಯಾನಗಳನ್ನು ಹೇಳಿಕೊಡಲಾಗುತ್ತಿದೆಯಲ್ಲದೆ ಕೈತೋಟ ನಿರ್ವಹಣೆ, ಸಸಿಗಳ ಪೋಷಣೆ, ಹಿರಿಯರ ಬಗ್ಗೆ ಗೌರವಾದರ ತೋರುವುದು ಸೇರಿದಂತೆ ಹಲವು ಮೌಲ್ಯಗಳನ್ನು ಅಳವಡಿಸಲಾಗುತ್ತಿದೆ. ಇಲ್ಲಿ ರಾಮನಿಗೆ ಜತೆಯಾಗಿ ಲಕ್ಷ್ಣಣ ಕೂಡ ಇದ್ದಾರೆ. ಎಂಎ, ಬಿಎಡ್ ವ್ಯಾಸಂಗ ಮಾಡಿರುವ ಲಕ್ಷ್ಮಣ ಕಳೆದ 18 ವರ್ಷಗಳಿಂದ ಇಲ್ಲಿ ಬೋಧನೆ ಮಾಡುವುದಷ್ಟೆ ಅಲ್ಲದೆ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿದ್ದ ರಾಮಮೂರ್ತಿಯವರ ಸಹೋದರಿ ಎಂ.ಆರ್.ಛಾಯಾ ಕೂಡ ಎರಡು ವರ್ಷದ ಹಿಂದೆ ಸ್ವಯಂನಿವೃತ್ತಿ ಪಡೆದು, ಪಾರಂಗದ ಮಕ್ಕಳಿಗೆ ನಿಯಮಿತವಾಗಿ ಪಾಠ ಮಾಡುತ್ತಿದ್ದಾರೆ.

ಹಳ್ಳಿಯ ಮಕ್ಕಳು ಮತ್ತು ಅವರ ಪಾಲಕರ ಹೆಮ್ಮೆಯ ಕ್ಷಣಗಳನ್ನು ನೋಡುವಾಗ ರಾಮಮೂರ್ತಿಯವರ ತಪಸ್ಸು ಕಣ್ಮುಂದೆ ಸುಳಿಯುತ್ತದೆ. ಬಾಲಕಿಯರನ್ನು ಶಾಲೆಗೆ ಕಳುಹಿಸಲು ಪಾಲಕರು ನಿರಾಕರಿಸಿದಾಗ ಅವರೊಂದಿಗೆ ಪ್ರೀತಿಯಿಂದಲೇ ಮಾತನಾಡಿ ಶಿಕ್ಷಣದ ಮಹತ್ವ ಹೇಳಿ, ಮನವೊಲಿಸುವ ರಾಮಮೂರ್ತಿ ಭಾವಜೀವಿ ಮಾತ್ರವಲ್ಲದೆ ಹೊಸ ಪ್ರಯೋಗಗಳ ರೂವಾರಿ. ತುಂಬ ಹಿಂದೆಯೇ ಬೆಂಗಳೂರಿನ ಜಯನಗರದಲ್ಲಿ ಕೋಆಪ್​ರೇಟಿವ್ ಸೊಸೈಟಿಯನ್ನು ಸ್ಥಾಪಿಸಿ, ಅದನ್ನು ಯಶಸ್ಸಿನ ತುದಿಗೆ ತಲುಪಿಸಿದ್ದಾರೆ. ನಿರಾಶ್ರಿತ ವಯೋವೃದ್ಧರಿಗೆ ವೃದ್ಧಾಶ್ರಮ, ಮರಗಳ ರಕ್ಷಣೆಗೆ ಸಸ್ಯಕಾಶಿ, ಬುದ್ಧಿಮಾಂದ್ಯ ಮತ್ತು ದೈಹಿಕ ಅಂಗವಿಕಲ ಶಿಕ್ಷಣಕ್ಕೆ ವಿಶೇಷ ಶಾಲೆ ತೆರೆಯಬೇಕು… ಹೀಗೆ ಇವರ ಕನಸುಗಳ ಪಟ್ಟಿ ದೀರ್ಘ. ಅದಕ್ಕೆ ಅವರು ಹಾಕುತ್ತಿರುವ ಶ್ರಮವೂ ಅಪೂರ್ವ. ಅಂದಹಾಗೆ, ರಾಮಮೂರ್ತಿಯವರು ಮದುವೆಯಾಗಿಲ್ಲ. ‘ಏಕೆ’ ಎಂದು ಪ್ರಶ್ನಿಸಿದರೆ ಈ ಎಲ್ಲ ತುಡಿತ, ಕೆಲಸಗಳ ನಡುವೆ ಅದು ಮರೆತೇ ಹೋಯಿತು ಎಂದು ಹಾಸ್ಯಚಟಾಕಿ ಹಾರಿಸುತ್ತಾರೆ. ಸಾದಾ ಲುಂಗಿ, ಬಣ್ಣ ಮಾಸಿದ ಅಂಗಿ, ಕೈಯಲ್ಲಿ ಬಳಪ, ಪುಸ್ತಕ, ಹೃದಯದಲ್ಲಿ ಭರಪೂರ ಪ್ರೀತಿ ಹೊತ್ತು ಸಂತನಂತೆ ಬದುಕುತ್ತಿರುವ ರಾಮಮೂರ್ತಿ ಪಾರಂಗ (http://parangatrust.com/), ([email protected])ದ ಮೂಲಕ ಹೊಸ ಆದರ್ಶವನ್ನು ಪರಿಚಯಿಸಿದ್ದಾರೆ, ನೂರಾರು ಕನಸುಗಳನ್ನು ಸಾಕಾರಗೊಳಿಸಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು (1 ತರಗತಿಗೆ ಗರಿಷ್ಠ 40 ಮಕ್ಕಳ ಪ್ರವೇಶ), ನಿರ್ವಹಣಾ ವೆಚ್ಚವೂ ಹೆಚ್ಚುತ್ತಿದೆ. ತಮ್ಮದೆಲ್ಲವನ್ನೂ ಈಗ ರಾಮಮೂರ್ತಿ (99805-53603) (08023355826) ಮತ್ತು ಅವರ ಕುಟುಂಬವರ್ಗ ಧಾರೆ ಎರೆದಾಗಿದೆ. ಹಾಗಾಗಿ, ದಾನಿಗಳು ಇನ್ನಷ್ಟು ಸಂಖ್ಯೆಯಲ್ಲಿ ಮುಂದೆಬಂದರೆ (ದಾನಿಗಳಿಗೆ 80ಜಿ ಅನ್ವಯ ತೆರಿಗೆ ವಿನಾಯ್ತಿ ಸೌಲಭ್ಯವಿದೆ) ಈ ಅಕ್ಷರಯಜ್ಞವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬಹುದು ಎಂಬ ವಿಶ್ವಾಸ, ಕಳಕಳಿ ಅವರದ್ದು.ಶಾಲೆಯಿಂದ ಹೊರಟು ನಿಂತಾಗ ನಮ್ಮ ಕಣ್ಣಲ್ಲಿ ಖುಷಿಯ ಕಣ್ಣೀರು, ಮಕ್ಕಳ ಮುಖದಲ್ಲಿ ನಗು ಇತ್ತು. ನಿಸ್ವಾರ್ಥ ಹೃದಯದ ಶಕ್ತಿ ಎಷ್ಟು ಮಹೋನ್ನತ ಎಂದು

ಈ ದೃಶ್ಯ ಸಾರಿ ಹೇಳುತ್ತಿತ್ತು.

(‘ಜರೂರ್ ಮಾತು’ ನೆಲದ ನಕ್ಷತ್ರಗಳ ಸ್ಪೂರ್ತಿಗಾಥೆ ಪುಸ್ತಕಕ್ಕಾಗಿ ಸಂರ್ಪಸಿ ಮೊ: 88848 90350)

Leave a Reply

Your email address will not be published. Required fields are marked *

Back To Top