More

    ಮನಸನ್ನು ಚಾರ್ಜ್ ಮಾಡಿ, ನಮಗಾಗಿಯೂ ಕೊಂಚ ಬದುಕೋಣ!

    ಮನಸನ್ನು ಚಾರ್ಜ್ ಮಾಡಿ, ನಮಗಾಗಿಯೂ ಕೊಂಚ ಬದುಕೋಣ!ಕುಛ್ ತೋ ಲೋಗ ಕಹೆಂಗೆ, ಲೋಗೋ ಕಾ ಕಾಮ್ ಹೈ ಕಹನಾ

    ಛೋಡೋ ಬೇಕಾರ್ ಕೀ ಬಾತೋ ಮೇ ಕಹಿ ಬೀತ್ ನಾ ಜಾಯೇ ರೈನಾ…

    ಈ ಹಾಡನ್ನು ನಾವು ಕೂಡ ಎಷ್ಟೋ ಬಾರಿ ಗುನುಗುನಿಸಿರುತ್ತೇವೆ. ಎಷ್ಟು ಅರ್ಥಪೂರ್ಣ ಸಾಲುಗಳು. ಹೌದಲ್ವ, ನೀವು ಎಷ್ಟೇ ಸಭ್ಯರಾಗಿರಿ, ಸಾತ್ವಿಕರಾಗಿರಿ, ಉಪಕಾರಿಗಳಾಗಿರಿ. ಆದರೂ ಈ ಜಗತ್ತಿನ ನೆಗೆಟಿವ್ ಕಮೆಂಟ್​ಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಷ್ಟಾರ್ಥಗಳು ಈಡೇರದಿದ್ದರೆ ದೇವರಿಗೇ ಬೈಯ್ಯೋ ಜನ ನಾವು. ಇದು ಅಪ್ರಿಯ ಸತ್ಯ. ಇತ್ತೀಚೆಗೆ ಗೃಹಿಣಿಯೊಬ್ಬರು ಮಗುವಿನ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಘಾತ ಮೂಡಿಸಿತಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಗೆಯಲ್ಲಿ ವಿಶ್ಲೇಷಣೆಗೆ ಒಳಪಟ್ಟಿತು. ಇಲ್ಲಿ ಬರೀ ಆ ಗೃಹಿಣಿಯ ತಪು್ಪ ಅಂತ ಬೊಟ್ಟು ಮಾಡಿ ಸುಮ್ಮನಾದರೆ, ಅದೂ ದೊಡ್ಡ ತಪು್ಪ. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಒತ್ತಡವೇ ವಿಭಿನ್ನ ರೀತಿಯಲ್ಲಿ ಸೃಷ್ಟಿಯಾಗಿದೆ. ಅದು ಎಲ್ಲರೂ ಒಂದೇ ರೀತಿ ಬದುಕಬೇಕು, ಏಕಪ್ರಕಾರದ ಜೀವನಶೈಲಿ ಹೊಂದಿರಬೇಕು ಎಂದು ಬಯಸುತ್ತದೆ. ಇವರನ್ನು ನೋಡಿ ಅವರು, ಅವರನ್ನು ನೋಡಿ ಮತ್ತೊಬ್ಬರು… ಹೀಗೆ ಜೀವನ ಎಂಬುದೇ ಅನುಕರಣೆಯಾಗಿ ಹೋಗಿದೆ. ಆದರೆ, ಇಂಥ ಅನುಕರಣೆಯಿಂದ ಜೀವನವನ್ನು ನಿಜವಾಗಿ ಸಂಭ್ರಮಿಸಲು ಸಾಧ್ಯವೇ? ಅದಂತೂ ಬಿಡಿ, ಬೇರೆಯವರಂತೆ ಬದುಕುವ ಧಾವಂತದಲ್ಲಿ, ನಮಗಾಗಿ ಬದುಕುವುದನ್ನೇ ಮರೆಯುತ್ತಿದ್ದೇವೆ. ಸಂಬಂಧಿಕರೋ, ಸ್ನೇಹಿತರೋ ಆಸ್ತಿ ಮಾಡಿದರು, ಕಾರು ಕೊಂಡರು ಅಂತ ಇವರು ಕೊರಗುವುದರಲ್ಲಿ ಯಾವ ಅರ್ಥವಿದೆ? ಹಾಗಂತ, ಜೀವನದಲ್ಲಿ ಸಾಧನೆ ಮಾಡಬಾರದು ಅಂತಲ್ಲ. ಆದರೆ, ಎಲ್ಲವನ್ನೂ ಭೌತಿಕ ಸಂಪತ್ತಿನ ಲೆಕ್ಕದಲ್ಲೇ ಅಳೆಯಲಾಗುವುದಿಲ್ಲ. ಸಂತೋಷಕ್ಕೆ ಅದು ಮಾನದಂಡವೂ ಅಲ್ಲ.

    ಅಷ್ಟಕ್ಕೂ ಈ ಜಗತ್ತಿನಲ್ಲಿ ಸಂಪತ್ತೇ ಇಲ್ಲದೆ ಇರುವವರು ವಿರಳ. ಅಂದರೆ, ತುಂಬ ಜ್ಞಾನಿ, ಮೇಧಾವಿ, ಹಸನ್ಮುಖಿ, ಕಷ್ಟಸಹಿಷ್ಣು, ಸರಳಜೀವಿ, ನಿರುಪದ್ರವಿ, ಉಪಕಾರಿ, ಸಂವೇದನಾಶೀಲ ಆಗಿರುವುದು ಸಂಪತ್ತೇ ಅಲ್ಲವೆ. ಭೌತಿಕ ಸಂಪತ್ತಿನ ತೂಕದ ಎದುರು ಆಂತರ್ಯದ ಸಂಪತ್ತಿನ ಮೌಲ್ಯವೇ ಹೆಚ್ಚು. ಸಮಸ್ಯೆ ಏನೆಂದರೆ, ತುಂಬ ಜನರಿಗೆ ತಮ್ಮ ಬಳಿ ಯಾವ ಸಂಪತ್ತು ಇದೆಯೆಂದೇ ಗೊತ್ತಿರುವುದಿಲ್ಲ. ಕಾರಣ, ‘ಅಯ್ಯೋ ಅವರ ಬದುಕಂತೆ ನಮ್ಮ ಜೀವನ ರೂಪುಗೊಳ್ಳುತ್ತಿಲ್ಲ’ ಎಂಬ ಕೊರಗೇ ಮನಸಿನ ತುಂಬ ಆವರಿಸಿಕೊಂಡು, ಕತ್ತಲೆಯನ್ನು ಸೃಷ್ಟಿಸಿರುತ್ತದೆಯಲ್ಲ…

    ಮುನಿಶ್ರೀ ತರುಣಸಾಗರ್ ಮಹಾರಾಜ್ ಕಡವೇ ಪ್ರವಚನಗಳಲ್ಲಿ ಈ ಸಂದರ್ಭವನ್ನು ಉಲ್ಲೇಖಿಸುತ್ತಿದ್ದರು. ಮಗುವೊಂದು ತಾಯಿ ಜತೆಗೆ ಜಾತ್ರೆಗೆ ಹೋಗಿತ್ತು. ಜಾತ್ರೆ ಅಂದಮೇಲೆ ಕೇಳಬೇಕೆ? ಬಗೆಬಗೆಯ ಆಟಿಕೆಗಳು, ಗೊಂಬೆಗಳು, ಸಿಹಿತಿಂಡಿಗಳು ಎಲ್ಲವೂ ಇದ್ದವು. ತಾಯಿ ಕೈಹಿಡಿದು ಸಾಗುತ್ತಿದ್ದ ಮಗು ಆಟಿಕೆಗಾಗಿ, ಸಿಹಿತಿಂಡಿಗಾಗಿ ಹಠ ಮಾಡುತ್ತಲೇ ಇತ್ತು. ‘ಸ್ವಲ್ಪ ಮುಂದೆ ಹೋಗಿ ತಗೋಳೋಣ, ಇರು’ ಅಂತ ಅಮ್ಮ ಸಮಾಧಾನ ಪಡಿಸುತ್ತಲೇ ಇದ್ದಳು. ಜನಜಂಗುಳಿಯಲ್ಲಿ ಮಗು ಅಮ್ಮನ ಕೈಬಿಟ್ಟಿತು. ಆ ಗದ್ದಲದಲ್ಲಿ ತಾಯಿ ಕಂದನಿಗಾಗಿ ಹುಡುಕಾಡತೊಡಗಿದಳು. ಇತ್ತ ಮಗು ಗಾಬರಿಯಿಂದ ಜೋರಾಗಿ ಅಳತೊಡಗಿತು. ಇದನ್ನು ಗಮನಿಸಿದ ಒಬ್ಬ ಸಜ್ಜನ, ‘ನಿನ್ನ ಅಮ್ಮ ಸ್ವಲ್ಪ ಹೊತ್ತಲೇ ಬರುತ್ತಾರೆ ಅಳಬೇಡ’ ಅಂತ ಸಮಾಧಾನ ಪಡಿಸುತ್ತ ಸಿಹಿತಿಂಡಿ ಕೊಡಿಸಲು, ಗೊಂಬೆ ನೀಡಲು ಪ್ರಯತ್ನಿಸಿದ. ಊಹೂಂ, ಮಗು ಅದ್ಯಾವುದೂ ಬೇಡ ಎಂದಿತು, ‘ನನಗೆ ಅಮ್ಮ ಬೇಕು ಅಷ್ಟೇ’ ಅಂತ ಇನ್ನೂ ಜೋರಾಗಿ ಅಳತೊಡಗಿತು. ಇಷ್ಟು ಹೊತ್ತು ಯಾವ ಆಟಿಕೆ, ತಿಂಡಿಗಾಗಿ ಹಠ ಮಾಡುತ್ತಿತ್ತೋ ಅದೆಲ್ಲ ಮಗುವಿನ ಮುಂದೆ ಇದ್ದವು. ಆದರೀಗ, ಅದೆಲ್ಲವೂ ಬೇಡ ಆಗಿತ್ತು! ಅಮ್ಮ ಎಂಬ ನಿಜವಾದ ಸಂಪತ್ತು ಅದಕ್ಕೆ ಬೇಕಾಗಿತ್ತು. ಅಮ್ಮ ಸಿಕ್ಕಾಕ್ಷಣ ಅಪ್ಪಿಕೊಂಡು ಅತ್ತ ಬಳಕವೇ, ಮಗುವಿನ ಮನಸ್ಸಿನ ಭಾರ ಇಳಿದದ್ದು.

    ನಾವೂ ಈ ಮಗುವಿನಂತೆಯೇ. ಮಿಠಾಯಿ ಅಂಗಡಿಗಳಂತೆ ಕಾಣುವ ಭೌತಿಕ ವಿಷಯವಸ್ತುಗಳ ಹಿಂದೆಯೇ ಬಿದ್ದಿರುತ್ತೇವೆ. ನಮ್ಮ ನಿಜವಾದ ಸಂಪತ್ತು ಯಾವುದೆಂದು ಅರ್ಥವಾಗುವಷ್ಟರಲ್ಲಿ ಬಹಳ ತಡವಾಗಿರುತ್ತದೆ. ನಮಗಾಗಿಯೇ ಬದುಕು ರೂಪಿಸಿಕೊಂಡರೆ ಸಮಸ್ಯೆಗಳು ಕಮ್ಮಿ. ಬೇರೆಯವರನ್ನು ನೋಡಿ ಅವರಂತೆಯೇ ಜೀವನ ಕಟ್ಟಿಕೊಳ್ಳಬೇಕು ಅಂತ ಅನುಕರಣೆಯ ಹಾದಿಯಲ್ಲಿ ಸಾಗಿದರೆ ಅತೃಪ್ತಿ ಕಟ್ಟಿಟ್ಟ ಬುತ್ತಿ. ಈ ಜಗತ್ತಿನಲ್ಲಿ ಅಸಮಾನತೆ ಇದೆ. ಬಡತನದ ಕ್ರೂರತೆ ಕಾಡುತ್ತಿದೆ ಎಂಬುದು ವಾಸ್ತವವೇ. ಆದರೆ, ಒಂದಂತೂ ಸತ್ಯ; ಪ್ರಪಂಚದ ಪ್ರತಿ ವ್ಯಕ್ತಿಯೂ ವಿಶಿಷ್ಟ ಶಕ್ತಿಯೇ. ಆ ಶಕ್ತಿಯನ್ನು ಅರಿತುಕೊಂಡು ಅದನ್ನು ಜಾಗೃತವಾಗಿಸುವಲ್ಲಿಯೇ ಜೀವನದ ನಿಜವಾದ ಸಾರ್ಥಕತೆ ಇದೆ ಎಂಬ ಸ್ವಾಮಿ ವಿವೇಕಾನಂದರ ಮಾತು ಪ್ರೇರಣಾದಾಯಿ. ಅಷ್ಟಕ್ಕೂ, ಬೇರೆಯವರೊಡನೆ ಹೋಲಿಸಿಕೊಂಡು, ಅನುಕರಣೆಯಿಂದ ಬದುಕು ಕಟ್ಟಿಕೊಳ್ಳಲು ಯತ್ನಿಸಿದರೆ ದಕ್ಕುವುದು ಅಸಮಾಧಾನ, ಅಶಾಂತಿ, ಅಸಂತೋಷ, ದ್ವೇಷ, ಅಸೂಯೆ ಮಾತ್ರ. ಮಾನವ ಯಾವ ಗುಣಗಳನ್ನು ತ್ಯಜಿಸಬೇಕೋ ಅದೆಲ್ಲ ತನ್ನದಾಗಿಸಿಕೊಂಡು, ಪೋಷಿಸಿದರೆ ಆಂತರ್ಯದ ಶಾಂತಿ ಹೇಗೆ ಸಿಗಲು ಸಾಧ್ಯ? ಅತ್ಯಲ್ಪ ಅವಶ್ಯಕತೆಗಳಲ್ಲಿ ಬದುಕುತ್ತಿದ್ದರೂ; ಮುಖದ ಮೇಲೆ ಎಂದೂ ನಗು ಮಾಸಲು ಬಿಡದಂತೆ ನೋಡಿಕೊಂಡು ಖುಷಿಖುಷಿಯಾಗಿ ಇರುವವರು ಅದೆಷ್ಟೋ ಜನ.

    ಇನ್ನೊಂದು ಸಮಸ್ಯೆ ವಾಸ್ತವವನ್ನು ಒಪ್ಪಿಕೊಳ್ಳದಿರುವುದು. ಇರುವ ಸ್ಥಿತಿಯನ್ನು ಒಪ್ಪಿಕೊಂಡು, ಅದರಿಂದ ಆಚೆ ಬರಲು ಸಂಕಲ್ಪಿಸಿದರೆ ಖಂಡಿತ ಪರಿವರ್ತನೆ ಸಾಧ್ಯ. ಕೆಲವಂತೂ ನಮ್ಮ ನಿಯಂತ್ರಣಕ್ಕೆ ಒಳಪಡದ ಸಂಗತಿಗಳಾಗಿರುತ್ತವೆ. ಅವುಗಳ ಬಗ್ಗೆ ಎಷ್ಟೇ ಚಿಂತಿಸಿದರೂ, ಮಾತನಾಡಿದರೂ ವ್ಯರ್ಥವೇ; ಅದನ್ನು ಒಪ್ಪಿಕೊಳ್ಳದೆ ಗತ್ಯಂತರವಿಲ್ಲ. ‘ವಾಸ್ತವದಿಂದ ದೂರ ಓಡುತ್ತಿರುವುದರಿಂದಲೇ ಸಮಸ್ಯೆಗಳು ಮತ್ತಷ್ಟು ಜಟಿಲವಾಗುತ್ತವೆ’ ಎಂದಿದ್ದಾನೆ ಮನೋವಿಜ್ಞಾನಿಯೊಬ್ಬ. ದುಃಖ ಇದ್ದರೆ ಒಪ್ಪಿಕೊಳ್ಳೋಣ. ಆಗ ಮಾತ್ರ ಮನಸ್ಸು ಅದರಿಂದ ಆಚೆ ಬರಲು ಅಣಿಯಾಗುತ್ತದೆ. ‘ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತೆಗೆದುಕೊಂಡು ಬಾ’ ಎಂದು ಗೌತಮ ಬುದ್ಧ ಅಂದೇ ಹೇಳಿ,

    ‘ದುಃಖವಿಲ್ಲದ ಮನೆ-ಮನ ಇಲ್ಲ’ ಎಂಬ ಸಂದೇಶವನ್ನು ರವಾನಿಸಿದ. ನಮ್ಮಲ್ಲಿ ಬಹುತೇಕರು ಇದನ್ನು ಅಸಹಜ ಸ್ಥಿತಿ ಎಂದು ತಿಳಿದಿದ್ದೇವೆ. ದುಃಖ-ಬೇಸರವಾಗುವುದು, ಖಿನ್ನತೆ ಆವರಿಸಿಕೊಳ್ಳುವುದು, ಭಯ ಕಾಡುವುದು, ಅಳು ಬರುವುದು… ಇವೆಲ್ಲ ಮನುಷ್ಯನ ಸಹಜ ಭಾವನೆಯ ಬಿಂಬಗಳೇ. ಇದನ್ನು ಅದುಮುವ ಪ್ರಯತ್ನ ಮಾಡುತ್ತಿರುವುದರಿಂದ, ಅವು ಹೆಚ್ಚು ಕ್ಲಿಷ್ಟ ಆಗುತ್ತಿವೆ.

    ದುಃಖವಾಗುತ್ತಿದೆ ಎಂದರೆ ನಮ್ಮಲ್ಲಿ ಸಂವೇದನೆ ಇನ್ನೂ ಜೀವಂತವಾಗಿದೆ ಎಂದರ್ಥ. ಬೇಸರವಾಗಿದೆ ಎಂದರೆ ಮನಸ್ಸು ಈ ಸ್ಥಿತಿಯಿಂದ ಹೊರಬರಲು ಹೋರಾಡುತ್ತಿದೆ ಎಂಬುದು ವಾಸ್ತವ. ಕಣ್ಣೀರು ಧಾರಾಕಾರವಾಗಿ ಹರಿಯುತ್ತಿದೆ ಎಂದರೆ ಹೃದಯ ಶುದ್ಧಗೊಳ್ಳುತ್ತಿದೆ; ಭಾರ ಇಳಿಸಿಕೊಳ್ಳುತ್ತಿದೆ ಎಂಬುದರ ಸಂಕೇತ. ಇದನ್ನು ಅಸಹಜ ಎಂದು ನಾವೇ ನಿರ್ಧರಿಸಿ ಬಿಟ್ಟರೆ ಹೇಗೆ? ವರ್ಷದ 365 ದಿನ ಯಾರಿಗೂ ನಗುತ್ತ ಕಳೆಯಲು, ಚಿಂತೆ ಮಾಡದೆ ಸಾಗಲು ಸಾಧ್ಯವಿಲ್ಲ. ಹಾಗಾಗಿ, ದುಃಖವಾಗುತ್ತಿದೆ ಎಂದರೆ ನಾವು ‘ನಾರ್ಮಲ್’ ಆಗಿದ್ದೇವೆ ಎಂದು ಮನಸ್ಸಿಗೆ ಮನದಟ್ಟು ಮಾಡಿಕೊಡಬೇಕು. ಬೇಸರವಾಗಿದೆ ಎಂದರೆ ನಮ್ಮ ಮನಸು ಸರಿಯಾದುದಕ್ಕಾಗಿ ತುಡಿಯುತ್ತಿದೆ; ನೋವು, ಬೇಸರ ಎದೆಹಿಂಡುತ್ತಿದೆ ಎಂದರೆ ನಾವು ಸಂವೇದನೆ ಕಳೆದುಕೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ. ಖಿನ್ನತೆಯೂ ಕಾಯಿಲೆಯಲ್ಲ; ಅದೇ ಸ್ಥಿತಿಯಲ್ಲಿ ಮನಸ್ಸನ್ನು ದೀರ್ಘಾವಧಿಯಲ್ಲಿ ಇರಲು ಬಿಟ್ಟರೆ ಮುಂದೆ ಅದು ಮಾನಸಿಕ ಕಾಯಿಲೆ ಆಗಬಲ್ಲದು ಅಷ್ಟೇ.

    ದುಃಖವಾದಾಗ ದುಃಖಿಸೋದು, ಬೇಸರವಾದಾಗ ಕುಗ್ಗುವುದು ಖಂಡಿತ ತಪ್ಪಲ್ಲ. ಆದರೆ, ಆ ಸ್ಥಿತಿಗೆ ಕಾರಣ ಅವಲೋಕಿಸಿಕೊಂಡು ಕ್ರಮೇಣ ಅದರಿಂದ ಆಚೆಬರಲು ನಿರ್ಧರಿಸುವುದಿದೆಯಲ್ಲ ಅದು ಮನಸಿನ ಕೆಲಸ. ಏನು ಮಾಡೋದು, ಈ ಮನಸು ಅಲೆಯುತ್ತಲೇ ಇರುತ್ತದೆ. ಅದಕ್ಕೆ ಅಡ್ಡಾದಿಡ್ಡಿಯಾಗಿ ಹೋಗಲು ಬಿಟ್ಟವರು ನಾವೇ. ಅದನ್ನು ನಿಯಂತ್ರಣಕ್ಕೆ ತರುವುದು ಸುಲಭವಲ್ಲ. ದಿನವಿಡೀ ನಕಾರಾತ್ಮಕ ಯೋಚನೆಗಳಿಂದ ತುಂಬಿ ಹೋಗುವ ಮನಸು ಮತ್ತಷ್ಟು ಕುಗ್ಗದೆ ಇನ್ನೇನಾದಿತು. ‘ಬೆಳಗ್ಗೆ ಎದ್ದಾಕ್ಷಣ ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜಿಗೆ ಇಡುವ ನಾವು ಮನಸನ್ನು ಚಾರ್ಜ್ ಮಾಡುವುದನ್ನೇ ಮರೆಯುತ್ತೇವೆ. ಬೆಳಗ್ಗೆ ಎದ್ದಾಕ್ಷಣ ಮನಸನ್ನು ಸಕಾರಾತ್ಮಕ ಚಿಂತನೆಗಳಿಂದ ಚಾರ್ಜ್ ಮಾಡಿದರೆ, ಅದು ದಿನವಿಡೀ ನಕಾರಾತ್ಮಕ ಸಂಗತಿಗಳ ವಿರುದ್ಧ ಹೋರಾಡುತ್ತದೆ. ಆದರೆ, ಚಾರ್ಜ್ ಮಾಡದ ಮನಸಿನೊಂದಿಗೆ ಹೇಗೆ ದಿನ ಕಳೆಯುವಿರಿ? ಅದಕ್ಕೇ ಎಲೆಕ್ಟ್ರಿಕ್ ಸಾಧನಗಳಿಗೆ ಮಾತ್ರವಲ್ಲ, ಮನಸಿಗೂ ಚಾರ್ಜ್ ಮಾಡಿ’ ಎಂದು ಹೇಳುವ ಪ್ರೇರಣಾದಾಯಿ ಮಾತುಗಾರ ಗೌರ್ ಗೋಪಾಲ್ ದಾಸ್- ‘ಕೃತಜ್ಞತೆ, ಸಕಾರಾತ್ಮಕ ಚಿಂತನೆ, ನಂಬಿಕೆ ಮತ್ತು ಇತರರಿಗೆ ನೆರವಾಗುವ ಸಂಕಲ್ಪದೊಡನೆ ದಿನ ಆರಂಭಿಸಿದರೆ ದುಃಖ, ಬೇಜಾರೆಲ್ಲ ದೂರವಾಗುತ್ತದೆ’ ಎನ್ನುತ್ತಾರೆ.

    ಬದುಕು ಸಹಜವಾಗಿದೆ, ಸರಳವಾಗಿದೆ, ಸುಂದರವೂ ಆಗಿದೆ. ಅದರಲ್ಲಿ ನಾವು ಕೃತಕತೆಯ ಸಂಗತಿಗಳನ್ನು ಸೇರಿಸದೆ ಬದುಕನ್ನು ಇರುವ ಹಾಗೆ ಸ್ವೀಕರಿಸಿದರೆ ಎಲ್ಲವೂ ಸರಾಗ. ಸುಖವೂ ಬದುಕಿನ ಮುಖ; ದುಃಖವೂ ಬದುಕಿನ ಮುಖ. ಎರಡನ್ನೂ ಒಪ್ಪಿಕೊಳ್ಳೋಣ, ಅಪ್ಪಿಕೊಳ್ಳೋಣ. ನಾವು ನಾವಾಗಿಯೇ ಬದುಕೋಣ. ಆಂತರ್ಯದಲ್ಲೊಂದು ಸಂತೃಪ್ತಿಯ ಪುಟ್ಟ ಗೂಡು ಕಟ್ಟೋಣ.

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts