ಮೇಷ್ಟ್ರ ಋಣ, 350 ರೂಪಾಯಿ ಮತ್ತು ಐಟಿಬಿಟಿ ಹುಡುಗರ ಸೇವೆ!

ಶೀರ್ಷಿಕೆ ನೋಡಿ ಗಲಿಬಿಲಿಯಾಗಬೇಡಿ. ಜೀವನವೇ ಹಾಗೆ. ಕಷ್ಟಗಳ ಹಾದಿಯಲ್ಲಿ ಸುದೀರ್ಘವಾಗಿ ನಡೆದ ಮೇಲೆಯೇ ಸುಖದ ನೆರಳು ಚಾಚಿಕೊಳ್ಳುತ್ತದೆ. ನಾವು ಬಂದ ಹಾದಿಯನ್ನು ಮರೆಯದಿದ್ದರೆ ನಮ್ಮ ಜತೆಗಿರುವವರ ಕಣ್ಣೀರನ್ನು ಒರೆಸಿ, ಅವರ ಹೃದಯದಲ್ಲೂ ಸಾಂತ್ವನದ ಸಣ್ಣ ಹಣತೆ ಬೆಳಗಬಹುದು…

ಅದು ಇಪ್ಪತ್ತು ವರ್ಷಗಳ ಹಿಂದಿನ ಮಾತು, ಡಿಗ್ರಿ ಮುಗಿಸಿದ್ದ ತರುಣನಿಗೆ ಮುಂದೆ ಓದುವ ಆಸಕ್ತಿ ಇದ್ದರೂ ಹಣದ ಕೊರತೆ ಕನಸುಗಳ ಪಯಣಕ್ಕೆ ಅಡ್ಡಿಯಾಗಿತ್ತು. ಸ್ನಾತಕೋತ್ತರ ಪ್ರವೇಶ ಪರೀಕ್ಷೆಯ ಶುಲ್ಕ ತುಂಬಲು ಇನ್ನೇನು ಕಡೇ ದಿನ ಎಂಬ ಘಳಿಗೆಯಲ್ಲಿ ಶಿಕ್ಷಕರೊಬ್ಬರು ಈ ತರುಣನ ಕೈಹಿಡಕೊಂಡು, ಬ್ಯಾಂಕಿಗೆ ಕರೆದುಕೊಂಡು ಹೋಗಿ 350 ರೂಪಾಯಿ ಶುಲ್ಕವನ್ನು ತಾವೇ ತುಂಬಿದರು. ಬ್ಯಾಂಕಿಗೆ ಹೋಗುವ ದಾರಿಮಧ್ಯೆ ದೇವಸ್ಥಾನ ಸಿಕ್ಕಾಗ ‘ಹೋಗು, ನಿನ್ನೆಲ್ಲ ವಿಘ್ನಗಳು ಕಳೆಯಲಿ ಅಂತ ಪ್ರಾರ್ಥಿಸಿ, ದೇವರಿಗೆ ಒಂದು ನಮಸ್ಕಾರ ಹಾಕಿಕೊಂಡು ಬಾ’ ಅಂತ ಕಳುಹಿಸಿದರು. ಈ ಗುರು-ಶಿಷ್ಯರ ಅಪೂರ್ವ ಪ್ರೀತಿಗೆ ಆ ದೇವರು ಮನಸೋತನೇನೋ, ತರುಣನ ಪ್ರಾರ್ಥನೆಗೆ ತಥಾಸ್ತು ಎಂದುಬಿಟ್ಟಿದ್ದ. ಅವತ್ತು, ಆ 350 ರೂ. ಹೊಂದಿಸಲು ಆಗದಿದಿದ್ದರೆ ಮುಂದಿನ ಓದು, ಆ ಮೂಲಕ ಭವಿಷ್ಯವೇ ಮಸುಕಾಗಿಬಿಡುತ್ತಿತ್ತೇನೋ. ಅಕ್ಷರಗಳ ಬೆಳಕು ನೀಡಿದ್ದ ಆ ಶಿಕ್ಷಕ ಇಲ್ಲಿ ಅಂತಃಕರಣದ ಸೌಂದರ್ಯವನ್ನು ಬಿಂಬಿಸಿದರು.

ಆ ಹುಡುಗ ಮುಂದಿನ ಓದಿನಲ್ಲಿ ತಲ್ಲೀನನಾದ, ಶ್ರದ್ಧೆ ಕೈಬಿಡಲಿಲ್ಲ. ಉನ್ನತ ವ್ಯಾಸಂಗ ಮಾಡಿ, ಐಟಿ ರಂಗಕ್ಕೆ ಸೇರಿ ಹಲವಾರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿ, 10 ವರ್ಷಗಳಲ್ಲಿ 12 ದೇಶಗಳನ್ನು ಸುತ್ತಿದ್ದೂ ಆಯಿತು. ಆದರೆ, ಆ 350 ರೂಪಾಯಿಯ ಋಣವನ್ನು ತೀರಿಸುವುದು ಹೇಗೆ? ಮೇಷ್ಟ್ರಿಗೆ ಎಷ್ಟು ದೊಡ್ಡ ಉಡುಗೊರೆ ಕೊಟ್ಟರೂ ಸಮಾಧಾನವಾಗದು ಎಂದು ಭಾವಿಸಿ ತನ್ನಂತೆಯೇ ಕಷ್ಟದಲ್ಲಿ ಇದ್ದು ಶಿಕ್ಷಣ ಪಡೆಯಲು ಪರದಾಡುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗೋಣ ಎಂದು ನಿರ್ಧರಿಸಿಯಾಯಿತು. ಅದಕ್ಕೊಂದು ಸಂಸ್ಥೆಯನ್ನು (ಯುವಾಶಕ್ತಿ ಸೇವಾ ಫೌಂಡೇಷನ್) ಆ ಮೇಷ್ಟ್ರ ಮಾರ್ಗದರ್ಶನದಲ್ಲೇ ಕಟ್ಟಿ, ವಿಶಿಷ್ಟ ಸೇವೆಯ ಮೂಲಕ ಸದ್ದಿಲ್ಲದೆ ಪರಿವರ್ತನೆ ತರುತ್ತಿದ್ದಾರೆ ಭೂಷಣ್ ಭಾರತಿ ಎಂಬ ಹೃದಯಶ್ರೀಮಂತಿಕೆಯ ವ್ಯಕ್ತಿ. ತೀರಾ ಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಹೊಣೆ ಹೊತ್ತಿರುವ ಯುವಾಶಕ್ತಿ ಸೇವಾ ಫೌಂಡೇಷನ್ 43 ವಿದ್ಯಾರ್ಥಿಗಳನ್ನು (ಒಟ್ಟು ವೆಚ್ಚ 40 ಲಕ್ಷ ರೂ.) ಓದಿಸುತ್ತಿದೆ. ಈ ಪೈಕಿ ಬಹುತೇಕರು ಇಂಜಿನಿಯರಿಂಗ್ ಓದುತ್ತಿದ್ದರೆ, ಒಬ್ಬರು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ವಿಶೇಷವೆಂದರೆ ಗ್ರಾಮೀಣಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ನೆರವಿನ ಮೂಲಕ ಉನ್ನತ ಶಿಕ್ಷಣದತ್ತ ಮುಖ ಮಾಡಿದ್ದಾರೆ.

ಶಿಕ್ಷಣಕ್ಕೆ ಬಡತನ ಅಡ್ಡಿಯಾಗುವ ಕಹಿವಾಸ್ತವವನ್ನು ಜೀವನಪಾಠದಿಂದಲೇ ಅರಿತಿರುವ ಭೂಷಣ್ ಭಾರತಿ ಪ್ರಸ್ತುತ ವಿ.ಪಿ.ಮಾರ್ಗನ್ ಕಂಪನಿಯ ಉಪಾಧ್ಯಕ್ಷರಾಗಿದ್ದು, ದಿನದ ಮೂರ್ನಾಲ್ಕು ಗಂಟೆ ಮತ್ತು ವಾರಾಂತ್ಯದ ಎರಡು ದಿನ ತಲಾ 15-16 ಗಂಟೆಗಳನ್ನು ಸಮಾಜಮುಖಿ ಕೆಲಸಗಳಿಗೇ ಮೀಸಲಿಡುತ್ತಾರೆ. ‘ಈ ವಿದ್ಯಾರ್ಥಿಗಳೆಲ್ಲ ಓದಿ, ಮುಂದೆ ಸಮಾಜದ ಶಕ್ತಿಗಳಾದರೆ ಅದಕ್ಕಿಂತ ಬೇರೆ ಸಾರ್ಥಕತೆ ಏನಿದೆ’ ಎನ್ನುವ ಭೂಷಣ್ ಐಟಿಬಿಟಿ ರಂಗದ ತರುಣರ ದೊಡ್ಡಪಡೆಯನ್ನೇ ಕಟ್ಟಿ ಅವರಿಗೆ ಸೇವೆಯಲ್ಲಿರುವ ಖುಷಿಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ವಾರಾಂತ್ಯ ಬಂದೊಡನೆ ‘ಖುಷಿ’ ಅರಸಲು ಕ್ಲಬ್ಲು-ಪಬ್ಬು ಪಾಲಾಗುತ್ತಿದ್ದ ಅದೆಷ್ಟೋ ತರುಣರು ಈಗ ಬಡ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ, ಅನಾಥಾಶ್ರಮಗಳಿಗೆ ಹೋಗಿ ಮಕ್ಕಳಿಗೆ ಜೀವನಕೌಶಲಗಳನ್ನು ಹೇಳಿಕೊಡುತ್ತಾರೆ. ಈ ತಂಡ ‘ಯುವಾ ಫಾರ್ ನೇಷನ್’ ಶೀರ್ಷಿಕೆಯಡಿ ಕೆಲಸ ಮಾಡುತ್ತಿದೆ.

ಈಗಷ್ಟೇ ಚಳಿರಾಯನ ಆಗಮನವಾಗಿದೆ. ಉಳ್ಳವರೇನೋ ಬೆಚ್ಚನೆಯ ಉಡುಪು, ಹೊದಿಕೆಗಳಲ್ಲಿ ಬಂದಿಯಾಗಿ ಚಳಿಯನ್ನೂ ಆನಂದಿಸುತ್ತಾರೆ. ಆದರೆ, ಆಕಾಶವನ್ನೇ ಹೊದಿಕೆಯಾಗಿಸಿಕೊಂಡು ಫುಟ್​ಪಾತ್​ಗಳಲ್ಲಿ ಮಲಗುವ ಅಸಂಖ್ಯ ಜನರ ಪಾಡೇನು? ಇದಕ್ಕಾಗಿ ಸಂಸ್ಥೆ ಪ್ರತಿ ವರ್ಷ ‘ಹಂಟ್ ದ ವಿಂಟರ್’ ಎಂಬ ಅಭಿಯಾನದಡಿ ಎರಡು-ಮೂರು ತಿಂಗಳುಗಳ ಕಾಲ ರಾತ್ರಿ ಹೊತ್ತು ರಸ್ತೆಗಳಲ್ಲಿ ಸಂಚರಿಸಿ ಬಯಲಲ್ಲೇ ಮಲಗಿರುವ ಬಡವರಿಗೆ ಹೊದಿಕೆಗಳನ್ನು ನೀಡುತ್ತದೆ. ತರುಣರ ಪಡೆ ಮಧ್ಯರಾತ್ರಿಯ ಚಳಿಯಲ್ಲೂ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತ, ಚಳಿಯಿಂದ ಥರಗುಟ್ಟುತ್ತಿರುವ ವೃದ್ಧರಿಗೋ, ಮಕ್ಕಳಿಗೆ ಬ್ಲಾಂಕೆಟ್ ಹೊದಿಸುತ್ತಾರೆ. ಆಗ ಪಡೆದವರ, ನೀಡಿದವರ ಕಣ್ಣಲ್ಲಿ ಕಾಣುವುದು ಆನಂದಾಶ್ರುವೇ. ಕಳೆದ ವರ್ಷ ಬೆಂಗಳೂರು ನಗರವೊಂದರಲ್ಲೇ ಐನೂರು ಮತ್ತು ದಕ್ಷಿಣ ಭಾರತದಲ್ಲಿ ‘ಅಭಯ್ ಫೌಂಡೇಷನ್’ ಸಹಯೋಗದಲ್ಲಿ ಐದು ಸಾವಿರ ಹೊದಿಕೆಗಳನ್ನು ವಿತರಿಸಲಾಗಿದೆ. ಈ ವರ್ಷ ಬೆಂಗಳೂರಿನಲ್ಲಿ ಸಾವಿರ ಬ್ಲಾಂಕೆಟ್ ವಿತರಣೆಗೆ ನಿರ್ಧರಿಸಲಾಗಿದೆ.

ಬೇಸಿಗೆಯಲ್ಲಿ ಬಿಸಲಿನ ಪ್ರತಾಪ ಬಸವಳಿಸುತ್ತದೆ. ಬೀದಿಬದಿಯಲ್ಲಿ ತರಕಾರಿ ಮಾರುವವರಿಗೆ, ಪಾದರಕ್ಷೆ ರಿಪೇರಿ ಮಾಡುವವರಿಗೆ ಹೀಗೆ ಅವಶ್ಯ ಇರುವವರಿಗೆ ನೆರಳು ಒದಗಿಸುವ ದೊಡ್ಡ ಕೊಡೆಯನ್ನು ಪ್ರತಿ ವರ್ಷ ವಿತರಿಸುತ್ತಾರೆ.

ದೇವಸ್ಥಾನಗಳ ಜೀಣೋದ್ಧಾರ ಕೇಳಿದ್ದೇವೆ. ಆದರೆ, ಈ ತಂಡ ಸೇವಾಶ್ರಮಗಳ ಜೀಣೋದ್ಧಾರ ಮಾಡುತ್ತಿದೆ! ಅದೆಷ್ಟೋ ಆಶ್ರಮಗಳಲ್ಲಿ ಸೌಲಭ್ಯಗಳಿದ್ದರೂ ಸೂಕ್ತವಾಗಿ ನಿರ್ವಹಿಸುವವರಿಲ್ಲ. ಅಂಥ ಆಶ್ರಮಗಳ ಸುಗಮ ನಿರ್ವಹಣೆಗೆ ವ್ಯವಸ್ಥೆ ಮಾಡುವ ಯುವಾಶಕ್ತಿ ಸೇವಾ ಫೌಂಡೇಷನ್ ಹಣಕಾಸಿನ ಕೊರತೆ ಎದುರಿಸುತ್ತಿರುವ ಸೇವಾಶ್ರಮಗಳಿಗೆ ಆರ್ಥಿಕ ನೆರವನ್ನೂ ಒದಗಿಸುತ್ತಿದೆ. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಓರ್ವ ಮಹಿಳೆಯೇ ಭಿನ್ನಸಾಮರ್ಥ್ಯವುಳ್ಳ ಮಕ್ಕಳಿಗೆ ಆಶ್ರಯ ನೀಡಿದ್ದು, ಅವರ ಸಂಸ್ಥೆಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಅಷ್ಟೇ ಅಲ್ಲ, ಸೇವಾಶ್ರಮಗಳಲ್ಲಿನ ಮಕ್ಕಳಿಗೆ, ಮಹಿಳೆಯರಿಗೆ ಕೌಶಲ ತರಬೇತಿ ನೀಡಿ, ಅವರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತಿದೆ. ಆಶ್ರಮಗಳು/ಸೇವಾಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು, ಅವುಗಳ ಶಕ್ತಿ ವರ್ಧಿಸುತ್ತಿರುವ ಭೂಷಣ್ ಅವರ ತಂಡ ರಕ್ತದ ಕೊರತೆಯಿಂದ ರೋಗಿಗಳು ನಲುಗಬಾರದು ಎಂಬ ಉದ್ದೇಶದಿಂದ ಕಾಲಕಾಲಕ್ಕೆ ರಕ್ತದಾನ ಶಿಬಿರಗಳನ್ನು ನಡೆಸುತ್ತಿದ್ದು, ಈವರೆಗೆ 50ಕ್ಕಿಂತ ಹೆಚ್ಚು ಶಿಬಿರಗಳು ನಡೆದಿವೆ.

ಕೆಲ ತಿಂಗಳ ಹಿಂದೆ ಕೇರಳ ಮತ್ತು ಕೊಡಗು ಭೀಕರ ನೆರೆಗೆ ನಲುಗಿದಾಗ ಐದು ಲಕ್ಷ ರೂಪಾಯಿ ಮೌಲ್ಯದ ಪರಿಹಾರಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗಿದೆ. ಕೊಡಗು ಸಂತ್ರಸ್ತರ ಕೆಲ ಮಕ್ಕಳಿಗೆ ಮೈಸೂರಿನಲ್ಲಿ ಓದಲು ವ್ಯವಸ್ಥೆ ಕಲ್ಪಿಸಲಾಗಿದೆ.

ಪವರ್ ಲಿಫ್ಟರ್ ವಿಶ್ವನಾಥ ಗಾಣಿಗ ಮತ್ತು ಮತ್ತೋರ್ವ ಕ್ರೀಡಾಪಟು ವೆಂಕಟ್ ಬಾಬು ಅವರು ಹೊರದೇಶಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸಂಪೂರ್ಣ ಪ್ರಾಯೋಜಕತ್ವ ವಹಿಸಿದ ಸಂಸ್ಥೆ, ಈ ಇಬ್ಬರೂ ಕ್ರೀಡಾಪಟುಗಳು ಭಾರತದ ಕೀರ್ತಿ ಹೆಚ್ಚಿಸುವಂತೆ ಮಾಡಿದೆ.

ಮೂರು ವರ್ಷಗಳ ಹಿಂದೆ ಪಿಯು ಪ್ರಥಮ ವರ್ಷದಲ್ಲಿ ಓದುತ್ತಿದ್ದ ಕೋಲಾರದ ತರುಣನೊಬ್ಬ ಭೀಕರ ಅಪಘಾತಕ್ಕೆ ತುತ್ತಾದ. ತಂದೆ ಇಲ್ಲದ ಆತನನ್ನು ಉಳಿಸಿಕೊಳ್ಳುವ ಶಕ್ತಿ ಬಡತಾಯಿಗೆ ಇರಲಿಲ್ಲ. ಹಾಗಾಗಿ, ಆತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಗೆ ಬೇಕಾದ ಐದು ಲಕ್ಷ ರೂಪಾಯಿಗಳನ್ನು ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಲಾಯಿತು. ಆ ಬಳಿಕವೂ ಕೋಲಾರದ ಸಣ್ಣ ನರ್ಸಿಂಗ್ ಹೋಂನಲ್ಲಿ ಇರಿಸಿ, ಆತನ ಯೋಗಕ್ಷೇಮ ನೋಡಿಕೊಂಡು ಸಂಪೂರ್ಣ ಗುಣಮುಖನಾದ ಮೇಲೆ ಮತ್ತೆ ಆತನಿಗೆ ಬೆಂಗಳೂರಿನ ಪಿಯು ಕಾಲೇಜಿಗೆ ಪ್ರವೇಶ ಕೊಡಿಸಲಾಗಿದೆ. ಈ ಪ್ರಕರಣದ ನಂತರ ಹೀಗೆ ತೀರಾ ಬಡತನದ, ಅಪಘಾತಕ್ಕೆ ತುತ್ತಾದ ಸಂತ್ರಸ್ತರ 13-14 ಪ್ರಕರಣಗಳಿಗೆ ಸ್ಪಂದಿಸಿ, ಅವರು ಗುಣಮುಖರಾಗುವಂತೆ ಮಾಡಿದ ಸಾರ್ಥಕತೆ ಭೂಷಣ್ ಭಾರತಿ ಅವರದ್ದು. ಸ್ವಾರಸ್ಯವೆಂದರೆ, ಮೂರು ವರ್ಷಗಳ ಹಿಂದೆ ಭೂಷಣ್ ಭಾರತಿ ಇದನ್ನೆಲ್ಲ ತಮ್ಮ ವೈಯಕ್ತಿಕ ಪರಿಚಯ, ಸಂಪರ್ಕಗಳ ವಲಯ ಇಟ್ಟುಕೊಂಡೇ ಮಾಡುತ್ತಿದ್ದರು. ಐಟಿ-ಬಿಟಿ ರಂಗದ ತರುಣರು ನೆರವಿಗೆ ಬರುತ್ತಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಇವರೆಲ್ಲ ಎರಡುವಾರ ರಜೆ ಹಾಕಿ ಜನರಿಗೆ ಮತ ಮಾರಿಕೊಳ್ಳದಂತೆ ಅರಿವು ಮೂಡಿಸಿದರು, ಪರಿಸರ ದಿನಕ್ಕೆ ನೂರು ಸಸಿ ನೆಟ್ಟು, ಪೋಷಿಸಿದರು. ಆದರೆ, ರಚನಾತ್ಮಕ ಚಟುವಟಿಕೆಗಳ ಸಂಖ್ಯೆ ಹೆಚ್ಚಿದಂತೆಲ್ಲ ಇದನ್ನು ಮತ್ತಷ್ಟು ವ್ಯವಸ್ಥಿತವಾಗಿಸಲು ಸಂಸ್ಥೆಯೊಂದರ ಅಗತ್ಯ ಮನಗಂಡು 2017ರ ಡಿಸೆಂಬರ್​ನಲ್ಲಿ ಯುವಾಶಕ್ತಿ ಸೇವಾ ಫೌಂಡೇಷನ್ ಸ್ಥಾಪಿಸಿದರು. ವಿಭು ಅಕಾಡೆಮಿಯ ಡಾ.ಆರತಿ ವಿ.ಬಿ., ಯಮುನಾ ಕೇಶವ್ ಸೇರಿದಂತೆ ಮಾನವಸೇವೆಯ ಹಲವು ಸಾರ್ಥಕ ಜೀವಗಳು ಶಕ್ತಿಗಳಾಗಿ ಈ ಟ್ರಸ್ಟ್​ನಲ್ಲಿದ್ದಾರೆ.

‘ಬಡತನ ಎಂಬುದು ಬದುಕಿಗೆ ಶಾಪವಾಗಬಾರದು, ಸಣ್ಣ ಸಣ್ಣ ಕಾರ್ಯ, ರಚನಾತ್ಮಕ ಚಟುವಟಿಕೆಗಳಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಈಗ ಮಾಡುತ್ತಿರುವ ಕಾರ್ಯ ಆತ್ಮಸಂತೋಷ ನೀಡುತ್ತಿದ್ದು, ಯುವಕರ ಸಹಭಾಗಿತ್ವ ಖುಷಿ ನೀಡುತ್ತಿದೆ’ ಎನ್ನುವ ಭೂಷಣ್ ಭಾರತಿ (99451 41413) ಈ ಸಮಾಜಮುಖಿ ಕೆಲಸಗಳನ್ನು ಮಾಡುವಾಗ ಹಲವು ಕಹಿ ಅನುಭವಗಳನ್ನೂ ಉಂಡಿದ್ದಾರೆ. ಬಡಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಹಣ ಸಂಗ್ರಹಿಸುವಾಗ ಪರಿಚಿತರೇ ‘ಇದರಲ್ಲಿ ನಿಮಗೆ ಸಿಗುವ ಪಾಲೆಷ್ಟು’ ಎಂದು ಕೊಂಕಾಗಿ ಪ್ರಶ್ನಿಸಿ, ಮಾತಿನ ಮೂಲಕ ಇರಿದದ್ದೂ ಇದೆ. ರಾತ್ರಿ ಕಂಬಳಿಗಳನ್ನು ಹಂಚಲು ಹೋದಾಗ ಪೊಲೀಸರ ನೂರೆಂಟು ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಉತ್ತರಿಸಿದ್ದಿದೆ. ‘ಸಾಮಾಜಿಕ ಕಾರ್ಯ ಮಾಡುವಾಗ ಇದನ್ನೆಲ್ಲ ಅನುಭವಿಸಬೇಕಾಗುತ್ತದೆ, ಕೊಂಕುಮಾತುಗಳಿಗೆ ನಗುವೇ ನನ್ನ ಉತ್ತರವಾಗಿ ರುತ್ತದೆ’ ಎನ್ನುವ ಭೂಷಣ್ ಇದೇ ಡಿಸೆಂಬರ್ 1ರಂದು ಯುವಾಶಕ್ತಿ ಸೇವಾ ಫೌಂಡೇಷನ್​ನ ಮೊದಲ ವಾರ್ಷಿಕೋತ್ಸವವನ್ನು ಬೆಂಗಳೂರಿನಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಸೇವೆಯ ಶಕ್ತಿಯನ್ನು ಹೆಚ್ಚಿಸುವ ಮತ್ತಷ್ಟು ಚಟುವಟಿಕೆಗಳನ್ನು ಕೈಗೊಳ್ಳಲಿದ್ದಾರೆ.

ಸಮಾಜದಿಂದ ನಾವು ಪಡೆದದ್ದನ್ನು ಕೊಂಚವಾದರೂ ವಾಪಸ್ ನೀಡುವ ಸಂಕಲ್ಪ ಮಾಡಿದರೆ ಎಷ್ಟೆಲ್ಲ ಬದಲಾವಣೆಗಳನ್ನು ಸಾಕಾರಗೊಳಿಸಬಹುದಲ್ವೆ? 20 ವರ್ಷಗಳ ಹಿಂದೆ ಆ ಗುರು-ಶಿಷ್ಯರಿಗೆ ಅಭಯಹಸ್ತ ನೀಡಿದ ಆ ಭಗವಂತನೂ ಇಂದು ಮಂದಹಾಸ ಬೀರಿರಬಹುದು, ನೂರಾರು ನಿರಾಶ್ರಿತರು ಬೆಚ್ಚನೆಯ ಕಂಬಳಿ ಹೊದ್ದುಕೊಂಡ ಸಂತೃಪ್ತಿ ಕಂಡು ಸಾರ್ಥಕತೆ ಅನುಭವಿಸಿರಬಹುದು.

ನಮ್ಮಲ್ಲಿನ ಸ್ವಾರ್ಥ ತಗ್ಗಿದರೆ ಇಂಥ ದೈವತ್ವದ ದರ್ಶನ ಎಲ್ಲರಿಗೂ ಸಾಧ್ಯ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)