ಸಮಾಜಕ್ಕಾಗಿ ದುಡಿಯುತ್ತ ಸಿಂಹಗಳಾಗಿ ಬದಲಾದರು!

ರೀ ಸಮಾಜ, ಸರ್ಕಾರವನ್ನು ಬಯ್ಯುವುದರಿಂದ ಕೊರತೆಗಳು ನೀಗುವುದಿಲ್ಲ. ಈ ಸಮಾಜ, ರಾಷ್ಟ್ರ ನನ್ನದು ಎಂಬ ಭಾವ ಬಲವಾಗಿ, ಪಡೆದುಕೊಂಡದ್ದಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ವಾಪಸ್ ಕೊಡುವ ಇಚ್ಛಾಶಕ್ತಿ ಪ್ರಕಟೀಕರಣವಾದರೆ ಅದುವೇ ರಾಮರಾಜ್ಯ! ಅದೆಷ್ಟೋ ಯುವ ಮನಸ್ಸುಗಳಿಗೆ ಸಮಾಜಕ್ಕೆ ತಮ್ಮಿಂದಾದ ಕೊಡುಗೆ ನೀಡಬೇಕು ಎಂಬ ತುಡಿತವಿದೆ. ಈ ತುಡಿತಕ್ಕೆ ಸೂಕ್ತ ಮಾರ್ಗ ಸಿಕ್ಕಿಬಿಟ್ಟರೆ ಪರಿವರ್ತನೆಯನ್ನು ಕಾಣಬಹುದು. ಹೀಗೆ ಯುವಶಕ್ತಿಯನ್ನು ಬೆಸೆಯುತ್ತ ಅವರಲ್ಲಿ ರಾಷ್ಟ್ರಭಕ್ತಿ, ಶ್ರಮದಾನ, ಸಂಸ್ಕೃತಿಯ ಮೌಲ್ಯಗಳನ್ನು ಬಿತ್ತುತ್ತ ವ್ಯಕ್ತಿಯೊಳಗೆ ಮಲಗಿರುವ ಸಿಂಹಶಕ್ತಿಯನ್ನು ಜಾಗೃತಗೊಳಿಸುತ್ತಿದೆ ‘ಉತ್ತಿಷ್ಠ ಭಾರತ’!

ಅದು 2014ರ ಜುಲೈ ತಿಂಗಳು. ಬೆಂಗಳೂರಿನ ಜಯನಗರದಲ್ಲಿ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಒಟ್ಟಾದ ನೂರಾರು ತರುಣರು ರಾಷ್ಟ್ರನಿರ್ವಣದ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತಿಷ್ಠ ಭಾರತ ಸಂಘಟನೆಯನ್ನು ಕಟ್ಟಿಕೊಂಡರು. ಈಗ ಇದಕ್ಕೆ ನಾಲ್ಕರ ಹರೆಯ. ಈ ಅವಧಿಯ ಸಿಂಹಹಾದಿಯನ್ನು ಸಂಕ್ಷಿಪ್ತವಾಗಿ ದಾಖಲಿಸಬೇಕಾದರೂ ಒಂದು ದೊಡ್ಡ ಕೃತಿಯನ್ನೇ ಬರೆಯಬೇಕು, ಅಷ್ಟೊಂದು ಚಟುವಟಿಕೆಗಳು, ಅಷ್ಟೊಂದು ಉತ್ಸಾಹ ಈ ಸಂಘಟನೆಯದ್ದು.

‘ಉತ್ತಿಷ್ಠ ಭಾರತ’ ಹೆಸರು ಎಲ್ಲೋ ಕೇಳಿದ್ದೀವಿ ಅಂತ ಯೋಚನೆ ಮಾಡ್ತಾ ಇದ್ದೀರಾ? ಸೀಡ್​ಬಾಲ್ (ಕಣ್ಣು ಅರಳಿತಲ್ವ?) ಅಭಿಯಾನವನ್ನು ನಮ್ಮ ರಾಜ್ಯದಲ್ಲಿ ಆರಂಭಿಸಿ ಪರಿಸರ ಸಂರಕ್ಷಣೆಯ ದೊಡ್ಡ ಯಜ್ಞಕ್ಕೆ ಹೊಸ ಆಯಾಮ ನೀಡಿದ್ದು ಉತ್ತಿಷ್ಠ ಭಾರತವೇ. ತನ್ನ ದಾಖಲೆಗಳನ್ನು ತಾನೇ ಮುರಿಯುತ್ತ ಹೊರಟಿರುವ ಈ ಸಂಘಟನೆಯ ಉದ್ದೇಶ ಹೊಸ ಪೀಳಿಗೆಯನ್ನು ಸಂವೇದನೆ, ದೇಶಭಕ್ತಿಯಿಂದ ಜೋಡಿಸಿ, ರಾಷ್ಟ್ರಕ್ಕೆ ಉತ್ತಮ ವರ್ತಮಾನ ಮತ್ತು ಭವಿತವ್ಯ ಒದಗಿಸಿ ಕೊಡುವುದು.

‘ಸಮಾಜಸೇವೆ ಮಾಡಬೇಕು ಎಂದರೆ ನಮಗೂ ಇಷ್ಟಾನೆ. ಆದರೆ, ಕೆಲಸದೊತ್ತಡ, ಬೇರೆ-ಬೇರೆ ಜವಾಬ್ದಾರಿಗಳಿಂದ ಸಾಧ್ಯವಾಗುವುದಿಲ್ಲ’ ಎಂಬ ಸಿದ್ಧಡೈಲಾಗ್ ಹೇಳುವ ಬಹುತೇಕ ಮಂದಿ ಅರ್ಥಮಾಡಿಕೊಳ್ಳಬೇಕು-ಉತ್ತಿಷ್ಠ ಭಾರತ ಸಂಘಟನೆಯನ್ನು ಕಟ್ಟಿರುವುದು ತರುಣರೇ. ಇವರೆಲ್ಲ ಸಾಫ್ಟ್​ವೇರ್ ಇಂಜಿನಿಯರ್, ಸಿಎ, ಉಪನ್ಯಾಸಕರು… ಹೀಗೆ ಬೇರೆ-ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡವರೇ. ವಿದ್ಯಾರ್ಥಿಗಳೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಾರಾಂತ್ಯದ ರಜೆಗಳನ್ನು ಮೋಜಿನಲ್ಲಿ ಕಳೆಯುವುದಕ್ಕಿಂತ ಸಾರ್ಥಕ ಕಾರ್ಯದಲ್ಲಿ ತೊಡಗಿ ಆತ್ಮಸಂತೃಪ್ತಿಯನ್ನು ಹೊಂದಬೇಕೆಂಬ ಇವರ ಆಶಯ ಹಲವು ಚಮತ್ಕಾರಗಳನ್ನೇ ಮಾಡಿದೆ. ಸಮಾಜದ ಔನ್ನತ್ಯದ ಜತೆಗೆ ಈ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಯುವ ಮನಸ್ಸುಗಳು ಸಂವೇದನೆ, ಸೇವೆ, ಮೌಲ್ಯಗಳಲ್ಲಿ ಎತ್ತರಕ್ಕೆ ಹೋಗಿವೆ, ಜತೆಗೆ ನಾಯಕತ್ವ ಗುಣ ಬೋನಸ್ ಪಾಯಿಂಟ್.

ಈ ಯುವಕರು ಮಾಡಿರುವ ಸಾಧನೆಗಳ ಒಂದು ಝುಲಕ್ ನೋಡಿ. ಪಠ್ಯಗಳಲ್ಲಿ ದೇಶಭಕ್ತಿಯ ಅಂಶವಿಲ್ಲ ಎಂದು ಬರೀ ಕೊರಗುತ್ತ ಕೂತರೆ ಸಾಕೆ? ಶಾಲಾ ಮಕ್ಕಳಲ್ಲಿ ಪ್ರೇರಣೆ ತುಂಬಲು ‘ನನ್ನ ಸೈನಿಕ ನನ್ನ ಹೆಮ್ಮೆ’ ಎಂಬ ಕಾರ್ಯಕ್ರಮವನ್ನು ಮುನ್ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ನಡೆಸಲಾಯಿತು. ಈ ಪೈಕಿ ಹೆಚ್ಚು ಸರ್ಕಾರಿ ಶಾಲೆಗಳು ಮತ್ತು ಗ್ರಾಮಾಂತರ ಪ್ರದೇಶಕ್ಕೆ ಸೇರಿದವು. ಕಾರ್ಯಕ್ರಮಕ್ಕೂ ಮೊದಲು ಮಕ್ಕಳನ್ನು ‘ನಿಮ್ಮ ಹೀರೋ ಯಾರು?’ ಎಂದು ಪ್ರಶ್ನಿಸಿದರೆ ಚಿತ್ರನಟರ ಹೆಸರು ಹೇಳುತ್ತಿದ್ದರು! ಅದೇ ‘ನನ್ನ ಸೈನಿಕ ನನ್ನ ಹೆಮ್ಮೆ’ಯ ಮೂಲಕ ಯೋಧರ ಧೀರೋದಾತ್ತ ಹೋರಾಟಗಳನ್ನು ವಿವರಿಸಿದ ಬಳಿಕ ನಮ್ಮ ಹೀರೋ ಸೌರಭ್ ಕಾಲಿಯಾ, ವಿಕ್ರಮ್ ಬಾತ್ರಾ, ಕರ್ನಲ್ ವಿಶ್ವನಾಥನ್, ಮನೋಜ್​ಕುಮಾರ್ ಪಾಂಡೆ… ಎಂದು ಹೇಳುತ್ತಿದ್ದರೆ ಇಡೀ ಪರಿಸರದಲ್ಲಿ ಸಂಚಲನ! ನೈಜ ಹೀರೋಗಳು ಅಂದರೆ ಸಿನಿಮಾಗಳಲ್ಲಿ ‘ನಾಯಕ’ ಪಾತ್ರಗಳಲ್ಲಿ ನಟಿಸುವವರಲ್ಲ, ಬದಲಿಗೆ ಸಮಷ್ಟಿಯ ಹಿತಕ್ಕಾಗಿ, ದೇಶದ ಉತ್ಕರ್ಷಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ ದುಡಿಯುವವರು ಎಂಬ ಅರಿವಿನ ಬೆಳಕು ವಿದ್ಯಾರ್ಥಿಗಳಲ್ಲಿ ಮೂಡಿದ್ದೇ ತಡ, ಅವರೆಲ್ಲ ರಾಷ್ಟ್ರದ ಬಗ್ಗೆ ಚಿಂತನೆ ಮಾಡುವಂತಾಗಿದೆ.

ದೇಶದ ಪ್ರಧಾನಿಯೇ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆಯ ಮಹತ್ವ ಸಾರಿದ್ದರು; ಆದರೆ ಇದನ್ನು ಜನಾಂದೋಲನದ ರೀತಿಯಲ್ಲಿ ಬದಲಿಸಬೇಕಿತ್ತು. ಧಾರ್ವಿುಕ ಸ್ಥಳಗಳ ಮತ್ತು ಕಲ್ಯಾಣಿಗಳ ಸ್ವಚ್ಛತೆಯನ್ನು ಸಮರೋಪಾದಿಯಲ್ಲಿ ಕೈಗೊಂಡ ಪರಿಣಾಮ ಮೇಲುಕೋಟೆ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಸೇರಿದಂತೆ ಹಲವೆಡೆ ಸಕಾರಾತ್ಮಕ ಬದಲಾವಣೆ ಆಗಿದೆ.

ಹವಾಮಾನ ಬದಲಾವಣೆಯ ಸವಾಲು ಪೆಡಂಭೂತದಂತೆ ಕಾಡುತ್ತಿದೆ, ಇದಕ್ಕಾಗಿ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಬೇಕು ಎಂಬ ಅದಮ್ಯ ಇಚ್ಛೆ ಸಂಘಟನೆಯ ತರುಣರನ್ನು ಕಾಡುತ್ತಿತ್ತು. ಆ ಬಗ್ಗೆ ಚಿಂತನೆ ನಡೆಸುತ್ತಿದ್ದಾಗ ಹೊಳೆದದ್ದು ಸೀಡ್​ಬಾಲ್ ಅಂದರೆ ಬೀಜದುಂಡೆ ಅಭಿಯಾನ! ಮಣ್ಣಿನ ಉಂಡೆ (ಜೇಡಿಮಣ್ಣು, ಗೊಬ್ಬರದ ಮಿಶ್ರಣ) ಗಾತ್ರದಲ್ಲಿ ಬೀಜಗಳನ್ನು ಇರಿಸಿ ಬಯಲು ಪ್ರದೇಶದಲ್ಲಿ ಹಾಕುವುದರಿಂದ ಕಡಿಮೆ ಖರ್ಚಿನಲ್ಲಿ (ಒಂದು ಬೀಜದುಂಡೆ ತಯಾರಿಕೆಗೆ 10 ಪೈಸೆ) ಹಸಿರಿನ ಸಿರಿಯನ್ನು ಸ್ಥಾಪಿಸಬಹುದು. ಕರ್ನಾಟಕಕ್ಕೆ ಈ ಪ್ರಯೋಗ ಹೊಸದೇ ಆಗಿತ್ತು. ಭಾರತೀಯ ಕಿಸಾನ್ ಸಂಘದಿಂದ ಹೆಚ್ಚಿನ ಮಾಹಿತಿ ಪಡೆದು 2015ರಲ್ಲಿ ನೆಲಮಂಗಲದ ಬಳಿ 10 ಸಾವಿರ ಬೀಜದುಂಡೆ ತಯಾರಿಸಿ, ಅದರ ಫಲಿತಾಂಶ ನೋಡಿದಾಗ ಎಲ್ಲರ ಹೃದಯಗಳಲ್ಲೂ ಹಸಿರು ಕುಣಿಯುತ್ತಿತ್ತು! ಮರಗಳ ಸಂಖ್ಯೆ ಹೆಚ್ಚಿಸಲು ಇದೇ ಸೂಕ್ತ ಮಾರ್ಗವೆಂದು ಅರಿತು ಅಭಿಯಾನಕ್ಕೆ ಬಲ ತುಂಬಲಾಯಿತು. ಬೆಂಗಳೂರಿನ ಸ್ವಾನಂದಾಶ್ರಮದಲ್ಲಿ ಹಲವು ಭಾನುವಾರಗಳು ಬೀಜದುಂಡೆ ತಯಾರಿಕೆಗೆ ಮೀಸಲಾದವು. 2016ರಲ್ಲಿ ‘ಪ್ರಕೃತಿಗಾಗಿ ಒಂದು ದಿನ’ ಶೀರ್ಷಿಕೆಯಲ್ಲಿ ಈ ಕಾರ್ಯಕ್ರಮವನ್ನು ಬೇರೆ-ಬೇರೆ ಜಿಲ್ಲೆಗಳಿಗೆ ಕೊಂಡೊಯ್ಯಲಾಯಿತು. ಕಳೆದ ಮೂರು ವರ್ಷಗಳಲ್ಲಿ 60 ಲಕ್ಷಕ್ಕೂ ಅಧಿಕ ಸೀಡ್​ಬಾಲ್​ಗಳನ್ನು ತಯಾರಿಸಿ, ಅವುಗಳನ್ನು ಸೂಕ್ತ ಪ್ರದೇಶದಲ್ಲಿ ಹಾಕಲಾಗಿದೆ. ಪರಿಣಾಮ, ತೀರಾ ಬರಡಾಗಿದ್ದ ಎಷ್ಟೋ ಪ್ರದೇಶಗಳಲ್ಲಿ ಹಸಿರು ಆವರಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ತೆಲಂಗಾಣ ಅರಣ್ಯ ವಿಭಾಗ ಈ ಅಭಿಯಾನದಿಂದ ಪ್ರೇರಿತವಾಗಿ ಅಲ್ಲಿ ಅರಣ್ಯ ಬೆಳೆಸಲು ಸೀಡ್​ಬಾಲ್ ಮೊರೆಹೋಗಿದೆ. ಆಂಧ್ರದಲ್ಲೂ ಇದು ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಕರ್ನಾಟಕ ಸರ್ಕಾರವೂ ಈ ಸಂಬಂಧ ಅರಣ್ಯ ಇಲಾಖೆಗೆ ಆದೇಶ ನೀಡಿದೆ ಅಲ್ಲದೆ, ಸೀಡ್​ಬಾಲ್​ಗಾಗಿ 2 ಕೋಟಿ ರೂ. ಅನುದಾನವನ್ನೂ ನಿಗದಿ ಪಡಿಸಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲೂ ಸೀಡ್​ಬಾಲ್ ಕಾರ್ಯ ವಿಸ್ತಾರ ಪಡೆದುಕೊಂಡಿದೆ.

‘ನಮಗೂ ಸೀಡ್​ಬಾಲ್ ಮಾಡೋದು ಹೇಳಿಕೊಡಿ’ ಎಂಬ ಕೋರಿಕೆಗಳು ದೂರದ ದೆಹಲಿಯಿಂದಲೂ ಬಂದಿದ್ದು, ಉತ್ತಿಷ್ಠ ಭಾರತದ ಕಾರ್ಯಕರ್ತರೇ ತರಬೇತಿ ನೀಡುತ್ತಿದ್ದಾರೆ. ರಾಜ್ಯದ 22 ಜಿಲ್ಲೆಗಳಲ್ಲಿ ಬೀಜದುಂಡೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗಿದೆ. ಇನ್ನೊಂದು ಅಂಶ ಇಲ್ಲಿ ಪ್ರಮುಖ-ವಾರಾಂತ್ಯಗಳಲ್ಲಿ ಸೀಡ್​ಬಾಲ್ ತಯಾರಿಸುವ ಸಹಸ್ರಾರು ಕೈಗಳು ಮನಸ್ಸಿಂದಲೂ ಒಂದಾಗಿವೆ. ಅಂದರೆ, ಹೊಸ ಸಂಪರ್ಕ, ಗೆಳೆತನ, ಉತ್ತಮ ಚಿಂತನೆಗಳು ಮೊಳಕೆಯೊಡೆದ ಪರಿಣಾಮ ಭಾವಬಂಧಗಳು ಗಟ್ಟಿಯಾಗಿ, ಒಗ್ಗಟ್ಟಿನ ಶಕ್ತಿಯನ್ನು ಸಾಕ್ಷಾತ್ಕರಿಸಿವೆ. ಒಳ್ಳೆಯ ಕಾರ್ಯದ ಪ್ರೇರಣೆ ಬಹುಬೇಗ ಎಲ್ಲೆಡೆ ಹರಡಿಕೊಳ್ಳುತ್ತದೆ ಎಂಬುದಕ್ಕೆ ಇದಕ್ಕಿಂತ ಸಾರ್ಥಕ ನಿದರ್ಶನ ಬೇಕೆ?

ಸಂಸ್ಕಾರವರ್ಧನೆ ನಿಟ್ಟಿನಲ್ಲಿ ನಡೆದಿರುವ ಪ್ರಯೋಗಗಳು ಕೂಡ ವಿಶಿಷ್ಟ. ರಾಷ್ಟ್ರವನ್ನು ದಾಸ್ಯದ ಸಂಕೋಲೆಯಿಂದ ಮುಕ್ತಗೊಳಿಸಲು ಹೋರಾಡಿದ ಕ್ರಾಂತಿಕಾರಿಗಳ ಜೀವನಗಾಥೆ ತಿಳಿಸಲು ‘ಪ್ರೇರಣಾ’ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ, ಪುಣ್ಯಸ್ಮರಣೆ ದಿನಗಳಂದು ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿವರವಾದ ಮಾಹಿತಿ ಒದಗಿಸಲಾಗುತ್ತದೆ. ಕನ್ನಡದ ಭಗವದ್ಗೀತೆ ಎಂಬ ಹೆಗ್ಗಳಿಕೆಯ ಮಂಕುತಿಮ್ಮನ ಕಗ್ಗದ ಕುರಿತಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ‘ದಿನಕ್ಕೊಂದು ಕಗ್ಗ’ ಮತ್ತು ಅದರ ಭಾವಾರ್ಥವನ್ನು ಸಾವಿರಾರು ಜನರಿಗೆ ತಲುಪಿಸಲಾಗುತ್ತಿದೆ. ಮಕರ ಸಂಕ್ರಾಂತಿ ಹೊತ್ತಲ್ಲಿ ‘ಯುವ ಸಂಕ್ರಮಣ’ವೆಂಬ ಕಾರ್ಯಕ್ರಮದಡಿಯಲ್ಲಿ ಉದ್ಯೋಗ ಮೇಳ ನಡೆಸಿ, ಉದ್ಯೋಗಾವಕಾಶ ಕಲ್ಪಿಸಲಾಗಿದೆ.

ಗಣೇಶ ಉತ್ಸವ ತನ್ನ ಮೂಲಾರ್ಥ ಮತ್ತು ಸೊಗಡು ಕಳೆದುಕೊಳ್ಳುತ್ತಿದೆ ಎಂಬ ಕಳವಳದಿಂದ ‘ಸ್ವರಾಜ್ಯ ಗಣೇಶೋತ್ಸವ’ ಆಚರಿಸಿ ಆ ಮೂಲಕ ಸಮಾಜದ ಮುಂದೆ ಸಾರ್ಥಕ ಮಾದರಿಯನ್ನು ಪ್ರದರ್ಶಿಸಲಾಗಿದೆ. ಪರಿಸರಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪನೆ, ರಾಷ್ಟ್ರೀಯ ಹರಟೆಯಂಥ ಅರ್ಥಪೂರ್ಣ ಕಾರ್ಯಕ್ರಮಗಳು ಜನಮನವನ್ನು ಗೆದ್ದುಕೊಂಡಿವೆ. ಸಂಸ್ಕೃತಿಯ ಮೌಲ್ಯಗಳನ್ನು ವಿಸ್ತರಿಸಲು ‘ಪವರ್ ಟು ಚೇಂಜ್’ ಹೆಸರಲ್ಲಿ ಗೀತಾಭಿಯಾನ ನಡೆಸಿ 60 ಸಾವಿರಕ್ಕೂ ಅಧಿಕ ಭಗವದ್ಗೀತೆ ಪುಸ್ತಕ ವಿತರಿಸಲಾಗಿದೆ, ಇತ್ತೀಚೆಗೆ ಬೆಂಗಳೂರಿನಲ್ಲಿ ‘ಹನುಮಥಾನ್’ ನಡೆಸಿ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ನಡೆಸಲಾಗುತ್ತಿದೆ. ಸಮಾಜದಲ್ಲಿ ಸಾಮರಸ್ಯದ ಭಾವ ಬೆಳೆಸಲು ದಲಿತ ಕೇರಿಗಳಲ್ಲಿ ಸ್ವಾಮೀಜಿಗಳ ಪಾದಯಾತ್ರೆ ಆಯೋಜಿಸಲಾಗುತ್ತಿದೆ. ಯಾವುದೇ ಪ್ರಚಾರ, ಅಬ್ಬರಗಳಿಲ್ಲದೆ ಸಮಾಜದ ಹೃದಯವನ್ನು ಶಕ್ತಿಶಾಲಿಯಾಗಿಸಲು ಸದ್ದಿಲ್ಲದೆ ಕಾರ್ಯ ಮಾಡುತ್ತಿರುವ ಉತ್ತಿಷ್ಠ ಭಾರತ (ಜಠಿಠಿಟಠ://ಠಿಠಿಜಿಠಜಠಿಚಚಿಜಚ್ಟಚಠಿಚ.ಜ್ಞಿ, ್ಠಠಿಜಿಠಜಠಿಚ.ಚಿಜಚ್ಟಚಠಿಜಚಃಜಞಚಜ್ಝಿ.ಟಞ) ತಂಡದ ನೀರಜ್ ಕಾಮತ್, ವಿಜಯ್ ಸಾರಥಿ, ಸಿದ್ಧಲಿಂಗ ಸ್ವಾಮಿ, ರವಿತೇಜ ಶಾಸ್ತ್ರಿ, ಶ್ರೀನಿವಾಸ್, ಶ್ರೀನಿಧಿ, ಪ್ರಶಾಂತ್, ರಮೇಶ ಹೋಲ್ಡೆ ಸೇರಿದಂತೆ ಹಲವರು ಸೇವೆಯ ಪುಟ್ಟ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಕಾರ್ಕಳದ ಯುವ ಚಿಂತಕ, ವಾಗ್ಮಿ ಆದರ್ಶ ಗೋಖಲೆ, ‘ಕನ್ನಡ ಪೂಜಾರಿ’ ಖ್ಯಾತಿಯ ಹಿರೇಮಗಳೂರು ಕಣ್ಣನ್ ಸೇರಿ ಹಲವರು ಇವರಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಎಲ್ಲ ಚಟುವಟಿಕೆಗಳು ಜನರು ಉದಾರ ಮನಸ್ಸಿನಿಂದ ನೀಡುವ ದೇಣಿಗೆಯಿಂದ ನಡೆಯುತ್ತಿವೆ. ಅದೆಷ್ಟೋ ಬಾರಿ ಕಾರ್ಯಕ್ರಮ ನಡೆಸುವಾಗ ಹಣ ಕಡಿಮೆ ಬಿದ್ದಾಗ ಕಾರ್ಯಕರ್ತರು ಸ್ವಂತ ಜೇಬಿಂದ ಖರ್ಚು ಮಾಡಿದ್ದೂ ಇದೆ.

ತನು-ಮನ-ಧನವನ್ನು ಹೀಗೆ ಮಹಾನ್ ಉದ್ದೇಶಕ್ಕಾಗಿ ಸಮರ್ಪಿಸುವ ಮೂಲಕ ಯುವಮನಸ್ಸುಗಳು ಸಮಾಜಸೇವೆಯಲ್ಲಿ ಹೊಸ ವಿಕ್ರಮಗಳನ್ನು ಸ್ಥಾಪಿಸುತ್ತಿದ್ದರೂ, ‘ಯೇ ದಿಲ್ ಮಾಂಗೆ ಮೋರ್’ ಎನ್ನುತ್ತ ಸಿಂಹಶಕ್ತಿಯನ್ನು ಸಾಕಾರಗೊಳಿಸಲು ಹೊರಟಿದ್ದಾರೆ. ಅಂದಮೇಲೆ ಭಾರತ ಉತ್ತಿಷ್ಠ ಅಷ್ಟೇ ಅಲ್ಲ ಉತ್ಕರ್ಷ ಆಗುವುದರಲ್ಲೂ ಅನುಮಾನ ಇಲ್ಲ. ಅಲ್ಲವೇ?