ಭಾರತ ಮತ್ತೊಮ್ಮೆ ವಿಕಾಸದ ನೈಜಪಥ ದರ್ಶಿಸುತ್ತಿದೆ!

ಕೆಲವೇ ವರ್ಷಗಳ ಹಿಂದಿನ ಮಾತು! ಸಾವಯವ-ಸಮಗ್ರ ಕೃಷಿಯ ಬಗ್ಗೆ ಮಾತನಾಡಿದರೆ ಅದನ್ನು ಲೇವಡಿ ಮಾಡುವವರೇ ಹೆಚ್ಚಾಗಿದ್ದರು, ಶೌಚಗೃಹದ ನಿರ್ವಣ, ಸ್ವಚ್ಛತೆ ಬಗ್ಗೆ ಹೇಳಿದರೆ ‘ಅದೆಲ್ಲ ಆಗಲಾರದ ಕೆಲಸ’ ಎಂದು ಮೂದಲಿಸಿದವರೇ ಜಾಸ್ತಿ. ಈಗಿನ ಚಿತ್ರಣ ನೋಡಿ, ಭೂಮಿಯ ಫಲವತ್ತತೆಗೆ, ಸಮುದಾಯದ ಸ್ವಾಸ್ಥ್ಯಕ್ಕೆ ಸಾವಯವ/ಸಮಗ್ರ ಕೃಷಿಯೇ ಬೆಸ್ಟ್ ಎಂಬ ಅರಿವು ಮೂಡಿದ್ದು, ಲಕ್ಷಾಂತರ ರೈತರು ಇದನ್ನು ಅಳವಡಿಸಿಕೊಂಡಿದ್ದಾರೆ. ಶೌಚಗೃಹಗಳ ನಿರ್ಮಾಣ ಆಂದೋಲನವಾಗಿ ಬೆಳೆದಿದೆ, ‘ಶೌಚಗೃಹ ಇರದ ಮನೆಗೆ ಮದುವೆಯಾಗಿ ಹೋಗಲಾರೆ’ ಎಂದು ಹೆಣ್ಣುಮಕ್ಕಳು ದಿಟ್ಟತನದಿಂದ ಹೇಳುತ್ತಿದ್ದಾರೆ, ಯುವಕರು ನೌಕರಿ ಮಾಡೋದಕ್ಕಿಂತ ಸ್ಟಾರ್ಟಪ್ ಸ್ಥಾಪಿಸಿ ತಾವೇ ಇತರರಿಗೆ ಕೆಲಸ ನೀಡೋದು ಭೇಷ್ ಎಂದುಕೊಂಡು ಸ್ವಾವಲಂಬನೆಯ ಹಾದಿ ತುಳಿಯುತ್ತಿದ್ದಾರೆ, ಗ್ರಾಮಗಳಲ್ಲಿ ಕೃಷಿಯಾಧಾರಿತ ಉದ್ಯೋಗಗಳು ಹುಟ್ಟಿಕೊಂಡು ವಲಸೆಪ್ರಮಾಣ ಇಳಿಮುಖವಾಗುತ್ತಿದೆ…

ಅಬ್ಬಾ… ಈ ಒಂದೊಂದು ಸಂಗತಿಯೂ ದೀರ್ಘಕಾಲದ ಕನಸು ನನಸಾದಂತೆ ತೋರುತ್ತಿದೆಯಲ್ಲ, ದೀರ್ಘ ಕಗ್ಗತ್ತಲು ಕಳೆದು ಬೆಳಕಿನ ಹೊಸ ಕಿರಣಗಳು ಉದಯಿಸಿದಂತೆ ತೋರುತ್ತಿದೆಯಲ್ಲ… ನಮ್ಮ ಸಮಾಜ, ರಾಷ್ಟ್ರ ಹೀಗೆ ಆಗಬೇಕು ಎಂದು ಕನಸು, ಕನವರಿಕೆ ಕಟ್ಟಿಕೊಂಡವರು ಅದೆಷ್ಟೋ ಜನ… ಏಕೆಂದರೆ, ಹಿಂದೆ ಕೂಡ ನಮ್ಮ ದೇಶ (ವಿಶೇಷವಾಗಿ ನಮ್ಮ ಹಳ್ಳಿಗಳು) ಸಮೃದ್ಧವಾಗಿತ್ತು, ವಿಕಾಸದ ಮೈಲಿಗಲ್ಲುಗಳನ್ನು ತಲುಪಿ, ವಿಶ್ವಕ್ಕೂ ದಿಕ್ಸೂಚಿಯಾಗಿತ್ತು. ಆ ಸಮೃದ್ಧಿ ಮತ್ತು ವಿಕಾಸಕ್ಕೆ ಸಂಸ್ಕೃತಿಯ ಬಲವೂ ಇದ್ದಿದ್ದರಿಂದ ಅದು ಆತ್ಮಸಂತೋಷ, ಆತ್ಮಬಲ ನೀಡುತ್ತಿತ್ತೆ ವಿನಾ ಭೌತಿಕ ಅಭಿವೃದ್ಧಿಯಂತೆ ಅಸಮಾನತೆ, ಸ್ವಾರ್ಥ, ಅಸಂತೋಷವನ್ನು ಸೃಷ್ಟಿಸುತ್ತಿರಲಿಲ್ಲ. ನಿಜ, ಆದರೆ ನಾವು ಮರೆತೇಹೋಗಿದ್ದ ನಮ್ಮ ವಿಕಾಸದ ದಾರಿಯೆಡೆಗೆ, ನಮ್ಮತನದೆಡೆಗೆ ಯಾರು ಕರೆದುಕೊಂಡು ಬರೋರು? ಈ ಪ್ರಶ್ನೆ ಢಾಳಾಗಿ ಕಾಡತೊಡಗಿದಾಗ ಉತ್ತರ ಕಂಡುಕೊಂಡವರು ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ. ಜಾಗತೀಕರಣದ ಪರಿಣಾಮಗಳು, ನಮ್ಮ ದೇಶ ಸಾಗುತ್ತಿರುವ ಬಗೆ ಈ ಕುರಿತು ನಾಲ್ಕು ವರ್ಷಗಳ ಕಾಲ ದೀರ್ಘ ಅಧ್ಯಯನ, ಸಂಶೋಧನೆ ಕೈಗೊಂಡ ಗೋವಿಂದಾಚಾರ್ಯರು ಭಾರತದ ವಿಕಾಸ ಮಾದರಿಯೇ ಈ ಎಲ್ಲ ಅಪಸವ್ಯಗಳನ್ನು ದೂರ ಮಾಡಬಲ್ಲದು, ನೈಜವಾದ ಸಮೃದ್ಧಿಯತ್ತ ಕೊಂಡೊಯ್ಯಬಲ್ಲದು ಎಂದು ನಿಶ್ಚಯಿಸಿ ಹೊಸ ಪ್ರಯೋಗಗಳನ್ನು ಅನ್ವಯಿಸಿದರು. ಖ್ಯಾತ ಚಿಂತಕ, ಶಿಕ್ಷಣತಜ್ಞ ಡಾ.ಬಸವರಾಜ ಪಾಟೀಲ್ ಸೇಡಂ ಗೋವಿಂದಾಚಾರ್ಯರ ಕನಸು, ಚಿಂತನೆಗಳಿಗೆ ಜತೆಯಾದರು. ಹಾಗೆ 2005ರಲ್ಲಿ ಬಿತ್ತಿದ ಭಾರತೀಯ ಚಿಂತನೆಯಾಧಾರಿತ ವಿಕಾಸ ಬೀಜ ಈಗ ಮರವಾಗಿ, ಫಲ ನೀಡತೊಡಗಿದ್ದು ಇದು ದೇಶದ ಸಜ್ಜನಶಕ್ತಿಗಳ ಬಲ ಹೆಚ್ಚಿಸಿದೆ. ಸಾಮಾನ್ಯ ಜನರು ಕೂಡ ಸಕಾರಾತ್ಮಕ ಕಾರ್ಯಗಳಲ್ಲಿ ಹೆಚ್ಚೆಚ್ಚು ಸಮಯ ತೊಡಗಿಸಿ ನಿಜಾರ್ಥದಲ್ಲಿ ಸಮಾಜನಿರ್ವಣದಲ್ಲಿ ತೊಡಗುವಂತೆ ಮಾಡಿದೆ.

‘ಪ್ರಕೃತಿ ಕೇಂದ್ರಿತ ವಿಕಾಸ’, ‘ನನ್ನ ಹಳ್ಳಿ ನನ್ನ ದೇಶ’, ‘ನನ್ನ ಜಿಲ್ಲೆ ನನ್ನ ಜಗತ್ತು’ ಎಂಬ ವಿನೂತನ ಪರಿಕಲ್ಪನೆಗಳು ಸಾಮಾಜಿಕ ಪರಿವರ್ತನೆಯನ್ನು ದೊಡ್ಡಮಟ್ಟದಲ್ಲಿ ಸಾಕಾರಗೊಳಿಸುತ್ತಿವೆ. ‘ಭಾರತ ವಿಕಾಸ ಸಂಗಮ’ ಸಂಸ್ಥೆಯ ಅಡಿಯಲ್ಲಿ ಸಾಗಿರುವ ನವೋತ್ಥಾನದ ಪರ್ವ ದೇಶಕ್ಕೆ ಸ್ವಾವಲಂಬನೆಯ ಮಹತ್ವ, ಕೃಷಿ ಮತ್ತು ಗ್ರಾಮಗಳ ಶಕ್ತಿಯನ್ನು ದರ್ಶಿಸುತ್ತಿದೆ. ರಾಷ್ಟ್ರೀಯ/ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಿಸದೆ, ಮಣ್ಣು, ಜಲ, ನೆಲ, ಕಾಡು, ಪಶು, ಪಕ್ಷಿ, ಜೀವಜಂತುಗಳನ್ನು ರಕ್ಷಿಸುತ್ತ ಅವುಗಳಿಗೆ ಪೂರಕವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುವುದೇ ‘ಪ್ರಕೃತಿ ಕೇಂದ್ರಿತ ವಿಕಾಸ’. ಉತ್ತರ ಮತ್ತು ದಕ್ಷಿಣ ಭಾರತದ ಸಾವಿರಾರು ಹಳ್ಳಿಗಳು ಈ ಮಾದರಿಯನ್ನು ಅಪ್ಪಿಕೊಂಡಿವೆ. ಈಗಿನ ವ್ಯವಸ್ಥೆ ಹಳ್ಳಿಗಳನ್ನು ಬರಡು, ಶಕ್ತಿಹೀನವಾಗಿ ತೋರಿಸುತ್ತಿದೆ. ಆದರೆ, ಹಳ್ಳಿಗಳು ಯಾವುದೇ ಅನುಕರಣೆಗೆ ಒಳಗಾಗದೆ ತಮ್ಮದೇ ಅಭಿವೃದ್ಧಿ ಸೂತ್ರ ರೂಪಿಸಿಕೊಂಡರೆ ಸಮೃದ್ಧಿಯತ್ತ ಮರಳಬಹುದು ಎಂಬುದನ್ನು ತೋರಿಸಿ ಕೊಟ್ಟಿರುವ ಪ್ರಯೋಗವೇ ‘ನನ್ನ ಹಳ್ಳಿ ನನ್ನ ದೇಶ’. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಅಲ್ಲಿಯೇ ಅಗತ್ಯ ಉತ್ಪನ್ನಗಳನ್ನು ತಯಾರಿಸುವುದು, ಅಲ್ಲೇ ಮಾರಾಟ ಮಾಡುವುದು (ಉದಾಹರಣೆಗೆ ಆಹಾರಧಾನ್ಯಗಳಿಂದ ಹಿಡಿದು ದಿನಬಳಕೆಯ ವಸ್ತುಗಳಾದ ಟೂಥ್​ಪೇಸ್ಟ್, ಫಿನೈಲ್, ಕರಕುಶಲ ಸಾಮಗ್ರಿಗಳು ಇತ್ಯಾದಿ). ಒಂದು ಸಾವಿರ ಜನಸಂಖ್ಯೆಯುಳ್ಳ ಹಳ್ಳಿಯಲ್ಲಿ ಇದನ್ನು ಅಳವಡಿಸಿದರೆ ವಾರ್ಷಿಕವಾಗಿ 5 ಕೋಟಿ ರೂಪಾಯಿ ಹೊರಗಡೆ ಹೋಗುವುದನ್ನು ತಡೆಯಬಹುದು, ಅಲ್ಲದೆ ಇದರಿಂದ ಹಳ್ಳಿಗಳ ಆರ್ಥಿಕತೆ ಬಲವಾಗಿ, ಅಲ್ಲೇ ಉದ್ಯೋಗಗಳು ರೂಪುಗೊಂಡು ವಲಸೆ ಮತ್ತಿತರ ಸಮಸ್ಯೆಗಳಿಗೆ ಕೊನೆ ಹಾಡಬಹುದು. ಹೀಗೆ ಕೈಗೊಳ್ಳುವ ವಿಕಾಸಗಳಿಗೆ ನಮ್ಮತನದ ಅಂದರೆ ದೇಶಚಿಂತನೆಯ, ಸಂಸ್ಕೃತಿಯ ಬಲ ಇದ್ದಲ್ಲಿ ಅದು ಸುಸ್ಥಿರವಾಗಿ ಉಳಿಯಬಲ್ಲದು ಎಂಬುದನ್ನು ಭಾರತ ವಿಕಾಸ ಸಂಗಮ ತೋರಿಸಿಕೊಟ್ಟಿದೆ.

‘ನಾವು ಆಂತರಿಕ ವಿಕಾಸಕ್ಕೆ ಹೆಚ್ಚು ಮಹತ್ವ ನೀಡುತ್ತೇವೆ. ಮನುಷ್ಯನಲ್ಲಿನ ಸದ್ಗುಣಗಳನ್ನು ಬಡಿದೆಬ್ಬಿಸಿ, ಸಕಾರಾತ್ಮಕ/ರಚನಾತ್ಮಕ ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗುವಂತೆ ಮಾಡುತ್ತೇವೆ. ಜನರು ಒಳ್ಳೆಕಾರ್ಯಗಳಲ್ಲಿ ತೊಡಗುವಂತಾದರೆ, ಅದರ ಬಗ್ಗೆಯೇ ರ್ಚಚಿಸುವಂತಾದರೆ ಸಮಾಜದ ಮನೋಧರ್ಮವೇ ಬದಲಾಗಿಬಿಡುತ್ತದೆ’ ಎನ್ನುವ ಬಸವರಾಜ ಪಾಟೀಲ್ ಸೇಡಂ ಬದಲಾಗುತ್ತಿರುವ ಕಾಲಘಟ್ಟದಲ್ಲೂ ನಮ್ಮ ಜೀವನಶೈಲಿ, ಸಂಸ್ಕೃತಿಯ ಸೊಗಡನ್ನು ಮರಳಿ ತಂದರೆ ಸಮಾಜ ನೆಮ್ಮದಿಯಾಗಿ ಬದುಕಬಲ್ಲದು ಎನ್ನುತ್ತಾರೆ. ಹಿಂದೆ ಜಂಕ್​ಫುಡ್​ಗಳ ಸೇವನೆ ಫ್ಯಾಶನ್ ಆಗಿತ್ತು. ಈಗ ಆರೋಗ್ಯದ ಅರಿವು ಮೂಡತೊಡಗಿದ್ದು, ಆರೋಗ್ಯಕರ ತಾಜಾ ಆಹಾರದ ಮಹತ್ವ ಜನರಿಗೆ ಗೊತ್ತಾಗುತ್ತಿದೆ. ಹೀಗಾಗಿ, ತಾಜಾ ಮತ್ತು ಆರೋಗ್ಯಕರ ಆಹಾರಕ್ಕೆ ಬೇಡಿಕೆ ಹೆಚ್ಚಿದ್ದು, ಇದೇ ವಲಯ ಮುಂದಿನ 10 ವರ್ಷಗಳಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ, ಐದು ಸಾವಿರ ಜನಸಂಖ್ಯೆ ಇರುವ ಸಣ್ಣ ಊರಲ್ಲೂ ಇದರಿಂದ ಮೂರ್ನಾಲ್ಕು ಜನ ಬದುಕಿನ ದಾರಿ ಕಂಡುಕೊಳ್ಳಬಹುದಾಗಿದೆ ಎಂದು ವಿವರಿಸುವ ಸೇಡಂ ಅವರು 2010ರಲ್ಲಿ ಕಲಬುರ್ಗಿಯಲ್ಲಿ ‘ಕಲಬುರ್ಗಿ ಕಂಪು’ ಶೀರ್ಷಿಕೆಯಡಿ ನಡೆದ ಭಾರತ ವಿಕಾಸ ಸಂಗಮದ ಮೂರನೇ ಸಮಾವೇಶದ ಬಳಿಕ ಈ ಎಂಟು ವರ್ಷಗಳಲ್ಲಿ ಅಗಾಧ ಬದಲಾವಣೆಯಾಗಿದೆ, ಜನರು ತಾವು ‘ಹಿಂದುಳಿದವರು’ ಎಂಬ ಹಣೆಪಟ್ಟಿಯಿಂದ ಹೊರಬಂದು, ಆತ್ಮವಿಶ್ವಾಸ ರೂಢಿಸಿಕೊಂಡಿದ್ದಾರೆ. ಕನೇರಿಯ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೊಲ್ಹಾಪುರ ಜಿಲ್ಲೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲೇ ದೇಸಿ ಗೋವುಗಳ ಸಂಖ್ಯೆ 1 ಲಕ್ಷದಷ್ಟು ಹೆಚ್ಚಿವೆ, ಕಲಬುರಗಿ ಜಿಲ್ಲೆಯಲ್ಲಿ ಈ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಶಿಕ್ಷಣ ರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿವೆ, ಸಕಾರಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರ ಶಕ್ತಿ ಹೆಚ್ಚಿದೆ ಎನ್ನುತ್ತಾರೆ.

‘ಭಾರತ ವಿಶಿಷ್ಟ ಭೌಗೋಳಿಕತೆಯುಳ್ಳ ಪ್ರದೇಶ. ಹಾಗಾಗಿ, ಇಲ್ಲಿ ಒಂದೇ ವಿಕಾಸಸೂತ್ರ ನಡೆಯುವುದಿಲ್ಲ. ನಮ್ಮ ದೇಶದಲ್ಲಿ 127 ಪರಿಸರ-ಕೃಷಿವಲಯಗಳಿವೆ. ಆಯಾ ವಲಯಗಳಿಗೆ ತಕ್ಕಂತೆ, ವಿಕಾಸಸೂತ್ರ ಅಗತ್ಯ. ನಾವು ಜಾಗತಿಕವಾಗಿ ಚಿಂತಿಸೋಣ, ಆದರೆ ಸ್ಥಳೀಯವಾಗಿ ಅನುಷ್ಠಾನಕ್ಕೆ ತರೋಣ (ಥಿಂಕ್ ಗ್ಲೋಬಲಿ ಆಕ್ಟ್ ಲೋಕಲಿ). ಆಯಾ ಹಳ್ಳಿ ಸ್ವಾವಲಂಬಿಯಾದರೆ ಸಮರ್ಥ ಭಾರತ ನಿರ್ಮಾಣ ಸಾಧ್ಯ. ಬರೀ ಭೌತಿಕ ಸಮೃದ್ಧಿಯಿಂದ ಪ್ರಯೋಜನವಿಲ್ಲ. ಸಂಸ್ಕೃತಿ ಕೀ ಥಾಲಿ ಮೇ ವಿಕಾಸ ಕೋ ಪರೋಸನಾ ಚಾಹಿಯೇ (ಸಂಸ್ಕೃತಿಯ ತಟ್ಟೆಯಲ್ಲಿ ವಿಕಾಸವನ್ನು ಬಡಿಸಬೇಕು). ಆಗ ಅದಕ್ಕೆ ಸಾರ್ಥಕತೆ’ ಎನ್ನುವ ಗೋವಿಂದಾಚಾರ್ಯರು ಈ ಎಲ್ಲ ಯಶಸ್ವಿ ಪ್ರಯೋಗಗಳನ್ನು ದೇಶದ ಮುಂದೆ ಇರಿಸಲು ಮೂರು ವರ್ಷಗಳಿಗೊಮ್ಮೆ ಭಾರತ ವಿಕಾಸ ಸಂಗಮದ ಬೃಹತ್ ಸಮಾವೇಶವನ್ನು ಭಾರತೀಯ ಸಂಸ್ಕೃತಿ ಉತ್ಸವದ ಹೆಸರಲ್ಲಿ ಆಯೋಜಿಸುತ್ತಿದ್ದಾರೆ.

ಈ ಬಾರಿಯ ಸಂಸ್ಕೃತಿ ಉತ್ಸವ ಇದೇ ಡಿಸೆಂಬರ್ 24ರಿಂದ 31ರವರೆಗೆ ಕರ್ನಾಟಕದ ಚೈತನ್ಯ ಭೂಮಿ, ದ್ರಾಕ್ಷಿ ಬೆಳೆಗೆ, ರೈತರ ಹೊಸ ಪ್ರಯೋಗಗಳಿಗೆ ಹೆಸರಾದ, ಅಧ್ಯಾತ್ಮ, ನೈತಿಕತೆಯ ಚಿಂತನೆಗಳಿಗೆ ಫಲ ನೀಡಿದ ವಿಜಯಪುರ ಜಿಲ್ಲೆಯಲ್ಲಿ ನಡೆಯಲಿದೆ. ಹೆಸರಲ್ಲೇ ವಿಜಯ ಇದೆ. ಹೃದಯದಲ್ಲೂ ವಿಜಯದ ಸಂಕಲ್ಪವಿದೆ! ಈ ಗುಮ್ಮಟಗಳ ಊರಿನಲ್ಲಿ ಶ್ವೇತವಸ್ತ್ರಧಾರಿ ಸಂತರೊಬ್ಬರು ಪ್ರವಚನಗಳ ಮೂಲಕ ಸಜ್ಜನ ಶಕ್ತಿಯನ್ನೇ ನಿರ್ವಿುಸುತ್ತಿದ್ದಾರೆ! ಸಾವಿರಾರು ಜನರಿಗೆ ಜೀವನದರ್ಶನ ಒದಗಿಸಿ ನಡೆದಾಡುವ ದೇವರೆನಿಸಿಕೊಂಡಿದ್ದಾರೆ. ‘ಪದ್ಮಶ್ರೀ’ಯಂಥ ಪ್ರತಿಷ್ಠಿತ ಪ್ರಶಸ್ತಿ ಅರಸಿ ಬಂದರೂ ‘ಅದೆಲ್ಲ ಒಲ್ಲೆ, ನನ್ನ ಕೆಲಸ ನಾನು ಮಾಡುತ್ತಿದ್ದೇನೆ’ ಎಂದು ಹೇಳಿ ಇವರು ಸೌಜನ್ಯದಿಂದಲೇ ಪ್ರಶಸ್ತಿಯನ್ನು ತಿರಸ್ಕರಿಸಿದರು. ಆದರೆ, ಸಾವಿರಾರು ಹೃದಯಗಳಲ್ಲಿ ಇವರ ಚಿಂತನೆಗಳು ಅಂತಃಕರಣದ ಲೋಕವನ್ನು ಪ್ರತಿಷ್ಠಾಪಿಸಿವೆ, ಸಾರ್ಥಕ ಬಾಳಿನ ದಾರಿಯನ್ನು ಅನಾವರಣಗೊಳಿಸಿವೆ. ಹೌದು, ದೇಶ-ವಿದೇಶದಲ್ಲೂ ಅಸಂಖ್ಯ ಅನುಯಾಯಿಗಳನ್ನು ಹೊಂದಿರುವ ಶ್ರೀಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅಷ್ಟೇಕೆ ಇಡೀ ದೇಶಕ್ಕೆ ಇದು ನಿಜವಿಕಾಸದ ದರ್ಶನ ಮಾಡಿಸಲಿದೆ. ಅಭಿವೃದ್ಧಿಯ ಸಾರ್ಥಕ ಹೊಳಹುಗಳ, ಸಮಾಜಕ್ಕೆ ಬಲ ತುಂಬುತ್ತಿರುವ ರಿಯಲ್ ಹೀರೋಗಳ ಸಮಾಗಮ ನಡೆಯಲಿದೆ. ವಿಜಯಪುರದ ಶ್ರೀಸಿದ್ಧೇಶ್ವರ ಸಂಸ್ಥೆ, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಾರಥ್ಯದಲ್ಲಿ ಒಂದು ವಾರದ ಭಾರತೀಯ ಸಂಸ್ಕೃತಿ ಉತ್ಸವ ವಿಜಯಪುರ ನಗರದ ಹೊರವಲಯದಲ್ಲಿರುವ ಕಗ್ಗೋಡಿನ ರಾಮನಗೌಡ ಪಾಟೀಲ್ (ಯತ್ನಾಳ) ಗೋರಕ್ಷಾ ಕೇಂದ್ರದ ಆವರಣದಲ್ಲಿ ನಡೆಯಲಿದ್ದು, ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ-ಬೇರೆ ಭಾಗಗಳಿಂದ 20 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಷ್ಟ್ರಪತಿ ರಾಮನಾಥ ಕೋವಿಂದ ಉತ್ಸವವನ್ನು ಉದ್ಘಾಟಿಸಲಿದ್ದರೆ, ಪ್ರಧಾನಿ ನರೇಂದ್ರ ಮೋದಿ ಸಮಾರೋಪಕ್ಕೆ ಆಗಮಿಸಲಿದ್ದಾರೆ. ಖ್ಯಾತ ಯೋಗಗುರು ಬಾಬಾ ರಾಮದೇವ್ ಮೂರು ದಿನ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಯೋಗ ಶಿಬಿರವನ್ನೂ ನಡೆಸಿಕೊಡಲಿದ್ದಾರೆ. ಸಂತ-ಮಹಂತರು, ಸೇವಾ ಕ್ಷೇತ್ರದ ದಿಗ್ಗಜರು ಮಾರ್ಗದರ್ಶನ ಮಾಡಲಿದ್ದಾರೆ. ಈ ಬಾರಿ ವಿಕಾಸದ ಪ್ರತಿಧ್ವನಿ ದೇಶಾದ್ಯಂತ ಅನುರಣಿಸಲಿದೆ. ಸಂಸ್ಕೃತಿ, ವಿಕಾಸದ ಮಹಾಕುಂಭಕ್ಕೆ ವಿಜಯಪುರ ಸಾಕ್ಷಿಯಾಗಲಿದೆ.

ಕನಸುಗಳೆಲ್ಲ ಸಾಕಾರಗೊಂಡ ಪರಿ ಹೀಗೆ ಅನಾವರಣಗೊಳ್ಳುತ್ತಿರುವಾಗ ಪ್ರೇರಣೆಯ ರೆಕ್ಕೆ ಕಟ್ಟಿಕೊಳ್ಳಲು ತಡವೇಕೆ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)