ನೊಂದ ಮನಸುಗಳಿಗೆ ಪ್ರೀತಿ ಉಣಿಸುವ ಸಾರ್ಥಕತೆ

ಷ್ಟೊಂದ್ ಜನ ಇಲ್ಲಿ ಯಾರು ನನ್ನೋರು? ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ? ಎಲ್ಲಿ ಎಲ್ಲಿ ಎಲ್ಲಿ ನಮ್ಮನೆ…?’-ಚಿನ್ನಾರಿಮುತ್ತ ನೆನಪಾದ್ನಲ್ಲವಾ? ಭೂಮಿಯನ್ನೇ ಹಾಸಿಗೆ, ಆಕಾಶವನ್ನೇ ಹೊದಿಕೆ ಮಾಡಿಕೊಂಡು ಕರುಣಾಜನಕ ಸ್ಥಿತಿಯಲ್ಲಿ ಬದುಕುತ್ತಿರುವ ಇಂಥ ಲಕ್ಷ-ಲಕ್ಷ ಚಿನ್ನಾರಿಗಳು ನಮ್ಮ ಸುತ್ತಮುತ್ತಲೇ ಇದ್ದಾರೆ. ‘ಇಲ್ಲಿ ಯಾರು ನನ್ನೋರು?’ ಎಂಬ ಅವರ ಪ್ರಶ್ನೆಗೆ, ‘ಎಲ್ಲಿ ನನ್ನ ಮನೆ’? ಎಂಬ ಹುಡುಕಾಟಕ್ಕೆ ಉತ್ತರವೇ ಇಲ್ಲ. ಏಕೆಂದರೆ, ಬಹುತೇಕರು ‘ನಾನು, ನನ್ನ ಕುಟುಂಬ’ ಎಂಬ ಸೀಮಿತ ಚೌಕಟ್ಟಿನಲ್ಲಿ ಬಂದಿಯಾಗಿದ್ದೇವೆ. ಜೀವನದ್ದು ವಿಚಿತ್ರ ಪಯಣ. ಅದು ಕಷ್ಟ ನೀಡಿದವರಿಗೆ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತದೆ, ಹೋರಾಡುವ ಶಕ್ತಿಯನ್ನೆಲ್ಲ ಕಸಿದುಕೊಂಡು ಬಿಡುತ್ತದೆ. ಇಂಥ ಸಂದರ್ಭದಲ್ಲಿ ಜೀವನಕ್ಕೆ ಭರವಸೆಯಾಗಿ ನಿಲ್ಲೋದು ಮಾನವೀಯತೆ ಮತ್ತು ಶುದ್ಧ ಪ್ರೀತಿ ಮಾತ್ರ! ಆದರೆ, ಈ ಮೌಲ್ಯಗಳನ್ನು ಹಂಚುವವರಾರು? ಈ ಪ್ರಶ್ನೆ ಗಹನವಾಗಿ ಕಾಡಿದ್ದೇ ತಡ ‘ನಾನು ಪ್ರಯತ್ನಿಸುತ್ತೇನೆ’ ಎಂದು ಸಂಕಲ್ಪಿಸಿದ ಓರ್ವ ವ್ಯಕ್ತಿ, ಇದಕ್ಕಾಗಿ ಸಂಸ್ಥೆಯನ್ನೂ ಸ್ಥಾಪಿಸಿ ನೂರಾರು ಜನರ ಬದುಕನ್ನು ಕಟ್ಟಿಕೊಟ್ಟಿದ್ದಾರೆ.

ಉಡುಪಿ ಚೈತನ್ಯದ ಭೂಮಿ. ಇಲ್ಲಿಂದ ಕೊಂಚ ದೂರದಲ್ಲಿರುವ ಪುಟ್ಟ ಹಳ್ಳಿ ಬೆಳ್ಮಣ್ (ಈ ಊರ್ದ ಪುದರ್ ಕೇಂದ್ ಇತ್ತೆನೆ ಕರಾವಳಿದಕ್ಲೆನ ಕಣ್, ಉಡಲ್ ಅರಳ್ದಿಪ್ಪು). ಇಲ್ಲಿನ ಹ್ಯೂಮ್ಯಾನಿಟಿ ಸಂಸ್ಥೆ ಮತ್ತು ಅದರ ಸ್ಥಾಪಕ ರೋಶನ್ ಬೆಳ್ಮಣ್ ನೊಂದ ಮನಸ್ಸುಗಳಿಗೆ ಪ್ರೀತಿ ಉಣಿಸೋದನ್ನು, ಜಾತಿ, ಮತ, ಧರ್ಮ, ಭಾಷೆ, ಪ್ರಾಂತ್ಯಗಳ ಗಡಿಮೀರಿ ಮಾನವೀಯತೆ ಗೆಲ್ಲಿಸುವುದನ್ನು, ಕಡುಕಷ್ಟದಲ್ಲಿದ್ದವರಿಗೆ ಆಸರೆಯಾಗುವುದನ್ನು ಎಷ್ಟು ಚೆಂದ ಮತ್ತು ಅದ್ಭುತವಾಗಿ ಮಾಡಿ ತೋರಿಸಿದ್ದಾರೆ ಎಂದರೆ ದೂರದ ಕುವೈತ್, ಕತಾರ್​ನ ಜನ ಕೂಡ ಈ ಸೇವಾಯಜ್ಞಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಇದರ ಆರಂಭ ಮತ್ತು ಬೆಳೆದು ಬಂದ ದಾರಿ ರೋಚಕ, ಪ್ರೇರಣಾದಾಯಕ. ರೋಶನ್ ಮೂಲತಃ ಸಂಗೀತಗಾರರು, ಕಾರ್ಯಕ್ರಮ ನಿರೂಪಕರು. ಸಖತ್ತಾಗಿ ಗಿಟಾರ್ ನುಡಿಸ್ತಾರೆ, ಡ್ರಮ್ ಬಾರಿಸ್ತಾರೆ, ಮಧುರವಾಗಿ ಹಾಡ್ತಾರೆ, ಅರಳು ಹುರಿದಂತೆ ಮಾತಾಡಿ ಲವಲವಿಕೆ ಹರಡುತ್ತಾರೆ. ಕೊಂಕಣಿಯಲ್ಲಿ ಎರಡು ಮ್ಯೂಸಿಕ್ ಅಲ್ಬಂಗಳನ್ನು ನಿರ್ವಿುಸಿದ್ದು, ಒಂದರಲ್ಲಿ ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಸಮಾಜದಲ್ಲಿ ನೊಂದವರಿಗಾಗಿ, ಅಸಹಾಯಕರಿಗಾಗಿ ಏನಾದರೂ ಮಾಡಬೇಕು ಎಂಬ ತುಡಿತ ಹೊಂದಿದ್ದ ರೋಶನ್ ಅನಾಥಾಶ್ರಮಗಳಿಗೆ ತೆರಳಿ ಹಾಡು ಹಾಡಿ ಮಕ್ಕಳಿಗೆ ಗಿಫ್ಟ್ ನೀಡಿ, ಸಂಸ್ಥೆಗೆ ಒಂದಿಷ್ಟು ನೆರವು ನೀಡಿ ಖುಷಿ ಹಂಚೋರು. ಇನ್ನಷ್ಟು ಮಾಡಬೇಕು ಎಂಬ ತುಡಿತ ಹೆಚ್ಚಾದಾಗ ಪ್ರತೀ ತಿಂಗಳು ತಮ್ಮ ಆದಾಯದ ಶೇ.10ರಷ್ಟನ್ನು ಸಮಾಜಕ್ಕೆ ನೀಡಲು ಆರಂಭಿಸಿದರು. ಆದರೆ, ಬಡ ಕುಟುಂಬಗಳ ದಯನೀಯ ಸ್ಥಿತಿ, ಅವರು ಪಡಿಪಾಟಲು ಕಂಡಾಗ ಇವರ ಕರುಳು ಚುರ್ರೆನ್ನುತ್ತಿತ್ತು. ಕೆಲ ವರ್ಷಗಳ ಹಿಂದೆ 50 ತೀರಾ ಬಡ ಕುಟುಂಬಗಳನ್ನು ಗುರುತಿಸಿ, ಜೀವನಾವಶ್ಯಕ ವಸ್ತುಗಳ ಖರೀದಿಗೆ ತಲಾ 2 ಸಾವಿರದಂತೆ ಒಟ್ಟು 1 ಲಕ್ಷ ರೂ.ಗಳ ನೆರವು ನೀಡಿದರು. ಈ ಯೋಜನೆಗೆ ಇತರರ ಬೆಂಬಲವೂ ಭರ್​ಪೂರ್ ಆಗಿ ಹರಿದುಬಂದ ಪರಿಣಾಮ, 4 ಲಕ್ಷ ಒಟ್ಟಾಗಿ 150 ಕುಟುಂಬಗಳಿಗೆ 2 ಸಾವಿರ ರೂ.ಗಳ ಕೂಪನ್ ನೀಡಿ, ಉಡುಪಿಯ ಮಳಿಗೆಯೊಂದರಲ್ಲಿ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡಲಾಯ್ತು. ಉಳಿದ ಹಣವನ್ನು ಅನಾಥಾಶ್ರಮ, ಇತರೆ ಸಮಾಜಸೇವಾ ಸಂಸ್ಥೆಗಳಿಗೆ ನೀಡಲಾಯಿತು. ಆಗ, ಸಮುದಾಯದ ಶಕ್ತಿ ಮತ್ತು ಸ್ಪಂದನಶೀಲ ಮನಸ್ಸುಗಳ ಅಂತಃಕರಣದ ಶಕ್ತಿ ರೋಶನ್ ಅವರಿಗೆ ಮನದಟ್ಟಾಯಿತು.

ರೋಶನ್​ಗೆ ಸ್ನೇಹಿತರ, ಅಭಿಮಾನಿಗಳ ದೊಡ್ಡವಲಯವೇ ಉಂಟು. ಈ ಸಂಪರ್ಕವನ್ನು ಸಾಮಾಜಿಕ ಕಾರ್ಯಗಳಿಗಾಗಿ ವಿನಿಯೋಗಿಸಬೇಕು ಎಂದು ನಿಶ್ಚಯಿಸಿದರು. ಸಮಾಜದ ಅಸಹಾಯಕರು ಮತ್ತು ದಾನಿಗಳ ನಡುವೆ ಸಮರ್ಥ ಸೇತುವೆಯಾಗಿ ಕೆಲಸ ಮಾಡಲು 2017ರ ಮೇನಲ್ಲಿ ‘ಹ್ಯೂಮ್ಯಾನಿಟಿ’ ಟ್ರಸ್ಟ್​ನ್ನು ಗೆಳೆಯ ಮಾರ್ವಿನ್ ಜತೆ ಸೇರಿ ಬೆಳ್ಮಣ್​ದಲ್ಲೇ ಸ್ಥಾಪಿಸಿದರು. ತೀರಾ ಕಷ್ಟದಲ್ಲಿರುವವರ ಸ್ಥಿತಿ ಪರಾಮಶಿಸಿ, ದಾಖಲೆಗಳನ್ನೆಲ್ಲ ಸಂಗ್ರಹಿಸಿ ಆ ಬಗ್ಗೆ ವಿಡಿಯೋ ಮಾಡಿ ಪ್ರಸಾರ ಮಾಡೋದು, ಬಂದ ನೆರವನ್ನು ಸಂಬಂಧಪಟ್ಟ ಕುಟುಂಬಕ್ಕೆ ತಲುಪಿಸುವುದು. ಹೀಗೆ ಆರಂಭವಾದ ‘ಹ್ಯೂಮ್ಯಾನಿಟಿ’ ಬರೀ ಒಂದೂವರೆ ವರ್ಷಗಳಲ್ಲಿ 205 ಯೋಜನೆಗಳನ್ನು ಪೂರ್ಣಗೊಳಿಸಿ ಒಂದೂವರೆ ಕೋಟಿ ರೂಪಾಯಿಗಳ ನೆರವು ನೀಡಿದೆ. ಈ ಮೂಲಕ ಕ್ರೌಡ್ ಫಂಡಿಂಗ್​ನ ವಿಶಿಷ್ಟ ಶಕ್ತಿಯನ್ನು ಪರಿಚಯಿಸಿದೆ. ಅಲ್ಲದೆ, ದಾನಿಗಳು ನೇರವಾಗಿ ಸಂತ್ರಸ್ತರನ್ನು ಭೇಟಿಯಾಗಿ ನೀಡಿರುವ ದಾನದ ಮೊತ್ತ 1 ಕೋಟಿಯ ಗಡಿ ದಾಟಿದೆ.

ರೋಶನ್ ಅವರ ಕಳಕಳಿ, ಸ್ಪಂದನಶೀಲತೆ ಮತ್ತು ಸತತ ಪ್ರಯತ್ನಗಳ ಪರಿಣಾಮ ಈಗ ದಾನಿಗಳ ದೊಡ್ಡ ಸಮೂಹವೇ ಏರ್ಪಟ್ಟಿದ್ದು, ಪ್ರತಿನಿತ್ಯ ಒಬ್ಬರಿಗಾದರೂ ನೆರವು ನೀಡಿ, ಹೊಸ ಬದುಕು ಕಟ್ಟುವ ಕೆಲಸವಾಗುತ್ತಿದೆ. ಬರೀ ಬಡ ಕುಟುಂಬಗಳಿಗೆ ಮಾತ್ರವಲ್ಲ, ಅನಾಥಾಶ್ರಮ, ಎಚ್​ಐವಿ ಪೀಡಿತ ಮಕ್ಕಳ ಸಂಸ್ಥೆ, ಸರ್ಕಾರಿ ಶಾಲೆ, ಸಾಮಾಜಿಕ ಸಂಸ್ಥೆಗಳಿಗೆ ಇವರು ನೆರವಾಗಿದ್ದಾರೆ. ಕಾರ್ಯವ್ಯಾಪ್ತಿ ಬೆಳೆದಿರುವ ಪರಿಣಾಮ, ‘ಹ್ಯೂಮ್ಯಾನಿಟಿ’ಗಾಗಿಯೇ ಪೂರ್ಣ ಸಮಯ ಕೊಡುವ ದಿಟ್ಟ ನಿರ್ಧಾರವನ್ನು ರೋಶನ್ ತೆಗೆದುಕೊಂಡಿದ್ದು, ಬೆಳ್ಮಣ್​ದಲ್ಲಿ ಕಚೇರಿ ಆರಂಭಿಸಿದ್ದಾರೆ. ಜನರ ಹಣ ಯಾವುದ್ಯಾವುದೋ ಕಾರಣಕ್ಕೆ ದುಂದುವೆಚ್ಚವಾಗುವ ಬದಲು ಹೀಗೆ ಸಮಾಜ ಕಟ್ಟುವ ಕೆಲಸದಲ್ಲಿ ವಿನಿಯೋಗವಾಗಬೇಕು ಎನ್ನುವ ರೋಶನ್-‘ಕೊಡುವ ಮನಸ್ಸುಗಳಿವೆ. ಆದರೆ, ಎಲ್ಲಿ, ಹೇಗೆ, ಯಾರಿಗೆ ಕೊಡಬಹುದು ಎಂಬ ಗೊಂದಲಗಳಿವೆ. ಹ್ಯೂಮ್ಯಾನಿಟಿ ಅದಕ್ಕೆಲ್ಲ ಈಗ ಉತ್ತರವಾಗಿ ನಿಂತಿದೆ. ಸಂಸ್ಥೆಗೆ ಬಂದ ಒಂದೊಂದು ರೂಪಾಯಿಯ ಲೆಕ್ಕವನ್ನೂ ನಾವು ಬಹಿರಂಗವಾಗಿಯೇ ನೀಡುತ್ತೇವೆ’ ಎನ್ನುತ್ತಾರೆ.

ಭದ್ರಾವತಿಯ ಶಾಹೀನ್ ಜಾನ್​ಗೆ ಮೂವರು ಮಕ್ಕಳು. ಈ ಪೈಕಿ ಇಬ್ಬರು ಬುದ್ಧಿಮಾಂದ್ಯರಾದರೆ, ಓರ್ವ ಅಂಗವಿಕಲ. ರಿಕ್ಷಾ ನಡೆಸಿ ಕುಟುಂಬಕ್ಕೆ ಆಧಾರವಾಗಿದ್ದ ಪತಿ ಸೈಫುಲ್ಲ ಮೂರುವರ್ಷದ ಹಿಂದೆ ನಿಧನ ಹೊಂದಿದರು. ಮನೆ ನಡೆಸುವ, ಮಕ್ಕಳ ಚಿಕಿತ್ಸೆ ವೆಚ್ಚ ಭರಿಸುವ ಶಕ್ತಿ ಶಾಹೀನ್​ಗೆ ಇಲ್ಲ. ದುಡಿಯಲು ಹೋಗಬೇಕೆಂದರೆ ಬುದ್ಧಿಮಾಂದ್ಯ ಮಕ್ಕಳನ್ನು ಬಿಟ್ಟುಹೋಗುವ ಹಾಗಿಲ್ಲ. ಈ ಕರುಣಾಜನಕ ಸ್ಥಿತಿಯನ್ನು ಮನಗಂಡ ಈ ಸಂಸ್ಥೆ ಪ್ರತಿ ತಿಂಗಳು 9 ಸಾವಿರ ರೂ.ಗಳನ್ನು ಶಾಹೀನ್ ಖಾತೆಗೆ ವರ್ಗಾಯಿಸುತ್ತಿದೆ. ಉಡುಪಿಯ ಅವಿನಾಶ್ ಕಾಮತ್ ಮತ್ತವರ ಗೆಳೆಯರು ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ಸರೋಜಾ ಕುಲಾಲ್ ಕುಟುಂಬಕ್ಕೆ ಬಚ್ಚಲುಮನೆ ನಿರ್ವಿುಸಲು 50 ಸಾವಿರ ರೂ. ಸಂಗ್ರಹಿಸಿದರು. ಇನ್ನುಳಿದ 25 ಸಾವಿರ ರೂ.ಗಳ ನೆರವನ್ನು ‘ಹ್ಯೂಮ್ಯಾನಿಟಿ’ ನೀಡಿತು. ಕಾಯಿಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತುಳು ರಂಗಭೂಮಿ ಕಲಾವಿದ ಅಭಿಷೇಕ್ ಧರ್ಮಪಾಲ್ ಶೆಟ್ಟಿಗೆ 50 ಸಾವಿರ ರೂ. ನೆರವು ನೀಡಲಾಗಿದೆ. ಮನೆಯಲ್ಲಿ ವಿದ್ಯುತ್ ಇಲ್ಲದೆ ಚಿಮಣಿ ಬೆಳಕಿನಲ್ಲಿ ಓದಿ ಬಿ.ಕಾಂ.ನಲ್ಲಿ ಶೇ.97 ಅಂಕ ಪಡೆದ ಕಾರ್ಕಳ ತಾಲೂಕಿನ ಅಕ್ಷತಾ ಹೆಗಡೆ ಮನೆಗೆ ಸೋಲಾರ್ ವಿದ್ಯುತ್ ಉಪಕರಣ ಕೊಡಿಸಿ, 50 ಸಾವಿರ ಮೌಲ್ಯದ ಜೀವನಾವಶ್ಯಕ ಸಾಮಗ್ರಿಗಳನ್ನು ಒದಗಿಸಲಾಗಿದೆ.

ಬೆಂಗಳೂರಿನ ಭಾಗ್ಯಲಕ್ಷ್ಮಿ ಮತ್ತು ಜಯಸಿಂಗ್ ರಾಜಾ ಇಬ್ಬರೂ ಪೋಲಿಯೋ ಪೀಡಿತರು. ಗಾಯದ ಮೇಲೆ ಬರೆ ಎಳೆಯುವಂತೆ ಭಾಗ್ಯಲಕ್ಷ್ಮಿ ಎರಡು ತಿಂಗಳ ಗರ್ಭಿಣಿ ಆಗಿದ್ದಾಗ ರಸ್ತೆ ಅಪಘಾತಕ್ಕೆ ತುತ್ತಾದ ಜಯಸಿಂಗ್ ನಡೆದಾಡಲು ಅಸಮರ್ಥರಾಗಿದ್ದಾರೆ. ಅವಳಿ ಮಕ್ಕಳನ್ನು ಶಾಲೆಗೆ ಸೇರಿಸುವ ಜವಾಬ್ದಾರಿ ಬೇರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಇದನ್ನೆಲ್ಲ ಕಂಡು 1 ಲಕ್ಷ ರೂ.ಗಳ ನೆರವು ನೀಡಿರುವ ರೋಶನ್ ಮಕ್ಕಳಿಗೆ ಶಾಲೆಗೆ ಪ್ರವೇಶ ಕೊಡಿಸಿದ್ದಾರೆ. ಒಂದು ವರ್ಷದ ಅವಧಿಗಾಗಿ ಪ್ರತಿ ತಿಂಗಳು 5 ಸಾವಿರ ರೂ.ಗಳ ನೆರವನ್ನು ಈ ಕುಟುಂಬಕ್ಕೆ ನೀಡುತ್ತಿದ್ದಾರೆ. ಬುದ್ಧಿಮಾಂದ್ಯ ಮಗನ ಜತೆಗೆ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದ್ದ ಸಣ್ಣ ಮನೆಯಲ್ಲಿ ವಾಸವಾಗಿದ್ದವರು ಕಾರ್ಕಳ ತಾಲೂಕಿನ ವೃದ್ಧೆ ಇಂದಿರಾ ಶೆಟ್ಟಿ. ಇವರ ಮನೆಯನ್ನು ರಿಪೇರಿ ಮಾಡಿ, ನೀರು, ವಿದ್ಯುತ್ತಿನ ಸಂಪರ್ಕ ಕೊಡಿಸಿದ್ದಲ್ಲದೆ ಆಗಾಗ ಇವರ ಮನೆಗೆ ಹೋಗಿ ಕುಶಲೋಪರಿ ವಿಚಾರಿಸುತ್ತಾರೆ. ಒಂದೇ ವರ್ಷದಲ್ಲಿ 5 ಲಕ್ಷ ರೂ.ಗಳ ವಿದ್ಯಾರ್ಥಿವೇತನ ನೀಡಲಾಗಿದೆ. ಹೀಗೆ, 205 ಘಟನೆಗಳು ಕೂಡ ಮಾನವೀಯತೆ ಎಂಬ ಪಾಠಶಾಲೆಯ ಪ್ರೇರಣಾದಾಯಕ ಸಂಗತಿಗಳು. ದುಃಖಿತರ ಕಣ್ಣೀರು ಒರೆಸುವುದೇ ನಿಜವಾದ ಸೇವೆ ಎಂಬುದನ್ನು ತೋರಿಸಿಕೊಟ್ಟ ಈ ಸಂಸ್ಥೆ ಮತ್ತು ರೋಶನ್​ರನ್ನು ಕುವೈತ್, ಕತಾರ್​ನ ಕನ್ನಡ ಸಂಘಗಳು ಸನ್ಮಾನಿಸಿ, ಗೌರವಿಸಿವೆ. ಅದಕ್ಕಿಂತಲೂ ಮಿಗಿಲಾಗಿ, ಸಾವಿರಾರು ಜನರ ಆಶೀರ್ವಾದ, ಹಾರೈಕೆ ಅವರ ಜತೆಗಿದೆ. ‘ಜಾತಿ, ಧರ್ಮ, ಭಾಷೆ, ಗ್ರಾಮ, ಪಟ್ಟಣ ನಮ್ಮನ್ನು ವಿಭಜಿಸಿದರೂ ಒಂದು ಮಾಡುವ ಶಕ್ತಿ ಮಾನವೀಯತೆಗೆ ಇದೆ. ದೇವರು ಮಾನವೀಯತೆಗೆ ಮಾತ್ರ ಒಲಿಯುತ್ತಾನೆಯೇ ಹೊರತು ಬೇರಾವ ನಾಟಕಗಳಿಗೂ ಅಲ್ಲ. ಏಕೆಂದರೆ, ದೇವರು ನಮ್ಮ ಹಾಗೆ ಸ್ವಾರ್ಥಿ ಅಲ್ಲ ಸ್ವಾಮಿ’ ಎಂದು ಹೇಳುವ ರೋಶನ್ (94482-41111) ಜನರ ಹೃದಯದಲ್ಲಿನ ಕತ್ತಲೆಯನ್ನು, ಸ್ವಾರ್ಥದ ಕಸವನ್ನು ತೆಗೆಯುತ್ತ ನಿಜಾರ್ಥದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ಇವರ ಕಾರ್ಯಗಳಿಂದ ಪ್ರೇರಣೆಗೊಂಡು ಪ್ರತಿ ತಿಂಗಳು ನಿಗದಿತ ನೆರವು ನೀಡುವ ದಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಸಮಷ್ಟಿಯಲ್ಲಿ ಒಳ್ಳೆಯತನಕ್ಕೆ ಕೊರತೆಯಿಲ್ಲ, ನೇತ್ಯಾತ್ಮಕ ಸಂಗತಿಗಳಲ್ಲಿ ಹುದುಗಿ ಹೋಗಿರುವ ಅದನ್ನು ಎತ್ತಿ ತೋರಿಸಬೇಕಿದೆ ಅಷ್ಟೇ. ‘ದೇವರನ್ನು ಎಲ್ಲಿ ಹುಡುಕುತ್ತೀರಿ? ಈ ಎಲ್ಲ ಬಡವರು, ದುಃಖಿತರು, ದುರ್ಬಲರು ದೇವರಲ್ಲವೇ? ಇವರದ್ದೇ ಪೂಜೆ ಮಾಡಿ’ ಎಂದು ಹೇಳಿದ್ದ ಸ್ವಾಮಿ ವಿವೇಕಾನಂದರ ಸಂದೇಶ, ಕನಸು ಇಲ್ಲಿ ಸಾಕಾರಗೊಳ್ಳುತ್ತಿದೆ. ಇಂಥ ಚಿಂತನೆ ಮತ್ತು ಅದನ್ನು ಸಾಕಾರಗೊಳಿಸಿದ ರೋಶನ್ ನಿಜಾರ್ಥದಲ್ಲಿ ನಮ್ಮ ನಡುವಿನ ಹೀರೋ. ಅಲ್ಲವೇ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)