ದೇಹ ಊನವಾದರೂ ಊರಿಗೇ ಜೀವ ತುಂಬಿದರು!

ಜೀವನ ಇವರ ಜತೆ ಕ್ರೂರವಾಗಿ ನಡೆದುಕೊಂಡಿತು. ‘ನಮ್ಮವರು’ ಎಂಬ ಸಂಬಂಧಿಗಳು ಅದಕ್ಕಿಂತ ಕ್ರೂರವಾಗಿ ನಡೆದುಕೊಂಡರು. ಜೇಬಿನಲ್ಲಿ ನಯಾಪೈಸೆ ಇಲ್ಲದೆ, ಬದುಕಿನಲ್ಲಿ ಕನಸುಗಳು ಇಲ್ಲದೆ ಎಲ್ಲವೂ ಶೂನ್ಯವಾದಾಗ ಆಶ್ರಯವಾಗಿದ್ದು ಒಂದು ಮುರುಕುಕೋಣೆ! ಅಲ್ಲಿ ಆರಂಭವಾದ ಜ್ಞಾನಯಜ್ಞ ಸಾವಿರಾರು ಮಕ್ಕಳ ಭವಿಷ್ಯ ಬರೆದಿದೆ, ಆ ಹಳ್ಳಿಯ ಭಾಗ್ಯೋದಯವಾಗಿದೆ. ಈ ಎಲ್ಲ ಬದಲಾವಣೆಗೆ ಹರಿಕಾರನಾದ ವ್ಯಕ್ತಿ ಗಾಲಿಕುರ್ಚಿಯಲ್ಲೇ ಕುಳಿತು ಮಕ್ಕಳ ಕನಸುಗಳನ್ನು ಅರಳಿಸುತ್ತಿದ್ದಾರೆ; ಆ ಮಕ್ಕಳ ನಗುವಿನಲ್ಲಿ ತಮ್ಮ ನೋವು ಮರೆತಿದ್ದಾರೆ. ನೋವೇ ತುಂಬಿದ ತಮ್ಮ ಬದುಕನ್ನು ಬದಲಿಸಿಕೊಂಡು ಸಾವಿರಾರು ಜನರ ಜೀವನದಲ್ಲಿ ಸಂತಸ ಅರಳುವಂತೆ ಮಾಡಿದ್ದಾರೆ.

ಹೆಸರು ಗೋಪಾಲ್ ಖಂಡೇಲ್​ವಾಲ್. 12ನೇ ತರಗತಿಯನ್ನು ಉನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿದ ಗೋಪಾಲ್ ವೈದ್ಯನಾಗುವ ಕನಸು ಇರಿಸಿಕೊಂಡಿದ್ದರು. ಎಂಬಿಬಿಎಸ್ ಪ್ರವೇಶಕ್ಕಾಗಿ ಉತ್ತರ ಪ್ರದೇಶ ಸರ್ಕಾರ ನಡೆಸುವ ಸಿಪಿಎಂಟಿಯನ್ನು ಪಾಸು ಮಾಡಿದರು. ನಾಲ್ಕು ಜನ ಮಿತ್ರರೊಂದಿಗೆ ಆಗ್ರಾದ ಎಸ್​ಎನ್ ವೈದ್ಯಕೀಯ ಕಾಲೇಜಿನಲ್ಲಿ ಕೌನ್ಸೆಲಿಂಗ್ ಮುಗಿಸಿಕೊಂಡು ಮೆಡಿಕಲ್ ಸೀಟು ಸಿಕ್ಕ ಖುಷಿಯಲ್ಲಿ ಆಗ್ರಾದಿಂದ ಬನಾರಸ್​ಗೆ ವಾಪಸಾಗುತ್ತಿದ್ದರು( 1996ರ ನವೆಂಬರ್ 19). ಭಾವಿವೈದ್ಯರು ಮುಂದಿನ ದಿನಗಳ ಬಗ್ಗೆ ಕನಸು ಕಟ್ಟಿಕೊಳ್ಳುತ್ತ, ಭವಿಷ್ಯಕ್ಕೆ ಬಣ್ಣ ತುಂಬುತ್ತಿದ್ದರು. ವಿಧಿ ಇವರ ಖುಷಿ ಕಂಡು ಕರುಬಿತು. ಈ ಹುಡುಗರು ಪ್ರಯಾಣಿಸುತ್ತಿದ್ದ ಕಾರು ಲಖನೌ ಹೊರವಲಯದಲ್ಲಿ ಭೀಕರ ಅಪಘಾತಕ್ಕೆ ತುತ್ತಾಯಿತು. ಉಳಿದ ನಾಲ್ವರು ಮಿತ್ರರಿಗೆ ಸಣ್ಣಪುಟ್ಟ ಗಾಯಗಳಾದವು (ಪ್ರಸಕ್ತ ಅವರೆಲ್ಲರೂ ವೈದ್ಯವೃತ್ತಿಯಲ್ಲಿದ್ದಾರೆ). ಗೋಪಾಲ್​ಗೆ

ಗಂಭೀರ ಪೆಟ್ಟಾಗಿ, ಸೊಂಟದ ಕೆಳಗಿನ ದೇಹಭಾಗ ಪಾರ್ಶ್ವವಾಯುವಿಗೆ ತುತ್ತಾಯಿತು, ಎರಡೂ ಕಾಲುಗಳು ನಿಸ್ತೇಜವಾಗಿ ನಡೆದಾಡಲು ಸಾಧ್ಯವಿಲ್ಲದಂತಾಯಿತು.

ಸೊಂಟ ಪೂರ್ತಿ ಶಕ್ತಿ ಕಳೆದುಕೊಂಡಿದ್ದರಿಂದ ಮಲಗಿಕೊಂಡೇ ಇರಬೇಕಾಯಿತು. ಪರಿಣಾಮ, ಮುಂದಿನ ಶಿಕ್ಷಣದ ಆಸೆಯೂ ಕರಗಿಹೋಯಿತು. ಬನಾರಸ್​ನ ಶ್ರೀರಾಮ ಲಕ್ಷ್ಮೀನಾರಾಯಣ ಮಾರವಾಡಿ ಹಿಂದೂ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಕಾಲ ಇದ್ದು, ಚಿಕಿತ್ಸೆ ಪಡೆದುಕೊಂಡರೂ ಹೇಳಿಕೊಳ್ಳುವಂಥ ಪ್ರಯೋಜನ ಆಗಲಿಲ್ಲ. ‘ಮುಂಚಿನಂತೆ ನಡೆದಾಡುವಂತೆ ಮಾಡಲು ಸಾಧ್ಯವಿಲ್ಲ’ ಎಂದು ವೈದ್ಯರು ಕೈಚೆಲ್ಲಿದರು. ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಹೋಗುವುದು ಎಲ್ಲಿಗೆ ಎಂಬ ದೊಡ್ಡ ಪ್ರಶ್ನೆ ಉದ್ಭವವಾಯಿತು. ಕಾರಣ, ಬಾಲ್ಯದಲ್ಲೇ ಗೋಪಾಲ್ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡವರು. ಒಬ್ಬ ಸಹೋದರನಿದ್ದ. ಆದರೆ, ಗೋಪಾಲರ ಅನಾರೋಗ್ಯ, ಶೇಕಡ 90ರಷ್ಟು ಅಂಗವೈಕಲ್ಯ ಕಂಡು ದೂರವಾಗಿಬಿಟ್ಟ. ರಾಜಸ್ಥಾನದ ಪಿಲಾನಿ ಗ್ರಾಮದಲ್ಲಿ ಅಪ್ಪ ಕಟ್ಟಿದ್ದ ಸಣ್ಣ ಮನೆ, ಒಂಚೂರು ಜಮೀನಿತ್ತು. ಗೋಪಾಲ್ ಪಾಲಕರ ಸಾವಿನ ಬಳಿಕ ಆ ಆಸ್ತಿಯನ್ನೂ ಸಂಬಂಧಿಕರೇ ಹೊಡೆದುಕೊಂಡರು. ‘ನನ್ನ ಸ್ಥಿತಿ ಹೀಗಾಗಿದೆ. ನನ್ನ ಪಿತ್ರಾರ್ಜಿತ ಆಸ್ತಿ ಬಿಟ್ಟು ಕೊಡಿ’ ಎಂದು ಗೋಗರೆದರೂ ಸಂಬಂಧಿಕರ ಹೃದಯ ಕರಗಲಿಲ್ಲ. ಇವರ ಕುಟುಂಬದ ಎರಡು ತಲೆಮಾರು ಬಿರ್ಲಾ ಗ್ರೂಪ್​ನಲ್ಲಿ ಕೆಲಸ ಮಾಡಿತ್ತು. ಹತ್ತಿರದ ಸಂಬಂಧಿಕರು ಸ್ಥಿತಿವಂತರಾಗಿದ್ದರು. ಆದರೂ, ಗೋಪಾಲ್ ಸ್ಥಿತಿ ನೋಡಿ ಎಲ್ಲಿ ಜೀವನಪೂರ್ತಿ ತಾವೇ ನೋಡಿಕೊಳ್ಳಬೇಕಾಗುತ್ತದೋ ಎಂದು ಯೋಚಿಸಿ ಸಂಬಂಧವೇ ಇಲ್ಲದಂತೆ ದೂರ ಸರಿದುಬಿಟ್ಟರು. ಎರಡು ವರ್ಷಗಳ ಆಸ್ಪತ್ರೆ ವಾಸ, ಅಲ್ಲಿಂದ ಹೊರಬಂದ ಬಳಿಕ ಕರುಳು ಹಿಡುವಂಥ ನೋವು ಗೋಪಾಲ್​ಗೆ ಜೀವನದ ದಾರುಣ ಪಾಠಗಳನ್ನು ಕಲಿಸಿದವು.

ಹೀಗೆ ಆಶ್ರಯದ ಹುಡುಕಾಟದಲ್ಲಿರುವಾಗಲೇ ಅದೊಂದು ದಿನ ಮಿತ್ರ ಡಾ.ಅಮಿತ್ ದತ್ತಾ ಇವರ ಭೇಟಿಗೆ ಬಂದರು. ‘ಮಿರ್ಜಾಪುರ ಜಿಲ್ಲೆಯ(ಉತ್ತರ ಪ್ರದೇಶ) ಪತ್ತಿ ಕಾ ಪುರಾ ನನ್ನ ಸ್ವಗ್ರಾಮ. ಅಲ್ಲಿ ಸ್ವಲ್ಪ ಜಮೀನಿದೆ. ಅಲ್ಲೇ ಬಂದು ಇದ್ಬಿಡು’ ಎಂದು ಹೇಳಿ ತಮ್ಮೊಂದಿಗೆ ಕರೆದೊಯ್ದರು. ಟಿನ್ ಶೆಡ್​ನ ಸಣ್ಣ ಕೋಣೆ. ಮುಂದುಗಡೆ ಸಗಣಿಯಿಂದ ಸಾರಿಸಿದ ಅಂಗಳ. 22 ವರ್ಷಗಳ ಹಿಂದೆ ಈ ಕೋಣೆಯೇ ಆಶ್ರಯವಾಯಿತು. ಎದ್ದು ಓಡಾಡಲು ಶಕ್ತಿ ಇಲ್ಲ, ಹೊತ್ತು ಹೋಗಲು ರಚನಾತ್ಮಕವಾಗಿ ಏನಾದರೂ ಮಾಡಬೇಕು ಅಂದುಕೊಂಡು ಊರಿನ ಸಾಮಾಜಿಕ ವಾತಾವರಣವನ್ನು ಅವಲೋಕಿಸಿದರು. ಪರಿಸ್ಥಿತಿ ವಿಷಮವಾಗಿತ್ತು. ಜಾತಿ-ಜಾತಿ ನಡುವೆ ಜಗಳಗಳು, ವೈಷಮ್ಯಗಳು. ಮಕ್ಕಳನ್ನು ಅವರ ಹೆಸರಿನಿಂದ ಕರೆಯದೇ ಜಾತಿಸೂಚಕ ಪದಗಳಿಂದಲೇ ಕರೆಯುತ್ತಿದ್ದರು. ಜತೆಗೆ ಕಿತ್ತುತಿನ್ನುತ್ತಿದ್ದ ಬಡತನ. ಓದುವ ಆಸೆ ಇದ್ದರೂ, ಆರ್ಥಿಕ ಶಕ್ತಿ ಇಲ್ಲದ ಕಾರಣ ಮಕ್ಕಳು ಕುರಿ, ಎಮ್ಮೆ ಮೇಯಿಸಿಕೊಂಡು ಇದ್ದರು. ಈ ಮಕ್ಕಳಿಗೆ ಅಕ್ಷರಜ್ಞಾನ ನೀಡಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ನಿರ್ಧರಿಸಿದ ಗೋಪಾಲ್ ಕೋಣೆ ಎದುರಿನ ಅಂಗಳದಲ್ಲೇ ಪಾಠ ಮಾಡಲು ಶುರುಮಾಡಿದರು. ಮೊದಲ ವಿದ್ಯಾರ್ಥಿನಿ ಜ್ಯೋತಿ ಸಿಂಹ. ಅವಳು ಶಿಕ್ಷಣ ಪಡೆದು, ಮದುವೆ ಆಗಿ, ಪ್ರಸಕ್ತ ಜ್ಯೋತಿಯ ಇಬ್ಬರು ಮಕ್ಕಳು ಗೋಪಾಲ್ ಬಳಿ ಅಕ್ಷರ ಕಲಿಯಲು ಬರುತ್ತಿದ್ದಾರೆ. ಅಂದರೆ, ಕಾಲಚಕ್ರ ಒಂದು ಸುತ್ತು ಹಾಕಿದೆ. ಆದರೆ, ಕಳೆದ 22 ವರ್ಷಗಳಲ್ಲಿ ಗೋಪಾಲರ ಉತ್ಸಾಹ ಒಂಚೂರೂ ಕುಂದಿಲ್ಲ.

ನೂರಾರು ಮಕ್ಕಳಿಗೆ ಪಾಠ ಮಾಡುತ್ತ ಶೈಕ್ಷಣಿಕ ಪಠ್ಯದ ಜತೆಗೆ ಸಂಸ್ಕಾರವನ್ನೂ ತುಂಬುತ್ತಿದ್ದಾರೆ. ಜಾತಿ-ಗೀತಿ, ಮೇಲು-ಕೀಳು ಎಲ್ಲ ತಪು್ಪ. ಮಾನವೀಯತೆಯೇ ಶ್ರೇಷ್ಠ. ನಾವು ಸಮಾಜಕ್ಕೆ ತೊಂದರೆ ನೀಡದಂತೆ ಬದುಕು ರೂಪಿಸಿಕೊಳ್ಳಬೇಕು, ಬದುಕು ರೂಪಿಸಿಕೊಂಡ ಮೇಲೆ ಸಮಾಜದ ಋಣ ತೀರಿಸಬೇಕು ಎಂಬ ಜೀವನಪಾಠವನ್ನು ಚಿಣ್ಣರ ಹೃದಯಗಳಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಿದಂತೆ ಅದಕ್ಕೆ ನೋವಾಲ್ ಶಿಕ್ಷಣ ಸಂಸ್ಥಾನ ಎಂದು ನಾಮಕರಣ ಮಾಡಿದ್ದಾರೆ. ಬಡ ವಿದ್ಯಾರ್ಥಿಗಳನ್ನು ಇವರೇ ಶಾಲೆಗೆ ಸೇರಿಸುತ್ತಿದ್ದಾರೆ. ಓದುವ ಮಕ್ಕಳಿಗೆ ಪಾಠಪುಸ್ತಕ, ಬಟ್ಟೆ, ಶುಲ್ಕದ ಕೊರತೆ ಆಗಬಾರದು ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಕ್ರೌಡ್ ಫಂಡಿಂಗ್ ಮಾಡಿ ಮಕ್ಕಳಿಗೆ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಓರ್ವ ವಿದ್ಯಾರ್ಥಿನಿಯಿಂದ ಪ್ರಾರಂಭವಾದ ಇವರ ಜ್ಞಾನಯಜ್ಞ ಸಾವಿರಾರು ವಿದ್ಯಾರ್ಥಿಗಳಿಗೆ ತಲುಪಿದೆ.

ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಮಕ್ಕಳಿಗೆ ಪಾಠ ಮಾಡುತ್ತಾರೆ. ಮಕ್ಕಳೇ ಕೋಣೆಗೆ ಬಂದು ಇವರನ್ನು ಮಂಚದ ಮೇಲಿನಿಂದ ವ್ಹೀಲ್​ಚೇರ್​ನಲ್ಲಿ ಕೂರಿಸಿ ಅಂಗಳಕ್ಕೆ ಕರೆದುಕೊಂಡು ಬರುತ್ತಾರೆ. ಪಾಠ ಮುಗಿದ ಮೇಲೆ ಮತ್ತೆ ಕೋಣೆಗೆ ಕರೆದುಕೊಂಡು ಹೋಗಿ ಗಾಲಿಕುರ್ಚಿಯಿಂದ ಇಳಿಸಿ ಹಳೇ ಕಬ್ಬಿಣದ ಮಂಚದ ಮೇಲೆ ಮಲಗಿಸುತ್ತಾರೆ. ಇವರ ಈ ಅಂಗಳಶಾಲೆಗೆ ರಜೆಯೇ ಇಲ್ಲ. ಮಳೆ ನೀರು ತುಂಬಿಕೊಂಡರೂ ಮಕ್ಕಳು ನಿಂತುಕೊಂಡು ಪಾಠ ಕೇಳುತ್ತಾರೆ. ಗಣಿತ, ವಿಜ್ಞಾನ, ಸಮಾಜ, ಇಂಗ್ಲಿಷ್, ಹಿಂದಿ ವಿಷಯಗಳನ್ನೆಲ್ಲ ಬೋಧಿಸುತ್ತಾರೆ. ಆ ಪದಗಳು, ಅರಿವು ಮಕ್ಕಳ ನಾಲಿಗೆಯಿಂದ ಇಳಿದು ಕಣ್ಣಲ್ಲಿ ಆತ್ಮವಿಶ್ವಾಸವಾಗಿ ಕಂಗೊಳಿಸುವಾಗ ಗೋಪಾಲ್ ಸಾರ್ಥಕತೆಯ ಕಣ್ಣೀರು ಸುರಿಸುತ್ತಾರೆ. ಅವರ ನಗುವಿನಲ್ಲಿ ತಮ್ಮೆಲ್ಲ ನೋವನ್ನು ಮರೆಯುತ್ತಾರೆ. ಮಕ್ಕಳು ಉತ್ತಮ ಅಂಕ ಪಡೆದಾಗ ಅಪ್ಪ-ಅಮ್ಮನಿಗಿಂತ ಮೊದಲು ಗೋಪಾಲ್ ಅವರಿಗೆ ಬಂದು ತಿಳಿಸುತ್ತಾರೆ, ಸಂಭ್ರಮಿಸುತ್ತಾರೆ. ಸಾವಿರಾರು ಮಕ್ಕಳಿಗೆ ಕಲಿಸಿದರೂ ಅವರಿಂದ ಒಂದೇ ಒಂದು ರೂಪಾಯಿ ಪಡೆದಿಲ್ಲ. ಬದಲಿಗೆ ಅವರಿಗೇ ಪಠ್ಯ ಸಾಮಗ್ರಿಗಳನ್ನು ದೊರಕಿಸಿ ಕೊಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಪತ್ತಿ ಕಾ ಪುರಾ ಹಳ್ಳಿಯ ಮನಸ್ಸುಗಳು ಈ ಅಪರೂಪದ ಮೇಷ್ಟ್ರ ಉಪಕಾರ ಮರೆತಿಲ್ಲ. ಮಕ್ಕಳ ಪಾಲಕರು ಒಬ್ಬೊಬ್ಬರು ಒಂದೊಂದು ದಿನದಂತೆ ಗೋಪಾಲ್​ಗೆ ತಿಂಡಿ, ಊಟ ಒದಗಿಸುತ್ತಾರೆ. ಆ ತುತ್ತು ಬಾಯಿಗೆ ಇಡುವಾಗಲೆಲ್ಲ ಇವರಿಗೆ ಆ ಮಕ್ಕಳ ಖುಷಿ, ಅಕ್ಷರಸಂಭ್ರಮವೇ ಕಣ್ಮುಂದೆ ಬರುತ್ತದೆ. ಇವರ ಬೋಧನೆಯ ಪರಿಗೆ ಸುತ್ತಮುತ್ತಲ ಗ್ರಾಮದ ಶಿಕ್ಷಕರು ಬೆರಗಾಗಿದ್ದಾರೆ. ಹಾಗಾಗಿ, ಆಗಾಗ ಅವರೂ ಅಂಗಳದ ಶಾಲೆಗೆ ಬಂದು ಮಕ್ಕಳಂತೆ ಕೂತು ಪಾಠ ಕೇಳುತ್ತಾರೆ.

ಇತ್ತೀಚೆಗಷ್ಟೇ ಊರವರೆಲ್ಲ ಸೇರಿ ಗೋಪಾಲರ 50ನೇ ಹುಟ್ಟುಹಬ್ಬ ಆಚರಿಸಿದ್ದಾರೆ. ‘ಜೀವನದಲ್ಲಿ ಯಾರೂ ಇಲ್ಲದಿದ್ದ ನನಗೆ ಈಗ ನೂರಾರು ಮಕ್ಕಳಿದ್ದಾರೆ. ಅವರೆಷ್ಟು ಪ್ರೀತಿ ನೀಡುತ್ತಾರೆ ಎಂದು ಪದಗಳಲ್ಲಿ ಹೇಳಲಾಗದು. ಅವರೆಲ್ಲ ಅಕ್ಷರದ ಜತೆಗೆ ಸಂಸ್ಕಾರವನ್ನೂ ಕಲಿತಿದ್ದಾರೆ. ಇದರಿಂದ ಅವರ ಮನೆಯಲ್ಲಿ, ಊರಿನ ವಾತಾವರಣದಲ್ಲಿ ಸಕಾರಾತ್ಮಕ ಪರಿವರ್ತನೆ ಕಂಡುಬಂದಿದೆ. ನನ್ನ ಬಳಿ ಅಕ್ಷರದ ವಿನಾ ಬೇರೇನೂ ಇರಲಿಲ್ಲ. ಆದರೆ ಆ ಅಕ್ಷರಗಳ ಬೆಳಕು ಸಾವಿರಾರು ಜನರ ಬಾಳು ರೂಪಿಸಿದೆ. ಇದಕ್ಕಿಂತ ಧನ್ಯತೆ ಬೇಕೆ?’ ಎಂದು ಗೋಪಾಲ್ ಪ್ರಶ್ನಿಸುವಾಗ ಜೀವನದ ಸಾಧ್ಯತೆಗಳು, ಪವಾಡಗಳೆಲ್ಲ ಹೃದಯದಲ್ಲಿ ಮೆರವಣಿಗೆ ಹೊರಟಿದ್ದವು.

ಇಂಥ ಶಿಕ್ಷಕರಿಂದಲೇ ಸಮಾಜ ಸುಸಂಸ್ಕೃತವಾಗುತ್ತಿದೆ. ಬದುಕಿಗೆ ಹೊಸ ಅರ್ಥ ಬರುತ್ತಿದೆ. ಹೀಗೆ ಜೀವನವನ್ನು ರೂಪಿಸುತ್ತಿರುವ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು. ಅಕ್ಷರ ಮತ್ತಷ್ಟು ಮೊಗಗಳಲ್ಲಿ ನಗು ಅರಳಿಸುವಂತಾಗಲಿ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)