ಮಾನವನಲ್ಲಿ ಮಾಧವನನ್ನು ಕಾಣುವ ಸಾರ್ಥಕತೆ…!

ಸೇವೆ ಎಂಬುದು ದೊಡ್ಡ ತಪಸ್ಸು! ಸೇವೆ ಮಾಡ್ತಾ ಮಾಡ್ತಾ ಮನುಷ್ಯ ಹೇಗೆ ಔನ್ನತ್ಯಕ್ಕೆ ಹೋಗುತ್ತಾನೆ ಎಂದರೆ ಮನಸ್ಸಿನ ಕಲ್ಮಶಗಳನ್ನೆಲ್ಲ ನಿವಾರಿಸಿಕೊಂಡು, ಆಂತರ್ಯದಲ್ಲಿ ಅಂತಃಕರಣದ ಲೋಕ ವಿಸ್ತರಿಸಿಕೊಂಡು, ತನ್ನ ಸುತ್ತಮುತ್ತಲಿನ ಜನರಲ್ಲೇ ದೇವರನ್ನು ಕಾಣುತ್ತಾನೆ! ಜೀವನದಲ್ಲಿ ಇದಕ್ಕಿಂತ ಸಾರ್ಥಕವಾದದ್ದು ಏನಿದೆ ಹೇಳಿ? ದಿನ ಬೆಳಗಾಗೆದ್ದು ಇತರರನ್ನು ಟೀಕಿಸುವ, ಸ್ವನಿಂದನೆಯಲ್ಲಿಯೂ ತೊಡಗಿಕೊಳ್ಳುವ, ಬರೀ ನಮ್ಮ ಸ್ವಾರ್ಥಕ್ಕಾಗಿ ದುಡಿಯುವ ನೀರಸ ಬದುಕಿನ ನಡುವೆ ನಮ್ಮ ಹೃದಯದಲ್ಲೊಂದು ಆರದ ಸೇವಾದೀಪವನ್ನು ಬೆಳಗಿಸಿಕೊಂಡು, ಅದರ ಬೆಳಕಲ್ಲಿ ನೈಜ ಮಾನವೀಯತೆಯನ್ನು ಕಾಣುವುದಿದೆಯಲ್ಲ ಅದು ಸಾವಿರ ಸಂತಸಗಳ ಒಟ್ಟು ಮೊತ್ತ. ಮನುಷ್ಯನ ಸ್ವಾರ್ಥ, ಅಹಂಕಾರ, ಭ್ರಮೆಗಳನ್ನು ಕಡಿಮೆ ಮಾಡುವ ಶಕ್ತಿ ಇರುವುದು ಈ ಸೇವೆಗೆ ಮಾತ್ರ. ಅಷ್ಟೇ ಅಲ್ಲ, ಮಾನವ ಸಂಸಾರದ ದುಃಖಗಳನ್ನು ಕಡಿಮೆ ಮಾಡಬಹುದಾದ, ಎಂಥ ನೋವಿನ ಹೃದಯದಲ್ಲೂ ಒಂದಿಷ್ಟು ಸಮಾಧಾನ ಅರಳಿಸಬಹುದಾದ ಜಗತ್ತಿನ ಶಕ್ತಿಶಾಲಿ ಔಷಧ ಯಾವುದಾದರೂ ಇದ್ದರೆ ಅದು ಸೇವೆಯೇ!

‘ಜರೂರ್ ಮಾತು’ ಅಂಕಣದಲ್ಲಿ ಸೇವೆಯ ಹಲವು ಆಯಾಮ ಹಾಗೂ ಅದರ ಪರಿಣಾಮಗಳನ್ನು ಓದಿದ್ದೀರಿ. ಆದರೂ, ಸಮಾಜಕ್ಕೆ ಇನ್ನೂ ಜರೂರಾದ ಸೇವೆಗಳಾವವು ಎಂಬುದನ್ನು ನಿಸ್ವಾರ್ಥಿ ಮನಸ್ಸುಗಳು ಹುಡುಕುತ್ತ, ಅದನ್ನು ಕಾರ್ಯರೂಪಕ್ಕೆ ತರುವ ಬಗೆ ಹೊಸ ಭರವಸೆ ಮೂಡಿಸುವಂಥದ್ದು.

ಒಮ್ಮೆ ಸುಮ್ಮನೇ ಯೋಚಿಸಿ. ಮನೆಯಲ್ಲಿ ಯಾರಾದರೂ ಒಬ್ಬರು ಅನಾರೋಗ್ಯಕ್ಕೆ ಈಡಾದರೆ, ಅದರಲ್ಲೂ ಭೀಕರ ಕಾಯಿಲೆಗೆ ತುತ್ತಾದರೆ ಆ ಇಡೀ ಸಂಸಾರವೇ ನಲುಗಿ ಹೋಗುತ್ತದೆ. ಚಿಕಿತ್ಸೆಯ ಆರ್ಥಿಕ ಭಾರಗಳು ಒಂದೆಡೆಯಾದರೆ, ರೋಗಿಯನ್ನು ನೋಡಿಕೊಳ್ಳುವವರು ಯಾರು, ಆರೈಕೆ ಮಾಡುವುದು ಹೇಗೆ ಎಂಬ ದುಗುಡ. ಕೆಲವೊಮ್ಮೆಯಂತೂ ವೈದ್ಯರು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡಿ ‘ಇನ್ನು ಚಿಕಿತ್ಸೆ ನೀಡಲು ಸಾಧ್ಯವಿಲ್ಲ; ಮನೆಗೆ ಕರೆದುಕೊಂಡು ಹೋಗಿ. ಅವರ ಆಯಸ್ಸು ಒಂದೋ-ಎರಡೋ ತಿಂಗಳು’ ಎಂದುಬಿಡುತ್ತಾರೆ. ಆಗಂತೂ, ಕ್ಷಣಕ್ಷಣಕ್ಕೂ ರೋಗಿಯ ಗಮನ ವಹಿಸಬೇಕು. ಅಲ್ಲದೆ, ಮರಣಶಯ್ಯೆಯಲ್ಲಿರುವವರಿಗೆ ಏನೋ ‘ಕೊನೆಯ ಆಸೆ’ ಎಂಬುದೊಂದು ಇದ್ದೇ ಇರುತ್ತದೆಯಲ್ಲ, ಅದಕ್ಕೆ ಕಿವಿಯಾಗಬೇಕು. ಇಂದಿನ ಆಧುನಿಕ ದಿನಗಳಲ್ಲಿ ‘ಮನೆಗೊಂದು ಕಥೆ, ಹತ್ತಾರು ವ್ಯಥೆ’ ಎಂಬ ಸ್ಥಿತಿ ಇರುವಾಗ ಇಂಥ ಗಂಭೀರ ಕಾಯಿಲೆಯ ಮತ್ತು ಮರಣಶಯ್ಯೆಯಲ್ಲಿರುವ ರೋಗಿಗಳಿಗಾಗಿ ಶುಶ್ರೂಷೆ ಮತ್ತು ಆರೈಕೆ ಕೇಂದ್ರ ತೆಗೆದು, ಅವರ ಸೇವೆಯನ್ನು ದೇವರ ಪೂಜೆಯಷ್ಟೇ ಭಕ್ತಿಯಿಂದ ಮಾಡುತ್ತಿದೆ ‘ಶರಣ್ಯ’.

ಮಲೆನಾಡಿನ ಸೆರಗಿನಲ್ಲಿರುವ ಶಿವಮೊಗ್ಗ ಬಳಿಯ ಗಾಜನೂರು ಅಗ್ರಹಾರ ಗ್ರಾಮದ (ಫಾರೆಸ್ಟ್ ಚೆಕ್​ಪೋಸ್ಟ್ ಹತ್ತಿರ) ಹತ್ತು ಎಕರೆ ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶರಣ್ಯ’ ರೋಗಿಗಳು ಮತ್ತು ಸಂಬಂಧಿಕರ ಪಾಲಿಗೆ ನೆಮ್ಮದಿಯ ತಾಣವಾಗಿ, ವಾತ್ಸಲ್ಯದ ಧಾಮವಾಗಿ ಪರಿವರ್ತಿತವಾಗಿದೆ. ವಿಶೇಷವೆಂದರೆ, ಲೌಕಿಕ ಸಂಸಾರದಲ್ಲಿದ್ದೂ, ಸಮಾಜಕ್ಕೆ ಏನಾದರೂ ಒಳ್ಳೆದನ್ನು ಮಾಡಬೇಕು ಎಂಬ ತೀವ್ರ ತುಡಿತದಿಂದ ಶಿವಮೊಗ್ಗದ ಕುಟುಂಬವೊಂದು ಇಂಥ ಮಾದರಿ ಆರೈಕೆ ಕೇಂದ್ರವನ್ನು ನಡೆಸುತ್ತಿದೆ.

ಡಿ.ಎಲ್.ಮಂಜುನಾಥ ಮತ್ತು ಇವರ ಇಡೀ ಕುಟುಂಬ ಈ ಸಂಸ್ಥೆಯ ಶಕ್ತಿ. ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ಮಂಜುನಾಥ ಅವರು ಈಗ ಪೂರ್ತಿ ಸಮಯವನ್ನು ಈ ರೋಗಿಗಳೊಂದಿಗೆ ಕಳೆಯುತ್ತಿದ್ದಾರೆ. ಇದರ ಆರಂಭಿಕ ಪಯಣವೂ ಸ್ವಾರಸ್ಯಕರ. ತಂದೆ ನಿಧನದ ಬಳಿಕ ಮಂಜುನಾಥ ಮತ್ತು ಇವರ ಸೋದರರು ಸಮಾಜಮುಖಿ ಕಾರ್ಯದ ಬಗ್ಗೆ ಒಲವು ತೋರಿದರು. ಆ ನಿಟ್ಟಿನಲ್ಲಿ 2002ರಲ್ಲಿ ಡಿ.ಎಸ್.ಎಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಯಾವ ಕ್ಷೇತ್ರದಲ್ಲಿ ಸೇವೆ ಮಾಡಬೇಕು ಎಂಬ ಚಿಂತನೆ ಮಾಡುತ್ತಿರುವಾಗಲೇ ಇವರ ಗಮನ ಸೆಳೆದಿದ್ದು ರೋಗಿಗಳ ಸ್ಥಿತಿ. ಮೊದಲಿಗೆ ಶಿವಮೊಗ್ಗದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೌನ್ಸೆಲಿಂಗ್, ಭಾವನಾತ್ಮಕ ಬೆಂಬಲ ನೀಡುತ್ತ ಬಂದ ಇವರಿಗೆ ಕ್ರಮೇಣ ರೋಗಿಗಳ ಸಮಸ್ಯೆ, ಅವರಿಗೆ ಬೇಕಾದ ಸೇವೆಯ ಸ್ವರೂಪ ಮನದಟ್ಟಾಯಿತು. ಹಾಗಾಗಿ, ಹಾಸಿಗೆ ಹಿಡಿದು, ತೀವ್ರ ಕಾಯಿಲೆ ಬಿದ್ದಿರುವ ರೋಗಿಗಳಿಗೆ ಅವರ ಮನೆಗಳಿಗೇ ಹೋಗಿ ಆರೈಕೆ ಮಾಡತೊಡಗಿದರು. ಇದಕ್ಕಾಗಿ, ಸಂಚಾರಿ ವ್ಯಾನ್, ನರ್ಸಿಂಗ್ ಸಿಬ್ಬಂದಿಯ ವ್ಯವಸ್ಥೆ ಮಾಡಿಕೊಂಡರು. ಡ್ರಿಪ್ ಏರಿಸುವುದು, ಔಷಧ, ಮಾತ್ರೆಗಳನ್ನು ನೀಡುವುದು, ರೋಗಿಗೆ ಸ್ನಾನ ಮಾಡಿಸುವುದು, ರೋಗಿ ಪರಿಸರದ ಸ್ವಚ್ಛತೆ ಸೇರಿ ಎಲ್ಲ ಕೆಲಸವನ್ನು ಇವರ ತಂಡ ಮಾಡತೊಡಗಿತು. ಈ ಕಾರ್ಯ ವಿಸ್ತರಣೆ ಆದಂತೆಲ್ಲ ಗಂಭೀರ ಕಾಯಿಲೆಯ ರೋಗಿಗಳು ಕೊನೆಯ ದಿನಗಳನ್ನಾದರೂ ಮಾನಸಿಕ ಚಿಂತೆಯಿಂದ ಮುಕ್ತರಾಗಿ ನೆಮ್ಮದಿಯಿಂದ ಕಳೆಯುವಂತಾಗಬೇಕು ಎಂಬ ಭಾವ ಮಂಜುನಾಥರಲ್ಲಿ ಜಾಗೃತವಾಗತೊಡಗಿತು. ಮಕ್ಕಳ ಸೇವೆಯನ್ನು ಕಂಡ ತಾಯಿ-‘ನಿಜವಾಗಿಯೂ ದೇವರನ್ನು ತಲುಪುವ ಕೆಲಸ ಮಾಡುತ್ತಿದ್ದೀರಿ. ಮಾಡಿದ್ರೆ ಇಂಥ ಸೇವೆಯನ್ನೇ ಮಾಡಿ. ಅದಕ್ಕಾಗಿ, ನಿಮ್ಮ ತಂದೆ ನನಗಾಗಿಟ್ಟ ಹಣವನ್ನೂ ಕೊಡ್ತೀನಿ’ ಎಂದು ಆಶೀರ್ವದಿಸಿದಾಗ ಇವರ ಮನೋಬಲ ಸಾವಿರ ಪಟ್ಟು ಹೆಚ್ಚಾಗಿತ್ತು.

ರೋಗಿಗಳ ಶುಶ್ರೂಷೆ, ಆರೈಕೆ ನಿಟ್ಟಿನಲ್ಲಿ ದೇಶದ ವಿವಿಧೆಡೆ ಕೆಲಸ ಮಾಡುತ್ತಿರುವ ಸೇವಾಕೇಂದ್ರಗಳಿಗೆ ಟ್ರಸ್ಟಿಗಳು ಭೇಟಿ ನೀಡಿದರು. ರೋಗಿಗಳ ಆರೈಕೆ ದೊಡ್ಡ ಪ್ರಮಾಣದಲ್ಲಿ ಆಗಬೇಕಿದೆ; ಆದರೆ ಇದಕ್ಕಿರುವ ಸಂಸ್ಥೆಗಳು ತುಂಬ ಕಡಿಮೆ ಎಂದು ಅರಿವಾಗುತ್ತಿದ್ದಂತೆ 2014-15ರಲ್ಲಿ ‘ಶರಣ್ಯ’ ಸ್ಥಾಪಿಸಿದರು. ಮೊದಲಿಗೆ, ಕ್ಯಾನ್ಸರ್ ಕೊನೆ ಹಂತದ ರೋಗಿಗಳಿಗೆ ಇಲ್ಲಿ ಆರೈಕೆ ಮಾಡಲಾಗುತ್ತಿತ್ತು. ಆದರೆ, ರೋಗಿಗಳ ಸಮಸ್ಯೆಗಳ ಗಂಭೀರತೆಯನ್ನು ಅರಿತು ಈಗ ಕ್ಯಾನ್ಸರ್ ರೋಗಿಗಳ ಜತೆ, ಪ್ಯಾರಾಲಿಸಿಸ್ ಪೀಡಿತರು, ನರರೋಗಿಗಳು, ಮಿದುಳು ನಿಷ್ಕ್ರಿಯತೆ ಮತ್ತು ಇತರೆ ಗಂಭೀರ ಕಾಯಿಲೆಯ ರೋಗಿಗಳನ್ನು ಮನೆ ಸದಸ್ಯರಿಗಿಂತಲೂ ಹೆಚ್ಚು ಆಪ್ತಭಾವದಿಂದ ನೋಡಿಕೊಳ್ಳುತ್ತಿದ್ದಾರೆ. ನಗರದ ಹೊರಗಡೆ ಈ ಆರೈಕೆ ಕೇಂದ್ರ ಇರುವುದರಿಂದ ಗಲಾಟೆ, ಶಬ್ದದ ಹಾವಳಿ ಇಲ್ಲ. ಶುದ್ಧ ಗಾಳಿಯ ಜತೆಗೆ ಆಹ್ಲಾದಕರ ವಾತಾವರಣ. ವೈದ್ಯರು ನಾಲ್ಕೇ ದಿನದಲ್ಲಿ ಸಾಯುತ್ತಾರೆ ಎಂದು ಹೇಳಿದ ರೋಗಿಯೂ ಇಲ್ಲಿ ಬಂದು ಮಾನಸಿಕವಾಗಿ ಚೇತರಿಸಿಕೊಂಡ ಹಲವು ನಿದರ್ಶನಗಳುಂಟು. ಮೊದಲೆಲ್ಲ, ಶಿವಮೊಗ್ಗದ ಮೆಸ್​ನಿಂದ ಆಹಾರ ತಂದು ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು. ಪ್ರಸಕ್ತ, ಈ ಕೇಂದ್ರದ ಆವರಣದಲ್ಲೇ ಅಡುಗೆಮನೆ ನಿರ್ವಿುಸಲಾಗಿದ್ದು, ಅಡುಗೆಗೆ ಸಿಬ್ಬಂದಿ ಇರಿಸಿದ್ದಾರೆ.

ಎರಡು ವಾರ್ಡ್​ಗಳನ್ನು ಹೊಂದಿದ್ದು, ಇದು ಆಸ್ಪತ್ರೆ ಅಲ್ಲ, ಮನೆಯೂ ಅಲ್ಲ. ಮನೆಯನ್ನೂ ಮೀರಿದ ಕಾಳಜಿಯ ಕೇಂದ್ರ. ನಾಲ್ವರು ವೈದ್ಯರು, ಆರು ಜನ ನರ್ಸಿಂಗ್ ಸಿಬ್ಬಂದಿ, ಇಬ್ಬರು ಆಯಾ, ಅಡುಗೆಯವರು, ಸಹಾಯಕರು ಸೇರಿ 21 ಸಿಬ್ಬಂದಿ ‘ಶರಣ್ಯ’ದಲ್ಲಿದ್ದಾರೆ. ರೋಗಿಯ ಜತೆಗೆ ಓರ್ವ ಸಂಬಂಧಿಕರಿಗೆ ಇರಲು ಅವಕಾಶ ಕಲ್ಪಿಸಲಾಗಿದೆ. ರೋಗಿಗಳಿಂದ ಒಂದು ರೂಪಾಯಿಯನ್ನೂ ಪಡೆಯದೆ ಎಲ್ಲ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ವೈದ್ಯರು ಪ್ರತಿನಿತ್ಯ ರೋಗಿಗಳಿಗೆ ನೀಡಬೇಕಾದ ಔಷಧ, ಇತರೆ ಆರೈಕೆ ಬಗ್ಗೆ ಕಾಳಜಿ ವಹಿಸುತ್ತಾರೆ. ತಜ್ಞ ವೈದ್ಯರು ವಾರಕ್ಕೊಮ್ಮೆ ಭೇಟಿ ನೀಡಿ ತಪಾಸಣೆ ನಡೆಸುತ್ತಾರೆ. 20 ಒಳರೋಗಿಗಳಿಗೆ ಪ್ರವೇಶ ನೀಡುವ ಸಾಮರ್ಥ್ಯವನ್ನು ಈ ಕೇಂದ್ರ ಹೊಂದಿದ್ದು, ಪ್ರಸಕ್ತ ರಾಜ್ಯದ ಬೇರೆ-ಬೇರೆ ಜಿಲ್ಲೆಗಳ ಹತ್ತು ರೋಗಿಗಳು ಆರೈಕೆ ಪಡೆಯುತ್ತಿದ್ದಾರೆ. ಸಿಬ್ಬಂದಿ ಸಂಬಳ, ರೋಗಿಗಳ ಶುಶ್ರೂಷೆ ಸೇರಿ ತಿಂಗಳಿಗೆ ಸರಾಸರಿ 3 ಲಕ್ಷ ರೂ. ವೆಚ್ಚವಾಗುತ್ತಿದ್ದು, ದಾನಿಗಳ ನೆರವಿನಿಂದಲೇ ನಡೆಯುತ್ತಿದೆ. ಆರಂಭದಲ್ಲಿ ಮಂಜುನಾಥ ಮತ್ತು ಅವರ ಕುಟುಂಬದ ಸದಸ್ಯರು ಕೈಯಿಂದ ದುಡ್ಡು ಹಾಕಿ ಸಂಸ್ಥೆಯನ್ನು ನಿರ್ವಹಿಸಿದ್ದಾರೆ. ಉನ್ನತ ಶಿಕ್ಷಣ ಪಡೆದಿರುವ ಮಂಜುನಾಥರ ಪುತ್ರ ಅರ್ಜುನ್ ತಂದೆಯ ಕೆಲಸಕ್ಕೆ ಹೆಗಲಾಗಲು ಊರಿಗೆ ಮರಳಿದ್ದು, ಶರಣ್ಯದ ಚಟುವಟಿಕೆಗಳನ್ನು ವಿಸ್ತರಿಸಲು ಶ್ರಮಿಸುತ್ತಿದ್ದಾರೆ.

‘ರೋಗಿಗಳನ್ನು ನೋಡಿಕೊಳ್ಳಲು ಹತ್ತಿರದ ಸಂಬಂಧಿಕರೇ ಹಿಂಜರಿಯುವಾಗ ಇಂಥ ಸವಾಲಿನ ಕೆಲಸ ಕೈಗೆತ್ತಿಕೊಳ್ಳಲು ಪ್ರೇರಣೆ ಏನು?’ ಎಂಬ ಪ್ರಶ್ನೆಗೆ ಮಂಜುನಾಥ ಕೊಂಚ ಭಾವುಕರಾಗಿ (99457-76583)- ‘‘ಪ್ರತೀ ದೇಹದಲ್ಲೂ ಪವಿತ್ರ ಆತ್ಮವಿದೆ. ಹಾಗಾಗಿ, ಸಾಯುವ ಕ್ಷಣದಲ್ಲಾದರೂ ಕೊರಗು ಇರಬಾರದು. ರೋಗಿಗಳನ್ನು ಯಾರು ನೋಡಿಕೊಳ್ಳಬೇಕು ಎಂಬ ಪ್ರಶ್ನೆ ದೊಡ್ಡದು. ಸಮಾಜವನ್ನು ಟೀಕಿಸುವುದಕ್ಕಿಂತ ನಾವೇನು ಮಾಡಬಹುದು ಎಂದು ಯೋಚಿಸಬೇಕು. ಹಾಗೇ ಯೋಚಿಸಿದಾಗಲೇ, ನಮಗೆ ಉತ್ತರ ದೊರೆತದ್ದು ಈ ಕಾರ್ಯದ ರೂಪದಲ್ಲಿ ಅನುಷ್ಠಾನಕ್ಕೆ ಬಂದಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯ ವರದಿ ಪ್ರಕಾರ, ಚಿಕಿತ್ಸೆ ಫಲಕಾರಿಯಾಗದೆ ಉಲ್ಬಣ ಸ್ಥಿತಿಯನ್ನು ತಲುಪಿ ಅಂತಿಮ ದಿನಗಳನ್ನು ಎಣಿಸುತ್ತಿರುವ ರೋಗಿಗಳ ಪ್ರಮಾಣ ಪ್ರತಿಶತ ಎರಡಕ್ಕಿಂತ ಹೆಚ್ಚಾಗಿದೆ. ಮುಗ್ಧತೆ, ನಿರ್ಲಕ್ಷ್ಯ, ವೈದ್ಯಕೀಯ ಸೌಕರ್ಯಗಳ ಕೊರತೆ, ಆರ್ಥಿಕ ತೊಂದರೆ, ಸಾಮಾಜಿಕ ಪರಿಸ್ಥಿತಿ… ಇವೆಲ್ಲ ಇದಕ್ಕೆ ಕಾರಣವಾಗಿರಬಹುದು. ಆ ಸಂಕಟ, ನೋವು, ಮಾನಸಿಕ ತೋಳಲಾಟ ಹೇಳಲು ಅಸಾಧ್ಯ. ಆ ನೋವಿನ ಪ್ರಮಾಣವನ್ನು ಕಡಿಮೆಗೊಳಿಸಿ ‘ನಿಮ್ಮೊಡನೆ ನಾವಿದ್ದೇವೆ’ ಎಂಬ ಭರವಸೆ ತುಂಬಿ, ಕೊನೆಯ ದಿನಗಳು ಅಥವಾ ಇರುವಷ್ಟು ದಿನಗಳು ಅವರು ನೆಮ್ಮದಿಯಿಂದ ಕಳೆದರೆ ಸಾಕು. ಚಿಂತೆಯಿಲ್ಲದೆ ಕೊನೆಯುಸಿರು ಬಿಡುವ ಅವಕಾಶ ಎಷ್ಟು ಜನರಿಗೆ ಸಿಗುತ್ತದೆ ಹೇಳಿ?’ ಎಂದು ಪ್ರಶ್ನಿಸಿದರು.

ಪ್ರೀತಿಯಿಂದ ನಾಲ್ಕು ಮಾತನಾಡಿ, ಸ್ವಲ್ಪ ಹೊತ್ತು ಕಳೆದರೂ ರೋಗಿಗಳು ಮಾನಸಿಕವಾಗಿ ಚೇತರಿಕೆ ಕಾಣುತ್ತಾರೆ. ಇಂಥ ಪ್ರೀತಿ, ಕಾಳಜಿಯೇ ಸೇವೆಯ ಆದರ್ಶವನ್ನು ಜೀವಂತವಾಗಿ ಇರಿಸುತ್ತಿದೆ. ಈ ಸ್ಪಂದನಶೀಲ ಮನಸ್ಸುಗಳ ಸಂಖ್ಯೆ ಹೆಚ್ಚುತ್ತ ಹೋದಂತೆ, ಸ್ವಾರ್ಥದ ಕೊಳೆ ನಿವಾರಣೆ ಆಗುತ್ತದೆ. ಅಲ್ಲವೇ?

Leave a Reply

Your email address will not be published. Required fields are marked *