More

    ಹೊರಗೆ ಕತ್ತಲು ಕವಿದಾಗ ಆಂತರ್ಯದ ಬೆಳಕು ಝುಗಮಗಿಸಿತು!

    ಕೆಲ ಜೀವನಕಥೆಗಳೇ ಅಷ್ಟು ರೋಚಕ, ಎಲ್ಲಿಂದ ಆರಂಭಿಸಬೇಕು ಎಂಬುದೇ ಗೊಂದಲ. ಆ ಯುವತಿಯ ಮಾತೇ ಸಂಗೀತ ಎಂದರು ಹೃದಯನಾಥ್ ಮಂಗೇಶ್ಕರ್! ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ಆಕೆ ಮಾತಾಡುತ್ತಿದ್ದರೆ ನೆರೆದ ನೂರಾರು ಹೃದಯಗಳಲ್ಲಿ ದೇಶಭಕ್ತಿಯ ಪ್ರಬಲ ಅಲೆ! ಅನಘಾ ಮೋಡಕ್ ಇವರ ಹೆಸರು. ಆರ್​ಜೆ ಅನಘಾ ಎಂದೇ ಖ್ಯಾತಿ. ಉಪನ್ಯಾಸ, ಸಂದರ್ಶನ, ಪ್ರೇರಣಾದಾಯಕ ಮಾತು, ಹಾಡು, ಕವಿತೆ, ಸಾಹಿತ್ಯ, ಓದು, ಸ್ನೇಹಿತರ ದೊಡ್ಡ ಬಳಗ, ಅಭಿಮಾನಿಗಳ ಪ್ರೀತಿ… ಇವೆಲ್ಲ ಅನಘಾ ಸಂಪಾದಿಸಿದ ಆಸ್ತಿ. ಆದರೆ, ಈ ಸಾಧನೆಯ ಹಿಂದೆ ದೊಡ್ಡ ಕಥೆಯಿದೆ, ವಿಧಿಯಾಡಿದ ಹತ್ತೆಂಟು ಆಟಗಳಿವೆ. ಎಲ್ಲ ಅನಕೂಲ ಇದ್ದೂ, ಬದುಕನ್ನು ನಿತ್ಯ ಶಪಿಸುವ ಜನರ ನಡುವೆ ಅನಘಾ ಸಕಾರಾತ್ಮಕತೆಯ ಶಕ್ತಿಪುಂಜ. ಎರಡೂ ಕಣ್ಣು ಕಳೆದುಕೊಂಡಿದ್ದರೂ ಜಗತ್ತನ್ನು ಅಂತಃಕರಣದ ದೃಷ್ಟಿಯಿಂದ ನೋಡುತ್ತಿರುವ ಮೋಡಕ್ ಬತ್ತಲಾರದ ಪ್ರೇರಣಾ ಸೆಲೆ.

    ಮಹಾರಾಷ್ಟ್ರದ ಸಂಭಾಜಿನಗರ್ (ಔರಂಗಾಬಾದ್)ದಲ್ಲಿ ಹುಟ್ಟಿ, ಬೆಳೆದ ಅನಘಾ ಎಲ್ಲರಂತೆಯೇ ಬದುಕಿನಲ್ಲಿ ಕನಸುಗಳ ದೊಡ್ಡ ಸಂತೆಯನ್ನೇ ಇರಿಸಿಕೊಂಡವರು. ಪದವಿ, ಸ್ನಾತಕೋತ್ತರ ಪದವಿ ಮುಗಿಸಿ, ಪಿಎಚ್​ಡಿಗಾಗಿ ತಯಾರಿ ನಡೆದಿತ್ತು. ಗೆಳತಿಯರೆಲ್ಲ ‘ಇನ್ನೇನಮ್ಮ ಸ್ವಲ್ಪ ದಿನದಲ್ಲಿ ಡಾ.ಅನಘಾ ಆಗಿಬಿಡ್ತಿಯಾ…’ ಅಂತ ಕಿಚಾಯಿಸುತ್ತಿದ್ದರು. ಪಟಪಟನೇ ಮಾತನಾಡಿದರೂ ಅದರಲ್ಲಿ ಮಾಧುರ್ಯದ ಸವಿ. ಅದಕ್ಕೆ ಕವಿತೆಗಳ ವೇಷಭೂಷಣ! ಸ್ಪಷ್ಟ ಉಚ್ಚಾರಣೆ, ಸವಿದನಿಯ ಮೋಡಿಯಿಂದ ಅನಘಾ ಕಾಲೇಜ್ ದಿನಗಳಲ್ಲೇ ಎಲ್ಲರ ಗಮನ ಸೆಳೆದಿದ್ದರು. ಎಲ್ಲವೂ, ಸಹಜ, ಸರಾಗವಾಗಿ ಸಾಗುತ್ತ ಇನ್ನೇನು ತನ್ನ ಸ್ವಪ್ನಗಳ ರಾಶಿಯ ಮೇಲೆ ಹತ್ತಿ ಕೂಡಬೇಕು ಎನ್ನುವಷ್ಟರಲ್ಲಿ ವಿಧಿ ಬದುಕನ್ನೇ ತಿರುವು-ಮುರುವು ಮಾಡಿತು.

    2014 ಅಕ್ಟೋಬರ್ 2. ಆಗ 25 ವರ್ಷದ ಅನಘಾ ಡೆಂಗ್ಯೂದಿಂದ ಆಸ್ಪತ್ರೆಗೆ ದಾಖಲಾದರು. ವೈದ್ಯರು ಮೊದಲೆಲ್ಲ, ಯಾವುದೇ ತೊಂದರೆಯಿಲ್ಲ, ಬೇಗ ಗುಣಮುಖರಾಗುತ್ತೀರಿ ಎಂದರು. ಆದರೆ, ಆರೋಗ್ಯ ಕ್ಷೀಣಿಸುತ್ತ ಬಂತು. ಪ್ಲೇಟ್​ಲೇಟ್ಸ್ ತುಂಬ ಕಡಿಮೆಯಾಯಿತು. ಅಂದು ಅಕ್ಟೋಬರ್ 7. ಐಸಿಯುಗೆ ಶಿಫ್ಟ್ ಮಾಡಲಾಯಿತು. ಅನಘಾಗೆ ಉಸಿರಾಡಲು ಕಷ್ಟವಾಗತೊಡಗಿತು. ಆಕ್ಸಿಜನ್ ಪೂರೈಸಲಾಯಿತು. ಮಧ್ಯಾಹ್ನದ ಹೊತ್ತಿಗೆ ಎಲ್ಲ ಬ್ಲರ್ ಆಗಿ ಕಾಣತೊಡಗಿತು, ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡುವಷ್ಟರಲ್ಲೇ ಪರಿಸ್ಥಿತಿ ಕೈಮೀರಿತ್ತು. ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲೇ ಎರಡೂ ಕಣ್ಣು ದೃಷ್ಟಿ ಕಳೆದುಕೊಂಡವು! ಅನಘಾಗೆ, ಅವರ ಪಾಲಕರಿಗೆ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ವೈದ್ಯರು ಘೋಷಿಸಿಬಿಟ್ಟರು-ಇನ್ನು ಕಣ್ಣಿನ ದೃಷ್ಟಿ ಮರಳಿ ಬರುವುದು ಅಸಾಧ್ಯ ಎಂದು. ಆದರೂ, ಕುಟುಂಬದವರು ಅನಘಾಗೆ ಇದನ್ನು ತಿಳಿಯಕೊಡದೆ, ‘ಡಾಕ್ಟರ್ ಸರಿಮಾಡುತ್ತಾರೆ, ಏನೂ ಆಗಿಲ್ಲ’ ಎಂದು ಭರವಸೆ ತುಂಬುತ್ತಿದ್ದರು. ಜೋಕ್, ಕಥೆಗಳನ್ನು ಹೇಳುತ್ತ ಐಸಿಯುವನ್ನು ಹಾಸ್ಯಗಡಲಲ್ಲಿ ತೇಲಿಸಿದರು. ಆದರೆ, ಸತ್ಯವನ್ನು ಎಷ್ಟು ದಿನ ಅದುಮಿಡಲು ಸಾಧ್ಯ? ವೈದ್ಯರಿಂದ ಅನಘಾಗೆ ವಾಸ್ತವ ಗೊತ್ತಾಯಿತು.

    ದಿನವೂ ಬದುಕಿನ ನೂರು ಬಣ್ಣಗಳನ್ನು ಸಂಭ್ರಮಿಸುತ್ತಿದ್ದ ಹುಡುಗಿ, ಈಗ ಜಗತ್ತನ್ನು ನೋಡಲು ಸಾಧ್ಯವಿಲ್ಲ ಎಂದರಿತಾಗ ಮೌನಕ್ಕೆ ಜಾರಿದಳು. ಆಗೊಂದು ಘಟನೆ ಪವಾಡದಂತೆ ನಡೆಯಿತು-ಅನಘಾರನ್ನು ಕಾಣಲು ಅವರ ಆಧ್ಯಾತ್ಮಿಕ ಗುರುಗಳು ಆಸ್ಪತ್ರೆಗೆ ಬಂದರು. ಅವರು ಮಮತೆಯಿಂದ ತಲೆ ಮೇಲೆ ಕೈಯಾಡಿಸುತ್ತ ‘ಎರಡು ಮಾತು ಹೇಳಲೇನಮ್ಮ?’ ಎಂದರು. ‘ಇಷ್ಟು ದಿನ ಹೊರಗೆ ನೋಡುತ್ತಿದ್ದೆಯಲ್ಲ, ಈಗ ನಿನ್ನ ಒಳಗೆ ನೋಡಬೇಕಿದೆ. ಆಂತರ್ಯದ ಬೆಳಕನ್ನು ಕಾಣಬೇಕಿದೆ. ಎರಡನೇ ಸಂಗತಿ. ನಾವು ಧ್ಯಾನ ಮಾಡುವಾಗ ಕಣ್ಣು ಮುಚ್ಚಿಕೊಳ್ಳುತ್ತೇವಲ್ಲ, ಹಾಗೇ ಧ್ಯಾನಸ್ಥಳಾಗಿದ್ದೇನೆ ಎಂದುಕೊಂಡು ಕೆಲ ವರ್ಷ ಗುರಿಯ ಕಡೆಗೆ ಗಮನ ನೀಡು’ ಎಂದರು. ಅನಘಾರಲ್ಲಿ ಮಿಂಚಿನ ಸಂಚಾರವಾಯಿತು. ಹಾಗೂ ‘ನಿನ್ನ ಕಣ್ಣುಗಳು ಹೋಗಿವೆ, ದೃಷ್ಟಿ ಅಲ್ಲ’ ಎಂಬ ಅವರ ಮಾತು ಮನಸಿನಲ್ಲಿ ಬೇರೂರಿತು. ಹೊಸ ಜೀವನ ಆರಂಭಿಸುವ ಸಂಕಲ್ಪ ದೃಢವಾಯಿತು.

    ಸಮಸ್ಯೆಗಳು ಇದ್ದೇ ಇದ್ದವು. 20 ದಿನ ಐಸಿಯುನಲ್ಲಿ ಇದ್ದು, ಮನೆಗೆ ಹೊರಡಲು ಮೊದಲ ಹೆಜ್ಜೆ ಇಡಬೇಕಾದರೆ ಮುಂದೆ ನಡೆಯುವುದು ಹೇಗೆ ಎಂದು ಗೊತ್ತಾಗಲಿಲ್ಲ. ಈಗ ತನ್ನ ಮನೆಯನ್ನೇ ಹೊಸದಾಗಿ ಅರಿತುಕೊಳ್ಳಬೇಕಿತ್ತು, ಜಾಗರೂಕತೆಯಿಂದ ನಡೆದರೂ ಎಷ್ಟೋ ಬಾರಿ ಹಣೆ ಗೋಡೆಗೆ ಜಜ್ಜಿಕೊಳ್ಳುತ್ತಿತ್ತು. ಅವರ ಕುಟುಂಬಸ್ಥರೂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮನೆ ತುಂಬ ಓಡಾಡಿ, ಅನಘಾಗೆ ಎಲ್ಲೆಲ್ಲಿ ತೊಂದೆಯಾಗಬಹುದು ಎಂಬುದನ್ನು ಅಂದಾಜಿಸಿ, ಅದನ್ನು ತಪ್ಪಿಸಲು ಹಲವು ಮಾರ್ಪಾಡು ಮಾಡಿದರು. ನಿಧಾನಕ್ಕೆ ನಡೆಯುವುದು ಅಭ್ಯಾಸವಾಯಿತು. ದಿನವೂ ಹೊಸ ಆಸ್ಪತ್ರೆಯ ಅಲೆದಾಟ, ಹೊಸ ವೈದ್ಯರ ಭೇಟಿ. ಮತ್ತೆ ನೋಡಲು ಸಾಧ್ಯವಾಗಬಹುದು ಎಂಬ ಸಣ್ಣ ಆಸೆಯಿಂದ ಶತಪ್ರಯತ್ನ! ನಾಲ್ಕು ತಿಂಗಳ ಬಳಿಕ-ಇನ್ಯಾವ ಪ್ರಯತ್ನಗಳೂ ಫಲ ಕೊಡುವುದಿಲ್ಲ ಎಂಬುದು ಅರಿವಾಯಿತು. ಮುಂದೇನು ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತಿತ್ತು. ಆಗ ಪರಿಚಯಸ್ಥರೊಬ್ಬರು ‘ವೀರ ಸಾವರ್ಕರ್ ಬಗ್ಗೆ ಮಾತನಾಡಲು ಬಾ’ ಎಂದು ಆಹ್ವಾನವಿತ್ತರು. ಈಗ ಹೇಗೆ ಮಾತಾಡುವುದು, ಓದಲು ಸಾಧ್ಯವಿಲ್ಲ, ವಿಷಯ ಟಿಪ್ಪಣಿ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಯೋಚಿಸುತ್ತಿದ್ದಾಗಲೇ ಸಂಬಂಧಿಕರೊಬ್ಬರು, ‘ಬಂದ ಅವಕಾಶವನ್ನು ಬಿಡಬೇಡ, ನಾನು ಸಹಾಯ ಮಾಡುತ್ತೇನೆ’ ಎಂದರು. ಸಾವರ್ಕರರ ಜೀವನಚರಿತ್ರೆ, ಅವರ ಹೋರಾಟಗಾಥೆ, ಭಾಷಣಗಳು, ಪುಸ್ತಕಗಳ ಸಾರ ಇದೆಲ್ಲವನ್ನೂ ಅನಘಾ ಕೇಳಿ ಕೇಳಿ, ಮಿದುಳಿನಲ್ಲಿ ಭದ್ರವಾಗಿಸಿಕೊಂಡರು. ಎರಡೂವರೆ ಗಂಟೆಗಳ ಕಾರ್ಯಕ್ರಮದಲ್ಲಿ ನಿರ್ಗಳವಾಗಿ ಮಾತನಾಡಿದರು. ಕ್ರಮೇಣ ಬೇರೆ-ಬೇರೆ ಕಡೆ ಸಾವರ್ಕರ್ ಕುರಿತು ಉಪನ್ಯಾಸ ನೀಡತೊಡಗಿ ಸಾವರ್ಕರ್ ಅವರ ಬದುಕಿನಭಾಗವೇ ಆಗಿಬಿಟ್ಟಿದ್ದಾರೆ.

    ಮುಂದೆ, ಆಕಾಶವಾಣಿಗೆ ಗಣ್ಯರು/ಸಾಧಕರನ್ನು ಸಂದರ್ಶಿಸುವ ಅವಕಾಶ ಲಭಿಸಿತು. ಸಂದರ್ಶನ ನಡೆಸುವುದೆಂದರೆ ಸುಮ್ಮನೆ ಅಲ್ಲ. ಆ ವ್ಯಕ್ತಿಯ ಬಗ್ಗೆ, ಸಾಧನೆಗಳ ಬಗ್ಗೆ ತಿಳಿದುಕೊಂಡು, ಪ್ರಶ್ನೆಗಳನ್ನು ಕೇಳಬೇಕು. ಅದಕ್ಕಾಗಿ ದಿನದ ಹಲವು ಗಂಟೆ ತಯಾರಿಗೆ ವಿನಿಯೋಗಿಸತೊಡಗಿದ ಅನಘಾ, ಮಾತಿನಶೈಲಿ, ಸ್ವರಮಾಧುರ್ಯ, ಭಾಷೆಯ ಸೊಗಡಿನಿಂದ ಬಹುಬೇಗ ಆರ್​ಜೆ ಅನಘಾ ಆಗಿ ಖ್ಯಾತಿ ಗಳಿಸಿದರು. ಅದೊಮ್ಮೆ ಖ್ಯಾತ ಸಂಗೀತಗಾರ ಹೃದಯನಾಥ್ ಮಂಗೇಶ್ಕರ್​ರನ್ನು (ಭಾರತರತ್ನ ಲತಾ ಮಂಗೇಶ್ಕರ್​ರ ಕಿರಿಯ ಸೋದರ) ಸಂದರ್ಶಿಸಬೇಕಿತ್ತು. ಅಷ್ಟು ದೊಡ್ಡ ಸಂಗೀತಗಾರರನ್ನು ಹೇಗೆ ಸಂದರ್ಶಿಸಲಿ ಎಂದು ಅನಘಾ ಚಡಪಡಿಸಿದಾಗ ಆಕಾಶವಾಣಿಯ ಹಿರಿಯ ಅಧಿಕಾರಿಗಳು, ಸ್ನೇಹಿತರು ನೆರವಿಗೆ ಬಂದರು. ಹೃದಯನಾಥರೊಡನೆ ಎರಡೂವರೆ ಗಂಟೆಗಳ ಕಾಲ ದೀರ್ಘ, ಹೃದಯರ್ಸ³ ಸಂದರ್ಶನ. ಖುದ್ದು ಹೃದಯನಾಥರೇ, ‘ನಿನ್ನ ಮಾತುಗಳೇ ಸಂಗೀತದಂತಿವೆ’ ಎಂದು ಆಶೀರ್ವದಿಸಿದರು.

    ಈ ಮಧ್ಯೆ ಎಬಿಪಿ ಮಾಝಾ ವಾಹಿನಿ ಅಂಗವಿಕಲ ಸಾಧಕರನ್ನು ಸಂದರ್ಶಿಸಲು ಅನಘಾರನ್ನೇ ವಿಶೇಷ ಆಂಕರ್ ಆಗಿಸಿತು. 20 ಕಂತುಗಳ ಕಾರ್ಯಕ್ರಮದಲ್ಲಿ ಪ್ರತಿ ಬಾರಿ ವಿಶಿಷ್ಟ ಸಾಧಕರನ್ನು ಪರಿಚಯ ಮಾಡಿಕೊಟ್ಟ ಅನಘಾ, ಜೀವನೋತ್ಸಾಹ ಹೆಚ್ಚಿಸುವಂಥ ಮಾತುಗಳಿಂದ ಪ್ರೇರಣೆ ತುಂಬಿದರು. ಮರಾಠಿ ಖ್ಯಾತ ಕವಿಗಳ ನೂರಾರು ಕವಿತೆಗಳನ್ನು ಸುಶ್ರಾವ್ಯವಾಗಿ ಹೇಳುವ ಇವರು, ಸ್ವತಃ ಹತ್ತಾರು ಕವನಗಳನ್ನು ರಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದಾರೆ. ಮುಖ್ಯವಾಗಿ, ಪ್ರೇರಣಾದಾಯಿ ಮಾತುಗಳಿಂದ ನೊಂದವರಿಗೆ, ಸಂಕಷ್ಟದಲ್ಲಿ ಇರುವವರಿಗೆ ಮತ್ತೆ ಜೀವನಪ್ರೀತಿ ಮರಳಿಸುತ್ತಿದ್ದಾರೆ. ಅಂಧಮಕ್ಕಳ ಶಾಲೆಯಲ್ಲೊಮ್ಮೆ ಅನಘಾ ಉಪನ್ಯಾಸ ಮಾಡಿದ ಬಳಿಕ, ಬಾಲಕಿಯೊಬ್ಬಳು ಬಂದು-‘ನೀವು ಹೇಳಿದ್ದೆಲ್ಲ ಅರ್ಥ ಆಯಿತು. ಆ ಎಲ್ಲ ಸಂಗತಿಗಳು ‘ಕಾಣಿಸಿದವು’, ನಾನು ಖುಷಿಯಿಂದ ಬದುಕುತ್ತೇನೆ’ ಎಂದು ಹೇಳಿದಾಗ, ಎಲ್ಲರ ಕಣ್ಣಂಚು ಒದ್ದೆ.

    ಈಗಲೂ ಕೆಲ ಯೂಟ್ಯೂಬ್ ವಾಹಿನಿಗಳಿಗೆ, ಆಕಾಶವಾಣಿಗೆ ಸಾಧಕರನ್ನು ಸಂದರ್ಶಿಸುತ್ತಿದ್ದಾರೆ ಮೋಡಕ್. 25ನೇ ವಯಸ್ಸಲ್ಲಿ ಕಣ್ಣು ಕಳೆದುಕೊಂಡರೂ ಬದುಕನ್ನು ಹಳಿಯದೆ, ವಿಧಿಯನ್ನು ಶಪಿಸದೆ, ಕುಟುಂಬಸ್ಥರ ಮೇಲೆ ರೇಗದೆ, ಸಮಾಜವನ್ನು ದೂಷಿಸದೆ, ತಾನು ಅಳುತ್ತ ಕೂರದೆ ಸಕಾರಾತ್ಮಕವಾಗಿ ಜೀವನ ರೂಪಿಸಿಕೊಂಡಿದ್ದಲ್ಲದೆ, ಅಂಥ ಚಿಂತನೆಗಳನ್ನೇ ಸಮುದಾಯಕ್ಕೆ ಹಂಚುವ ಮೂಲಕ, ಒಳ್ಳೆಯತನವನ್ನು ಹರಡುವ ಕೆಲಸ ಮಾಡುತ್ತಿದ್ದಾರೆ. ತೊಂದರೆಗಳನ್ನು ಮೀರಿ ಬರುವ ಸಂಕಲ್ಪ ಮಾಡಿ, ವಾಸ್ತವವನ್ನು ಅರ್ಥಮಾಡಿಕೊಂಡು, ಅರಗಿಸಿಕೊಂಡರೆ ಬದುಕಿನ ಪಯಣದಲ್ಲಿ ಹೊಸದಾರಿಗಳು ತೆರೆದುಕೊಳ್ಳುತ್ತವೆ ಎಂಬುದಕ್ಕೆ ಅನಘಾ ಬದುಕು ಸಾಕ್ಷಿ. ಪತ್ರಿಕೋದ್ಯಮದಲ್ಲಿ ಎಂ.ಎ. ಪೂರ್ಣಗೊಳಿಸಿರುವ ಅವರು ಮುಂದೆ ಪಿಎಚ್​ಡಿ ಮಾಡುವ ಮತ್ತು ಇನ್ನಷ್ಟು ಸಾಧಕರನ್ನು ಸಂದರ್ಶಿಸಿ, ಅವರ ಜೀವನಸಂದೇಶ ಸಮಾಜಕ್ಕೆ ತಿಳಿಸುವ ಆಶಯ ಹೊಂದಿದ್ದಾರೆ. ಕೇಳುಗರ ಚಪ್ಪಾಳೆಯೇ ಅವರ ವಿಶ್ವಾಸವನ್ನು ಹೆಚ್ಚಿಸುತ್ತ ಬಂದಿದೆ.

    ‘ಇದೆಲ್ಲ ನನ್ನೊಬ್ಬಳಿಂದಲೇ ಮಾಡಲು ಸಾಧ್ಯವಾಗಿದೆ ಎಂದು ಖಂಡಿತವಾಗಿಯೂ ಹೇಳುವುದಿಲ್ಲ. ನಾನು ಎದ್ದು ನಿಲ್ಲಲು, ಜೀವನ್ಮುಖಿಯಾಗಲು, ಸಾಧನೆಯ ಮಾರ್ಗದಲ್ಲಿ ಸಾಗಲು, ನಿರಾಶೆ ಆವರಿಸಿಕೊಳ್ಳದಿರಲು ಕಾರಣ ನನ್ನ ಕುಟುಂಬಸ್ಥರು, ಸ್ನೇಹಿತರು, ಬಂಧು-ಬಳಗದವರು ಮತ್ತು ಹಿತೈಷಿಗಳು. ಮೂರೂವರೆ ವರ್ಷಗಳ ಕಾಲ ಮೌಶಿ (ಚಿಕ್ಕಮ್ಮ) ಸಾವರ್ಕರ್ ಬಗ್ಗೆ ಓದಿದ್ದನ್ನು ಕೇಳಿದ್ದೇನೆ, ಒಂದೊಂದೇ ಘಟನೆ, ಸಂದರ್ಭಗಳನ್ನು ಒಳಗೆ ಇಳಿಸಿಕೊಂಡಿದ್ದೇನೆ. ತೊಂದರೆಗಳು ತುಂಬ ಇದ್ದವು. ಅದನ್ನು ಮೀರಿ ಬರಲೇ ಬೇಕಿತ್ತು. ಈಗ ಅನಿಸುತ್ತಿದೆ, ಕಣ್ಣು ಇದ್ದಿದ್ದರೆ ಹೊರಗೆ ಮಾತ್ರ ನೋಡುತ್ತಿದ್ದೆ. ಕಣ್ಣಿಲ್ಲದೆ ಇರುವುದರಿಂದ ಆಂತರ್ಯದ ಶಕ್ತಿ, ಅಂತಃಕರಣದ ಶಕ್ತಿ ಗೊತ್ತಾಗಿದೆ. ನಮ್ಮ ದುಃಖವೇ ದೊಡ್ಡದಲ್ಲ. ಇದನ್ನು ಅರ್ಥಮಾಡಿಕೊಂಡು ಮುಂದೆಸಾಗಬೇಕು. ಬದುಕಿನೊಂದಿಗೆ ಸಂಘರ್ಷ ನಡೆಸದೆ ಪ್ರೀತಿಯಿಂದ ನಡೆಯಬೇಕಷ್ಟೇ, ಆಗ ನಾವಾಡುವ ಶಬ್ದಗಳಿಗೆ ಶಕ್ತಿ ಬರುತ್ತದೆ, ಅದು ಮತ್ತೊಬ್ಬರ ಹೃದಯ ತಟ್ಟುತ್ತದೆ, ಜೀವನವನ್ನು ಪರಿವರ್ತಿಸುತ್ತದೆ’ ಎನ್ನುವ ಅನಘಾ ಮುಖದ ಮೇಲೆ ಎಂದಿಗೂ ನಗು ನಲಿದಾಡುತ್ತಿರುತ್ತದೆ.

    ಸಮಾಜವನ್ನು ಅಕ್ಕರೆ, ಪ್ರೀತಿಯಿಂದ ಕಾಣುವುದರಿಂದಲೇ ಸಮಾಜವೂ ಅನಘಾರನ್ನು ಪ್ರೇರಣೆಯಿಂದ ನೋಡುತ್ತಿದೆ. ಕರೊನಾದ ನೈರಾಶ್ಯದಿಂದ ಅನೇಕರು ದಾರಿ ಕಾಣದೆ ಖಿನ್ನತೆಗೆ ಜಾರುತ್ತಿದ್ದಾರೆ. ಹೊಸ ದಾರಿಗಳನ್ನು ಆವಿಷ್ಕರಿಸಿ, ಮುಂದೆ ಸಾಗುವ ಶಕ್ತಿ ನಮ್ಮ ಆಂತರ್ಯದಿಂದಲೇ ದೊರೆಯುತ್ತದೆ, ಹೊರಗೆ ಎಷ್ಟು ಕತ್ತಲೆ ಆವರಿಸಿದರೇನು ಎಂಬ ಮಹತ್ತರ ಸಂದೇಶ ನೀಡಿದಂಥ ಅನಘಾರ ಬದುಕು ಪ್ರೇರಣೆಯ ಅಲೆ ಮೂಡಿಸಲಿ. ನಮ್ಮನ್ನೂ ನೈಜ ಬೆಳಕಿನತ್ತ ಕೊಂಡೊಯ್ಯಲಿ.

    ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts