More

  ಪದ್ಮಗಳು ಅರಳುವುದು ನಿಸ್ವಾರ್ಥದ ಉತ್ತುಂಗದಲೇ..

  ಇತ್ತೀಚಿನ ದಿನಗಳಲ್ಲಿ ತುಂಬ ಜನರ ಗೋಳೆಂದರೆ ಸಮಾಜದಲ್ಲಿ ರೋಲ್​ವಾಡೆಲ್​ಗಳ ಸಂಖ್ಯೆ ಕಡಿಮೆಯಾಗುತ್ತಿದೆ, ನಕಾರಾತ್ಮಕ ಮಾದರಿಗಳೇ ಎಲ್ಲೆಲ್ಲೂ ಕಾಣುತ್ತಿವೆ ಎಂಬುದು. ಇದು ನಿಜವೇ? ಶ್ರೇಷ್ಠ ಆದರ್ಶ, ಉದಾತ್ತ ವ್ಯಕ್ತಿತ್ವ, ಮೌಲ್ಯ, ಒಳ್ಳೆಯ ಮಾದರಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಏಕೆಂದರೆ, ಭರತಭೂಮಿಯಲ್ಲಿ ಉದಯವಾದ ಜೀವನಧರ್ಮವೇ ಅಷ್ಟು ಶ್ರೇಷ್ಠ ಮತ್ತು ಅಸಾಧಾರಣವಾದದ್ದು. ಇಲ್ಲಿ ಯಾವತ್ತಿಗೂ ಬರೀ ಸ್ವಂತಕ್ಕಾಗಿ ಬದುಕುವುದು ಶ್ರೇಷ್ಠ ಎನಿಸಿಕೊಂಡಿಲ್ಲ. ಇತರರಿಗಾಗಿ ಬದುಕುವುದರಲ್ಲಿಯೇ ಎಲ್ಲರ ಹಿತವಿದೆ ಎಂಬ ಸತ್ಯದ ಸಾಕ್ಷಾತ್ಕಾರ ಆಗಿದ್ದರಿಂದಲೇ ಉತ್ಕರ್ಷದ ಹೊಸ ಹೊಸ ಪಥಗಳು ತೆರೆದುಕೊಂಡಿವೆ. ಈ ಮಾನವೀಯ ಗುಣವೇ ನಾವಿರುವ ಭೂಮಿಯನ್ನು ವಾಸಿಸಲು ಇನ್ನಷ್ಟು ಯೋಗ್ಯವನ್ನಾಗಿ ಮಾಡುತ್ತದೆ. ಸಮಾಜಕ್ಕೆ ಕೊಡುವ ಶಕ್ತಿ ಇದ್ದರೂ ಸ್ವಾರ್ಥದ ಸಂಕೋಲೆಯಲ್ಲಿ ಸಿಲುಕಿ ಬದುಕಿನ ಆಟ ಮುಗಿಸಿದವರು ಅಷ್ಟೇ ಬೇಗ ಮರೆತುಹೋಗಿಬಿಡುತ್ತಾರೆ. ಮತ್ತೊಬ್ಬರ ಕಣ್ಣೀರು ಒರೆಸಿದವರು, ನಗು ಅರಳಿಸಿದವರು, ಪ್ರೀತಿ ಹಂಚಿದವರು, ಸಾಂತ್ವನ ಹೇಳಿದವರು, ಕೈಹಿಡಿದು ನಡೆಸಿದವರು, ಕಷ್ಟಕಾಲದಲ್ಲಿಯೂ ‘ನಾನಿದ್ದೇನೆ’ ಎಂಬ ಭರವಸೆ ತುಂಬಿದವರು, ಬದುಕು ಕಟ್ಟಿಕೊಟ್ಟವರು, ಹೀಗೆ ಮತ್ತೊಬ್ಬರ ಸಂಕಷ್ಟಗಳಿಗೆ ಸ್ಪಂದಿಸಿದವರೆಲ್ಲ ಭೂಮಿಯಲ್ಲೇ ದೈವತ್ವದ ದರ್ಶನ ಮಾಡಿಸಿಬಿಡುತ್ತಾರೆ. ಇವರ ಜೀವನದ ದರ್ಶನ ಮಾಡಿದರೂ ಸಾಕು ಅಧ್ಯಾತ್ಮ, ತತ್ತ್ವಶಾಸ್ತ್ರ ಏನೆಂಬುದು ಅರ್ಥವಾಗಿ ಹೋಗುತ್ತದೆ.

  ಸಂವೇದನೆಯ ಬಲದಿಂದಲೇ ಹೊಸಲೋಕ ಕಟ್ಟಿದ ಇವರಿಗೆಲ್ಲ ಏನಾದರೂ ವಿಶೇಷ ಶಕ್ತಿ ಸಿದ್ಧಿಸಿರುತ್ತಾ? ಅವರೆಲ್ಲ ನಮ್ಮ ಹಾಗೆಯೇ ಹುಲುಮಾನವರು ತಾನೇ… ಒಂದು ಶಕ್ತಿಯಂತೂ ವಿಶಿಷ್ಟವಾಗಿರುತ್ತದೆ. ಅದುವೇ ಹೃದಯವಂತಿಕೆ! ಬರೀ ನಮಗಾಗಿ ಬಾಳಿದರೆ ಜೀವನ ಸಾರ್ಥಕವಾಗುವುದಿಲ್ಲ, ಇತರರ ಅಭಿವೃದ್ಧಿಗೂ ಶ್ರಮಿಸಬೇಕು. ನಮ್ಮ ಸುತ್ತಮುತ್ತಲಿನವರ ನೋವು ಅದು ನಮ್ಮ ನೋವೇ; ಅವರ ಸಂತೋಷ, ಅದು ನಮ್ಮ ಸಂತಸವೂ ಎಂಬ ಸರಳಸೂತ್ರವನ್ನು ಜೀವನದಲ್ಲಿ ಅನುಷ್ಠಾನಕ್ಕೆ ತಂದು ಅಂತಃಕರಣದ ಲೋಕದಲ್ಲಿ ಎಷ್ಟು ಎತ್ತರಕ್ಕೆ ಏರಿಬಿಡುತ್ತಾರೆ ಎಂದರೆ; ಬದುಕಿದರೆ ಖಂಡಿತವಾಗಿಯೂ ಇವರಂತೆ ಬದುಕಿಬಿಡಬೇಕು ಎಂದೆನಿಸುವಷ್ಟು ಪ್ರೇರಣಾ ಪ್ರವಾಹವನ್ನು ಎದೆಯಂಗಳದಲ್ಲಿ ಹರಿಸಿಬಿಡುತ್ತಾರೆ. ಆದರೂ, ಕೆಲವರಿಗೆ ‘ರೋಲ್​ವಾಡೆಲ್’ಗಳು ಕಾಣುವುದಿಲ್ಲ ಎಂದರೆ ಅದು ನಕಾರಾತ್ಮಕತೆಯ ಸಮಸ್ಯೆ. ಬಹಳಷ್ಟು ಜನರಿಗೆ ಇವತ್ತು ಗೊಂದಲ ಇರುವುದು, ಸಂಕಟ ಆಗುತ್ತಿರುವುದು ಬದುಕು ಸುಮ್ಮನೇ ಸಾಗುತ್ತಿದೆ; ನಾವು ಏಕೆ ಬದುಕುತ್ತಿದ್ದೇವೆ ಎಂಬುದೇ ಗೊತ್ತಾಗುತ್ತಿಲ್ಲ ಎಂಬುದು. ಬಹುತೇಕ ಅಧ್ಯಾತ್ಮ ಸಾಧಕರ ಸಭೆಗಳನ್ನು ಗಮನಿಸಿದಾಗ ಇಲ್ಲಿ ಇಂಥದ್ದೇ ಪ್ರಶ್ನೆಗಳು ಮತ್ತೆ ಮತ್ತೆ ಕೇಳಿಬರುತ್ತವೆ. ‘ಒಳ್ಳೆಯ ಸಂಬಳ, ಹೆಂಡತಿ, ಮಕ್ಕಳು, ಮನೆ, ಕಾರು ಎಲ್ಲ ಇದೆ. ಆದರೂ ಮನಸ್ಸಿಗೆ ಸಮಾಧಾನ ಇಲ್ಲ. ಏಕೆ?’ ಎಂಬುದು. ಇದಕ್ಕೆ ಉತ್ತರ ಕ್ಲಿಷ್ಟವೇನಲ್ಲ. ನಮಗಾಗಿಯೇ ಶೇಖರಿಸುತ್ತ ಹೋದಂತೆ ಹೆಚ್ಚೆಚ್ಚು ಸ್ವಾರ್ಥಿಗಳಾಗುತ್ತೇವೆ. ಭೌತಿಕ ವಸ್ತುಗಳು ನಾಲ್ಕು ದಿನ ಖುಷಿ ಕೊಡಬಹುದಷ್ಟೇ. ಆಮೇಲೆ ಮನಸ್ಸು ಪ್ರಶ್ನೆ ಮಾಡಲು ಶುರುಮಾಡುತ್ತದೆ; ‘ಛೇ, ಈ ವಾಹನ ಕೊಳ್ಳಲು ಇಷ್ಟು ವರ್ಷ ದುಡಿಯಬೇಕಿತ್ತಾ, ಈ ಮನೆ ಕೊಳ್ಳುವುದೇ ಜೀವನದ ಗುರಿಯಾಗಿತ್ತಾ?’ ಅಂತ. ಆಗ ಬಹುತೇಕರು ತಮ್ಮ ಮನಸ್ಸಿಗೆ ತಾವೇ ಸಮಜಾಯಿಷಿ ಕೊಟ್ಟುಕೊಂಡುಬಿಡುತ್ತಾರೆ. ‘ನಾನೂ ನಾಲ್ಕು ಜನರಂತೆ ಬಾಳುವುದು ಬೇಡ್ವಾ? ಜೀವನವನ್ನು ಅನುಭವಿಸುವುದು ಯಾವಾಗ?’ ಅಂತ. ಮತ್ತೆ ಸ್ವಲ್ಪ ಸಮಯದ ಬಳಿಕ ಮನಸು ಪ್ರಶ್ನೆ ಮಾಡದೇ ಇರೋದಿಲ್ಲ. ಶೇಖರಿಸುವ ಪ್ರವೃತ್ತಿಗೆ ಜೀವನದ ಒಂದು ಹಂತದಲ್ಲಾದರೂ ವಿರಾಮ ಹಾಕಿ, ಸ್ಪಂದಿಸುವ/ನೀಡುವ ಮನೋವೈಶಾಲ್ಯ ಬೆಳೆಸಿಕೊಂಡರೆ ಜೀವನದ ನಿಜವಾದ ಸವಿ ಅರ್ಥವಾಗುತ್ತದೆ.

  ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸಾಕಷ್ಟು ದಾರಿಗಳಿವೆ. ಆ ದಾರಿಯಲ್ಲಿ ಕ್ರಮಿಸಲು ನಾವು ಮನಸು ಮಾಡಬೇಕಷ್ಟೇ. ಎಲ್ಲರೂ ಸಾಧಕರಾಗಲು ಸಾಧ್ಯವಾಗದಿದ್ದರೂ, ಸಾರ್ಥಕ ಭಾವದ ಒಡೆಯರಾಗಲಿಕ್ಕಂತೂ ಖಂಡಿತ ಸಾಧ್ಯವಿದೆ. ಭೌತಿಕ ಸಾಧನೆಗಳ ವಿಷಯದಲ್ಲಿ ತುಂಬ ಎತ್ತರಕ್ಕೇರಿದವರೂ; ಅದೆಲ್ಲವನ್ನೂ ತೊರೆದು ತಮಗೆ ಸಮಾಧಾನ ನೀಡುವಂಥ, ಇತರರಿಗೆ ಆದರ್ಶವಾಗುವಂಥ ಬಾಳು ರೂಪಿಸಿಕೊಂಡಿದ್ದಿದೆ. ಪರಿಣಾಮ, ಪಥಬದಲಾವಣೆಯಿಂದ ವೈಯಕ್ತಿಕ ನೆಮ್ಮದಿಯೂ ದೊರೆತು, ಸಮಷ್ಟಿಗೂ ಒಂದಿಷ್ಟು ಬಲ ಸಿಕ್ಕಂತಾಗುತ್ತದೆ. ಶ್ರೀರಾಮನ ಆದರ್ಶ, ಶ್ರೀಕೃಷ್ಣನ ಅಂತಃಕರಣ, ಭರತನ ತ್ಯಾಗ, ಶಬರಿಯ ಭಕ್ತಿ ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಸ್ಥಾನ ಪಡೆದಿರುವುದೇ; ಆ ಮಹಾಮಹಿಮರ ನಿಸ್ವಾರ್ಥ ಭಾವಪ್ರಪಂಚದಿಂದ. ಅಷ್ಟಕ್ಕೂ, ಸ್ವಾರ್ಥಿಯಾಗಿ ನಾಲ್ಕು ದಿನ ಮೆರೆಯುವುದಕ್ಕಿಂತ, ಸ್ಪಂದನಶೀಲರಾಗಿ ಸಮಾಜದ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುವುದು ಶ್ರೇಷ್ಠ ಅಲ್ಲವೇ?

  ಕೆಲ ದಿನಗಳಿಂದ ಜನಸಾಮಾನ್ಯರ ಚರ್ಚೆಯಲ್ಲಿ, ಸಾಮಾಜಿಕ ಜಾಲತಾಣಗಳ ಗೋಡೆಗಳಲ್ಲಿ ಆಹ್ಲಾದಕರ ವಿಷಯದ ಕಲರವ. ಪದ್ಮ ಪುರಸ್ಕೃತರ ಸಾಧನೆ, ಸರಳತೆ, ಮುಗ್ಧತೆ, ಶ್ರೇಷ್ಠತೆ ಕಂಡು ಅಸಂಖ್ಯ ಜನ ಬೆರಗಾಗಿದ್ದಾರೆ. ತಮ್ಮ ಕುಟುಂಬದ ಸದಸ್ಯರಾರೋ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂಬಂತೆ ಸಂಭ್ರಮಿಸಿದ್ದಾರೆ. ಅದೆಂಥ ಆಪ್ತಭಾವ! ಸಾಧಕರ ಸಾಧನಾಲೋಕವನ್ನು, ಅದನ್ನು ಸಾಧಿಸಿದ ಪರಿಯನ್ನು, ಆ ಬಳಿಕವೂ ಅಹಂ ಸುಳಿಯಕೊಡದೆ ಉಳಿಸಿಕೊಂಡ ಶುದ್ಧ ಮುಗ್ಧತೆಯನ್ನು ಕಂಡು ವಿಸ್ಮಿತರಾಗಿದ್ದಾರೆ. ಪ್ರಶಸ್ತಿ ಸ್ವೀಕಾರ ಕ್ಷಣಗಳ ವಿಡಿಯೋ ದೃಶ್ಯಗಳನ್ನು ನೋಡಿ ಆನಂದದಿಂದ ಕಣ್ಣೀರು ಸುರಿಸಿದವರು; ‘ಬದುಕಿದ್ರೆ ಹೀಗೆ ಬದುಕಬೇಕು ನೋಡ್ರಿ!’ ಎಂದು ಉದ್ಗರಿಸುತ್ತಿದ್ದಾರೆ. ಈ ಮಾತು ಹೃದಯದಿಂದ ಹೊಮ್ಮಬೇಕಾದರೆ ಎದುರಿನವರು ತಪಸ್ಸಿನಂತೆ ಜೀವನವನ್ನು ನಡೆಸಿರುತ್ತಾರೆ, ಸಮಾಜದ ನೋವುಗಳನ್ನು ತಮ್ಮದೇ ನೋವುಗಳೆಂದು ಸ್ವೀಕರಿಸಿ, ಅವುಗಳಿಗೆ ಮದ್ದು ಎರೆದಿರುತ್ತಾರೆ. ಹೀಗೆ ಅವರ ಕೆಲಸದಲ್ಲೇ ಮಾನವೀಯತೆಯ ಸೌಂದರ್ಯ ವನ್ನೂ, ದೈವತ್ವದ ಎತ್ತರವನ್ನೂ ಕಂಡು ನಿಸ್ವಾರ್ಥದ ಲೋಕವನ್ನು ವಿಸ್ತರಿಸುತ್ತಾರಲ್ಲ, ಅದಕ್ಕೆಂದೇ ಅವರು ಎಲ್ಲರಿಗೂ ಹತ್ತಿರವಾಗುತ್ತಾರೆ. ದೇಶದ ನಾಗರಿಕ ಗೌರವ ಸಮ್ಮಾನದ ಪುರಸ್ಕಾರಗಳು ತೆರೆಮರೆಯ ಸಾಧಕರಿಗೆ ಅರಸಿಕೊಂಡು ಬಂದಾಗ, ಅವರ ಮುಖೇನ ಸಮಾಜದ ಅಂತಃಸತ್ವ ಪ್ರಕಟಗೊಳ್ಳುತ್ತದೆ. ಈ ಜಗತ್ತಿನಲ್ಲಿ ಒಳ್ಳೆಯತನವೇ ಹಾಸುಹೊಕ್ಕಾಗಿದೆ ಎಂಬುದು ಮನದಟ್ಟಾಗುತ್ತದೆ, ಸೇವೆಯ ಆದರ್ಶದ ಮಹೋನ್ನತೆಯೂ ಪುಳಕಗೊಳಿಸುತ್ತದೆ. ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯೂ ತೆರೆಮರೆಯ ಹಲವು ಸಾಧಕರಿಗೆ ಸಂದಿರುವುದು ವಿಶೇಷ. ಯಾದಗರಿ ನಗರಸಭೆಯಲ್ಲಿ ಎರಡೂವರೆ ದಶಕದಿಂದ ಪೌರ ಕಾರ್ವಿುಕರಾಗಿರುವ ರತ್ನಮ್ಮ ಬಬಲಾದ ಅವರಿಗೆ ಪ್ರಶಸ್ತಿ ಘೋಷಣೆಯಾಗಿ, ಜನ ಅವರನ್ನು ಅಭಿನಂದಿಸಲು ಬಂದಾಗ, ಆ ತಾಯಿ ಮುಗ್ಧತೆಯಿಂದ ‘ನನಗೇನ್ ಆಗ್ಯದ, ಇಷ್ಟ ಜನ್ ಯಾಕ್ ಬರಲಿಕತ್ತಾರ?’ ಅಂತ ಪ್ರಶ್ನಿಸಿದರು. ಸ್ವಚ್ಛತೆ ಎಂಬುದು ದೊಡ್ಡ ಮೌಲ್ಯ. ಆದರೆ, ಅದು ಸಣ್ಣ ಕೆಲಸ ಎಂಬ ಭಾವನೆ ಹಲವರಲ್ಲಿದೆ. ಚಳಿ, ಮಳೆ, ಬಿಸಿಲಲ್ಲೂ ಕಾಯಕಶ್ರದ್ಧೆ ತೋರಿದ ಈ ರತ್ನಮ್ಮ ಬರೀ ರಸ್ತೆಯ ಕಸ ಗುಡಿಸಿಲ್ಲ, ಮನಸ್ಸಿನ ಕೊಳೆಯನ್ನೂ ತೊಳೆದಿದ್ದಾರೆ.

  ಅಬ್ಬಾ! ಭಾರತಮಾತೆಯ ಪದತಲದಲ್ಲಿ ಎಂಥ ಶ್ರೇಷ್ಠ ಪದ್ಮಗಳು! ಕಿತ್ತಳೆ ಮಾರಿದ ಹಣದಲ್ಲಿ ಶಾಲೆ ಕಟ್ಟಿ ಅಕ್ಷರದ ಬೆಳಕನ್ನು ಹರಡುತ್ತಿರುವ ಹರೆಕಳದ ಹಾಜಬ್ಬ ಶಾಲೆ ಓದಿದವರಲ್ಲ. ‘ನನಗೇ ಸಿಗದೆ ಇದ್ದದ್ದು, ಬೇರೆಯವರಿಗೆ ದೊರೆಯಲಿ ಅಂತ ಏಕೆ ಹೋರಾಡಬೇಕು?’ ಅಂತ ಅವರು ಯೋಚಿಸಿದ್ದರೆ… ಅದೆಷ್ಟು ಮಕ್ಕಳು ಮತ್ತೆ ಅಕ್ಷರಲೋಕ ಕಾಣದೆ ಇರುತ್ತಿದ್ದರೋ? ‘ನಾನು ಓದದಿದ್ದರೇನಂತೆ, ನನ್ನ ಗ್ರಾಮದ ಮಕ್ಕಳಾದರೂ ಓದಲಿ’ ಅಂತ ಸಂಕಲ್ಪಿಸಿದರಲ್ಲ ಆ ರೋಚಕ ಪಯಣವೇ ಅವರನ್ನು ಅಕ್ಷರಸಂತನನ್ನಾಗಿಸಿತು. ಗಿಡಗಳನ್ನು ಮಕ್ಕಳಂತೇ ಪೋಷಿಸಿರುವ ವೃಕ್ಷಮಾತೆ ತುಳಸಿ ಗೌಡರ ಮುಗ್ಧತೆಗೆ ಪ್ರಧಾನಿ, ರಾಷ್ಟ್ರಪತಿಯೇ ಬೆರಗಾದರು. ಆ ತಾಯಿ ನೆಟ್ಟಿರುವ ಗಿಡಗಳು ಕೂಡ ಎಷ್ಟು ಸಂಭ್ರಮಿಸಿವೆಯೋ… ಮಾತಾ ಮಂಜಮ್ಮ ಜೋಗತಿಯವರಂತೂ ರಾಷ್ಟ್ರಪತಿಗಳಿಗೇ ದೃಷ್ಟಿ ತೆಗೆದು ಬಿಟ್ಟರು! ಹೌದು, ಎಷ್ಟೋ ಜನರಿಗೆ ಒಳ್ಳೆಯದನ್ನು ನೋಡಲಾಗುವುದಿಲ್ಲ, ಸಹಿಸಲಾಗುವುದಿಲ್ಲ. ಅದಕ್ಕಾಗಿ ಜೋಗತಿಯಂಥವರು ಆಗಾಗ ದೃಷ್ಟಿ ನಿವಾಳಿಸಿ ತೆಗೆಯುತ್ತಿರಬೇಕು! ಹಾಜಬ್ಬರ ಗಾಯಗೊಂಡ ಕೈಗೆ ಪ್ರಧಾನಿ ರ್ಸ³ಸಿದಾಗ ಅವರಿಗೆ ಅದೆಷ್ಟು ಪುಳಕ! 25 ಸಾವಿರ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಅಯೋಧ್ಯೆಯ ಸೈಕಲ್ ಮೆಕ್ಯಾನಿಕ್ ಶರೀಫ್ ಚಾಚಾ (ಮೊಹಮ್ಮದ್ ಶರೀಫ್) ಈ ಸಂವೇದನೆಯ ಕೆಲಸಕ್ಕಾಗಿ ರಾಷ್ಟ್ರಪತಿ ಭವನ ಪ್ರವೇಶಿಸಿ, ಗೌರವ ಸ್ವೀಕರಿಸುವ ಗಳಿಗೆ ಬರುತ್ತದೆ ಅಂತ ಅಂದುಕೊಂಡಿರಲಿಲ್ಲ.

  ‘ಇಡೀ ಪದ್ಮ ಪುರಸ್ಕೃತರನ್ನು ರಾಷ್ಟ್ರಪತಿ ಭವನದ ಸಿಬ್ಬಂದಿ ಆರತಿ ಬೆಳಗಿದಾಗ, ಅಲ್ಲಿ ಇಡೀ ದೇಶದ ಪರಂಪರೆಗೆ, ಸಂಸ್ಕೃತಿಗೆ ಆರತಿ ಬೆಳಗಿದಂತಿತ್ತು’ ಎಂದು ವೇದ ವಿದ್ವಾಂಸ ಡಾ.ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ ಹೇಳಿದಾಗ, ಅಲ್ಲೆಲ್ಲ ದರ್ಶನವಾಗುತ್ತಿದದ್ದು ಭಾರತೀಯ ಜೀವನಧರ್ಮದ್ದೇ. ಎಲ್ಲರಿಗಾಗಿ ಬದುಕಬೇಕು ಎಂಬ ಉದಾತ್ತ ಉದ್ದೇಶವೇ. ಇಷ್ಟೆಲ್ಲ ದೀಪಗಳು ನಮ್ಮ ನಡುವೆ ಇದ್ದರೂ, ಬೆಳಕಿಗಾಗಿ ಹುಡುಕಾಟ ಬೇಕೆ? ಒಳಕಣ್ಣು, ಹೊರಕಣ್ಣು ತೆರೆದು ನೋಡೋಣ. ಆಗಲೇ, ಇಂಥ ಸಾಧಕರೇ ನಿಜವಾಗಿಯೂ ಸಮಾಜದಲ್ಲಿ ದೊಡ್ಡವರು, ಅವರೇ ದೇಶದ ಆಸ್ತಿ ಎಂಬುದು ಅರಿವಾಗುವ ಜತೆಗೆ ಅವರ ಬದುಕಿನಪಯಣದ ಪ್ರೇರಣೆಯ ಸಣ್ಣ ಎಳೆಯಾದರೂ ನಮ್ಮನ್ನು ಆವರಿಸಿಕೊಳ್ಳಲಿ. ಆಗ, ಸ್ವಾರ್ಥದ ಕೊಳೆ ತೊಳೆದು ಬದುಕು ಚೆಂದವಾಗುತ್ತದೆ, ಸಮಾಜ ಕೂಡ! ಇಂಥ ನಿಸ್ವಾರ್ಥದ ಪದ್ಮಗಳು ನಮ್ಮ ಹೃದಯದಲ್ಲೂ ಅರಳುವಂತಾಗಲಿ; ಅದರ ಪರಿಮಳ ಎಲ್ಲೆಡೆ ವ್ಯಾಪಿಸಿಕೊಳ್ಳಲಿ.

  (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts