ಜಾರಕಿಹೊಳಿ ಸಾಹುಕಾರರಿಗೆ ಮೋಸ ಮಾಡಲ್ಲ

ಬೆಳಗಾವಿ :  ಸಾಹುಕಾರ ರಮೇಶ ಜಾರಕಿಹೊಳಿ ಅವರು ವಿಧಾನಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ.ಅವರ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡುವುದಿಲ್ಲ. ನನ್ನ ಹಣೆಬರಹದಲ್ಲಿ ಎಂಟೇ ತಿಂಗಳು ಶಾಸಕನಾಗಿರುವುದು ಎಂದು ಬರೆದಿದ್ದರೆ ಅದಕ್ಕೇನೂ ಮಾಡುವಂತಿಲ್ಲ. ಅನಿವಾರ್ಯ ಪರಿಸ್ಥಿತಿ ಬಂದರೆ ರಾಜೀನಾಮೆ ಕೊಟ್ಟು ಬಿಡುತ್ತೇನೆ.

ಇದು ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ ಕುಮಠಳ್ಳಿ ತಮ್ಮ ಆಪ್ತರ ಮುಂದೆ ದೂರವಾಣಿ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.

ನಾನು ಶಾಸಕನಾಗಿ ಆಯ್ಕೆಯಾಗುತ್ತೇನೆ ಅಂದುಕೊಂಡಿರಲಿಲ್ಲ. ಸಾಹುಕಾರ ರಮೇಶ ಜಾರಕಿಹೊಳಿ ಮುಂದಾಳತ್ವ ವಹಿಸಿಕೊಂಡು 48 ಹಳ್ಳಿಗಳಲ್ಲಿ ಓಡಾಡಿ ನನ್ನನ್ನು ಗೆಲ್ಲಿಸಿದ್ದಾರೆ. ಅಂತಹ ವ್ಯಕ್ತಿಗೆ ಮೋಸ ಮಾಡಿ ನಾನು ಸಾಧಿಸುವುದು ಅಷ್ಟೇ ಇದೆ. ಅನಿವಾರ್ಯ ಪರಿಸ್ಥಿತಿ ಉಂಟಾದರೆ ರಾಜೀನಾಮೆ ಕೊಡುತ್ತೇನೆಯೇ ಹೊರತು ಸಾಹುಕರರಿಗೆ ಮೋಸ ಮಾಡುವುದಿಲ್ಲ. ಸಂಸದರು, ಸಚಿವರು, ಶಾಸಕರು ಸೇರಿದಂತೆ ಸಾಕಷ್ಟು ಜನ ನಮ್ಮ ಜತೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಅವರಿಂದ ದೂರವಾದರೆ ಕ್ಷೇತ್ರದ ಜನರು, ಗೆಲ್ಲಿಸಿದ ಸಾಹುಕಾರನಿಗೆ ಮೋಸ ಮಾಡಿ ಬಂದಿದ್ದಾನೆ ಎಂದು ಮಾತನಾಡುತ್ತಾರೆ ಎಂದು ಅವರು ದೂರವಾಣಿ ಸಂಭಾಷಣೆಯಲ್ಲಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಒಂದು ವೇಳೆ ಸಮಸ್ಯೆ ಬಗೆಹರಿದು ನಾನು ವಾಪಸ್ ಬಂದರೂ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಯಾವುದೇ ಕೆಲಸಗಳು ಆಗುವುದಿಲ್ಲ. ನನಗೆ ಮಂತ್ರಿ ಸ್ಥಾನ ಬೇಡ, ಮುಳುಗಡೆ ಮತ್ತು ಸವಳು ಜವಳು ಸಮಸ್ಯೆ ಸರಿ ಆಗಬೇಕು ಅನ್ನುವ ಬೇಡಿಕೆ ಇಡುತ್ತೇನೆ ಎಂದು ಅವರು ಹೇಳಿದ್ದಾರೆ.

ಕಳೆದ ಒಂದು ವಾರದಿಂದ ಮೈಗ್ರೇನ್‌ನಿಂದ ಬಳಲುತ್ತಿದ್ದೇನೆ.ಯಾರೂ ಕೇಳಿದರೂ ಸರಿ, ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ ಎಂದು ಶಾಸಕ ಮಹೇಶ ಹೇಳಿಕೊಂಡಿದ್ದಾರೆ.

ರಮೇಶ ಜಾರಕಿಹೊಳಿ ಅವರು ದೊಡ್ಡ ಹಂತದಲ್ಲಿ ಒಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಯಾವುದೇ ಸಂದರ್ಭದಲ್ಲಿ ಇದು ಸ್ಫೋಟಗೊಳ್ಳಬಹುದು. ಅದರಿಂದ ನಮಗೆಲ್ಲ ಚಲೋ ಆಗಬಹುದು ಅಥವಾ ಕೆಟ್ಟದ್ದೂ ಆಗಬಹುದು. ಎಲ್ಲವೂ ಈಗ ಒಂದು ಹಂತಕ್ಕೆ ಬಂದಿದೆ. ಶೀಘ್ರ ಕ್ಷೇತ್ರಕ್ಕೆ ಬಂದು ಜನರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.