ಮುಂಬೈನ ಪ್ರತಿಷ್ಠಿತ ಬಾಂದ್ರಾ-ಕುರ್ಲಾ ಬಡಾವಣೆಯಲ್ಲಿ ಭೂಮಿ ಬೆಲೆ ಕೇಳಿದರೆ ಹೌಹಾರುತ್ತೀರಾ! ಎಷ್ಟಿದೆ ಬೆಲೆ ಗೊತ್ತಾ!?

ಮುಂಬೈ: ಮುಂಬೈ ಎಂಬ ಮಾಯಾನಗರಿ ಎಂಥವರನ್ನೂ ತನ್ನತ್ತ ಸೆಳೆದು, ತಮ್ಮನ್ನು ತಾವು ಪೋಷಿಸಿಕೊಳ್ಳಲು ಪೂರಕವಾದ ವಾತಾವರಣವನ್ನು ಕಟ್ಟಿಕೊಡುತ್ತದೆ ಎಂಬ ಮಾತು ಎಲ್ಲರಿಗೂ ತಿಳಿದಿರುವಂಥದ್ದೇ. ಈ ವಾತಾವರಣದಲ್ಲಿ ಬೆರೆತು ಔನತ್ಯ ಸಾಧಿಸಲು ಒಂದಷ್ಟು ಅದೃಷ್ಟದ ಬೆಂಬಲವೂ ಬೇಕು ಎಂಬುದು ಸುಳ್ಳಲ್ಲ. ಜನರ ಈ ನಂಬಿಕೆಯಿಂದಾಗಿ ಭಾರತದ ವಾಣಿಜ್ಯ ರಾಜಧಾನಿಯಲ್ಲಿ ಭೂಮಿಗೆ ಬೆಲೆಬಾಳುವ ಪ್ಲಾಟಿನಂ ಲೋಹಕ್ಕಿಂತಲೂ ಹೆಚ್ಚಿನ ಬೆಲೆ ಇದೆ ಎನ್ನುವುದು ಅತಿಶಯೋಕ್ತಿಯಲ್ಲ. ಆದರೀ ಈ ಬೆಲೆ ಎಕರೆಗೆ ಹತ್ತಿರತ್ತಿರ ಸಾವಿರ ಕೋಟಿ ರೂಪಾಯಿ ಇದೆ ಎಂದಾಗ ಹೌದಾ…! ಎಂದು ಹುಬ್ಬೇರಿಸುವವರೇ ಹೆಚ್ಚು.

ಇದು ವಾಸ್ತವದ ಮಾತು. ಬಾಂದ್ರ-ಕುರ್ಲಾ ಎಂಬ ಬೆಡಗಿನ ನಗರಿಯಲ್ಲೇ ಪ್ರತಿಷ್ಠಿತರಲ್ಲೇ ಪ್ರತಿಷ್ಠಿತವಾದ ಬಡಾವಣೆ. ಇಲ್ಲಿ ಲಭ್ಯವಿರುವ 3 ಎಕರೆ ಭೂಮಿಗೆ 2,238 ಕೋಟಿ ರೂಪಾಯಿ ಕೊಡುವುದಾಗಿ ವಿದೇಶಿ ಸಂಸ್ಥೆಯೊಂದು ಬಿಡ್​ ಸಲ್ಲಿಸಿದೆ! ಇದರರ್ಥ ಎಕರೆಗೆ 745 ಕೋಟಿ ರೂಪಾಯಿ ಕೊಡಲು ಸಿದ್ಧ ಎಂದು ಆ ಸಂಸ್ಥೆ ಹೇಳಿದೆ!

ಎಲ್ಲಿದೆ ಭೂಮಿ? ಬಿಡ್​ ಸಲ್ಲಿಸಿರುವುದು ಯಾರು?
ಬಾಂದ್ರಾ-ಕುರ್ಲಾ ಸಮುಚ್ಚಯದ ವ್ಯಾಪ್ತಿಯಲ್ಲಿ ಈ 3 ಎಕರೆ ಭೂಮಿ ಇದೆ. ಅಕ್ಕಪಕ್ಕದಲ್ಲಿ ಜಿಯೋ ಗಾರ್ಡನ್​ ಸೇರಿ ಇನ್ನೂ ಎರಡು ಪ್ರತಿಷ್ಠಿತ ಸಂಸ್ಥೆಗಳು ಇವೆ. ಈ ಭೂಮಿಯನ್ನು ಮಾರಾಟಕ್ಕೆ ಇಟ್ಟು ಹಲವು ತಿಂಗಳು ಕಳೆದಿವೆ. ಆದರೆ, ಇದನ್ನು ಖರೀದಿಸಲು ಇದುವರೆಗೂ ಯಾರೊಬ್ಬರೂ ಮುಂದಾಗಿರಲಿಲ್ಲ. ಪ್ರತಿಷ್ಠಿತ ಪ್ರದೇಶದಲ್ಲಿ ಕಚೇರಿಯನ್ನು ಹೊಂದುವ ಬಯಕೆಯಲ್ಲಿ ಜಪಾನ್​ನ ಸುಮಿಟೊಮೊ ಕಂಪನಿಗಳ ಸಮೂಹ ಈ ಭೂಮಿಯನ್ನು ಖರೀದಿಸಲು ನಿರ್ಧರಿಸಿದೆ. ಇದಕ್ಕಾಗಿ ಅದು 2,238 ಕೋಟಿ ರೂಪಾಯಿಯ ಬಿಡ್​ ಸಲ್ಲಿಸಿದೆ.

ಸುಮಿಟೊಮೊ ರಿಯಲ್​ ಎಸ್ಟೇಟ್​ ವ್ಯವಹಾರ ನಡೆಸುತ್ತಿರುವ ಕಂಪನಿಯಾಗಿದೆ. ಇದೊಂದು ಬಹುರಾಷ್ಟ್ರೀಯ ಕಂಪನಿಯಾಗಿದೆ.ಕಚೇರಿ ಸ್ಥಳಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಅದು ಈ ಭೂಮಿಯನ್ನು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

ಈ ಬಿಡ್​ ಅನ್ನು ಇನ್ನೂ ಪರಿಶೀಲಿಸಲಾಗುತ್ತಿದೆ. ಈ ಪ್ರದೇಶದಲ್ಲಿ 10 ಲಕ್ಷ ಚದರಡಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಫ್ಲೋರ್​ ಸ್ಪೇಸ್​ ಇಂಡೆಕ್ಸ್​ (ಎಫ್​ಎಸ್​ಐ) ಅನ್ನು ನಿಗದಿಪಡಿಸಲಾಗಿದೆ ಎಂದು ಎಂಎಂಆರ್​ಡಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲ ಬೆಲೆ ಚದರ ಮೀಟರ್​ಗೆ 3.44 ಲಕ್ಷ ರೂ.
ಬಾಂದ್ರ-ಕುರ್ಲಾ ಬಡಾವಣೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಮಾರ್ಗದರ್ಶಿ ಬೆಲೆಯ ಪ್ರಕಾರ ಪ್ರತಿ ಚದರ ಮೀಟರ್​ಗೆ 3.44 ಲಕ್ಷ ರೂ. ಇದೆ. ಮುಂಬೈ ಮೆಟ್ರೋಪಾಲಿಟನ್​ ರೀಜನ್​ ಡೆವೆಲಪ್​ಮೆಂಟ್​ ಅಥಾರಿಟಿ (ಎಂಎಂಆರ್​ಡಿಎ) ಈ ಪ್ರದೇಶದ ಉಸ್ತುವಾರಿ ಹೊಂದಿದೆ. 2010ರಲ್ಲಿ ಈ ಪ್ರದೇಶದ ವಾಡ್ಲಾದಲ್ಲಿ 6.2 ಎಕರೆ ಭೂಮಿಯನ್ನು ಖರೀದಿಸಲು ನಿರ್ಧರಿಸಿತ್ತು. ಇದಕ್ಕಾಗಿ ಅದು 4,050 ಕೋಟಿ ರೂಪಾಯಿ ಬಿಡ್​ ಸಲ್ಲಿಸಿತ್ತು. ಇದರರ್ಥದಲ್ಲಿ ಆಗ ಎಕರೆಗೆ 653 ಕೋಟಿ ರೂಪಾಯಿ ಆಗುತ್ತಿತ್ತು. ಈ ಭೂಮಿಯನ್ನು ಖರೀದಿಸಿದ್ದ ಲೋಧಾ ಸಮೂಹ 5 ವರ್ಷಗಳ ಅವಧಿಯಲ್ಲಿ ಕಂತಿನ ಆಧಾರದಲ್ಲಿ ಈ ಮೊತ್ತವನ್ನು ಪಾವತಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *