ಜಪಾನ್ ರಾಜ, ಸಹಚರರು ಅರೆಸ್ಟ್

ಬೆಂಗಳೂರು: ಪೊಲೀಸ್ ತನಿಖಾ ವಿಧಾನ ತಿಳಿದುಕೊಂಡು ಗ್ಯಾಂಗ್ ಕಟ್ಟಿಕೊಂಡು ಮನೆ ಕಳ್ಳತನ ಮಾಡುತ್ತಿದ್ದ ಪೊಲೀಸ್ ಬಾತ್ಮೀದಾರ ಮತ್ತು ಆತನ ತಂಡ ಪೊಲೀಸ್ ಬಲೆಗೆ ಬಿದ್ದಿದೆ.

ಜೆ.ಪಿ. ನಗರದ ಬಿಳೇಕಳ್ಳಿಯ ರಾಜ ಆಲಿಯಾಸ್ ಜಪಾನ್ ರಾಜ (40), ನಾಗರಾಜ ಆಲಿಯಾಸ್ ಮತ್ತಿನಾಗ (24) ಮತ್ತು ಮಲ್ಲೇಶ್ವರದ ಕಿರಣ್​ಕುಮಾರ್ (26) ಬಂಧಿತರು. 1.2 ಕೋಟಿ ರೂ. ಮೌಲ್ಯದ 4 ಕೆಜಿ 77 ಗ್ರಾಂ ಚಿನ್ನ, 1 ಕೆ.ಜಿ. 300 ಗ್ರಾಂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದು, 44 ಪ್ರಕರಣಗಳು ಬೆಳಕಿಗೆ ಬಂದಿವೆ. ಕದ್ದ ಚಿನ್ನಾಭರಣ ಮಾರಾಟಕ್ಕೆ ಸಹಾಯ ಮಾಡುತ್ತಿದ್ದ ಜಯನಗರದ ನೀಲಮ್ಮ (70) ಮತ್ತು ದೇವರಚಿಕ್ಕನಹಳ್ಳಿಯ ಜ್ಯುವೆಲರ್ಸ್ ಅಂಗಡಿ ಮಾಲೀಕ ಸೈಯದ್ ಫಾರೂಕ್(47) ಎಂಬಾತನನ್ನು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಪಾನ್ ರಾಜ ಪೊಲೀಸರಿಗೆ ಬಾತ್ಮೀದಾರನಾಗಿದ್ದ. ಐವರು ಪತ್ನಿಯರನ್ನು ಹೊಂದಿದ್ದ ಈತ ಐಷಾರಾಮಿ ಜೀವನ, ಮೋಜು ಮಸ್ತಿ ಜತೆಗೆ ಯುವತಿಯರ ಶೋಕಿಗಾಗಿ ಕಳ್ಳತನಕ್ಕೆ ಇಳಿದಿದ್ದ. ಆಟೋ ಚಾಲಕನಾಗಿದ್ದ ಈತ, 17ನೇ ವರ್ಷಕ್ಕೆ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. 2007ರಲ್ಲಿ ನೀಲಮ್ಮ ಆಟೋ ಖರೀದಿಸಿ ಬಾಡಿಗೆಗೆ ಜಪಾನ್ ರಾಜನಿಗೆ ಕೊಟ್ಟಿದ್ದರು. ಈತ ಬಾಡಿಗೆ ಸೋಗಿನಲ್ಲಿ ಸುತ್ತಾಡುತ್ತ ಮನೆಗಳ ಮುಂದೆ ಪೇಪರ್ ಬಿದ್ದಿರುವುದು, ರಂಗೋಲಿ ಹಾಕದಿರುವುದು, ಕಸ ಗುಡಿಸದಿರುವುದನ್ನು ಗಮನಿಸಿ ಅಂತಹ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಜೈಲಿಗೆ ಹೋದ ಮೇಲೆ ಅಲ್ಲಿ ಮತ್ತಿನಾಗ ಮತ್ತು ಕಿರಣ್​ಕುಮಾರ್ ಪರಿಚಯವಾಗಿ ತನ್ನ ಗ್ಯಾಂಗ್​ಗೆ ಸೇರಿಸಿಕೊಂಡಿದ್ದ.

ಸದಾಕಾಲ ಜರ್ಕಿನ್​ನಲ್ಲಿ ಕಬ್ಬಿಣದ ಆಯುಧವನ್ನು ಇಟ್ಟುಕೊಂಡು ಗ್ಯಾಂಗ್​ನೊಂದಿಗೆ ಓಡಾಡುತ್ತಿದ್ದ ಜಪಾನ್ ರಾಜ ಯಾರೂ ಇಲ್ಲದ ಮನೆ ಗಮನಿಸಿ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ. ನಾಗರಾಜ ಹೊರಗಡೆ ಕಾಯುತ್ತಾ ನಿಲ್ಲುತ್ತಿದ್ದ. ಕಿರಣ್ ಮನೆ ಸಮೀಪ ಆಟೋದಲ್ಲಿ ಕಾಯುತ್ತಿದ್ದ. ಕೃತ್ಯ ಎಸಗಿದ ಕೂಡಲೇ ಆಟೋದಲ್ಲಿ ಪರಾರಿಯಾಗುತ್ತಿದ್ದರು. ಕದ್ದ ಚಿನ್ನಾಭರಣಗಳನ್ನು ನೀಲಮ್ಮನಿಗೆ ಕೊಡುತ್ತಿದ್ದರು. ಆಟಿಕಾ ಗೋಲ್ಡ್, ಸುಲ್ತಾನ್ ಗೋಲ್ಡ್ ಇನ್ನಿತರ ಕಂಪನಿಗಳಿಗೆ ಹೋಗುತ್ತಿದ್ದ ನೀಲಮ್ಮ, ತನ್ನ ಸೊಸೆಯದ್ದು ಅಥವಾ ಮಗಳಿಗೆ ಸೇರಿದ ಚಿನ್ನವೆಂದು ಸುಳ್ಳು ಹೇಳಿ ಮಾರಾಟ ಮಾಡಿ ಬಂದ ಹಣವನ್ನು ಆರೋಪಿಗಳಿಗೆ ಕೊಡುತ್ತಿದ್ದರು. ಒಂದಿಷ್ಟು ಹಣವನ್ನು ನೀಲಮ್ಮನಿಗೆ ಕೊಟ್ಟು ಉಳಿದುದ್ದನ್ನು ಹಂಚಿಕೊಳ್ಳುತ್ತಿದ್ದರು.

ಕೆ.ಪಿ. ಅಗ್ರಹಾರ ಠಾಣೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳ ತನಿಖೆ ಕೈಗೊಂಡ ಇನ್​ಸ್ಪೆಕ್ಟರ್ ಮಂಜು ಮತ್ತವರ ತಂಡ ಆರೋಪಿಗಳ ಬಂಧನಕ್ಕೆ ಬಲೆಬೀಸಿತ್ತು. ಮಾಗಡಿ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪರಾಧ ಕೃತ್ಯಗಳು ಬಯಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನ ಖರೀದಿಸಿದ ಕಂಪನಿಗಳಿಗೆ ನೋಟಿಸ್

ಕದ್ದ ಚಿನ್ನವನ್ನು ಆರೋಪಿಗಳಿಂದ ಖರೀದಿಸಿದ ಆಟಿಕಾ ಗೋಲ್ಡ್, ಸುಲ್ತಾನ್ ಗೋಲ್ಡ್ ಇನ್ನಿತರ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯಲಾಗಿದೆ. ಹೇಳಿಕೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರನ ಪತ್ನಿ

ಬಂಧಿತೆ ನೀಲಮ್ಮ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿ ಎನ್ನಲಾಗಿದೆ. ತನ್ನ ಪತ್ನಿಯ ಚಿನ್ನವಿದೆ. ಅವುಗಳನ್ನು ಮಾರಾಟ ಮಾಡಿಕೊಡಬೇಕೆಂದು ಸಹಾಯ ಕೋರಿ ಆರಂಭದಲ್ಲಿ ಸ್ವಲ್ಪ ಹಣವನ್ನು ಆರೋಪಿಗಳು ಕೊಟ್ಟಿದ್ದರು. ವೃದ್ಧೆಯಾದ ಅವರಿಗೂ ಆ ಹಣ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದಿತ್ತು. ಆ ನಂತರ ಕಮಿಷನ್ ಕೊಡುವ ಮೂಲಕ ನೀಲಮ್ಮನನ್ನು ತಮ್ಮ ದುಷ್ಕ ೃ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.