ಬೆಂಗಳೂರು: ನಟ ಶಿವರಾಜಕುಮಾರ್ ಹಾಗೂ ನಿರ್ದೇಶಕ ನರ್ತನ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ‘ಮಫ್ತಿ’ ಪ್ರಿಕ್ವೆಲ್ ‘ಭೈರತಿ ರಣಗಲ್’ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಾಂಗ್, ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರದ ಪ್ರಿ-ರಿಲೀಸ್ ಇವೆಂಟ್ ನಡೆಯಿತು. ಕಾರ್ಯಕ್ರಮದಲ್ಲಿ ಡಾಲಿ ಧನಂಜಯ, ನೀನಾಸಂ ಸತೀಶ್, ವಿಜಯ್ ರಾಘವೇಂದ್ರ, ಸುಧಾರಾಣಿ, ಶ್ರುತಿ, ರಕ್ಷಿತಾ ಪ್ರೇಮ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕರಾದ ಸೂರಪ್ಪ ಬಾಬು, ಕೆ.ಪಿ.ಶ್ರೀಕಾಂತ್, ನಿರ್ದೇಶಕರಾದ ಚೇತನ್, ಪವನ್ ಒಡೆಯರ್ ಸೇರಿ ಹಲವರು ಭಾಗಿಯಾಗಿದ್ದರು. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿ ನಟಿಯಾಗಿದ್ದು, ಛಾಯಾಸಿಂಗ್, ಅವಿನಾಶ್, ಬಾಬು ಹಿರಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ನಾರಾಯಣ್ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಇರಲಿದೆ.
ಮೈಲಿಗಲ್ಲು ರೀಚ್ ಮಾಡಲು ಸಾಧ್ಯವಿಲ್ಲ: ಡಾಲಿ ಧನಂಜಯ್, ‘ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಸಾಧಿಸಿರುವ ಮೈಲಿಗಲ್ಲುಗಳನ್ನು ಯಾರು ರೀಚ್ ಮಾಡಲು ಸಾಧ್ಯವಿಲ್ಲ. ಅವರ ಸಿನಿಮಾದಿಂದ ಬಂದಿರುವ ನಿರ್ದೇಶಕರು, ಪ್ರತಿಭೆಗಳು ಮತ್ತೆ ಯಾರ ಸಿನಿಮಾದಿಂದ ಬಂದಿಲ್ಲ. ನಾನು ಶಿವಣ್ಣನ ಪರಂಪರೆ. ಅವರ ಸಿನಿಮಾದಿಂದಲೇ ಬೆಳಕಿಗೆ ಬಂದಿದ್ದು. ಪ್ರೀತಿ, ಸ್ನೇಹ ತುಂಬಿರುವ ಆಲಯವೇ ಶಿವಣ್ಣ’ ಎಂದರು. ನಿರ್ದೇಶಕ ನರ್ತನ್, ‘ಶಿವಣ್ಣ ಅವರನ್ನು ಎದೆಯೊಳಗಡೆ ಇಟ್ಟುಕೊಂಡಿದ್ದೇವೆ, ಇನ್ನು ಸಿನಿಮಾವನ್ನು ಗೆಲ್ಲಿಸಬೇಕು’ ಎಂದರು. ನಟಿ ರಕ್ಷಿತಾ, ‘ಶಿವಣ್ಣರ ಪ್ರತಿ ಸಿನಿಮಾಗಳಲ್ಲೂ ಜೋಶ್ ಇರುತ್ತೆ. ಅದರಲ್ಲೂ ಈ ಚಿತ್ರದಲ್ಲಿ ಅದು ಜಾಸ್ತಿಯಿದೆ. ನನ್ನ ಜೀವನದಲ್ಲಿ ನಮ್ಮ ತಂದೆ ಬಳಿಕ ಶಿವಣ್ಣ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದರು.
ಭೈರತಿ ರಣಗಲ್ ಹೃದಯಕ್ಕೆ ಹತ್ತಿರ: ಶಿವರಾಜಕುಮಾರ್, ‘ನರ್ತನ್ ತುಂಬಾ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಅಷ್ಟೇ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಭೈರತಿ ರಣಗಲ್ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗುತ್ತಾನೆ. ಅನುಭವಿ ತಂತ್ರಜ್ಞರ ಹಾಗೂ ಕಲಾವಿದರ ಸಮಾಗಮದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. 1996ರಲ್ಲಿ ನ.15ರಂದು ‘ಜನುಮದ ಜೋಡಿ’ ಚಿತ್ರ ರಿಲೀಸ್ ಆಗಿತ್ತು. ಕೆಜಿ ರಸ್ತೆಯ ನರ್ತಕಿ ಮೈನ್ ಥಿಯೇಟರ್ ಆಗಿತ್ತು. ನಾಗಾಭರಣ್ ಸರ್ ನಿರ್ದೇಶಿಸಿದ್ದ ಚಿತ್ರವದು. ಇದೀಗ 28 ವರ್ಷಗಳ ನಂತರ ‘ಭೈರತಿ ರಣಗಲ್ ಕೂಡ ನ.15ರಂದು ರಿಲೀಸ್ ಆಗುತ್ತಿದ್ದು, ನರ್ತಕಿ ಮೈನ್ ಥಿಯೇಟರ್ ಆಗಿದೆ. ಇದರ ನಿರ್ದೇಶಕರು ನರ್ತನ್. ಆ ಚಿತ್ರದ ನಿರ್ಮಾಪಕರು ನನ್ನ ಅಮ್ಮ. ಈ ಚಿತ್ರದ ನಿರ್ಮಾಪಕರು ನನ್ನ ಹೆಂಡತಿ’ ಎಂದು ಖುಷಿ ವ್ಯಕ್ತಪಡಿಸಿದರು.