ನಾಳೆ ಉಡುಪಿಯಲ್ಲಿ ಜನಾಗ್ರಹ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಡಿ.2ರಂದು ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಮಂದಾರ್ತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಪರಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಬೃಹತ್ ಮೆರವಣಿಗೆ ಹೊರಡಲಿದ್ದು, ಅಲಂಕಾರ್ ಟಾಕೀಸ್-ಕಿದಿಯೂರು ಹೋಟೆಲ್, ಸಿಟಿ ಬಸ್ ನಿಲ್ದಾಣ-ಕಲ್ಸಂಕ ಸರ್ಕಲ್ ಮಾರ್ಗವಾಗಿ ಸಮಾವೇಶ ಸ್ಥಳಕ್ಕೆ ಆಗಮಿಸಲಿದೆ. ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಎರಡು ಸಾವಿರ ಸದಸ್ಯರು ಹಾಗೂ ಜಿಲ್ಲೆಯ ಸಾಧು ಸಂತರು, ರಾಜಕೀಯ ನಾಯಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಾಯಂಕಾಲ 4ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದಾರೆ. ವಿಹಿಂಪ ಸಹಕಾರ್ಯದರ್ಶಿ ರಾಘವಲು ಮುಖ್ಯ ಭಾಷಣ ಮಾಡುವರು. ವಿಹಿಂಪ ಪ್ರಮುಖ ಮಂಜುನಾಥ ಸ್ವಾಮಿ ಉಪಸ್ಥಿತರಿರುವರು. ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಸಹಸಂಚಾಲಕ ಸುಧೀರ್ ಶೆಟ್ಟಿ, ಸಾಪ್ತಾಹಿಕ ಪ್ರಮುಖ್ ಸುರೇಂದ್ರ ಕೋಟೇಶ್ವರ, ದುರ್ಗಾವಾಹಿನಿ ಸಹ ಸಂಚಾಲಕಿ ಭಾಗ್ಯಶ್ರೀ ಐತಾಳ್ ಸುದ್ದಿಗೋಷ್ಠಿಯಲ್ಲಿದ್ದರು.

ಪಾರ್ಕಿಂಗ್ ಪ್ರದೇಶ
ಕಾರ್ಕಳ ಮತ್ತು ಕುಂದಾಪುರದಿಂದ ಆಗಮಿಸುವವರಿಗೆ ಕಲ್ಸಂಕ ರಾಯಲ್ ಗಾರ್ಡನ್, ಬೈಲಕೆರೆ ಮೈದಾನ ಹಾಗೂ ಹೆಜಮಾಡಿ, ಕಾಪು ಕಡೆಯಿಂದ ಆಗಮಿಸುವವರಿಗೆ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.