ವಚನ ಪಚನವಾದರೆ ಆತ್ಮೋದ್ಧಾರ

ವಿಜಯವಾಣಿ ಸುದ್ದಿಜಾಲ ಬೀದರ್
ಶರಣರ ವಚನಗಳನ್ನು ಪಚನ ಮಾಡಿಕೊಂಡರೆ ಆತ್ಮೋದ್ಧಾರ ಸಾಧ್ಯ ಎಂದು ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ರಮೇಶ ಮಠಪತಿ ಹೇಳಿದರು.

ಜನಾವಾಡ ಬಸವ ಮಂಟಪದಲ್ಲಿ ಒಂದು ವಾರ ನಡೆಯಲಿರುವ ಬಸವ ದರ್ಶನ ಪ್ರವಚನ ಉದ್ಘಾಟಿಸಿ, ಬಸವ ದರ್ಶನ ಎಂದರೆ ತನ್ನ ಸ್ವ ಸ್ವರೂದ ದರ್ಶನ ಅಥವಾ ದೇವ ದರ್ಶನ. ಈ ಜಗತ್ತು ಕಂಡ ಅಪರೂಪದ ಮಹಾತ್ಮರು ಬಸವಣ್ಣನವರು. ಬಿದ್ದವರನ್ನು ಮೇಲೆತ್ತುವುದು ಅವರ ಗುರಿಯಾಗಿತ್ತು. ಮಹಿಳೆಯರಿಗೆ , ಶೂದ್ರರಿಗೂ ಧರ್ಮ ಸಂಸ್ಕಾರ ನೀಡಿ ಸಮಾನತೆ ನೀಡಿದ ವಿಶ್ವದ ಮೊದಲಿಗ ಸಾಮಾಜಿಕ ಚಿಂತಕ ಎಂದರು.

ಸಾನ್ನಿಧ್ಯ ವಹಿಸಿದ್ದ ಬಸವಗಿರಿಯ ಶ್ರೀ ಪ್ರಭುದೇವರು ಪ್ರವಚನ ನೀಡಿ, ಬಸವಣ್ಣನವರ ತತ್ವ ಅರಿತು ಆಚರಿಸುವುದೇ ನಿಜ ಬಸವ ದರ್ಶನ. ಇಂದಿನ ಯುವಕರು ವಿದ್ಯೆ ಪಡೆದರೆ ಸಾಲದು. ಉತ್ತಮ ಸಂಸ್ಕಾರಗಳು ಬಿತ್ತುವುದು ಅತ್ಯಂತ ಅವಶ್ಯವಾಗಿದೆ. ಸಂಸ್ಕಾರವಿಲ್ಲದ ಮಕ್ಕಳು ಪ್ರಯೋಜನವಿಲ್ಲ. ಪ್ರವಚನಗಳಿಂದ ಉತ್ತಮ ಮತ್ತು ಸಶಕ್ತ ಜನಾಂಗ ನಿಮರ್ಾಣ ಮಾಡಲು ಸಾಧ್ಯ. ಬಸವ ದರ್ಶನ ಎಂದರೆ ವ್ಯಕ್ತಿತ್ವ ವಿಕಸನದ ಸರಳ ಮಾರ್ಗವಾಗಿದೆ ಎಂದು ಹೇಳಿದರು.

ಸಿ. ಎಸ್. ಗಣಾಚಾರಿ ಇದ್ದರು. ಬಸವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಗದೇವಿ ಪನ್ಸಾಲೆ ಗುರುಪೂಜೆ ನೆರವೇರಿಸಿದರು. ಶಾಂತಕುಮಾರ ಪನ್ಸಾಲೆ ಸ್ವಾಗತಿಸಿದರು. ಮಹಾದೇವ ಸ್ವಾಮಿ ನಿರೂಪಣೆ ಮಾಡಿದರು. ಮಾರುತಿ, ಪುಂಡಲೀಕ ಪಾಟೀಲ್ ನೇತೃತ್ವದ ತಂಡವು ವಚನ ಸಂಗೀತ ನೀಡಿತು. ಲಿಂ. ಗೋದಾವರಿ ಪನ್ಸಾಲೆ ಸ್ಮರಣಾರ್ಥ ಪ್ರವಚನ ಏರ್ಪಡಿಸಿದ್ದು, ನಿತ್ಯ ಪ್ರಭುದೇವರು ಪ್ರವಚನ ನೀಡುವರು.