ಮದ್ದೂರು: ಹಲವಾರು ವಿರೋಧಗಳ ನಡುವೆ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿದ್ದು, ಈ ಯೋಜನೆಯಿಂದ ಪ್ರತಿ ತಾಲೂಕಿಗೆ ಒಂದು ವರ್ಷದಲ್ಲಿ ಸುಮಾರು 220 ಕೋಟಿ ರೂ. ನೀಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಕೊಪ್ಪದಲ್ಲಿ ಸೋಮವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಟುವಂತಿಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ ಎಂದರು.
ಸಮಸ್ಯೆ ಪರಿಹಾರವಾದ ನಂತರ ಪರಿಹಾರವಾಗಿದೆ ಎಂದು ಯಾರೂ ಅಭಿನಂದನೆ ಸಲ್ಲಿಸುವುದಿಲ್ಲ. ಹೊಸ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಸಲ್ಲಿಕೆಯಾಗುತ್ತದೆ. ಸಾರ್ವಜನಿಕರ ಕೆಲಸ ಮಾಡುವುದು ಜನಪ್ರತಿನಿಧಿಗಳ ಕೆಲಸ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ರಾಜ್ಯದ ಜನರಿಗೆ ನೀಡುವ ಕಾರ್ಯಕ್ರಮಗಳಿಗಾಗಿ ಸಂಗ್ರಹಿಸುವ ಫಲಾನುಭವಿಗಳ ವಿವರಗಳ ಬಗ್ಗೆ ಬೇರೆ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿ, ವಿವರ ಸಂಗ್ರಹಿಸಲು ರೂಪಿಸಿರುವ ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಮನವಿ ಸಲ್ಲಿಸಿರುವುದು ಹರ್ಷದಾಯಕ ವಿಷಯವಾಗಿದೆ ಎಂದರು.
ಕೊಪ್ಪ ಹೋಬಳಿಯಲ್ಲಿ ಇದು ಎರಡನೇ ಬಾರಿಗೆ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿದ್ದು, ಸ್ವೀಕರಿಸುವ ಕುಂದುಕೊರತೆ ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲಾಗುವುದು. ಕೊಪ್ಪದಲ್ಲಿ ಬೇಡಿಕೆ ಇರುವ ಪೊಲೀಸ್ ಠಾಣೆ, ನಾಡ ಕಚೇರಿ ಹಾಗೂ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೇ, ಪಂಚಾಯಿತಿ ಕಚೇರಿ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಸುಮಾರು 1 ಕೋಟಿ ರೂ. ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.
ಕಂದಾಯ ಇಲಾಖೆ, ಪಂಚಾಯತ್‌ರಾಜ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಾಯಿತು. ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ಸ್ಟಾಲ್‌ಗಳನ್ನು ತೆರೆದು ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಗ್ರಾಪಂ ಅಧ್ಯಕ್ಷ ರುದ್ರೇಶ್, ತಹಸೀಲ್ದಾರ್ ಡಾ.ಸ್ಮಿತಾರಾಮು, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾಪಂ ಇಒ ರಾಮಲಿಂಗಯ್ಯ ಇದ್ದರು.