ಸಂಕಷ್ಟಕ್ಕೆ ಸಿಲುಕಿದವರಿಗೆ ಹಣಕಾಸಿನ ನೆರವು ನೀಡಿದ ಸಚಿವ ಜಮೀರ್
ಹೊಸಪೇಟೆ: ಜಿಲ್ಲಾಡಳಿತ ಹಾಗೂ ಜಿ.ಪಂ. ಸಹಯೋಗದಲ್ಲಿ ಸೋಮವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಹಲವರಿಗ ಸ್ಥಳದಲ್ಲೇ ಪರಿಹಾರ ಒದಗಿಸುವ ಜತೆಗೆ ಇಬ್ಬರಿಗೆ ವೈಯಕ್ತಿಕವಾಗಿ ಹಣ ನೀಡುವ ಮೂಲಕ ಜನರ ಸಂಕಷ್ಟ ಪರಿಹಾರಕ್ಕೆ ನೆರವಾದರು.
ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮದ ಕೆಂಚಮ್ಮ, ಲಕ್ಷ್ಮೀ ಸೇರಿದಂತೆ ಮೂವರು ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿ ಕೆಲ ತಿಂಗಳು ಕಳೆದರೂ, ಮಂಜೂರಾಗಿರಲಿಲ್ಲ. ಈ ಕುರಿತು ಜನತಾ ದರ್ಶನದಲ್ಲಿ ಸಚಿವರ ಗಮನ ಸೆಳೆದ ವೃದ್ಧರ ಮನವಿಗೆ ಸ್ಪಂದಿಸಿದರು. ಸ್ಥಳದಲ್ಲೇ ಮತ್ತೊಮ್ಮೆ ಅರ್ಜಿ ಸ್ವೀಕರಿಸಿದ ಕಂದಾಯ ಇಲಾಖೆ ಅಧಿಕಾರಿಗಳು, ಸಂಜೆ ವೇಳೆಗೆ ಮಂಜೂರಾತಿ ಪತ್ರ ವಿತರಿಸಿದರು.
ಅದರಂತೆ ಏಕ ಪಾಲಕ ಬಡ ಮಕ್ಕಳಿಗೆ ವಸತಿ ನಿಲಯದಲ್ಲಿ ಅನುಕೂಲ ಮಾಡಿಕೊಡಬೇಕೆಂಬ ಅಹವಾಲು ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಇದೇ ವೇಳೆ ವೈಯಕ್ತಿಕ ಸಮಸ್ಯೆ ಹೇಳಿಕೊಂಡ ನಗರದ ವೃದ್ಧೆ ಹಾಗೂ ವ್ಯಕ್ತಿಯೊಬ್ಬರಿಗೆ ಸಚವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ವೈಯಕ್ತಿಕವಾಗಿ ಹಣಕಾಸಿನ ನೆರವು ನೀಡಿ, ಧೈರ್ಯ ತುಂಬಿದರು.
ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ, ಎಚ್.ಆರ್.ಗವಿಯಪ್ಪ, ಎಂ.ಪಿ. ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಇದ್ದರು.