ದೊಡ್ಡವರು ಶಾಮೀಲು

ಬೆಂಗಳೂರು/ಬಳ್ಳಾರಿ: ಆಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬೆಂಗಳೂರಿನ ಸಿಸಿಬಿ ಪೊಲೀಸ್ ತಂಡ ಗುರುವಾರವೂ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತು ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ರೆಡ್ಡಿ ಬಂಧನಕ್ಕೆ ಎಲ್ಲೆಡೆ ಬಲೆಬೀಸಿದೆ.

ಆಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಅಹಮದ್ ಫರೀದ್​ನನ್ನು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್​ಕುಮಾರ್ ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರು. ಪ್ರಮುಖ ಆರೋಪಿ ಫರೀದ್ ಕೆಲ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಹಣ ಕೊಟ್ಟಿದ್ದಾಗಿ ಬಾಯ್ಬಿಟ್ಟಿದ್ದಾನೆ. ಎಲ್ಲ ಹೆಸರು ಪಟ್ಟಿ ಮಾಡಿದ್ದು, ಶೀಘ್ರವೇ ಕರೆದು ವಿಚಾರಣೆ ನಡೆಸಲಾಗುತ್ತದೆ. ರೆಡ್ಡಿ ಒಡೆತನದ ಸುದ್ದಿವಾಹಿನಿಯ ಸಿಇಒ ಆಗಿದ್ದ ವಿಜಯ್ ಟಾಟಾಗೆ 8 ಕೋಟಿ ರೂ. ಕೊಟ್ಟಿರುವುದಾಗಿ ಫರೀದ್ ಹೇಳಿದ್ದ. ಅದಕ್ಕಾಗಿ ಆತನನ್ನು ಕರೆದು ಹೇಳಿಕೆ ಪಡೆಯಲಾಗಿದೆ. ರೆಡ್ಡಿ ಬಂಧನಕ್ಕೆ ಸಿಸಿಬಿಯ 2 ತಂಡಗಳು ಬಳ್ಳಾರಿ ಮತ್ತು ಹೈದರಾಬಾದ್​ಗೆ ತೆರಳಿ ಶೋಧ ನಡೆಸುತ್ತಿವೆ ಎಂದು ಅಲೋಕ್​ಕುಮಾರ್ ತಿಳಿಸಿದ್ದಾರೆ.

ಬೆಳ್ಳಂಬೆಳಗ್ಗೆ ಸಿಸಿಬಿಯ ಎಸಿಪಿ ಮಂಜುನಾಥ ಚೌಧರಿ ನೇತೃತ್ವದ 10 ಅಧಿಕಾರಿಗಳ ತಂಡ ಬಳ್ಳಾರಿಯ ರೆಡ್ಡಿ ಮನೆ ಮೇಲೆ ದಾಳಿ ನಡೆಸಿ ದೀಪಾವಳಿ ಸಂಭ್ರಮದಲ್ಲಿದ್ದ ರೆಡ್ಡಿಯ ಅತ್ತೆ ನಾಗಲಕ್ಷ್ಮಮ್ಮ, ಮಾವ ಪರಮೇಶ್ವರ ರೆಡ್ಡಿ, ಪತ್ನಿ ಲಕ್ಷ್ಮಿಅರುಣಾ ಮತ್ತಿತರರಿಗೆ ಶಾಕ್ ನೀಡಿದೆ. ಸಂಜೆವರೆಗೂ ಇಂಚಿಂಚೂ ಜಾಲಾಡಿದೆ. ದಾಳಿ ಬಗ್ಗೆ ತಿಳಿದ ಶಾಸಕ ಶ್ರೀರಾಮುಲು, ಮಾಜಿ ಶಾಸಕ ಕಾಪು ರಾಮಚಂದ್ರ ರೆಡ್ಡಿ ಭೇಟಿ ನೀಡಿದ್ದರು. ಹತ್ತಿರದ ಓಬಳಪುರಂ ಮೈನಿಂಗ್ ಕಂಪನಿ ಕಚೇರಿಗೂ ತೆರಳಿದ ಪೊಲೀಸರು ಕೆಲ ದಾಖಲೆ ಜಪ್ತಿ ಮಾಡಿದ್ದಾರೆ. ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ ಬಳಿಯ ರೆಡ್ಡಿ ಆಪ್ತ ಅಲಿಖಾನ್ ಮನೆ ಮೇಲೂ ದಾಳಿ ನಡೆಸಿದ್ದು, ಬೀಗ ಹಾಕಿದ್ದರಿಂದ ಹಿಂತಿರುಗಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್​ಗೆ ಎಸಿಪಿ ಡಾ.ವೆಂಕಟೇಶ್ ಪ್ರಸನ್ನ ತೆರಳಿ ಮಹಜರು ಮಾಡಿದರು. ಈ ವಿಡಿಯೋ ಮಾಧ್ಯಮಕ್ಕೆ ಸಿಕ್ಕಿ ವಿವಾದ ಸೃಷ್ಟಿಸಿದ್ದು, ಅಲೋಕ್​ಕುಮಾರ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

ಜನಾರ್ದನ ರೆಡ್ಡಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮೋಸ ಮಾಡಿರುವ ಕಂಪನಿ ವಿರುದ್ಧ ತನಿಖೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲು ಪೊಲೀಸರಿಗೆ ಮುಕ್ತ ಅವಕಾಶ ಕೊಟ್ಟಿದ್ದೇನೆ. ಇದರಲ್ಲಿ ನನ್ನ ಹಸ್ತಕ್ಷೇಪ ಆಗಿಲ್ಲ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

ರೆಡ್ಡಿ ನಿವಾಸದಲ್ಲಿ ಫೋಟೋಶೂಟ್

ರೆಡ್ಡಿ ವೈಭವೋಪೇತ ನಿವಾಸ ಕಂಡ ಸಿಸಿಬಿ ಅಧಿಕಾರಿಗಳು ಬೆರಗಾದರು. ಕೆಲವರು ತಪಾಸಣೆ ಜತೆಗೆ ಮಹಡಿ ಹೊರಾಂಗಣದಲ್ಲಿ ನಿಂತು ಮೊಬೈಲ್​ನಲ್ಲಿ ಸೆಲ್ಪಿ ತೆಗೆದು ಕೊಳ್ಳುತ್ತಿದ್ದ, ವಿಡಿಯೋ ಮಾಡುತ್ತಿದ್ದ ದೃಶ್ಯ ಕಂಡುಬಂತು.

15ರಂದು ವಿಚಾರಣೆ: ಜನಾರ್ದನ ರೆಡ್ಡಿಯ ಆಪ್ತ ಅಲಿಖಾನ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಬ್ರಿಜೇಶ್ ಶೆಟ್ಟಿಗೆ ನ.15ರಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಡೀಲ್ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಸುದ್ದಿ ಗಮನಿಸಿದ್ದೆ. ತಪ್ಪು ಯಾರು ಮಾಡಿದ್ದರೂ, ಕಾನೂನು ಕ್ರಮ ಕೈಗೊಳ್ಳಲಿ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ. ಪಕ್ಷದ ಹೆಸರು ಬಳಸದಂತೆ ಹಾಗೂ ಪಕ್ಷದ ಪರ ಕೆಲಸ ಮಾಡದಂತೆ ಮೊದಲೆ ರೆಡ್ಡಿಗೆ ಹೇಳಲಾಗಿತ್ತು.

| ಎನ್.ರವಿಕುಮಾರ್ ಮೇಲ್ಮನೆ ಸದಸ್ಯ

ಜನಾರ್ದನ ರೆಡ್ಡಿ ಮನೆಯಲ್ಲಿ ಸಿಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಅಧಿಕಾರಿಗಳು ಕರೆದಿದ್ದಕ್ಕೆ ಬಂದು, ಅವರ ಪ್ರಶ್ನೆಗೆಲ್ಲ ಉತ್ತರಿಸಿದ್ದೇನೆ.

| ಪರಮೇಶ್ವರ ರೆಡ್ಡಿ ಜನಾರ್ದನ ರೆಡ್ಡಿ ಮಾವ

ಮಾಹಿತಿ ಕೋರಿದ ಇ.ಡಿ.

ಆಂಬಿಡೆಂಟ್ ಕಂಪನಿ ವಿರುದ್ಧ ಯಾವುದೇ ತನಿಖೆ ನಡೆಸಿಲ್ಲ, ಇ.ಡಿ. ಹೆಸರು ಉಲ್ಲೇಖ ಸರಿಯಲ್ಲ ಎಂದು ಸಿಸಿಬಿ ಅಧಿಕಾರಿ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಬಿಡೆಂಟ್ ವಿರುದ್ಧ ಸಿಸಿಬಿ ತನಿಖೆ ನಡೆಸುತ್ತಿರುವ ಮಾಹಿತಿ ಕೋರಿದ್ದು, ದಾಖಲೆ ಸಿಕ್ಕ ಮೇಲೆ ಫೆಮಾ ಕಾಯ್ದೆ ಅಡಿ ಪ್ರತ್ಯೇಕ ಕೇಸ್ ದಾಖಲಿಸುವುದಾಗಿ ತಿಳಿಸಿದೆ.