ಕೋರ್ಟ್ ಮೊರೆ ಹೋದ ರೆಡ್ಡಿ

ಬೆಂಗಳೂರು: ಆಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿಯನ್ನು ಬಂಧಿಸಲು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮತ್ತೊಂದೆಡೆ ಶುಕ್ರವಾರ ರೆಡ್ಡಿ ನ್ಯಾಯಾಲಯದ ಮೊರೆ ಹೋಗಿದ್ದು, ಸುಳ್ಳು ಕೇಸ್​ನಲ್ಲಿ ಸಿಲುಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ತಮ್ಮ ವಿರುದ್ಧದ ಕೇಸ್ ವಜಾ ಮತ್ತು ತನಿಖಾಧಿಕಾರಿಗಳ ಬದಲಾವಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇತ್ತ ನಿರೀಕ್ಷಣಾ ಜಾಮೀನು ಕೋರಿ 61ನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಸಿಸಿಬಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ನ.12ಕ್ಕೆ ವಿಚಾರಣೆ ಮುಂದೂಡಿದೆ.

ನಿರೀಕ್ಷಣಾ ಅರ್ಜಿ: ರೆಡ್ಡಿ ಪರವಾಗಿ ಹಿರಿಯ ವಕೀಲ ಸಿ.ಎಚ್.ಹನುಮಂತರಾಯಪ್ಪ, 61ನೇ ಸಿಟಿ ಸಿವಿಲ್ ಕೋರ್ಟ್​ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಕಕ್ಷಿದಾರರ (ರೆಡ್ಡಿ) ಹೆಸರು ‘ಎಫ್​ಐಆರ್​ನಲ್ಲಿ ಉಲ್ಲೇಖಿಸಿಲ್ಲ. ಆಂಬಿಡೆಂಟ್ ಕಂಪನಿ ಮಾಲೀಕರೂ ಅಲ್ಲ, ನಿರ್ದೇಶಕರೂ ಅಲ್ಲ. ಇವರಿಗೂ ಕಂಪನಿಗೂ ಸಂಬಂಧವಿಲ್ಲ. ಯಾವುದೋ ಪ್ರಸಂಗ ಇಟ್ಟುಕೊಂಡು ಆರೋಪಿಯನ್ನಾಗಿಸಲು ಪ್ರಯತ್ನಿ ಸಲಾಗುತ್ತಿದೆ. ಎಫ್​ಐಆರ್​ನಲ್ಲಿ ಹೆಸರು ಇಲ್ಲದಿದ್ದರೂ ನಗರ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ರೆಡ್ಡಿ ಹೆಸರು ಹೇಳಿದ್ದಾರೆ ಎಂದು ಪತ್ರಿಕಾ ಹೇಳಿಕೆ ಓದಲು ಆರಂಭಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ‘ಪತ್ರಿಕಾ ಹೇಳಿಕೆ ಆಧಾರದ ಮೇಲೆ ವಾದ ಮಾಡಲು ಸಾಧ್ಯವೇ?’ ಹಾಗಾದರೆ ಅದರಲ್ಲಿ 57 ಕೆಜಿ ಚಿನ್ನ ಪಡೆದಿರುವುದನ್ನು ಉಲ್ಲೇಖಿಸುತ್ತೀರಾ? ಅದನ್ನು ಬರೆದುಕೊಳ್ಳಲಾ? ಯಾವ ಆಧಾರದ ಮೇಲೆ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಕೇಳುತ್ತಿದ್ದೀರಾ? ಇನ್ನೂ ವಿಚಾರಣೆಯೇ ನಡೆದಿಲ್ಲ ಎಂದು ಪ್ರಶ್ನಿಸಿದರು. ಆಗ ರೆಡ್ಡಿ ಪರ ವಕೀಲರು, ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದರು. ಆ ನಂತರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರು. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಆಕ್ಷೇಪ ಸಲ್ಲಿಸುವಂತೆ ಸಿಸಿಬಿ ಪರ ವಕೀಲರಿಗೆ ಸೂಚಿಸಿ ವಿಚಾರಣೆ ನ.12ಕ್ಕೆ ಮುಂದೂಡಿದರು.

ಹೂಡಿಕೆದಾರರ ಆಕ್ಷೇಪ

ಜನಾರ್ದನ ರೆಡ್ಡಿ ವಿರುದ್ಧ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆದಾರರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9ರಲ್ಲಿ ಕೇಸು ದಾಖಲಿಸಬೇಕಿತ್ತು. ಇದನ್ನು ತನಿಖಾಧಿಕಾರಿಗಳು ಮಾಡಿಲ್ಲ. ಹೀಗಾಗಿ ಆರೋಪಿತರಿಗೆ ನಿರೀಕ್ಷಣಾ ಜಾಮೀನು ಸಿಗಲಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರ ಮೂಲಕ ನಮ್ಮ ವಾದವನ್ನು ಮಂಡಿಸಲು ಅವಕಾಶ ನೀಡುವಂತೆ ಹೂಡಿಕೆದಾರ ರಂಗನಾಥ್ ರೆಡ್ಡಿ ಅರ್ಜಿ ಸಲ್ಲಿಸಿದ್ದಾರೆ.

ಇಂದು ನಿರ್ಧರಿಸುತ್ತೇವೆ

ಆಂಬಿಡೆಂಟ್ ಮಾರ್ಕೆಟಿಂಗ್ ಕಂಪನಿ ವಿರುದ್ಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ಭಾನುವಾರ ತನಿಖಾಧಿಕಾರಿ ಡಾ.ವೆಂಕಟೇಶ್ ಪ್ರಸನ್ನ ಮುಂದೆ ಹಾಜರಾಗುವಂತೆ ಶುಕ್ರವಾರ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್ ಮತ್ತು ಸಿಟಿ ಸಿವಿಲ್ ಕೋರ್ಟ್​ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ಈ ವೇಳೆ ವಿಚಾರಣೆಗೆ ರೆಡ್ಡಿ ಹಾಜರಾಗುವುದು ಎಷ್ಟು ಸೂಕ್ತ ಎಂಬುದರ ಕುರಿತು ಶನಿವಾರ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿ.ಎಚ್. ಹನುಮಂತರಾಯಪ್ಪ ತಿಳಿಸಿದ್ದಾರೆ.

ಬಂಧನಕ್ಕೆ ಮುಂದುವರಿದ ಶೋಧ

ಆಂಬಿಡೆಂಟ್ ಕಂಪನಿಯಲ್ಲಿ ರೆಡ್ಡಿ ಆಪ್ತ ಅಲಿಖಾನ್ ಮತ್ತು ಸಂಬಂಧಿಕರು ಹೂಡಿಕೆ ಮಾಡಿದ್ದು, ವಿಚಾರಣೆ ನಡೆಸಲಾಗಿದೆ. ಅಲ್ಲದೆ, ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದ ಅಲಿಖಾನ್ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಲಾಗಿದೆ. ರೆಡ್ಡಿ ಬಂಧನಕ್ಕೆ ಹೈದರಾಬಾದ್, ಬಳ್ಳಾರಿ, ಮುಂಬೈ ಸೇರಿ ನೆರೆಯ ರಾಜ್ಯಗಳಲ್ಲಿ ವಿಶೇಷ ತಂಡಗಳು ಹುಡುಕಾಟ ನಡೆಸಿ ವಾಪಸ್ ಬಂದಿವೆ. ಶನಿವಾರ ಮತ್ತೆ ವಿಶೇಷ ತಂಡಗಳು ಕಾರ್ಯಾಚರಣೆಗೆ ಇಳಿಯಲಿವೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೈಕೋರ್ಟ್​ನಲ್ಲಿ 2 ಅರ್ಜಿ

ಬಹುಕೋಟಿ ವಂಚನೆಯ ಈ ಪ್ರಕರಣದಲ್ಲಿ ತಮ್ಮನ್ನು ಆರೋಪಿಯನ್ನಾಗಿಸಿರುವ ಸಿಸಿಬಿ ಪೊಲೀಸರ ಕ್ರಮ ಪ್ರಶ್ನಿಸಿ ಜನಾರ್ದನ ರೆಡ್ಡಿ, ಅಲಿಖಾನ್ ಹೈಕೋರ್ಟ್​ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಅನಗತ್ಯವಾಗಿ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸುತ್ತಿದ್ದು, ಇದೊಂದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಪಾರದರ್ಶಕತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ನಡೆಸಿದ ತನಿಖೆಯ ವಿಡಿಯೋ ಹಾಗೂ ಫೋಟೋಗಳನ್ನು ಬಹಿರಂಗಗೊಳಿಸಿರುವ ತನಿಖಾಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಮಾಧ್ಯಮಗಳೆದುರು ಬಿಚ್ಚಿಟ್ಟಿದ್ದು, ತನಿಖೆಯಲ್ಲಿ ಗೌಪ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ. ಜತೆಗೆ ತನಿಖಾಧಿಕಾರಿಗಳಾದ ಎಸಿಪಿ ಡಾ.ಎಚ್.ಎನ್. ವೆಂಕಟೇಶ್ ಪ್ರಸನ್ನ ಹಾಗೂ ಡಿಸಿಪಿ ಎಸ್.ಗಿರೀಶ್ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದು, ಅವರನ್ನು ಬದಲಿಸುವಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸುವಂತೆ ಕೋರಿ ಮತ್ತೊಂದು ತಕರಾರು ಅರ್ಜಿಯನ್ನು ಸಲ್ಲಿಸಲಾಗಿದೆ.

ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಆಂಬಿಡೆಂಟ್ ಪ್ರಕರಣದ ಆರೋಪಿತ ಬಳ್ಳಾರಿಯ ರಾಜಮಹಲ್ ಜ್ಯುವೆಲರ್ಸ್ ಮಾಲೀಕ ಎಸ್. ರಮೇಶ್, ಶುಕ್ರವಾರ ಮಾನವ ಹಕ್ಕುಗಳ ಆಯೋಗಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್​ಕುಮಾರ್, ಡಿಸಿಪಿ ಎಸ್.ಗಿರೀಶ್ ಮತ್ತು ಎಸಿಪಿ ವಿರುದ್ಧ ದೂರು ನೀಡಿದ್ದಾರೆ.

ಅ.27ರ ಬೆಳಗ್ಗೆಯಿಂದ ಅ.29ರ ಸಂಜೆಯವರೆಗೂ ಸಿಸಿಬಿ ಕಚೇರಿಯಲ್ಲಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಬೆತ್ತಲೆಗೊಳಿಸಿ ಥಳಿಸಿ, ಪ್ರಾಣ ಬೆದರಿಕೆ ಹಾಕಿ ನನ್ನಿಂದ ಸುಳ್ಳು ಹೇಳಿಕೆ ಪಡೆದು ವಿಡಿಯೋ ಮಾಡಿಕೊಂಡು ಸಂಜೆ ಕೋರ್ಟ್​ಗೆ ಹಾಜರುಪಡಿಸಿದರು. ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಆಂಬಿಡೆಂಟ್ ಕೇಸ್​ನಲ್ಲಿ ಆರೋಪಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಬಳ್ಳಾರಿಯಲ್ಲಿ 60 ವರ್ಷಗಳಿಂದ ಆಭರಣ ವ್ಯಾಪಾರ ಮಾಡುತ್ತಿದ್ದು, ಸುತ್ತಲ 5 ಜಿಲ್ಲೆಗಳಲ್ಲಿ ಗಣ್ಯ ವ್ಯಕ್ತಿಗಳು, ರಾಜಕೀಯ ಮುಖಂಡರು, ಉದ್ಯಮಿಗಳ ಪರಿಚಯವಿದೆ. ಆದರೆ, ಸಿಸಿಬಿ ಪೊಲೀಸರು ಹೇಳುವಂತೆ ಜನಾರ್ದನ ರೆಡ್ಡಿ ಜತೆಗೆ ಯಾವುದೇ ಅಕ್ರಮ ವ್ಯವಹಾರ ನಡೆಸಿಲ್ಲ ಎಂದು ದೂರಿದ್ದಾರೆ.

ಸಿಸಿಬಿ ದಾಳಿ: ರಮೇಶ್ ಅವರ ಬಳ್ಳಾರಿ ನಿವಾಸದ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿಗಳ ತಂಡ ಶುಕ್ರವಾರ ರಾತ್ರಿ ದಾಳಿ ನಡೆಸಿ ಎರಡು ಗಂಟೆಗಳ ಕಾಲ ತಪಾಸಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ನಿವಾಸದಲ್ಲಿನ ರಮೇಶ್ ತಾಯಿ ಹಾಗೂ ಕುಟುಂಬ ಸದಸ್ಯರಿಂದ ಕೆಲ ಮಾಹಿತಿ ಪಡೆಯಲಾಗಿದೆ ಎನ್ನಲಾಗಿದೆ.