ರೆಡ್ಡಿಗೆ ಗೋಲ್ಡ್ ಡೀಲ್ ಡ್ರಿಲ್

ಬೆಂಗಳೂರು: ಆಂಬಿಡೆಂಟ್ ಕಂಪನಿ ಬಹುಕೋಟಿ ಡೀಲ್ ಕೇಸಿನಲ್ಲಿ ನಂಟು ಹೊಂದಿರುವ ಆರೋಪ ಹೊತ್ತು ನಾಲ್ಕು ದಿನಗಳಿಂದ ಕಣ್ಮರೆಯಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಶನಿವಾರ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಪ್ರತ್ಯಕ್ಷರಾದರು. ಡೀಲ್ ರಹಸ್ಯ ಬೇಧಿಸಲು ಇನ್ನಿಲ್ಲದ ಸರ್ಕಸ್ ನಡೆಸಿರುವ ಸಿಸಿಬಿ ಅಧಿಕಾರಿಗಳು, ಜನಾರ್ದನ ರೆಡ್ಡಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಸಿಸಿಬಿ ತಂಡ ಶೋಧ ನಡೆಸುತ್ತಿರುವ ಬೆನ್ನಲ್ಲೇ ಶನಿವಾರ ಮಧ್ಯಾಹ್ನದ ವೇಳೆಗೆ ಜನಾರ್ದನ ರೆಡ್ಡಿ ನಾನೆಲ್ಲೂ ಹೋಗಿಲ್ಲ. ಬಂಧನ ಭೀತಿಯಿಂದ ತಲೆಮರೆಸಿಕೊಂಡೂ ಇಲ್ಲ ಎಂದು ಮಾತನಾಡಿರುವ ವಿಡಿಯೋ ಬಿಡುಗಡೆ ಮಾಡಿದರು. ಅದಾದ ನಂತರ ಸಂಜೆ 4 ಗಂಟೆಗೆ ವಕೀಲರಾದ ಆರ್.ಪಿ. ಚಂದ್ರಶೇಖರ್ ಜತೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾದರು.

ಆಂಬಿಡೆಂಟ್ ಕಂಪನಿ ಜತೆ ಡೀಲ್ ನಡೆಸಿದ್ದಾರೆ ಎನ್ನಲಾದ ಫೋಟೋ ಹಾಗೂ ಇನ್ನಿತರ ಸಾಕ್ಷ್ಯಗಳನ್ನಿಟ್ಟುಕೊಂಡು ಎಸಿಪಿ ವೆಂಕಟೇಶ ಪ್ರಸನ್ನ ಅವರು ರೆಡ್ಡಿ ವಿಚಾರಣೆ ಆರಂಭಿಸಿದರು. ಸಂಜೆ 4.15ರಿಂದ ರಾತ್ರಿ 10 ಗಂಟೆವರೆಗೆ ಪ್ರಕರಣದ ನಂಟಿನ ಕುರಿತು ಕೇಳಿದ ಪ್ರಶ್ನೆಗಳಿಗೆ ರೆಡ್ಡಿ ಉತ್ತರ ನೀಡಿದರು. ವಿಚಾರಣೆಯನ್ನು ವಿಡಿಯೋ ಮಾಡಿಕೊಳ್ಳಲಾಯಿತು.

ಪ್ರತ್ಯೇಕ ವಿಚಾರಣೆ: ಆಂಬಿಡೆಂಟ್ ಕಂಪನಿ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (ಫೆಮಾ) ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ತನಿಖೆಯ ಮೇಲೆ ಪ್ರಭಾವ ಬೀರಲು ಜನಾರ್ದನ ರೆಡ್ಡಿ 20 ಕೋಟಿ ರೂ. ಡೀಲ್ ಕುದುರಿಸಿದ ಆರೋಪದ ಬಗ್ಗೆ ಮೊದಲು ರೆಡ್ಡಿ ಯೊಬ್ಬರನ್ನೇ ಕೂರಿಸಿಕೊಂಡು ಪ್ರಶ್ನೆಗಳನ್ನು ಕೇಳಲಾಯಿತು. ನಂತರ ಆಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಫರೀದ್ ಹಾಗೂ ರೆಡ್ಡಿ ಆಪ್ತ ಅಲಿ ಖಾನ್ ಅವರನ್ನೂ ಕರೆಸಿಕೊಂಡು ವಿಚಾರಣೆ ನಡೆಸಲಾಯಿತು.

ಮೊದಲಿಗೆ ಮೂವರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ನಂತರ ಮುಖಾಮುಖಿ ಕೂರಿಸಿ ಪ್ರಶ್ನೆಗಳನ್ನು ಕೇಳಲಾಯಿತು. ಮೂವರ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು, ನಂತರ ಸಹಿ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಚಾರಣೆ ನಡೆಯಿತು.

ಸಿಸಿಬಿ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಜನಾರ್ದನ ರೆಡ್ಡಿ ಸೂಕ್ತ ಉತ್ತರ ನೀಡಿದ್ದಾರೆ. ಫರೀದ್ ಅವರಿಗೆ ಬೇಲ್ ಇರುವ ಹಿನ್ನೆಲೆಯಲ್ಲಿ ಬಂಧನವಾಗುವ ಸಾಧ್ಯತೆಯಿಲ್ಲ.

| ನರೇಶ್ ಫರೀದ್ ಪರ ವಕೀಲ

ರೆಡ್ಡಿ ಆಪ್ತ ಅಲಿಖಾನ್ ಬಂಧನ

ಬೆಂಗಳೂರಿನ ಆರ್.ಟಿ.ನಗರದಲ್ಲಿನ ಅಲಿಖಾನ್ ಮನೆ ಮೇಲೆ ದಾಳಿ ನಡೆಸಿದ್ದಾಗ ಪಿಸ್ತೂಲ್, ಗುಂಡು ಪತ್ತೆಯಾಗಿದ್ದ ಆರೋಪದ ಮೇಲೆ ಅಲಿಖಾನ್​ರನ್ನು ಬಂಧಿಸಲಾಗಿದೆ. ಸರಿಯಾದ ದಾಖಲೆ ಕೊಡದ ಕಾರಣ ಬಂಧಿಸಿದ್ದು, ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸುವುದಾಗಿ ಸಿಸಿಬಿ ಎಸಿಪಿ ಹೇಳಿಕೆ ನೀಡಿದ್ದಾರೆ. ದಾಳಿ ವೇಳೆ 5 ಜೀವಂತ ಗುಂಡುಗಳು ಪತ್ತೆಯಾಗಿದ್ದವು.

ಪ್ರಶ್ನೆಗಳ ಸುರಿಮಳೆ

ಆಂಬಿಡೆಂಟ್ ಕಂಪನಿ ಜತೆಗಿನ ಸಂಪರ್ಕ? ಕಂಪನಿ ಮಾಲೀಕ ಸೈಯದ್ ಫರೀದ್ ಪರಿಚಯ? ತಾಜ್​ವೆಸ್ಟೆಂಡ್ ಹೋಟೆಲ್​ನಲ್ಲಿ ಫರೀದ್ ಜತೆಗಿನ ಮಾತುಕತೆ, ಆ ವೇಳೆ ಯಾರೆಲ್ಲ ಜತೆಗಿದ್ದರು? ಕಳೆದ 4 ದಿನಗಳಿಂದ ನಾಪತ್ತೆ ಆಗಿದ್ದು ಏಕೆ ಎಂಬಿತ್ಯಾದಿ 30ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸಿಸಿಬಿ ಅಧಿಕಾರಿಗಳು ಜನಾರ್ದನ ರೆಡ್ಡಿಯಿಂದ ಉತ್ತರ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ವಿಡಿಯೋ ಬಿಡುಗಡೆ ಮಾಡಿದ್ದ ಜನಾರ್ದನ ರೆಡ್ಡಿ

ಸಿಸಿಬಿ ಕಚೇರಿಗೆ ಬರುವ ಮೊದಲು ರೆಡ್ಡಿ ಗೌಪ್ಯಸ್ಥಳದಲ್ಲಿ ವಕೀಲರೊಂದಿಗೆ ರ್ಚಚಿಸಿ ವಿಡಿಯೋ ಬಿಡುಗಡೆ ಮಾಡಿದ್ದರು. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರದಿಂದ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಯಾವ ಆರೋಪಕ್ಕೂ ಸಾಕ್ಷಾ್ಯಧಾರ ಇಲ್ಲ. 20 ದಿನಗಳಿಂದ ಬೆಂಗಳೂರಿನಲ್ಲಿರುವ ನನ್ನ ಮನೆ ಸುತ್ತ ಸುತ್ತುತ್ತಿದ್ದ ಪೊಲೀಸರು ಆತಂಕದ ವಾತಾವರಣ ಸೃಷ್ಟಿಸಿದ್ದರು. ಇದಾದ ಬಳಿಕ ಆಂಬಿಡೆಂಟ್ ಕಂಪನಿ ಪ್ರಕರಣದಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ವಿಡಿಯೋದಲ್ಲಿ ಹೇಳಿದ್ದರು. ಸಿಸಿಬಿ ಕಚೇರಿಗೆ ಹೋಗಿ ಈ ಬಗ್ಗೆ ಸ್ಪಷ್ಟನೆ ನೀಡಲು ಮುಂದಾಗಿದ್ದೆ. ನಿಮಗೆ ಯಾವುದೇ ನೋಟಿಸ್ ನೀಡಲಿಲ್ಲ. ಎಫ್​ಐಆರ್​ನಲ್ಲಿ ನಿಮ್ಮ ಹೆಸರಿಲ್ಲ. ನೋಟಿಸ್ ಬಂದರೆ ಮಾತ್ರ ಹೋಗಲು ಸಾಧ್ಯ ಎಂದು ವಕೀಲರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುಮ್ಮನಿದ್ದೆ. ನಾಪತ್ತೆಯಾಗಿದ್ದೆ ಎಂದು ಮಾಧ್ಯಮಗಳ ಮೂಲಕ ನನ್ನ ಬಗ್ಗೆ ತಪ್ಪು ಸಂದೇಶ ಹರಡಲಾಯಿತು. ಆದರೆ, ನಾನು ಬೆಂಗಳೂರಿನಲ್ಲೇ ಇದ್ದೇನೆ. ಸಿಸಿಬಿ ಪೊಲೀಸರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಕೈ ಚಾಚುವ ಸ್ಥಿತಿ ಬರಲ್ಲ

ಪೊಲೀಸ್ ಮಗನಾಗಿ ಪೊಲೀಸರ ಮೇಲೆ ನನಗೆ ಅಪಾರ ಗೌರವವಿದೆ. ರೆಡ್ಡಿ ಜೈಲಿನಲ್ಲಿದ್ದರು. ದಿವಾಳಿ ಆಗಿದ್ದಾರೆ. ಡೀಲ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಭಗವಂತ ಅಂತಹ ಪರಿಸ್ಥಿತಿ ನನಗೆ ತಂದಿಲ್ಲ. ಬದುಕಿರುವವರೆಗೂ 10 ಜನರಿಗೆ ಸಹಾಯ ಮಾಡುವ ಕೈ ಜನಾರ್ದನ ರೆಡ್ಡಿಗೆ ಇರುತ್ತದೆ. ಕೈ ಚಾಚುವ ಪ್ರಶ್ನೆ ಬರುವುದಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ಮೊದಲು ವಕೀಲ ಚಂದ್ರಶೇಖರ್ ಮಾತನಾಡಿ, ಆಂಬಿಡೆಂಟ್ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ಜನಾರ್ದನ ರೆಡ್ಡಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. ಪೊಲೀಸ್ ಪ್ರಕಟಣೆಯಲ್ಲಿ ರೆಡ್ಡಿ ವಿರುದ್ಧ ಆರೋಪ ಮಾಡಿದ್ದರು. ಆದರೆ, ಅವೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ವಿವರಿಸಿದರು.

ಸಿಸಿಬಿ ಕಚೇರಿ ಸುತ್ತ ಭದ್ರತೆ

ಕಚೇರಿ ಬಳಿ ಅಹಿತಕರ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಒಂದು ಕೆಎಸ್​ಆರ್​ಪಿ ತುಕಡಿ ನಿಯೋಜಿಸಲಾಗಿತ್ತು. ಕಚೇರಿ ಮುಂದೆ ನೂರಾರು ಜನರು ಜಮಾಯಿಸಿದ್ದರು.

ಬಾಗಿಲು ಮುಚ್ಚಿ ವಿಚಾರಣೆ

ವಿಚಾರಣೆ ನಡೆಸುವ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಸಿಸಿಬಿ ಕಚೇರಿಗೆ ಪ್ರವೇಶ ಇರಲಿಲ್ಲ. ಜನಾರ್ದನ ರೆಡ್ಡಿ ವಕೀಲರು, ಸಹಚರರು, ಮಾಧ್ಯಮದವರೂ ಸೇರಿ ಎಲ್ಲರನ್ನೂ ಕಚೇರಿಯಿಂದ ಹೊರಗೆ ಕಳುಹಿಸಿ ಗೇಟ್ ಹಾಕಲಾಗಿತ್ತು.