ಪೂಜಾರಿ ಎನ್‌ಕೌಂಟರ್‌ಗೆ ಕರೆ ನೀಡಿದ ಕಾಂಗ್ರೆಸ್ ಮುಖಂಡ

«ಸಾಮಾಜಿಕ ಜಾಲತಾಣಗಳಲ್ಲಿ ವಾಯ್ಸೆ ಮೆಸೇಜ್ ವೈರಲ್»

ವಿಜಯವಾಣಿ ಸುದ್ದಿಜಾಲ ಮಂಗಳೂರು
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ನೀಡಿರುವ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಮುಖಂಡನೊಬ್ಬ ‘ಪೂಜಾರಿ ಅವರನ್ನು ಎನ್‌ಕೌಂಟರ್ ಮಾಡಿ ಮುಗಿಸಬೇಕು’ ಎಂದು ಹೇಳಿದ್ದು, ಈ ಧ್ವನಿ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜಿಸಲಾದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಮಂದಿರದ ಬಗ್ಗೆ ವಿರೋಧ ಮಾಡುವವರು ಯಾರೂ ಇಲ್ಲ. ಸುಮ್ಮನೆ ವಿವಾದ ಸೃಷ್ಟಿಸುವುದು ಬೇಡ ಎಂದು ಹೇಳಿದ್ದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡನೊಬ್ಬ ಪೂಜಾರಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಇಲ್ಲವೇ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಬೇಕು ಎಂದು ಹೇಳಿ ವಾಯ್ಸ ಮೆಸೇಜ್ ಹರಿಯಬಿಟ್ಟಿದ್ದಾನೆ.

ವಾಯ್ಸ ಮೆಸೇಜ್‌ನಲ್ಲಿ ಇರುವುದು ಏನು?
ಪೂಜಾರಿ ಆರ್‌ಎಸ್‌ಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಕಳೆದ ಹತ್ತು ವರ್ಷಗಳಿಂದ ಹೇಳುತ್ತಾ ಬಂದಿದ್ದೆ. ಆದರೆ ಆಗ ಪಕ್ಷದವರೇ ನನ್ನನ್ನು ಬೈಯುತ್ತಿದ್ದರು. ಈಗ ಎಲ್ಲರಿಗೂ ಅರಿವಾಗಿದೆ. ತನ್ನ ಆತ್ಮಕಥೆ ಬಿಡುಗಡೆ ಮಾಡುವಾಗ ಪೂಜಾರಿ, ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿರಲಿಲ್ಲ, ಬದಲಾಗಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಆಹ್ವಾನಿಸಿದ್ದರು. ಆಗಲೇ ಎಲ್ಲರೂ ಜಾಗೃತರಾಗಬೇಕಿತ್ತು, ದೊಡ್ಡ ಕೋಮುವಾದಿ ಆಗಿರುವ ಅವರನ್ನು ಪಕ್ಷದಿಂದ ಉಚ್ಚಾಟಿಸುವವರೆಗೆ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬಾರದು. ಇಂತಹ ವ್ಯಕ್ತಿಗೆ ದೇವರು ಇಷ್ಟು ಆಯಸ್ಸು ಕೊಟ್ಟಿರುವುದೇ ದೊಡ್ಡ ದುರಂತ. ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ಅವರನ್ನು ದೇಶದಲ್ಲಿ ಇರಲು ಬಿಡಬಾರದು. ಎನ್‌ಕೌಂಟರ್ ಮಾಡಿ ಕೊಲ್ಲಬೇಕು. ಇಲ್ಲವೇ ದೇಶದಿಂದ ಗಡಿಪಾರು ಮಾಡಬೇಕು. ಅವರನ್ನು ಪಕ್ಷದಿಂದ ಉಚ್ಚಾಟಿಸದಿದ್ದರೆ ಪಕ್ಷಕ್ಕೆ ಬಹಿರಂಗವಾಗಿ ಧಿಕ್ಕಾರ ಹಾಕುವುದಾಗಿ ಆಡಿಯೋದಲ್ಲಿ ಬೆದರಿಕೆಯನ್ನೂ ಒಡ್ಡಲಾಗಿದೆ.

ಏಕವಚನ ಬಳಕೆ
2 ನಿಮಿಷ 42 ಸೆಕೆಂಡ್ ಇರುವ ವಾಯ್ಸ ಮೆಸೇಜ್‌ನ ಕೊನೆಯಲ್ಲಿ ಏಕವಚನ ಬಳಸಿ, ‘ಮುಸ್ಲಿಮರ ವಿರುದ್ಧ ಇಷ್ಟು ಕೀಳಾಗಿ ಮಾತನಾಡುತ್ತಿರುವ ನಾಲಾಯಕ್ ಜನಾರ್ದನ ಪೂಜಾರಿ, ನಿನಗೆ ಧಿಕ್ಕಾರ. ನಿನಗೆ ದೇವರು ತುಂಬಾ ಆಯಸ್ಸು ಕೊಡಲ್ಲ. ಇಷ್ಟು ಸಮಯ ಬದುಕಿಸಿ ಇಟ್ಟಿದ್ದೇ ದುರಂತ’ ಎಂದು ವ್ಯಕ್ತಿ ಆರೋಪಿಸಿದ್ದಾನೆ.

 

ಜನಾರ್ದನ ಪೂಜಾರಿ ಅವರ ಹೇಳಿಕೆಯಿಂದ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಅವರ ಪಕ್ಷಕ್ಕೆ ಹಾನಿಯುಂಟಾಗಲಿದೆ. ಹಿರಿಯ ನಾಯಕರಾಗಿ ಅವರ ನಡೆ ಸಂಶಯಕ್ಕೆ ಎಡೆ ಮಾಡಿದೆ. ಮುಸ್ಲಿಂ ಅಲ್ಪಸಂಖ್ಯಾತ ಮತದಾರರು ಈ ರೀತಿಯ ಧ್ವಂದ ನಿಲುವು ಹೊಂದಿದ ನಾಯಕರ ಮೇಲೆ ವಿಶ್ವಾಸ ಕಳೆದುಕೊಳ್ಳುವ ಕಾಲ ದೂರವಿಲ್ಲ. ಪೂಜಾರಿಯವರ ದ್ವಂದ ನಿಲುವಿನ ಬಗ್ಗೆ ಕಾಂಗ್ರೆಸ್ ನಾಯಕರು ಮೌನ ಮುರಿಯಬೇಕು.
– ಕೆ.ಅಶ್ರಫ್, ದ.ಕ.ಮುಸ್ಲಿಂ ಒಕ್ಕೂಟ ಅಧ್ಯಕ್ಷ