ನನ್ನಿಂದ ಬೆಳೆದವರಿಂದಲೇ ನಾನು ಮೂಲೆಗೆ

| ಸುರೇಂದ್ರ ಎಸ್.ವಾಗ್ಳೆ, ಮಂಗಳೂರು

‘ನನ್ನ ಪ್ರಯತ್ನದಿಂದ ರಾಜಕೀಯದಲ್ಲಿ ಸ್ಥಾನ ಗಳಿಸಿದ ಅನೇಕ ಮುಖಂಡರು ಇತ್ತೀಚಿನ ವರ್ಷಗಳಲ್ಲಿ ನನ್ನನ್ನೇ ಮೂಲೆಗುಂಪು ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಅಧಿಕಾರ ಸ್ಥಾನದಲ್ಲಿರುವವರು ದುರಹಂಕಾರ ಬೆಳೆಸಿಕೊಂಡಂತೆ ಕಾಣುತ್ತದೆ. ನನ್ನ ಮನೆ ಮುಂದೆಯೇ ಮುಖ್ಯಮಂತ್ರಿ ಪರಿವಾರ ಸಮೇತ ಪ್ರಯಾಣಿಸಿದರೂ ಒಂದು ಕ್ಷಣ ನಿಂತು ಹೋಗುವ ಸಜ್ಜನಿಕೆ ಕಾಣುತ್ತಿಲ್ಲ. ಜಿಲ್ಲೆ ಉಸ್ತುವಾರಿ ನಾಯಕರ ನಿರ್ಲಕ್ಷ್ಯ. ಸಿಎಂ ಇದನ್ನು ಮೌನವಾಗಿ ಒಪ್ಪಿಕೊಂಡಂತಿದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಜನ ಪಾಠ ಕಲಿಸುತ್ತಾರೆ. ಅಧಿಕಾರ ಜನಸೇವೆಗೆ ಅವಕಾಶ ಹೊರತು, ಅಹಂಕಾರದಿಂದ ಮೆರೆಯುವುದಕ್ಕೆ ಸಿಕ್ಕ ಪ್ರತಿಷ್ಠೆಯಲ್ಲ…’

ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅತ್ಮಕಥನ ‘ಸಾಲಮೇಳದ ಸಂಗ್ರಾಮ’ ಕೃತಿಯಲ್ಲಿ ಹೇಳಿಕೊಂಡಿರುವ ನೋವಿನ ಮಾತುಗಳಿವು…

ಸಕ್ರಿಯ ರಾಜಕಾರಣದಿಂದ ದೂರ ಸರಿದಿರುವ ಪೂಜಾರಿ, 40 ವರ್ಷಗಳ ರಾಜಕೀಯ ಬದುಕು, ಸಾಮಾಜಿಕ ಹೋರಾಟ, ಧಾರ್ವಿುಕ ಕ್ರಾಂತಿ, ಅನುಭವಿಸಿದ ನೋವು-ನಲಿವು, ಹುಟ್ಟಿನಲ್ಲಿ ಕಾಡಿದ ಬಡತನ, ಎದುರಾದ ಸವಾಲು ಸೇರಿ ಹಲವು ಅಂಶಗಳನ್ನು ಪುಸ್ತಕದಲ್ಲಿ ಅಡಕವಾಗಿಸಿದ್ದು, ಜ.26ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಪ್ರಣಬ್, ಎಚ್​ಡಿಡಿ ಉಲ್ಲೇಖ

ಇಂದಿರಾ ಗಾಂಧಿ ತಮ್ಮ ಮೇಲಿಟ್ಟಿದ್ದ ವಿಶ್ವಾಸ, ಪ್ರೀತಿ, ನಂಬಿಕೆಗೆ ದ್ರೋಹ ಬಗೆದಿಲ್ಲ ಎಂಬುದನ್ನು ವಿವರಿಸುತ್ತ, ಚುನಾವಣೆಯಲ್ಲಿ ಸೋತ ಪ್ರಣಬ್ ಮುಖರ್ಜಿ ಅವರನ್ನು ಸಚಿವರನ್ನಾಗಿ ಮಾಡಲು ಇಂದಿರಾರನ್ನು ಮನವೊಲಿಸಿರುವುದನ್ನು ದಾಖಲಿಸಿದ್ದಾರೆ. ‘ನನ್ನನ್ನು ಮಂತ್ರಿ ಮಾಡದಿದ್ದರೂ ಪರವಾಗಿಲ್ಲ, ಮುಖರ್ಜಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಿ’ ಎಂದು ವಿನಂತಿಸಿದ್ದನ್ನು ಹೇಳಿಕೊಂಡಿದ್ದಾರೆ.

ಮೊಯ್ಲಿ-ಕೃಷ್ಣ ಹಣಾಹಣಿ

1996ರ ಲೋಕಸಭೆ ಚುನಾವಣೆ ಬಳಿಕ ಸಂಯಕ್ತ ರಂಗ ದೇವೇಗೌಡರನ್ನು ನಾಯಕರನ್ನಾಗಿ ಆಯ್ಕೆ ಮಾಡಿತ್ತು. ಆಗ ದೇವೇಗೌಡರು ಮನೆಗೆ ಬಂದು ನೆರವು ಕೋರಿರುವುದು, ಪ್ರಧಾನಿಯಾದ ತಿಂಗಳೊಳಗೆ ಕುದ್ರೋಳಿ ದೇವಾಲಯಕ್ಕೆ ಬರಬೇಕೆಂಬ ಷರತ್ತು ವಿಧಿಸಿದ್ದು, ಕೊನೆಗೆ ಅವರು ವಚನಭಂಗ ಮಾಡಿರುವುದನ್ನು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಭ್ರಷ್ಟಾಚಾರ ಆರೋಪದಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರನ್ನು ರಾಜೀನಾಮೆ ನೀಡುವಂತೆ ಸೂಚಿಸಿದ್ದ ಅಂದಿನ ಪ್ರಧಾನಿ ನರಸಿಂಹ ರಾವ್, ಮುಖ್ಯಮಂತ್ರಿ ಆಗುವಂತೆ ಪೂಜಾರಿ ಅವರಿಗೆ ಸೂಚಿಸಿದ್ದರು. ಆದರೆ, ಪೂಜಾರಿ ಪಕ್ಷದ ಆದೇಶ ನಿರಾಕರಿಸಿದರು. ಆ ಹೊತ್ತಿನಲ್ಲಿ ವೀರಪ್ಪ ಮೊಯ್ಲಿ ಹಾಗೂ ಎಸ್.ಎಂ.ಕೃಷ್ಣ ನಡುವಿನ ಹಣಾಹಣಿ ಬಣ್ಣಿಸಿದ್ದು, ಮೊಯ್ಲಿ ಅವರು ಕರುಣಾಕರನ್ ಮೂಲಕ ದೊಡ್ಡ ಲಾಬಿ ನಡೆಸಿದರೂ ಅವರಿಗೆ ಯಾವ ಶಾಸಕರ ಬೆಂಬಲವೂ ಇರಲಿಲ್ಲ. ಶಾಸಕರು ಮತ ಹಾಕಿದ್ದರೆ ಕೃಷ್ಣ ಸಿಎಂ ಆಗುತ್ತಿದ್ದರು ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಸಭೆಗೆ ಬೆಂಚು ಹೊತ್ತು ತಂದ ಆಸ್ಕರ್ ಫರ್ನಾಂಡಿಸ್ ಲೋಕಸಭೆ ಟಿಕೆಟ್ ಪಡೆದಿದ್ದು ಹೇಗೆ ಎಂಬ ವಿವರಣೆ ಸಹ ಇದೆ. ಕುಟುಂಬದ ಬಗ್ಗೆ ಜಾಸ್ತಿ ವಿವರಿಸದೆ, ರಾಜ್ಯದಲ್ಲಿ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪೂಜಾರಿ ಸ್ಮರಿಸಿದ್ದಾರೆ. 1977ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಇಂದಿರಾ ಗಾಂಧಿ ಅವರೇ ಕರೆ ಮಾಡಿದ ವಿಚಾರದಿಂದ ಇತ್ತೀಚೆಗೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿರುವ ವಿಚಾರದವರೆಗೆ ಕಥನ ಮುಂದುವರಿದಿದೆ. 220 ಪುಟಗಳ ಈ ಕೃತಿ ಪೂಜಾರಿ ಅವರ ಬದುಕಿನ ಎಲ್ಲ ವಿವರಗಳೊಂದಿಗೆ ಆಕರ್ಷಕ ಚಿತ್ರ ಸಂಪುಟ ಹೊಂದಲಿದೆ.

ಬಂಗಾರಪ್ಪ ಅಂದ್ರೆ ಯಾರು?

1978ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗುವಂತೆ ಇಂದಿರಾ ಗಾಂಧಿ ಸೂಚಿಸಿದಾಗ ಪೂಜಾರಿಯವರು ಬಂಗಾರಪ್ಪ ಹೆಸರು ಪ್ರಸ್ತಾಪಿಸಿದರು. ಆಗ ಇಂದಿರಾ, ‘ಹೂ ಈಸ್ ದ್ಯಾಟ್ ಬಂಗಾರಪ್ಪ? ಐ ಹ್ಯಾವ್ ನಾಟ್ ಸೀನ್ ಹಿಮ್ ಅಂದರಂತೆ. ಅದರೂ ಬಂಗಾರಪ್ಪ ಪರ ನಿಂತು ಅಧ್ಯಕ್ಷ ಪಟ್ಟಕ್ಕೆ ಏರಿಸಿರುವುದನ್ನು ನೆನಪಿಸಿ, ಆರ್.ಗುಂಡೂರಾಯರು ಪ್ರವರ್ಧಮಾನಕ್ಕೆ ಬಂದಾಗ ಇಂದಿರಾ ಬಳಿ ಬಂಗಾರಪ್ಪ ಅರ್ಭಟಿಸಿದ್ದನ್ನು ದಾಖಲಿಸಲಾಗಿದೆ.

ನಾಲ್ಕು ಬಾರಿ ಸಿಎಂ ಅವಕಾಶ

ಇಂದಿರಾ ಗಾಂಧಿ ಹಾಗೂ ಅವರ ಕುಟುಂಬದೊಂದಿಗಿನ ಅಪ್ತತೆ ತಿಳಿಸಿರುವ ಪೂಜಾರಿ, ರಾಜಕೀಯ ಜೀವನದಲ್ಲಿ ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದಿತ್ತು, ಆದರೆ ಪಕ್ಷಕ್ಕೆ ಹಣ ಸಂಗ್ರಹಿಸಿಕೊಡುವ ಕಲೆ ಸಿದ್ಧಿಸದ ಕಾರಣ ಪಕ್ಷದ ಒತ್ತಡ ಇದ್ದರೂ ನಮ್ರ ಭಾವದಿಂದ ಒಪ್ಪಿಕೊಳ್ಳಲಿಲ್ಲ ಎಂದು ವಿವರಿಸಿದ್ದಾರೆ.

ಎಚ್ಚರಿಸಿದ್ದ ಇಂದಿರಾ ಗಾಂಧಿ

1983ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಮೊಯ್ಲಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿಸಲು ಇಂದಿರಾ ಗಾಂಧಿ ಅವರಲ್ಲಿ ಕೋರಿಕೆ ಸಲ್ಲಿಸಿದ್ದೆ. ಅದರೆ ಅಂದು ಇಂದಿರಾ, ‘ಮುಂದೆ ನೀನು ಪಶ್ಚಾತ್ತಾಪ ಪಡುತ್ತಿ’ ಎಂದು ಎಚ್ಚರಿಸಿದ್ದರೆಂದು ಪೂಜಾರಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *