ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ತೀರ್ಪು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ

ಬಳ್ಳಾರಿ: ಆಂಬಿಡೆಂಟ್‌ ಚಿಟ್‌ ಫಂಡ್‌ ಕಂಪನಿ ಡೀಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆಯ ತೀರ್ಪನ್ನು ನ್ಯಾಯಾಲಯ ನಾಳೆಗೆ ಕಾಯ್ದಿರಿಸಿದೆ.

1ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಳಿಕ ನಾಳೆಗೆ ತೀರ್ಪನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಒಂದು ದಿನ ರೆಡ್ಡಿ ಜೈಲಿನಲ್ಲಿಯೇ ಕಾಲಕಳೆಯಬೇಕಾಗಿದೆ.

ರೆಡ್ಡಿ ಪರ ಹಿರಿಯ ವಕೀಲ ಹನುಮಂತರಾಯ ವಾದ ಮಂಡಿಸಿ, ರಿಮ್ಯಾಂಡ್ ಅಪ್ಲಿಕೇಶನ್​ನಲ್ಲಿ ರೆಡ್ಡಿ ಹೆಸರು ಬಳಸಿಲ್ಲ. ವಿಚಾರಣೆಗೆ ಕರೆಸಿ ಬರೋಬ್ಬರಿ 12 ಗಂಟೆ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸಿದ ಮೇಲೂ ಠಾಣೆಯಲ್ಲೇ ಉಳಿಸಿಕೊಂಡಿದ್ದರು. ರಿಮೈಂಡ್ ಅಪ್ಲಿಕೇಶನ್​ನಲ್ಲಿ ಅಲಿಖಾನ್ ಹೆಸರಿತ್ತು ಹೊರತು ರೆಡ್ಡಿ ಹೆಸರಿರಲಿಲ್ಲ. ಜನಾರ್ದನ ರೆಡ್ಡಿಯನ್ನು ವಿನಾಕಾರಣ ಕರೆಸಿ ಬಂಧಿಸಲಾಗಿದೆ ಎಂದರು.

ಆರೋಪಿ-4 ಮತ್ತು ಆರೋಪಿ-5 ಇಬ್ಬರೂ ಚಿನ್ನದ ವ್ಯವಹಾರ ಮಾಡಿದ್ದಾರೆ. ಈ ಪ್ರಕಣದಲ್ಲಿ ಜನಾರ್ದನ ರೆಡ್ಡಿ ಪಾತ್ರ ಇಲ್ಲ. 4ನೇ ಆರೋಪಿ ಬಳಿ ಅಲಿಖಾನ್ ಚಿನ್ನ ಪಡೆದಿದ್ದಾನೆ. ಹೀಗಾಗಿ ಅಲಿಖಾನ್​​ ಚಿನ್ನ ವಾಪಸ್ ಕೊಡಬೇಕು. ಜನಾರ್ದನ ರೆಡ್ಡಿಗೂ, ಚಿನ್ನಕ್ಕೂ ಸಂಬಂಧವಿಲ್ಲ ಎಂದು ವಾದ ಮಂಡಿಸಿದರು.

ಸಿಸಿಬಿ ಪರ ವಕೀಲರಿಗೆ ನ್ಯಾಯಾಧೀಶರ ತರಾಟೆ

ಕಂಪನಿಗೂ ಆರೋಪಿಗೂ ಏನ್ ಸಂಬಂಧ? ವಿವರಿಸಿ. ರೆಡ್ಡಿಗೂ, ಆ ಕಂಪನಿಗೂ ಯಾವುದೇ ಸಂಬಂಧವಿಲ್ಲ. ಸಾರ್ವಜನಿಕರಿಂದ ರೆಡ್ಡಿ ಹಣ ಸಂಗ್ರಹಿಸಿಲ್ಲ. ಹಣ ಸಂಗ್ರಹ ಮತ್ತು ವಂಚನೆ ಬಗ್ಗೆ ಯಾರು ದೂರು ಕೊಟ್ಟಿಲ್ಲ. 1 ನೇ ಆರೋಪಿಯ ಹೇಳಿಕೆಯಂತೆ ರೆಡ್ಡಿಯನ್ನು ಬಂಧಿಸಿದ್ದೀರಾ? ಎಂದು ಸಿಸಿಬಿ ವಕೀಲರಿಗೆ ನ್ಯಾಯಾಧೀಶರು ಪ್ರಶ್ನಿಸಿದರು.

ಸಿಸಿಬಿ ಪರ ವಕೀಲರು ಪ್ರತಿವಾದ ನಡೆಸಿ, ಇದು 700 ಕೋಟಿ ರೂ. ವಂಚನೆ ಪ್ರಕರಣ. 6ನೇ ಆರೋಪಿ ರೆಡ್ಡಿ 20 ಕೋಟಿ ರೂ. ಪಡೆದಿದ್ದಾರೆ. 1 ನೇ ಆರೋಪಿ ಜತೆ ಅಕ್ರಮವಾಗಿ ಡೀಲ್ ಮಾಡಿದ್ದಾರೆ. ಜನವರಿಯಲ್ಲೇ ರೆಡ್ಡಿ ಕಂಪನಿ ಜತೆ ಡೀಲ್ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದರು. (ದಿಗ್ವಿಜಯ ನ್ಯೂಸ್)