More

    ರಾಷ್ಟ್ರಪತಿಯೊ ರಾಷ್ಟ್ರಪತ್ನಿಯೊ?: ಜನಮತ

    ರಾಷ್ಟ್ರಪತಿಯೊ ರಾಷ್ಟ್ರಪತ್ನಿಯೊ?: ಜನಮತನೂತನ ರಾಷ್ಟ್ರಪತಿ ದ್ರೌಪದಿ ಮುಮು ಅವರ ಆಯ್ಕೆ ಕಾಂಗ್ರೆಸ್​ಗೆ ನುಂಗಲಾರದ ತುತ್ತು. ಯಾಕೆ? ಅನೇಕ ಕಾರಣಗಳಲ್ಲಿ ಒಂದಂತೂ ಇದು. ಹಿಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೋನಿಯಾಜಿಯ ಮುಂದೆ ಕೈಮುಗಿದು ನಿಲ್ಲುತ್ತಿದ್ದರು. ಕಾಂಗ್ರೆಸ್ ಅಧಿನಾಯಕಿಗೆ ಸಲ್ಲಬೇಕಾದ ಗೌರವ ಅದೆಂದು ಕಾಂಗೆಸ್ಸಿಗರ ಮೂಢನಂಬಿಕೆ. ಸೋನಿಯಾಗೆ ಯಾರಿಗೂ ಕೈ ಮುಗಿದು ಅಭ್ಯಾಸ ಇಲ್ಲ. ಇದೀಗ ಭಾರತೀಯ ಬುಡಕಟ್ಟು ಜನಾಂಗದ ಒಬ್ಬ ಮಹಿಳೆಗೆ ಇವರು ಕೈಮುಗಿಯುವುದು ತರವೆ? ಎಂಥ ಸಂಕಟದ ಪರಿಸ್ಥಿತಿ ನೋಡಿ. ಈ ಸಂಕಟವನ್ನು ಹೊರಹಾಕಿ ಹಗುರ ಮಾಡಿಕೊಳ್ಳಬೇಕಲ್ಲ. ಮೋದಿಯನ್ನು ಆಡಿಕೊಂಡದ್ದು, ಅಣಕಿಸಿದ್ದು ಆಯಿತು. ದ್ರೌಪದಿ ಮುಮುರನ್ನೂ ಆಡಿಕೊಂಡರೆ ಸ್ವಲ್ಪ ಸಮಾಧಾನ ಆಗಬಹುದು. ಅದಕ್ಕೆ ಬೇಕಂತಲೆ ‘ರಾಷ್ಟ್ರಪತ್ನಿ’ ಎಂದು ಹೇಳುತ್ತಿದ್ದಾರೆ. ಯಾರು? ಮಹಾಮೇಧಾವಿಯಾದ ಅಧೀರ್ ರಂಜನ್ ಚೌಧರಿ. ಕಾಂಗ್ರೆಸ್​ನಲ್ಲಿ ಈಗ ಇರುವವರೆಲ್ಲ ಮೇಧಾಶಕ್ತಿಯ ಪ್ರತೀಕಗಳೆ ಬಿಡಿ. ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಮಗಳು ಇನ್ನೂ ಓದುತ್ತಿರುವ ಹುಡುಗಿ. ಬಾರ್ ನಡೆಸುತ್ತಿದ್ದಾಳೆಂದು ಮಿಥ್ಯಾರೋಪ ಮಾಡಿದ್ದಾರೆ. ಕರ್ನಾಟಕದ ಜಯರಾಮ್ ರಮೇಶ ಕೂಡ ಈ ಆರೋಪಕರ್ತರಲ್ಲಿ ಒಬ್ಬರು.

    ರಾಷ್ಟ್ರಪತಿಯಂಥ ಉನ್ನತ ಸ್ಥಾನದಲ್ಲಿರುವ ಮಹಿಳೆಯನ್ನು ‘ರಾಷ್ಟ್ರಪತ್ನಿ’ ಎಂದು ಹೇಳಬಹುದೆ? ಈ ಪದದ ಅರ್ಥದ ಕಡೆಗೆ ಸ್ವಲ್ಪ ಗಮನ ಹರಿಸೋಣ. ‘ಪತಿ’ ಎಂಬ ಸಂಸ್ಕೃತ ಪದಕ್ಕೆ ರಕ್ಷಿಸುವವ ಎಂದರ್ಥ (ಪಾತಿ ಇತಿ ಪತಿಃ). ಗಂಡ ಎಂಬರ್ಥದಲ್ಲಿಯೂ ಬಳಕೆಯಲ್ಲಿದೆ. ನನ್ನ ಪತಿ, ಸೀತಾಪತಿ, ಉಮಾಪತಿ ಇತ್ಯಾದಿಗಳಲ್ಲಿ ಹೀಗೆ ಬಳಕೆ ಆಗಿರುವುದನ್ನು ನೋಡಬಹುದು. ರಾಷ್ಟ್ರಪತಿ ಎಂದರೆ ರಾಷ್ಟ್ರಪ್ರಮುಖ ಎಂದರ್ಥವೆ ಹೊರತು, ಕಾಪಾಡುವವ ಅಥವಾ ಗಂಡ ಎಂದಲ್ಲ. ಪದಗಳಿಗೆ ಸನ್ನಿವೇಶ, ಸಂದರ್ಭದ ಔಚಿತ್ಯವರಿತು ಅರ್ಥ ಹೇಳಬೇಕು. ದೇಶವನ್ನು ಸರ್ಕಾರಗಳು ಆಳಿದರೆ ಗಡಿಗಳನ್ನು ಮೂರು ವಿಧದ ಸೇನೆಗಳು, ಸೇನಾಧಿಪತಿಗಳು ಕಾಯುತ್ತಾರೆ. ರಾಷ್ಟ್ರಪತಿ ಎಂಬುದು ಆಲಂಕಾರಿಕ ಹುದ್ದೆ. ಸಾಂಕೇತಿಕ ಅರ್ಥವಿರುವ ಪದ. ಯಾವ ರಾಷ್ಟ್ರಪತಿಯೂ ದೇಶವನ್ನು ಕಾಯುವುದಿಲ್ಲ. ಪತಿಯ ಸ್ತ್ರೀಲಿಂಗ ರೂಪ ಪತ್ನಿ ಆಗುವುದಿಲ್ಲ. ‘ಪತಿ’ ಪದಕ್ಕೆ ಕಾಪಾಡುವವನು ಎಂದರ್ಥವಾದರೆ ‘ಪತ್ನಿ’ ಪದಕ್ಕೆ ಪತಿಯ ಯಜ್ಞಕಾರ್ಯದಲ್ಲಿ ಸಹಕರಿಸುವವಳು ಎಂಬರ್ಥ- ಪತ್ಯುನೋ ಯಜ್ಞ ಸಂಯೋಗೆ. ಹೆಂಡತಿ ಇಲ್ಲದೆ ಪುರುಷ ಯಜ್ಞ ಮಾಡುವಂತಿಲ್ಲ. ಸೀತಾಪರಿತ್ಯಾಗದ ನಂತರ ಶ್ರೀರಾಮನು ಸೀತಾದೇವಿಯ ಪುತ್ಥಳಿ ಮಾಡಿಸಿ ಜತೆಯಲ್ಲಿಟ್ಟುಕೊಂಡೆ ಯಜ್ಞ ನೆರವೇರಿಸಿದ್ದನ್ನು ಸ್ಮರಿಸಬಹುದು.

    ಮೇಲ್ಮಟ್ಟದ ಸ್ಥಾನವನ್ನು ಸೂಚಿಸುವ ಪದವಾಗಿ ‘ರಾಷ್ಟ್ರಪತಿ’ಯನ್ನು ಸ್ತ್ರೀ-ಪುರುಷರಿಬ್ಬರಿಗೂ ಬಳಸಬಹುದಾಗಿದೆ. ಸಾಂಕೇತಿಕ ಅರ್ಥ ಪುರುಷನಿಗೆ ಅನ್ವಯಿಸುವುದಾದರೆ ಸ್ತ್ರೀಗೂ ಅನ್ವಯಿಸಬಹುದಾಗಿದೆ. ಮುಮು ಅವರನ್ನು ರಾಷ್ಟ್ರಪತಿ ಎಂದೇ ಸಂಬೋಧಿಸಬೇಕು. ರಾಷ್ಟ್ರಪತ್ನಿ ಎಂದು ಹೇಳುವುದು ಅರ್ಥಹೀನ. ತಿಳಿದು ಮಾತಾಡಬೇಕು, ತಿಳಿಯದೆ ಇದ್ದರೆ ಬಾಯಿ ಮುಚ್ಚಿಕೊಂಡಿರಬಹುದು, ಅಜ್ಞಾನ ಪ್ರದರ್ಶನ ಏಕೆ?

    | ಪ್ರೊ. ಎಸ್. ಆರ್. ಲೀಲಾ ವಿಧಾನ ಪರಿಷತ್ ಮಾಜಿ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts