More

    ಮುಂದೆಯೂ ಒಂದು ದೃಷ್ಟಿ ಇರಲಿ!

    ಕರೊನಾ ಮಾರಿಯ ವಿರುದ್ಧದ ಸಮರ ಈಗ ತುರುಸಿನಲ್ಲಿದೆ ಮತ್ತು ರಾಜ್ಯ ಸರ್ಕಾರ ಸಮರ್ಥವಾಗಿ ಈ ಸಮರವನ್ನು ಗೆಲ್ಲುವತ್ತ ಮುನ್ನಡೆಸುತ್ತಿದೆ. ಜನರೂ ಈ ಎಲ್ಲ ಕಾರ್ಯಗಳಿಗೆ ಸ್ಪಂದಿಸುತ್ತಿದ್ದಾರೆ, ಸಹಕಾರ ನೀಡುತ್ತಿದ್ದಾರೆ. ಈ ‘ಯುದ್ಧ’ ಮುಗಿದು ಜನಜೀವನ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳುವುದೆಂದು ಆಶಿಸೋಣ. ಸಹಜ ಸ್ಥಿತಿಗೆ ಮರಳುವುದು ಕೂಡ ಹಂತ-ಹಂತವಾಗಿಯೇ ಆಗಬೇಕು. ಈ ನಿಟ್ಟಿನಲ್ಲಿ ನಾವು ಸ್ವಲ್ಪ ದೂರಾಲೋಚನೆಯನ್ನು ಮಾಡುವುದು ಸೂಕ್ತ.

    ಈವರೆಗಿನ ಅನುಭವದಿಂದ ಒಂದು ಸಂಗತಿ ವೇದ್ಯವಾಗುವುದೇನೆಂದರೆ, ಹೆಚ್ಚಿನ ಜನಸಾಂದ್ರತೆ ಇದ್ದಲ್ಲಿ ಇಂತಹ ಸೋಂಕು ರೋಗ ಹರಡುವುದು ಬೇಗ ಹಾಗೂ ನಿಯಂತ್ರಣ ಕೂಡ ಕಷ್ಟ. ಆದ್ದರಿಂದ, ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು, ನಮ್ಮ ನಗರ ಹಾಗೂ ಪಟ್ಟಣಗಳಲ್ಲಿನ ಜನಸಾಂದ್ರತೆಯನ್ನು ಕಡಿಮೆಗೊಳಿಸುವುದರ ಅಗತ್ಯದ ಬಗ್ಗೆ ಯೋಚಿಸಬೇಕಾಗಿದೆ. ಜನಸಾಮಾನ್ಯರ ಗಳಿಸುವ ಶಕ್ತಿಗೆ ಪೆಟ್ಟಾಗಿರುವುದು ಹಾಗೂ ಇದರ ನೋವನ್ನು ಕಡಿಮೆ ಮಾಡುವುದು ಮೊದಲ ಆದ್ಯತೆ ಆಗಬೇಕಿದೆ.

    ಅರ್ಥವ್ಯವಸ್ಥೆಯ ದೃಷ್ಟಿಯಿಂದ ನೋಡಿದಾಗ, ಲಾಕ್​ಡೌನ್​ನ ನೇರ ಪರಿಣಾಮ ಖಾಸಗಿ ವಲಯದ ಸಂಘಟಿತ ಮತ್ತು ಅಸಂಘಟಿತ ವರ್ಗ, ವಾಣಿಜ್ಯ ವಲಯ, ಕೃಷಿ ವಲಯ-ಆದಾಯದಲ್ಲಿ ಆಗಿರುವ, ಆಗಲಿರುವ ಕೊರತೆ. ಅಸಂಘಟಿತ ವಲಯದ ಕಾರ್ವಿುಕರಿಗೆ ಇದರ ಹೊಡೆತ ಈಗಾಗಲೇ ಬಿದ್ದಿದೆ. ಇವರಲ್ಲಿ ಹೆಚ್ಚಿನ ಪಾಲು ಜನ ಲಾಕ್​ಡೌನ್ ಘೊಷಣೆ ನಂತರ ತಮ್ಮ-ತಮ್ಮ ಹಳ್ಳಿಗಳಿಗೆ ಈಗಾಗಲೇ ಹೋಗಿ ಆಗಿದೆ. ಆದ್ದರಿಂದ, ಕರೊನಾ ನಂತರದ ಪುನರ್ ವ್ಯವಸ್ಥೆ ಬಗ್ಗೆ ಸರ್ಕಾರ ತೆಗೆದುಕೊಳ್ಳಬೇಕಾಗಿರುವ ಬಹು ದೊಡ್ಡ ನಿರ್ಧಾರ ಈ ವಲಸೆ ಬಂದ (ಹಾಗೂ ಹಿಂತಿರುಗಿ ಹೋಗಿರುವ) ಜನರ ಬಗ್ಗೆಯೇ ಇರಬೇಕೆನ್ನುವುದು ನ್ಯಾಯವೆನ್ನಿಸುತ್ತದೆ. ವಲಸೆಯನ್ನು ತಡೆಯುವ ಹಾಗೂ ಹಿಮ್ಮುಖಗೊಳಿಸುವ ಬಗ್ಗೆ ಈಗಾಗಲೇ ರಾಷ್ಟ್ರ, ರಾಜ್ಯದಲ್ಲಿ ಸಾಕಷ್ಟು ಚರ್ಚೆ, ವಾದ-ಸಂವಾದ ನಡೆದಿದೆ. ಈ ದಿಶೆಯಲ್ಲಿ ಒಂದು ದಿಟ್ಟ ನಿರ್ಧಾರ ತಳೆಯುವ ಅವಕಾಶ ಈಗ ಬಂದೊದಗಿದೆ.

    ಹಳ್ಳಿಯ ಜನರ ಕೃಷಿ ಆಧಾರಿತ ಉದ್ಯೋಗ ಹಾಗೂ ಕೃಷಿಯೇತರ ಉದ್ಯೋಗ ಇವೆರಡನ್ನೂ ಸಮ್ಮಿಳಿತಗೊಳಿಸುವ, ತನ್ಮೂಲಕ ಆದಾಯ ಭದ್ರತೆ ಸಾಧಿಸುವ ಅವಕಾಶವನ್ನು ಹಳ್ಳಿಯಲ್ಲಿ ಇನ್ನೂ ಉಳಿದಿರುವ (ಮತ್ತು ಈಗ ಹಳ್ಳಿಗೆ ಹಿಂತಿರುಗಿರುವ) ಯುವಜನರಿಗೆ ಒದಗಿಸಬಹುದಾಗಿದೆ. ಈ ಲಾಕ್​ಡೌನ್ ಅವಧಿಯಲ್ಲಿ ಸಾರ್ವಜನಿಕ ಸಂಪರ್ಕ ಹಾಗೂ ಸೇವೆಯ ಅಗತ್ಯ ಕಡಿಮೆ ಇರುವುದರಿಂದ ಕೆಲವು ಇಲಾಖೆಗಳಿಗೆ ಕೆಲಸದ ಒತ್ತಡ ಕಡಿಮೆ ಇರಬಹುದು. ಆದ್ದರಿಂದ, ಮುಂಚೂಣಿಯಲ್ಲಿರುವ ಇಲಾಖೆಗಳನ್ನು ಬಿಟ್ಟು ಉಳಿದ ಇಲಾಖೆಗಳು (ಉದಾಹರಣೆಗೆ ಕೃಷಿ, ಸಹಕಾರ, ವಾಣಿಜ್ಯ-ಉದ್ಯಮ, ಸಣ್ಣ ನೀರಾವರಿ ಇತ್ಯಾದಿ)ಈ ಅವಕಾಶವನ್ನು ಉಪಯೋಗಿಕೊಂಡು ಬಾಕಿ ಇರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಬಹುದು. ಅಲ್ಲದೆ , ಹಳ್ಳಿಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸುವದಕ್ಕಾಗಿ ಶೀಘ್ರಅವಧಿ, ಮಧ್ಯಮಾವಧಿ, ದೀರ್ಘಾವಧಿ ಯೋಜನೆಗಳನ್ನು ಸಂಯುಕ್ತವಾಗಿ ರೂಪಿಸಬಹುದು. ಅದೇ ರೀತಿ, ಇತರ ಇಲಾಖೆಗಳೂ ಕೂಡ (ಇಂಧನ, ಸಾರಿಗೆ, ಮಾಹಿತಿ ತಂತ್ರಜ್ಞಾನ, ಸಿಬ್ಬಂದಿ ಮತ್ತು ಆಡಳಿತ ಇತ್ಯಾದಿ) ಕ್ಷಮತೆಯಿಂದ ಕೆಲಸ ಮಾಡುವುದಕ್ಕೆ ಇರುವ ಅಡೆ-ತಡೆಗಳನ್ನು ಪಟ್ಟಿ ಮಾಡಿ, ಅವುಗಳ ನಿವಾರಣೆಗೆ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಬಹುದು. ತನ್ಮೂಲಕ, ಕರೊನಾ ನಂತರದ ಆರ್ಥಿಕ ಪುನಶ್ಚೇತನವನ್ನು ಶೀಘ್ರವಾಗಿ ಸಾಧಿಸುವುದಕ್ಕೆ ನೆರವಾಗಬಹುದು.

    | ಮನೋಹರ ಎಂ., ಬೆಂಗಳೂರು

    ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ: ಬೆಂಗಳೂರಿನ ಕಾರ್ಪೋರೇಟರ್ ಕುಟುಂಬಕ್ಕೂ ಬಂತಾ ಕರೊನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts