ಉಗ್ರರ ದಾಳಿ ತಡೆದ ದಿಟ್ಟ ನಾರಿಯರು!

ಶ್ರೀನಗರ: ಸೇನಾಧಿಕಾರಿಗಳಿಬ್ಬರ ಪತ್ನಿಯರ ದಿಟ್ಟ ಸಾಹಸ 14 ಜನರ ಜೀವ ಉಳಿಸಿದ ಅಪರೂಪದ ಪ್ರಕರಣಕ್ಕೆ ಕಾಶ್ಮೀರದ ನಗರೊಟ ಸೇನಾ ಶಿಬಿರ ಸಾಕ್ಷಿಯಾಗಿದೆ.

ಜಮ್ಮು-ಕಾಶ್ಮೀರದ ನಗರೊಟಾ ಸೇನಾನೆಲೆಯ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಉಗ್ರರ ತಂಡ, ಸೇನಾಧಿಕಾರಿಗಳು ಹಾಗೂ ಯೋಧರ ಕುಟುಂಬ ವಾಸವಿದ್ದ ಕಟ್ಟಡವನ್ನು ವಶಕ್ಕೆ ತೆಗೆದುಕೊಳ್ಳಲು ಸಂಚು ರೂಪಿಸಿತ್ತು. ಈ ವೇಳೆ ಉಗ್ರರ ಗುಂಡಿನ ದಾಳಿ, ಗ್ರೆನೇಡ್ ದಾಳಿಯ ಸದ್ದಿನಿಂದ ಎಚ್ಚರಗೊಂಡ ಸೇನಾಧಿಕಾರಿಗಳ ಪತ್ನಿಯರಿಗೆ ಸಂಭಾವ್ಯ ಅಪಾಯದ ಮುನ್ಸೂಚನೆ ದೊರೆತಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಮನೆಯಲ್ಲಿದ್ದ ವಸ್ತುಗಳನ್ನೇ ಬಳಸಿಕೊಂಡು ಸೇನಾ ಕ್ವಾರ್ಟರ್ಸ್ನ ಬಾಗಿಲಿಗೆ ಅಡ್ಡವಾಗಿಟ್ಟರು. ಇದರಿಂದಾಗಿ ಕಟ್ಟಡದೊಳಗೆ ಪ್ರವೇಶಿಸಲು ಉಗ್ರರು ನಡೆಸಿದ ಯಾವುದೇ ಯತ್ನ ಫಲಕೊಡಲಿಲ್ಲ. ಅಷ್ಟರಲ್ಲಾಗಲೇ ಸ್ಥಳಕ್ಕೆ ಆಗಮಿಸಿದ ಸೇನಾಪಡೆ ಎದುರಿಗೆ ಸಿಕ್ಕ ಉಗ್ರರನ್ನು ಸುಲಭವಾಗಿ ಕೊಂದು ಹಾಕುವಲ್ಲಿ ಯಶಸ್ವಿಯಾಯಿತು. ಉಗ್ರರು ದಾಳಿ ನಡೆಸಿದ ವೇಳೆ ಆ ದಿಟ್ಟ ಮಹಿಳೆಯರಿಬ್ಬರ ನವಜಾತ ಕಂದಮ್ಮಗಳು ಹಾಗೂ 12 ಸೈನಿಕರು ಕಟ್ಟಡದಲ್ಲಿದ್ದರು.

ಉಗ್ರರ ಸಂಚು ವಿಫಲ

ಮಂಗಳವಾರ ಪೊಲೀಸರ ಸಮವಸ್ತ್ರದಲ್ಲಿ ನಗರೊಟ ಸೇನಾ ನೆಲೆಗೆ ನುಗ್ಗಿದ ಉಗ್ರರಿಗೆ ಸೈನಿಕರು ವಾಸವಾಗಿದ್ದ ಕಟ್ಟಡದ ಒಳಗೆ ನುಗ್ಗುವುದು ಮುಖ್ಯ ಗುರಿಯಾಗಿತ್ತು. ಸೈನಿಕರ ಕುಟುಂಬದವರನ್ನು ಒತ್ತೆಯಾಳಾಗಿಟ್ಟುಕೊಳ್ಳುವ ಮೂಲಕ ಭಾರಿ ಪ್ರಮಾಣದಲ್ಲಿ ಜೀವ ಹಾಗೂ ಆಸ್ತಿ ಹಾನಿ ಎಸಗುವ ಸಂಚು ರೂಪಿಸಿದ್ದರು. ಒಂದೊಮ್ಮೆ ಅವರು ಕಟ್ಟಡದೊಳಗೆ ಅಡಗಿ ಕುಳಿತಿದ್ದೇ ಆದಲ್ಲಿ ಕಾರ್ಯಾಚರಣೆ ನಡೆಸುವುದು ಸೇನೆಗೆ ಕಷ್ಟವಾಗುತ್ತಿತ್ತು. ಈ ಸಂದರ್ಭದಲ್ಲಿ ಪ್ರಾಣ ಹಾನಿ ಹೆಚ್ಚುವ ಸಾಧ್ಯತೆಗಳೂ ಇದ್ದವೆಂದು ರಕ್ಷಣಾ ವಕ್ತಾರ ಲೆ.ಕ.ಮನೀಷ್ ಮೆಹ್ತಾ ತಿಳಿಸಿದ್ದಾರೆ.

ಇಂದು ಮೇಜರ್ ಮೃತದೇಹ ಬೆಂಗಳೂರಿಗೆ

ಉಗ್ರದಾಳಿಯಲ್ಲಿ ಮೃತಪಟ್ಟ ಮೇಜರ್ ಅಕ್ಷಯ್ ಗಿರೀಶ್ ಮೃತದೇಹ ಗುರುವಾರ ಬೆಳಗ್ಗೆ 11ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದೆ. ಗೇಟ್ ಗಾರ್ಡನ್ನಲ್ಲಿರುವ ನಿವಾಸದಲ್ಲಿ ಅಕ್ಷಯ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡ ಲಾಗಿದ್ದು, ಸಂಜೆ 4ಕ್ಕೆ ಹೆಬ್ಬಾಳದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

 

Leave a Reply

Your email address will not be published. Required fields are marked *