2018ರಲ್ಲಿ ಕದನ ವಿರಾಮ ಉಲ್ಲಂಘನೆಯಲ್ಲಿ ದಾಖಲೆ ಬರೆದ ಪಾಕಿಸ್ತಾನ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ನೆಲೆಗಳು, ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಗಳು ಈ ವರ್ಷ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಸೇನೆ ತಿಳಿಸಿದೆ.

2018ರಲ್ಲಿ ಪಾಕಿಸ್ತಾನ ಒಟ್ಟು 2936 ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ, ಇದು ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚು. ಕದನ ವಿರಾಮ ಉಲ್ಲಂಘನೆಯಿಂದಾಗಿ ಗುಂಡು ತಗುಲಿ 61 ಜನರು ಮೃತಪಟ್ಟಿದ್ದರೆ, 250 ಜನರು ಗಾಯಗೊಂಡಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2017 ಕ್ಕೆ ಹೋಲಿಸಿದರೆ 2018ರಲ್ಲಿ ಕದನ ವಿರಾಮ ಉಲ್ಲಂಘನೆ ಪ್ರಮಾಣ ಮೂರು ಪಟ್ಟು ಹೆಚ್ಚಿದೆ.2017ರಲ್ಲಿ 971 ಬಾರಿ ಕದನ ವಿರಾಮ ಉಲ್ಲಂಘನೆಯಾಗಿತ್ತು. ಪಾಕ್​ ಗುಂಡಿನ ದಾಳಿಗೆ 19 ಯೋಧರು ಹುತಾತ್ಮರಾಗಿದ್ದರೆ 12 ನಾಗರಿಕರು ಮೃತಪಟ್ಟಿದ್ದರು. ಒಟ್ಟು 151 ಜನರು ಗಾಯಗೊಂಡಿದ್ದರು. ಈ ಬಾರಿ ಕದನ ವಿರಾಮ ಉಲ್ಲಂಘನೆ ಪ್ರಮಾಣ ಹೆಚ್ಚಾಗಿರುವುದರಿಂದ ಜಮ್ಮು, ಕಥುವಾ, ಸಾಂಬಾ, ರಜೋರಿ, ಪೂಂಚ್​ ಜಿಲ್ಲೆಗಳ ಗಡಿ ಭಾಗದ ಜನರಲ್ಲಿ ಭಯ ಮನೆ ಮಾಡಿದೆ. ಹಲವು ಗ್ರಾಮಗಳಲ್ಲಿ ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.

ಮಾಜಿ ಪ್ರಧಾನಿ ದಿ. ಅಟಲ್​ ಬಿಹಾರಿ ವಾಜಪೇಯಿ ಅವರು 2003ರ ನವೆಂಬರ್​ 26 ರಂದು ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಭಾರತ ಮತ್ತು ಪಾಕಿಸ್ತಾನ ನಡುವೆ 3,323 ಕಿ.ಮೀ. ಉದ್ದದ ಗಡಿ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 221 ಕಿ.ಮೀ. ಅಂತಾರಾಷ್ಟ್ರೀಯ ಗಡಿ ಇದ್ದರೆ, 740 ಕಿ.ಮೀ. ಉದ್ದದ ಗಡಿ ನಿಯಂತ್ರಣ ರೇಖೆ ಇದೆ. (ಏಜೆನ್ಸೀಸ್​)