VIDEO| ಉದ್ವಿಘ್ನ ಪರಿಸ್ಥಿತಿಯ ನಡುವೆಯೂ ಕಾಶ್ಮೀರದಲ್ಲಿ ಹೋಳಿ ಸಂಭ್ರಮಿಸಿದ ಭಾರತೀಯ ಯೋಧರು

ನವದೆಹಲಿ: ದೇಶಾದ್ಯಂತ ಇಂದು ಸಂಭ್ರಮ ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಪುಲ್ವಾಮದಲ್ಲಿನ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಸೇನಾ ನಡುವೆ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೂ ಭಾರತೀಯ ಯೋಧರು ಕಾಶ್ಮೀರದಲ್ಲಿ ಹೋಳಿ ಆಡಿ ಸಂಭ್ರಮಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯಲ್ಲಿ ಭಾರತೀಯ ಯೋಧರೆಲ್ಲರೂ ಒಂದೆಡೆ ಸೇರಿ, ಒಬ್ಬರಿಗೊಬ್ಬರು ಬಣ್ಣದ ಹೋಕುಳಿ ಆಡಿದ್ದಾರೆ. ಜತೆಗೆ ಬಾಲಿವುಡ್​ ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಕುಣಿದು ಕುಪ್ಪಳಿಸಿದ್ದಾರೆ.

ಫೆ.14ರಂದು ಪುಲ್ವಾಮದಲ್ಲಿ ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಜೈಷ್​ ಎ ಮಹಮ್ಮದ್​ ಉಗ್ರ ಸಂಘಟನೆಯ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಗಡಿ ನಿಯಂತ್ರಣವನ್ನು ದಾಟಿ ವೈಮಾನಿಕ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವೆ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಪಾಕ್​ ಸೇನೆ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. (ಏಜೆನ್ಸೀಸ್​)