ಕಣಿವೆ ತುಂಬ ತಿರಂಗಾ: ಕಾಶ್ಮೀರದ ಲಾಲ್​ಚೌಕ್​ನಲ್ಲಿ ನಾಳೆ ತ್ರಿವರ್ಣ ಹಾರಿಸುವರೇ ಷಾ?

ಶ್ರೀನಗರ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಮೋದಿ ಸರ್ಕಾರ ಇದೀಗ ಅಲ್ಲಿ ಮತ್ತೊಂದು ಇತಿಹಾಸ ಬರೆಯಲು ಅಣಿಯಾಗಿದೆ. ಜಮ್ಮು-ಕಾಶ್ಮೀರದ ಹೃದಯಸ್ಥಾನ ಶ್ರೀನಗರದ ಲಾಲ್​ಚೌಕ್​ನಲ್ಲಿ ನಡೆಯಲಿರುವ 73ನೇ ಸ್ವಾತಂತ್ರೊ್ಯೕತ್ಸವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ತಿರಂಗಾ ಹಾರಿಸುವ ಸಾಧ್ಯತೆ ಇದೆ. ಉನ್ನತ ಮೂಲಗಳ ಪ್ರಕಾರ ಷಾ ಆ.14ರ ಸಂಜೆಯೇ ಶ್ರೀನಗರಕ್ಕೆ ತೆರಳಲಿದ್ದಾರಾದರೂ ಅಲ್ಲಿನ ಭದ್ರತಾ ಪರಿಸ್ಥಿತಿ ಆಧರಿಸಿ ಧ್ವಜಾರೋಹಣ ಕಾರ್ಯಕ್ರಮ ಅಂತಿಮವಾಗುವ ಸಾಧ್ಯತೆ ಇದೆ. ಒಂದೊಮ್ಮೆ ಲಾಲ್​ಚೌಕ್​ನಲ್ಲಿ ತ್ರಿವರ್ಣ ಧ್ವಜಾರೋಹಣ ನಡೆದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಲಡಾಖ್ ಭೇಟಿ ನಿಗದಿ: ಅಮಿತ್ ಷಾ ಶ್ರೀನಗರದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಆ.16 ಮತ್ತು 17ರಂದು ಲಡಾಖ್ ಪ್ರವಾಸದಲ್ಲಿರಲಿದ್ದಾರೆ. ಆದರೆ ಭದ್ರತಾ ಕಾರಣಗಳಿಂದಾಗಿ ಅವರ ಕಾರ್ಯಕ್ರಮಗಳ ಬಗ್ಗೆ ಕೊನೇ ಕ್ಷಣದವರೆಗೂ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಎರಡೇ ಬಾರಿ!: ಪಾಕಿಸ್ತಾನದ ಉಗ್ರ ಸಂಘಟನೆಗಳ ಬೆದರಿಕೆ ಹೊರತಾಗಿಯೂ ಅಂದಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ ಜೋಶಿ ಮತ್ತು ಆಗ ಆರೆಸ್ಸೆಸ್ ಪ್ರಚಾರಕರಾಗಿದ್ದ ನರೇಂದ್ರ ಮೋದಿ 1992ರ ಜ.26ರಂದು ಲಾಲ್​ಚೌಕ್​ನಲ್ಲಿ ಧ್ವಜಾರೋಹಣ ಮಾಡಿದ್ದರು. ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು 1948ರಲ್ಲಿ ಮೊದಲ ಬಾರಿ ಲಾಲ್​ಚೌಕ್​ನಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. ಆ ಬಳಿಕ ಈ ಸ್ಥಳಕ್ಕೆ ಹೆಚ್ಚಿನ ಮಹತ್ವ ಬಂದಿತ್ತು. 2011ರಲ್ಲಿ ಬಿಜೆಪಿ ಏಕತಾ ಯಾತ್ರೆ ನಡೆಸಿ ಜ.26ರಂದು ಧ್ವಜಾರೋಹಣ ನಡೆಸಲು ನಿರ್ಧರಿಸಿತ್ತಾದರೂ ಸಾಧ್ಯವಾಗಿರಲಿಲ್ಲ. ಕಡೆಗೆ ಲಾಲ್​ಚೌಕ್ ಪಕ್ಕದಲ್ಲಿ ತ್ರಿವರ್ಣ ಧ್ವಜ ಹಾರಿಸಿತ್ತು. ಇದಾದ ಬಳಿಕ ಲಾಲ್​ಚೌಕ್ ಸಮೀಪದ ಪಕ್ಷಿ ಮೈದಾನದಲ್ಲಿ ಪ್ರತಿ ವರ್ಷ ಧ್ವಜಾರೋಹಣ ನಡೆಯುತ್ತಿದೆ.

ನಿರ್ಬಂಧ ರದ್ದು ಬಗ್ಗೆ ಸ್ಪಷ್ಟನೆ

ಸ್ಥಳೀಯ ಆಡಳಿತ ರಾಜ್ಯದ ಭದ್ರತೆಗೆ ಬಗ್ಗೆ ಪರಿಶೀಲನೆ ನಡೆಸಿ ನೀಡುವ ವರದಿಯನ್ನು ಆಧರಿಸಿ ಈಗ ವಿಧಿಸಿರುವ ನಿರ್ಬಂಧಗಳನ್ನು ರದ್ದುಪಡಿಸುವ ಬಗ್ಗೆ ನಿರ್ಧರಿಸಲಾಗುವುದೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಜಮ್ಮು-ಕಾಶ್ಮೀರ ಸ್ಥಳೀಯ ಆಡಳಿತ ಬುಧವಾರ ಹಲವು ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಾಭ್ಯಾಸ ನಡೆಯಲಿದ್ದು, ಆಗ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದೆ.

ಹೂಡಿಕೆ ಸಮಾವೇಶ

ಜಮ್ಮು- ಕಾಶ್ಮೀರಕ್ಕೆ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಸೆಳೆಯುವ ಉದ್ದೇಶದಿಂದ ರಾಜ್ಯ ಆಡಳಿತ ವತಿಯಿಂದ ಅ. 12ರಿಂದ 14ರವರೆಗೆ ಮೂರು ದಿನಗಳ ಅಂತಾರಾಷ್ಟ್ರೀಯ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ. 8 ರಾಷ್ಟ್ರಗಳ ಹೂಡಿಕೆದಾರರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಕಳೆಗಟ್ಟಿದ ಸ್ವಾತಂತ್ರ್ಯ ಸಂಭ್ರಮ

ಕಣಿವೆಯ ಮೂಲೆಮೂಲೆಯಲ್ಲೂ ಈ ಬಾರಿ ಸ್ವಾತಂತ್ರೊ್ಯೕತ್ಸವದ ಸಂಭ್ರಮ ಕಳೆಗಟ್ಟಿದೆ. ಪ್ರತಿ ಪಂಚಾಯಿತಿಗಳ ಸರ್​ಪಂಚ್​ಗಳಿಗೂ ಕೇಂದ್ರ ಸರ್ಕಾರದ ವತಿಯಿಂದಲೇ ತ್ರಿವರ್ಣಧ್ವಜ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದ್ದಾರೆ. ಜತೆಗೆ ರಾಜ್ಯದ ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ಎಂದು ಕರೆಕೊಟ್ಟಿದ್ದಾರೆ. ಕಾಶ್ಮೀರ ಬಿಜೆಪಿ ಘಟಕ ದೆಹಲಿಯಿಂದ 50,000 ಧ್ವಜಗಳನ್ನು ತರಿಸಿಕೊಂಡಿದ್ದು, ಇದನ್ನು ಮನೆಮನೆಗೂ ತಲುಪಿಸುವ ಕಾರ್ಯದಲ್ಲಿ ತೊಡಗಿದೆ.

ಭಾರತಕ್ಕೆ ವಿಶ್ವ ಬಲ

ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿಯೆದುರು ಚರ್ಚೆಗೆ ತರಬೇಕೆಂಬ ಪಾಕಿಸ್ತಾನದ ಪ್ರಯತ್ನಕ್ಕೆ ಆರಂಭಿಕ ಹಂತದಲ್ಲಿಯೇ ಹಿನ್ನಡೆ ಆಗಿದೆ. ಯುಎನ್​ಎಸ್​ಸಿ ಮುಖ್ಯಸ್ಥ ಸ್ಥಾನದಲ್ಲಿರುವ ಪೋಲೆಂಡ್ ಈ ಸಮಸ್ಯೆಯನ್ನು ಭಾರತ- ಪಾಕ್ ದ್ವಿಪಕ್ಷೀಯ ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಸೂಚಿಸಿದೆ. ಯುಎನ್​ಎಸ್​ಸಿಯ ಶಾಶ್ವತ ಸದಸ್ಯತ್ವ ಹೊಂದಿರುವ ರಷ್ಯಾ ಕೂಡ ಉಭಯ ರಾಷ್ಟ್ರಗಳು ಮಾತುಕತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕೆಂದು ಹೇಳಿತ್ತು. ಯುಎನ್​ಎಸ್​ಸಿಯ ಮುಖ್ಯಸ್ಥ ಸ್ಥಾನ ಪ್ರತಿ ತಿಂಗಳು ಸದಸ್ಯ ರಾಷ್ಟ್ರಗಳ ನಡುವೆ ಬದಲಾಗುತ್ತದೆ. ಪೋಲೆಂಡ್ ಆಗಸ್ಟ್​ನಲ್ಲಿ ಮುಖ್ಯಸ್ಥ ಸ್ಥಾನದಲ್ಲಿದೆ.

ಗಡಿಯಲ್ಲಿ ಪಾಕಿಸ್ತಾನ ಪರಿಸ್ಥಿತಿಯನ್ನು ವಿಕೋಪಕ್ಕೆ ಕೊಂಡೊಯ್ಯುತ್ತಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸಿದ್ಧ.

| ಬಿಪಿನ್ ರಾವತ್ ಸೇನಾ ಮುಖ್ಯಸ್ಥ

Leave a Reply

Your email address will not be published. Required fields are marked *