ಮುದ್ದೇಬಿಹಾಳ: ಕುಡಿಯುವ ನೀರು ಪೂರೈಸುವ ಕೊಳವೆಯ ವಾಲ್‌ನ ಗುಂಡಿಯಲ್ಲಿ ನಾಯಿಯ ಕಳೇಬರ ಪತ್ತೆಯಾದ ಹಿನ್ನೆಲೆಯಲ್ಲಿ ತಾಪಂ ಇಒ ನಿಂಗಪ್ಪ ಮಸಳಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಆರ್.ಎಸ್.ಹಿರೇಗೌಡರ ಶುಕ್ರವಾರ ತಾಲೂಕಿನ ಜಮ್ಮಲದಿನ್ನಿ ಕ್ರಾಸ್‌ನಲ್ಲಿರುವ ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಪಂ ಸಿಬ್ಬಂದಿ, ವಾಟರಮನ್ ಅವರನ್ನು ವಿಚಾರಿಸಿ ವಾಲ್ ಚಾಲೂ ಅಥವಾ ಬಂದ್ ಮಾಡಿದ ನಂತರ ಮುಚ್ಚಳದಿಂದ ಮುಚ್ಚದೆ ಬಿಟ್ಟಿದ್ದು ವಾಟರ್‌ಮನ್ ಬೇಜವಾಬ್ದಾರಿತನ ಎನ್ನುವುದನ್ನು ಅರಿತು ತರಾಟೆಗೆ ತೆಗೆದುಕೊಂಡು ಕ್ರಮದ ಎಚ್ಚರಿಕೆ ನೀಡಿದರು.
ವಿಜಯವಾಣಿಯೊಂದಿಗೆ ತಾಪಂ ಇಒ ನಿಂಗಪ್ಪ ಮಸಳಿ ಮಾತನಾಡಿ, ಗ್ರಾಮಸ್ಥರು ಆತಂಕ ಪಡುವ ಅಗತ್ಯ ಇಲ್ಲವೆಂದು ತಿಳಿ ಹೇಳಿದ್ದೇನೆ. ಆರೋಗ್ಯ ಇಲಾಖೆ ತಂಡ ಗ್ರಾಮದಲ್ಲಿದ್ದು ಜನರ ಆರೋಗ್ಯದ ನಿಗಾ ವಹಿಸಿದೆ. ಟ್ಯಾಂಕ್, ಕೊಳವೆ ಸ್ವಚ್ಛಗೊಳಿಸಲು ಆರ್‌ಡಬ್ಲುಎಸ್‌ನ ಎಇಇಗೆ ಸೂಚಿಸಲಾಗಿದೆ.
ಗ್ರಾಮವ್ಯಾಪ್ತಿಯ ಇಂಗಳಗೇರಿ ಗ್ರಾಪಂ ವಿಜಯಮಹಾಂತೇಶ ಕೋರಿ ವಿರುದ್ಧ ಆರೋಪ ಕೇಳಿಬಂದಿದ್ದು ಈ ಬಗ್ಗೆ ಅವರಿಗೆ ನೋಟಿಸ್ ನೀಡಿ ಜನರಿಗೆ ಸ್ಪಂದಿಸುವಂತೆ ತಿಳಿಸಲಾಗುತ್ತದೆ. ಗ್ರಾಮದಲ್ಲಿ ಜನರು ವಾಂತಿ, ಭೇದಿಗೆ ಈಡಾಗಿರುವ ಬಗ್ಗೆ ನಿಖರ ವರದಿ ಸಿಕ್ಕಿಲ್ಲ. ಆದರೂ ಮುಂಜಾಗ್ರತೆ ಕ್ರಮವಾಗಿ ನೀರು ಮತ್ತು ಜನರ ಆರೋಗ್ಯ ತಪಾಸಣೆಗೆ ಸೂಚಿಸಲಾಗಿದೆ ಎಂದರು.
ಎಇಇ ಹಿರೇಗೌಡರ ಮಾತನಾಡಿ, ಬ್ಲೀಚಿಂಗ್ ಪೌಡರ್ ಹಾಕಿ ವಾಲ್ ಸ್ವಚ್ಛಗೊಳಿಸಲಾಗಿದೆ. ವಾಲ್ ಚಾಲೂ, ಬಂದ್ ಮಾಡಿದ ಮೇಲೆ ಕಡ್ಡಾಯವಾಗಿ ಮುಚ್ಚಳ ಮುಚ್ಚುವಂತೆ ವಾಟರ್‌ಮನ್‌ಗೆ ಎಚ್ಚರಿಕೆ ನೀಡಲಾಗಿದೆ. ಇಒ ಅವರ ಸೂಚನೆಯಂತೆ ಟ್ಯಾಂಕ್, ಕೊಳವೆ ಸ್ವಚ್ಛಗೊಳಿಸಿದ ನಂತರವೇ ಹೊಸದಾಗಿ ನೀರನ್ನು ಹರಿಸಲಾಗುವುದು ಎಂದರು. ಅಶೋಕ ಈಚನಾಳ, ಶೇಖಪ್ಪ ಸಾವಳಗಿ, ಶೇಖಪ್ಪ ತಳವಾರ ಹಾಗೂ ಪಂಚಾಯಿತಿ ಸಿಬ್ಬಂದಿ ಇದ್ದರು.