ತಂದೆಯ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ: ಆನಂದ ನ್ಯಾಮಗೌಡ

ಬಾಗಲಕೋಟೆ: ಜಮಖಂಡಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ದೇಗುಲಕ್ಕೆ ತೆರಳಿದ ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಆನಂದ ನ್ಯಾಮಗೌಡ ಅವರು ಮತದಾನ ಮಾಡಿದರು.

ಜಮಖಂಡಿಯ ತಾಲೂಕು ಪಂಚಾಯಿತಿ ಬೂತ್ ಸಂಖ್ಯೆ 125ರಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ತಾಯಿ ಸುಮಿತ್ರಮ್ಮ, ಪತ್ನಿ ಕೀರ್ತಿ, ಸಹೋದರಿ ಸುಜಾತಾ, ಶ್ವೇತಾ, ಸಹೋದರ ಬಸವರಾಜ, ಸಹೋದರನ ಪತ್ನಿ ಕಾವ್ಯಾ ಸೇರಿ ಕುಟುಂಬಸ್ಥರು ಮತ ಚಲಾಯಿಸಿದರು.

ಮತದಾನಕ್ಕೂ ಮುಂಚೆ ಸ್ವಗ್ರಾಮ ಕಡಕೋಳ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜಮಖಂಡಿ‌ ಶುಗರ್ಸ್‌ನಲ್ಲಿರುವ ತಂದೆ ದಿವಂಗತ ಸಿದ್ದು ನ್ಯಾಮಗೌಡರ ತಂದೆಯ ಸಮಾಧಿಗೆ ಹಣೆ ಇಟ್ಟು ನಮಸ್ಕರಿಸಿ ಪೂಜೆ ಸಲ್ಲಿಸಿ ಮತಗಟ್ಟೆಗೆ ತೆರಳಿದರು.

ಮತ ಚಲಾಯಿಸಿ ಮಾತನಾಡಿದ ಅವರು ಉಪ ಚುನಾವಣೆಯಲ್ಲಿ ಗೆಲುವು ಖಚಿತ. ಕೃಷ್ಣಾ ನದಿ ಹೇಗೆ ಹರಿಯುತ್ತಿದೆಯೋ ಹಾಗೇ ಕಾಂಗ್ರೆಸ್ ಪಕ್ಷಕ್ಕೆ ಮತಗಳು ಹರಿದು ಬರಲಿವೆ. ಸೋಲಿನ ಭೀತಿಯಲ್ಲಿ ಇರುವ ಬಿಜೆಪಿಯವರು ನಮ್ಮ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಪ್ರಭಾವ ದುರುಪಯೋಗ ಮಾಡಿಲ್ಲ. ಹಣ ಹೆಂಡ ಹಂಚಿ ಮತದಾರರ ಮನವೊಲಿಸಿಲ್ಲ. ತಂದೆಯವರ ಅಭಿವೃದ್ಧಿ ಕಾರ್ಯಗಳು ನನಗೆ ಶ್ರೀರಕ್ಷೆ. ಬಿಜೆಪಿ‌ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅವರಿಗೆ ಸೋಲಿನ ಅನುಕಂಪ ಸಿಗಲ್ಲ. 2008ರಲ್ಲಿ ಇದೇ ಮಾತು ಹೇಳಿದ್ದರು. ಅಂದು ಗೆಲುವು ಪಡೆದಿದ್ದ ಅವರು ಅಭಿವೃದ್ಧಿ ಕೆಲಸ ಮಾಡಲಿಲ್ಲ. ಈಗ ಅವರಿಗೆ ಅನುಕಂಪ ಸಿಗಲ್ಲ. ನ. 6 ರಂದು ಭಾರಿ ಅಂತರದ ಗೆಲುವು ಪಡೆಯಲಿದ್ದೇನೆ ಎಂದರು. (ದಿಗ್ವಿಜಯ ನ್ಯೂಸ್)