ಜಂಬೂಸವಾರಿ: ಸಿಎಂ ಎಚ್​ಡಿಕೆಯಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ

ಮೈಸೂರು: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಶುಭಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಜಂಬೂಸವಾರಿ ವಿಧಿವತ್ತಾದ ಚಾಲನೆ ನೀಡಿದರು.

750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆಯನ್ನು ಅರ್ಜುನ 7ನೇ ಬಾರಿ ಹೊತ್ತು ಸಾಗುತ್ತಿದ್ದಾನೆ. ಮೆರವಣಿಗೆ ಬನ್ನಿ ಮಂಟಪದಲ್ಲಿ ಅಂತ್ಯವಾಗಲಿದೆ.

ಅರ್ಜುನ ಆನೆಯ ಎಡಬಲದಲ್ಲಿ ವರಲಕ್ಷ್ಮೀ, ಕಾವೇರಿ ಸಾಥ್ ನೀಡಿದ್ದು, ಕುಮ್ಕಿ ಆನೆಗಳಾಗಿ ವರಲಕ್ಷ್ಮೀ, ಕಾವೇರಿ ಆನೆಗಳೂ ಜಂಬೂಸವಾರಿಯಲ್ಲಿ ಭಾಗವಹಿಸಿವೆ. 13 ಬಾರಿ ಅಂಬಾರಿ ಹೊತ್ತಿರುವ ಬಲರಾಮನಿಗೆ ನಿಶಾನೆ ಗೌರವ ನೀಡಲಾಗಿದೆ. ಜಂಬೂಸವಾರಿ ಹಿಂದೆ ಸ್ತಬ್ಧ ಚಿತ್ರಗಳ ಮೆರವಣಿಗೆ ಸಾಗಲಿದ್ದು, ಈ ಬಾರಿ 42 ಸ್ತಬ್ಧ ಚಿತ್ರಗಳು ಪಾಲ್ಗೊಂಡಿವೆ.

ಮಧ್ಯಾಹ್ನ 2.30 ರಿಂದ 3.16 ರೊಳಗಿನ ಶುಭ ಕುಂಭ ಲಗ್ನದಲ್ಲಿ ಸಿಎಂ ಕುಮಾರಸ್ವಾಮಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಅರಮನೆಯ ಬಲರಾಮ ದ್ವಾರದಲ್ಲಿ ಪೂಜೆ ನೆರವೇರಿತು. ಈ ಮೂಲಕ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಲಾಯಿತು. (ದಿಗ್ವಿಜಯ ನ್ಯೂಸ್)