ಬಡವರ ಫ್ರಿಡ್ಜ್ ಮಾರಾಟ ಜೋರು

ಜಮಖಂಡಿ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ಉರಿ ಬಿಸಿಲಿನಲ್ಲಿ ನಾಲ್ಕೈದು ಹೆಜ್ಜೆ ನಡೆಯುವಷ್ಟರಲ್ಲಿ ಜನರು ದಾಹದಿಂದ ಬಸವಳಿಯುತ್ತಿದ್ದಾರೆ. ಮನೆಗಳಲ್ಲಿ ಕೊಡ, ಸ್ಟೀಲಿನ ಟಾಕಿಗಳಲ್ಲಿ ಸಂಗ್ರಹಿಸಿದ ಕುಡಿವ ನೀರು ಬಿಸಿನೀರಿನಂತಾಗುತ್ತಿದೆ. ಹೀಗಾಗಿ ಬಡವರ ಫ್ರಿಡ್ಜ್ ಎಂದೇ ಖ್ಯಾತಿಯಾದ ಮಣ್ಣಿನ ಮಡಕೆಗಳಿಗೆ ಜನರು ಮೊರೆ ಹೋಗಿದ್ದಾರೆ.

ನಗರದ ಪೊಲೀಸ್ ಠಾಣೆ ಹತ್ತಿರ, ತಾಲೂಕು ಕ್ರೀಡಾಂಗಣದ ಹತ್ತಿರ ಸೇರಿ ನಗರದ ವಿವಿಧೆಡೆ ಮಣ್ಣಿನ ಮಡಕೆ ಮಾರಾಟ ಜೋರಾಗಿದೆ.

ನಾನಾ ಬಗೆಯ ಮಡಕೆಗಳ ಮಾರಾಟ
ಆಧುನಿಕತೆಗೆ ತಕ್ಕಂತೆ ವಿನೂತನ ಶೈಲಿಯ ಮಡಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕಚೇರಿಯಲ್ಲಿ ಅಥವಾ ಮನೆಯಲ್ಲಿಡಲು ಬೇರೆ ಬೇರೆ ರೀತಿಯ ಮಡಕೆಗಳು ಸಿಗುತ್ತಿವೆ. ಹೂಜಿಯಾಕಾರದ, ಮೇಲ್ಭಾಗದಲ್ಲಿ ಮುಚ್ಚಳ ಇರುವ ವಿವಿಧ ವಿನ್ಯಾಸ ಹಾಗೂ ನಳ ಅಳವಡಿಸಿದ ಮಡಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸಾಮಾನ್ಯ ಮಡಕೆಗಿಂತ ನಳ ಹೊಂದಿರುವ ಮಡಿಕೆಗೆ ಹೆಚ್ಚಿನ ಬೇಡಿಕೆ ಇದೆ. 5 ಲೀಟರ್‌ದಿಂದ 30 ಲೀಟರ್ ಸಾಮರ್ಥ್ಯದ ಮಡಕೆಗಳು ಗಾತ್ರಕ್ಕನುಗುಣವಾಗಿ 200 ರಿಂದ 500 ರೂ. ದರಕ್ಕೆ ಮಾರಾಟವಾಗುತ್ತಿವೆ.

ಸೊಲ್ಲಾಪುರ- ಕೊಲ್ಲಾಪುರದ ಮಡಕೆಗಳು
ಪಕ್ಕದ ಮಹಾರಾಷ್ಟ್ರದ ಸೊಲ್ಲಾಪುರ- ಕೊಲ್ಲಾಪುರಗಳಿಂದ ಕಸೂತಿ ಹೊಂದಿದ ಆಕರ್ಷಕ ಮಡಕೆಗಳು ಮಾರುಕಟ್ಟೆಗೆ ಬಂದಿವೆ. ನಗರದ ಕುಂಬಾರರು ಅವುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಜತೆಗೆ ಅವುಗಳನ್ನು ಇಡಲು ಕಬ್ಬಿಣದ ಸ್ಟ್ಯಾಂಡ್ ಸಿದ್ಧಮಾಡಿ ಮಾರುತ್ತಿದ್ದಾರೆ.

ಅಲ್ಲಿಲ್ಲಿ ಅರವಟಿಕೆಗಳು
ನಗರದ ಪ್ರಮುಖ ಮಾರ್ಗ, ವೃತ್ತಗಳಲ್ಲಿ ನಾನಾ ಸಂಘಟನೆಗಳು ಜನರ ದಾಹ ನೀಗಿಸಲೆಂದು ಅರವಟಿಗೆಗಳನ್ನು ಸ್ಥಾಪಿಸಲಾಗಿದೆ. ಸಂಘಟನೆಗಳ ಪದಾಧಿಕಾರಿಗಳು ನಿತ್ಯ ಅರವಟಿಗೆಗಳಿಗೆ ನೀರು ತುಂಬಿಸುತ್ತಾರೆ. ಕೆಲವೆಡೆ ಮಣ್ಣಿನ ಮಡಕೆ, ಇನ್ನೂ ಕೆಲವೆಡೆ ನೀರಿನ ಕ್ಯಾನ್‌ಗಳನ್ನು ಇಡಲಾಗಿದೆ. ಅವುಗಳಿಗೆ ಗೋಣಿ ಚೀಲ ಸುತ್ತಿ, ನೀರು ತಂಪಾಗಿರಲು ವ್ಯವಸ್ಥೆ ಮಾಡಲಾಗಿದೆ. ಕಾರ್ಯ ನಿಮಿತ್ತ ನಗರಕ್ಕೆ ಬರುವ ಜನತೆ, ಅಲ್ಲಲ್ಲಿ ಸ್ಥಾಪಿಸಿರುವ ಅರವಟಿಗೆಯ ನೀರು ಕುಡಿದು ಮುಂದೆ ಹೋಗುತ್ತಾರೆ.

ಮಡಕೆಗಳನ್ನು ಸೊಲ್ಲಾಪುರ- ಕೊಲ್ಲಾಪುರದಿಂದ ತಂದು ಮಾರುತ್ತಿದ್ದೇವೆ. ಜನರು ಮಡಕೆ ಕೊಳ್ಳಲು ಆಸಕ್ತಿ ತೋರುತ್ತಾರೆ. ಆದರೆ, ಕಡಿಮೆ ಬೆಲೆಗೆ ಕೇಳುತ್ತಾರೆ. ಹಾಕಿದ ಬಂಡವಾಳ ಬಂದರೆ ಸಾಕು ಎನ್ನುವಂತಹ ಸ್ಥಿತಿ ಇದೆ.
– ದಾನಮ್ಮ ಹೊಳೆಪ್ಪಗೋಳ ಮಣ್ಣಿನ ಮಡಕೆ ವ್ಯಾಪಾರಿ

ಮನೆಯಲ್ಲಿ ಫ್ರಿಡ್ಜ್ ಇದೆ. ಮಣ್ಣಿನ ಮಡಿಕೆಯಲ್ಲಿನ ನೀರು ಕುಡಿದ ಅನುಭವ ಆಗೋದಿಲ್ಲ. ಈಗ ಮಣ್ಣಿನ ಮಡಕೆಯಲ್ಲೂ ಆಕರ್ಷಕ ವಿನ್ಯಾಸ ಮಾಡುತ್ತಿರುವುದರಿಂದ ಶ್ರೀಮಂತರೂ ಸಹ ಮಣ್ಣಿನ ಮಡಕೆಗಳನ್ನೇ ಬಳಸುತ್ತಿದ್ದಾರೆ.
– ಸದಾಶಿವ ಪಾಟೀಲ ಗ್ರಾಹಕ

Leave a Reply

Your email address will not be published. Required fields are marked *