ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ಬೇಡ

ಜಮಖಂಡಿ: ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ-2019ಕ್ಕೆ ರಾಜ್ಯಾಪಾಲರು ಅಂಗೀಕಾರ ನೀಡಬಾರದು ಎಂದು ರೈತ ಸಾಂತ್ವನ ಕೇಂದ್ರದ ಅಧ್ಯಕ್ಷ ಸಿ.ಆರ್. ಸುತಾರ ಒತ್ತಾಯಿಸಿದರು.

ಕೇಂದ್ರ ಸರ್ಕಾರ 2013ರಲ್ಲಿ ರಾಷ್ಟ್ರದಾದ್ಯಂತ ಜಾರಿಗೊಳಿಸಿರುವ ಏಕರೂಪ ಕಾಯ್ದೆಗೆ ರಾಜ್ಯ ಸಮ್ಮಿಶ್ರ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಕಾಯ್ದೆ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪರಿಹಾರ ವಿತರಿಸಬೇಕಾಗುತ್ತದೆ ಎಂಬ ರಾಜ್ಯ ಸರ್ಕಾರದ ತಾರತಮ್ಯ ಧೋರಣೆಯಿಂದ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪರಿಹಾರಧನ ಒಟ್ಟು ಮೊತ್ತದ ಶೇ.50ರಷ್ಟು ಹಣವನ್ನು ಭೂಸ್ವಾಧೀನ ಅಧಿಕಾರಿಯ ಖಾತೆಗೆ ಜಮಾ ಮಾಡುವುದು ತಿದ್ದುಪಡಿ ಕಾಯ್ದೆಯಡಿ ಕಡ್ಡಾಯವಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ.

ಕಾಯ್ದೆ ಜಾರಿ ವಿರೋಧಿಸಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು. ಮೊದಲ ಹಂತದ ಹೋರಾಟದಲ್ಲಿ ನಗರದ ಮಿನಿ ವಿಧಾನಸೌಧಕ್ಕೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ವೃಷಭ ಮಗದುಮ್, ಶಾಂತಿನಾಥ ಪಾಟೀಲ, ಭೀಮಪ್ಪ ಹಿಪ್ಪರಗಿ, ಬಸವಂತ ಹಿಪ್ಪರಗಿ, ಗಿರೀಶ ಬಳೋಲ, ಗೂಳಪ್ಪ ನ್ಯಾಮಗೌಡ, ಸಿದ್ದು ಬನಜನವರ, ದುಂಡಪ್ಪ ವದರಬಕ್ಕ, ಶಿವಾನಂದ ಬಾಡಗಿ, ಸುಮೋಧ ಕುಲಕರ್ಣಿ, ಪರಸಪ್ಪ ನಾಟಿಕಾರ ಇತರರಿದ್ದರು.