ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಜಮಖಂಡಿ: ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ದೇಸಾಯಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಶಿವಾನಂದ ನಾಯ್ಕಲಮಠ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ಎರಡು ತಿಂಗಳಿಂದ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾಗಿರುವುದರಿಂದ ಜನ-ಜಾನುವಾರುಗಳಿಗೆ ಬಹಳ ತೊಂದರೆಯಾಗಿದೆ. ನೀರಿಲ್ಲದೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ನೀರು ಬಿಡಿಸುವಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು.

ಮುಖಂಡ ರಾಜು ನದಾಫ್ ಮಾತನಾಡಿ, ತಾಲೂಕಿನಲ್ಲಿ ಜಲಕ್ಷಾಮ ಉಂಟಾಗಿರುವುದರಿಂದ ಈ ಭಾಗದ ಜನಪ್ರತಿನಿಧಿಗಳು ಕೃಷ್ಣಾ ನದಿಗೆ ನೀರು ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ಯಲ್ಲಪ್ಪ ಹೆಗಡೆ ಮಾತನಾಡಿ, ಜಾನುವಾರಗಳಿಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆಂಬಂತೆ ದಿಕ್ಕಿಗೊಂದು ಮೇವು ಬ್ಯಾಂಕ್ ಆರಂಭಿಸಿದ್ದಾರೆ. ಹೀಗಾದರೆ ರೈತರ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಗ್ರಾಮಕ್ಕೊಂದರಂತೆ ಮೇವು ಬ್ಯಾಂಕ್ ಆರಂಭಿಸಿ ಉಚಿತವಾಗಿ ಮೇವು ವಿತರಿಸಬೇಕು ಎಂದರು.

ರೈತ ಸಂಘದ ತಾಲೂಕಾಧ್ಯಕ್ಷ ಕಲ್ಲಪ್ಪ ಬಿರಾದಾರ ಮಾತನಾಡಿ, ರೈತರು ಕಬ್ಬು ಪೂರೈಸಿ ಮೂರ‌್ನಾಲ್ಕು ತಿಂಗಳಾದರೂ ಕೆಲ ಸಕ್ಕರೆ ಕಾರ್ಖಾನೆಗಳು ಬಿಲ್ ಪಾವತಿಸಿಲ್ಲ. ಕೆಲವರು ಕಡಿಮೆ ಹಣವನ್ನು ಪಾವತಿಸಿದ್ದಾರೆ. ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರು ಎಫ್‌ಆರ್‌ಪಿ ದರದಲ್ಲಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕೂಡಲೇ ಬಿಲ್ ಪಾವತಿಸಬೆಕು. ಇಲ್ಲದಿದ್ದರೆ ರೈತರೆಲ್ಲ ಒಂದಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿದ್ದುಗೌಡ ಪಾಟೀಲ, ಪ್ರದೀಪ ಮೆಟಗುಡ್ಡ, ಶ್ರೀಶೈಲ ಭೂಮಾರ, ಈಶ್ವರಯ್ಯ ಪೂಜಾರಿ, ಸಿದ್ದಪ್ಪ ಬನಜನವರ, ರಾಜು ಬುರ್ಲಿ, ಸಿದ್ದು ಪಾಟೀಲ, ಗೋಕುಲ್ ಮುರಡಿ ಇತರರಿದ್ದರು.

Leave a Reply

Your email address will not be published. Required fields are marked *