ಬೇಸಿಗೆ ಬಂದರೆ ಜೀವ ಭಯ ಶುರು

ಸಂಗಮೇಶ ಬಿರಾದಾರ
ಜಮಖಂಡಿ(ಗ್ರಾ): ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆ ಒಂದೆಡೆಯಾದರೆ, ಹನಿ ನೀರಿಗಾಗಿ ಪರದಾಡುವ ಸ್ಥಿತಿ ಮತ್ತೊಂದೆಡೆ. ಇಂತಹ ಇಕ್ಕಟ್ಟಿಗೆ ಸಿಲುಕಿ ತಾಲೂಕಿನ ಕೊಣ್ಣೂರ ಗ್ರಾಮದ ತಳವಾರ ತೋಟದ ವಸತಿ ಜನರು ಅಕ್ಷರಶಃ ಕಂಗಾಲಾಗಿದ್ದಾರೆ.

ಗ್ರಾಮದಿಂದ ಅಂದಾಜು 4 ಕಿ.ಮೀ. ದೂರದಲ್ಲಿರುವ ಈ ತೋಟದ ವಸತಿಯಲ್ಲಿ 50-60 ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶ ವಾರ್ಡ್ ನಂ.3 ರಲ್ಲಿದೆ. ಇಲ್ಲಿಯ ಜನ ಕಡು ಬಡವರಾಗಿದ್ದು, ಒಣಬೇಸಾಯ ಭೂಮಿ ಹೊಂದಿದ್ದಾರೆ. ಜತೆಗೆ ಜೀವನ ನಿರ್ವಹಣೆಗೆ ಉಪ ಕಸುಬುಗಳಾದ ಕುರಿಗಾರಿಕೆ ಮತ್ತು ಹೈನುಗಾರಿಕೆ ಅವಲಂಬಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಇಲ್ಲಿರುವ ನೀರಿನ ಮೂಲಗಳು ಸಂಪೂರ್ಣ ಬತ್ತುತ್ತವೆ. ಇದರಿಂದ ನಿವಾಸಿಗಳು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗುತ್ತದೆ. ನಿವಾಸಿಗಳಿಗೆ ಬೇಸಿಗೆ ಕಳೆಯುವುದೆಂದರೆ ಮರು ಜನ್ಮ ಪಡೆದ ಅನುಭವವಾಗುತ್ತದೆ.

ದನಕರುಗಳಿಗೆ ಮೇವಿನ ಕೊರತೆ
ಇಲ್ಲಿನ ನಿವಾಸಿಗಳು ಕಡಿಮೆ ಜಮೀನು ಹೊಂದಿದ್ದಾರೆ. ವಿಶಾಲವಾದ ಗುಡ್ಡಗಾಡು ಪ್ರದೇಶದಿಂದಾಗಿ ದನ, ಕುರಿಗಳ ಸಾಕಣೆ ಮಾಡುತ್ತಾರೆ. ಸತತ ಬರದಿಂದ ಈ ವರ್ಷ ಗುಡ್ಡಗಾಡು ಪ್ರದೇಶ ಒಣಗಿದೆ. ದನ, ಕುರಿಗಳಿಗೆ ಮೇವಿನ ಕೊರತೆ ಎದುರಾಗಿದೆ. ಹೀಗಾಗಿ ಹೈನುಗಾರಿಕೆಗೂ ಹೊಡೆತ ಬಿದ್ದಿದೆ.

ಟ್ಯಾಂಕರ್ ಇದ್ದರೂ ನೀರಿಲ್ಲ
ಬೇಸಿಗೆ ಕಾಲದಲ್ಲಿ ನಿವಾಸಿಗಳು ಅನುಭವಿಸುತ್ತಿದ್ದ ಪರಿಸ್ಥಿತಿ ಕಣ್ಣಾರೆ ಕಂಡಿದ್ದ ಈ ವಾರ್ಡ್‌ನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ದಿ. ಶ್ರೀಶೈಲ ತಳವಾರ ಎರಡು ನೀರಿನ ಗುಮ್ಮಿಗಳನ್ನು ಕೂಡ್ರಿಸುವಲ್ಲಿ ಶ್ರಮಿಸಿದ್ದರು. ಆದರೆ, ಅವುಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಬೇಸಿಗೆಯಲ್ಲಂತೂ ಹನಿ ನೀರೂ ದೊರೆಯುವುದಿಲ್ಲ. ಶ್ರೀಶೈಲ ತಳವಾರ ನಿಧನ ನಂತರ ನೀರಿನ ಗುಮ್ಮಿಗಳು ಪ್ರದರ್ಶನಕ್ಕಿಟ್ಟ ವಸ್ತುಗಳಂತೆ ಉಳಿದುಕೊಂಡಿವೆ ಎಂದು ನಿವಾಸಿಯೊಬ್ಬರು ಹೇಳಿ ಕಣ್ಣೀರು ಹಾಕಿದರು.

ಕುಡಿಯುವ ನೀರಿಗೆ ಏನಾದರೂ ವ್ಯವಸ್ಥೆ ಮಾಡಿ ಎಂದರೆ ಬೋರ್‌ವೆಲ್ ಕೊರೆಸಿ ನಿಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಷ್ಟು ಅನುದಾನ ಇಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಡ್ಡಿ ಮುರಿದಂತೆ ಹೇಳುತ್ತಾರೆ ಎಂದು ನಿವಾಸಿಗಳು ದೂರಿದರು.

ಉಪಾಧ್ಯಕ್ಷರ ದಬ್ಬಾಳಿಕೆ
ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ವಾರ್ಡ್ ಸದಸ್ಯೆ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಮರನೂರ ಅವರನ್ನು ಕೇಳಿದರೆ ಈ ಪ್ರದೇಶದಲ್ಲಿ ನೀರಿಲ್ಲ ಎಂದ ಮೇಲೆ ಎಲ್ಲಿಂದ ತರುವುದು? ಎಷ್ಟು ದಿನ ತರುವುದು? ಸುಮ್ಮನೆ ಹೋಗಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಆಶ್ರಯ ಮನೆ ಹಾಕಿಸಿ ಎಂದರೆ 10 ಸಾವಿರ ರೂ. ಲಂಚ ಕೇಳುತ್ತಾರೆ ಎಂದು ನಿವಾಸಿ ತುಳಜವ್ವ ನೇಗಳಿ ಗಂಭೀರ ಆರೋಪ ಮಾಡಿದರು.

ನರೇಗಾ ಕೆಲಸವಿಲ್ಲ
ಬೇಸಿಗೆ ಕಾಲದಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ಕನಿಷ್ಠ 150 ದಿನಗಳ ಉದ್ಯೋಗ ಖಾತ್ರಿಯನ್ನು ನರೇಗಾ ಯೋಜನೆ ಮೂಲಕ ನೀಡುತ್ತದೆ. ಆದರೆ, ಈ ವಸತಿ ಜನರು ನರೇಗಾ ಜಾಬ್‌ಕಾರ್ಡ್ ಹೊಂದಿಲ್ಲ. ಗ್ರಾಪಂ ಸದಸ್ಯರು ತಮಗೆ ಬೇಕಾದವರಿಗೆ ಜಾಬ್‌ಕಾರ್ಡ್ ನೀಡಿ ನರೇಗಾ ಯೋಜನೆ ಕೆಲಸಗಳನ್ನು ಯಂತ್ರಗಳ ಸಹಾಯದಿಂದ ಅರ್ಧಮರ್ಧ ಮಾಡಿ ಬಿಲ್ ಜೇಬಿಗಿಳಿಸಿಕೊಳ್ಳುತ್ತಾರೆ ಎಂದು ನಿವಾಸಿ ಆನಂದ ಮೀಶೆನ್ನವರ ಹೇಳುತ್ತಾರೆ.

ಪ್ರತಿ ವರ್ಷ ಬೇಸಿಗೆಯಲ್ಲಿ ನಾವು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇಲ್ಲಿವರೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಗದಗೆಪ್ಪ ಧಾರವಾಡ, ಗ್ರಾಮಸ್ಥ