ಎಂ.ಎನ್. ನದಾಫ್
ಜಮಖಂಡಿ: ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರತಿ ವರ್ಷ ಜೂನ್ನಲ್ಲಿ ಕೃಷ್ಣಾ ನದಿಗೆ 10ರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಪ್ರಸಕ್ತ ವರ್ಷ ಜೂನ್ ತಿಂಗಳ ಮೂರು ವಾರ ಮುಗಿದರೂ ನದಿ ಪಾತ್ರ ನೀರಿಲ್ಲದೆ ಭಣಗುಡುತ್ತಿದೆ.
ಮುಂದಿನ ದಿನಗಳಲ್ಲಿ ಮಳೆ ನಿರೀಕ್ಷೆ ಇಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ದೂಧಗಂಗಾ, ವೇದಗಂಗಾ ನದಿಗಳ ಮೂಲಕ ರಾಜಾಪುರ ಬ್ಯಾರೇಜ್ ಮಾರ್ಗವಾಗಿ ಕೇವಲ 500ರಿಂದ 600 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಿದ್ದು, ಹಿಪ್ಪರಗಿ ಬ್ಯಾರೇಜ್ದತ್ತ ಬರುತ್ತಿದೆ.
ಕೃಷ್ಣಾ ಕಣಿವೆಯಲ್ಲಿ ಮಳೆಯಾದರೆ ಮಾತ್ರ ನದಿಗೆ ನೀರು
ರಾಜ್ಯದಲ್ಲಿ ಸಾಕಷ್ಟು ಮಳೆ ಸುರಿದರೂ ಕೃಷ್ಣಾ ನದಿ ತುಂಬಿ ಹರಿಯುವುದಿಲ್ಲ. ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆಯಾದರೆ ಮಾತ್ರ ರಾಜ್ಯದ ಕೃಷ್ಣಾ ನದಿಯಲ್ಲಿ ನೆರೆ ಹಾವಳಿ ಉಂಟಾಗುವಷ್ಟು ಮಟ್ಟಿಗೆ ನೀರು ಹರಿದು ಬರುತ್ತದೆ.
ಕಬ್ಬು ನಾಟಿಗೆ ಹಿಂದೇಟು
ನೀರು ಬಾರದಿರುವುದರಿಂದ ನದಿ ತೀರದ ಗ್ರಾಮಗಳ ಜಮೀನುಗಳಲ್ಲಿ ಈ ಬಾರಿ ಕಬ್ಬು ನಾಟಿ ಮಾಡಲು ರೈತರು ಹಿಂದೇಟು ಹಾಕುವಂತಾಗಿದೆ. ಹವಾಮಾನ ತಜ್ಞರು ಮಳೆಯಾಗುತ್ತದೆ ಎಂದು ಹೇಳುತ್ತಿದ್ದರೂ ಸಮರ್ಪಕವಾಗಿ ಮಳೆ ಸುರಿಯುತ್ತಿಲ್ಲ. ರೈತರು ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ.
ಒರತೆ ನೀರಿಗಾಗಿ ಸಾವಿರಾರು ರೂ. ಖರ್ಚು
ಮಳೆಗಾಲ ಪ್ರಾರಂಭವಾದರೂ ಕೃಷ್ಣಾ ನದಿಗೆ ನೀರು ಬಾರದೆ ತೀವ್ರ ಸಮಸ್ಯೆ ಎದುರಾಗಿದೆ. ರೈತರು ನದಿಯಲ್ಲಿ ಜೆಸಿಬಿ ಸಹಾಯದಿಂದ ಸಾವಿರಾರು ರೂ. ಖರ್ಚು ಮಾಡಿ ದೊಡ್ಡ ಗುಂಡಿಗಳನ್ನು ತೋಡಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತಾಗಿದೆ.
ಮಹಾರಾಷ್ಟ್ರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಶುರುವಾಗಿದೆ. ಸದ್ಯಕ್ಕೆ ಎಲ್ಲ ಬ್ಯಾರೇಜ್ಗಳ ಬಾಗಿಲುಗಳನ್ನು ತೆರೆದಿರುವುದರಿಂದ ಡೆಡ್ ಸ್ಟೋರೇಜ್ ನೀರು ಹರಿದು ಬರುತ್ತಿದೆ. ಒಂದು ವಾರದಲ್ಲಿ ಹಿಪ್ಪರಗಿ ಬ್ಯಾರೇಜ್ವರೆಗೆ ನೀರು ಬರುವ ಸಾಧ್ಯತೆ ಇದೆ.
ವಿ.ಎಸ್.ನಾಯಕ, ಸಹಾಯಕ ಇಂಜಿನಿಯರ್ ಹಿಪ್ಪರಗಿ ಬ್ಯಾರೇಜ್
ಜೂನ್ ಬಂದರೂ ಬೇಸಿಗೆ ಕಾಲದಂತೆ ವಾತಾವರಣ ಇದೆ. ನದಿಗೆ ನೀರು ಬರುತ್ತಿಲ್ಲ. ಸರಿಯಾಗಿ ಮಳೆನೂ ಆಗುತ್ತಿಲ್ಲ. ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ.
ಮಲ್ಲು ಪಾಟೀಲ, ಭೀಮಪ್ಪ ಸವದಿ, ಬಸವರಾಜ ಮಿರ್ಜಿ, ರೈತರು