ಹೈಪವರ್ ಕಮಿಟಿ ಸಭೆ ನಡೆಸಲು ಆಗ್ರಹ

ಜಮಖಂಡಿ: ದಲಿತರ ಮೇಲಿನ ದೌರ್ಜನ್ಯ ತಡೆ ಕುರಿತು ಆರು ತಿಂಗಳಿಗೊಮ್ಮೆ ಹೈಪವರ್ ಕಮಿಟಿ ಸಭೆ ನಡೆಸಿ ಕ್ರಮ ಕೈಗೊಳ್ಳುವುದನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಕೈಬಿಟ್ಟಿದೆ. ಕಾರಣ ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಬೇಕು. ಹೈಪವರ್ ಕಮಿಟಿ ಸಭೆ ಜರುಗಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಗವಾರ ಒತ್ತಾಯಿಸಿದರು.

ಪ್ರಿಯಾಂಕ ಖರ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಮೇಲೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯಗಳ ಪ್ರವೇಶ ಮಿತಿ ಕಡಿತಗೊಳಿಸಿದ್ದಾರೆ. ಅದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಸತಿನಿಲಯದಿಂದ ವಂಚಿತರಾಗುತ್ತಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದ್ದ ಸುತ್ತೋಲೆ ಪುನಃ ಜಾರಿಗೊಳಿಸಬೇಕು. ನ್ಯಾ.ಎ.ಜೆ. ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಆರಂಭಿಸುವ ಸರ್ಕಾರದ ಮಹತ್ವದ ನಿರ್ಧಾರವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ಮುತ್ತಣ್ಣ ಮೇತ್ರಿ ಮಾತನಾಡಿ, ಸಸಾಲಟ್ಟಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ದುಷ್ಕರ್ವಿುಗಳು ತಮ್ಮ ಶಿಕ್ಷೆಯ ಅವಧಿ ಪೂರೈಸಿದ ಬಳಿಕ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ದಸಂಸ ತಾಲೂಕು ಘಟಕದ ಸಂಚಾಲಕ ಉದಯ ಕಡಕೋಳ ಮಾತನಾಡಿದರು.

ದಸಂಸ ಬೆಂಗಳೂರು ವಿಭಾಗೀಯ ಘಟಕದ ಸಂಚಾಲಕ ಜೀವನಹಳ್ಳಿ ವೆಂಕಟೇಶ, ದಸಂಸ ಜಿಲ್ಲಾ ಘಟಕದ ಸಂಚಾಲಕ ಹನುಮಂತ ಚಿಮ್ಮಲಗಿ, ಜಿಲ್ಲಾ ಘಟಕದ ಖಜಾಂಚಿ ಸಂಗಣ್ಣ ಮಡ್ಡಿ, ಜಿಲ್ಲಾ ಸಂಘಟನಾ ಸಂಚಾಲಕ ಆನಂದ ದೊಡಮನಿ, ಬಾಗಲಕೋಟೆ ತಾಲೂಕು ಘಟಕದ ಸಂಚಾಲಕ ಪ್ರಭು ದೊಡಮನಿ, ಮಾರುತಿ ಮರೇಗುದ್ದಿ ಇದ್ದರು.

Leave a Reply

Your email address will not be published. Required fields are marked *