ಕೃಷ್ಣೆಗೆ ನೀರು ಬಿಡಿಸಲು ಮುಂದಾಗದ ಸರ್ಕಾರ

ಜಮಖಂಡಿ: ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಜನ ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿದ್ದರೂ ಎರಡ್ಮೂರು ತಿಂಗಳಿನಿಂದ ರಾಜ್ಯದ ಮುಖ್ಯಮಂತ್ರಿಯಾಗಲಿ ಅಥವಾ ನೀರಾವರಿ ಮಂತ್ರಿಯಾಗಲಿ ಕೃಷ್ಣೆಗೆ ಮಹಾರಾಷ್ಟ್ರ ಸರ್ಕಾರದಿಂದ ನೀರು ಬಿಡಿಸಲು ಮುಂದಾಗುತ್ತಿಲ್ಲ. ಸರ್ಕಾರ ಜೀವಂತ ಇದೆಯೋ ಅಥವಾ ನಿಷ್ಕ್ರಿಯವಾಗಿದೆಯೋ? ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಪ್ರಶ್ನಿಸಿದರು.

ಸಾಕಷ್ಟು ಬಾರಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಭಾಗದ ಜನಪ್ರತಿನಿಗಳು ಮನವಿ ಸಲ್ಲಿಸಿದ್ದಾರೆ. ಸೌಜನ್ಯಕ್ಕಾದರೂ ನೀರು ಬಿಡಿಸುವ ಪ್ರಯತ್ನ ಮಾಡಲಿಲ್ಲ. ನದಿ ಬತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ಆದರೆ, ಇದನ್ನು ಗಮನಿಸದೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿದೇಶಿ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಸಿಎಂ ತಮ್ಮ ಖುರ್ಚಿ ಭದ್ರಪಡಿಸಿಕೊಳ್ಳುವಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಳೆದ ಬಾರಿ ಬಿಜೆಪಿ ನಿಯೋಗ ನೀರು ಬಿಡಿಸುವ ಕಾರ್ಯ ಮಾಡಿತ್ತು. ಅಂದು ಮಹಾರಾಷ್ಟ್ರ ಸರ್ಕಾರ ಆಲಮಟ್ಟಿಯಿಂದ ನಾಲ್ಕು ಟಿಎಂಸಿ ನೀರು ಬಿಟ್ಟರೆ ಕೊಯ್ನ ಜಲಾಶಯದಿಂದ ನಾಲ್ಕು ಟಿಎಂಸಿ ನೀರು ಬಿಡುತ್ತೇವೆ ಎಂದು ಹೇಳಿತ್ತು. ಈ ಒಪ್ಪಂದವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿತ್ತು. ಆದರೆ, ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಆಪಾದಿಸಿದರು.

ನಾಲ್ಕನೇ ಬಾರಿಗೆ ಬಾಗಲಕೋಟೆ ಕ್ಷೇತ್ರದ ಜನರು ಪಿ.ಸಿ. ಗದ್ದಿಗೌಡರನ್ನು ಆಯ್ಕೆ ಮಾಡಿದ್ದಾರೆ. ಈ ಭಾಗದ ಕುಡಚಿ ಬಾಗಲಕೋಟೆ ರೈಲ್ವೆ ಮಾರ್ಗವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಕೇಂದ್ರದ ಸಚಿವರಿಗೆ, ಸಂಸದರಿಗೆ ಒತ್ತಾಯಿಸಲಾಗುವುದು ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಕೇಶ ಲಾಡ್, ಬಸವರಾಜ ಬಿರಾದಾರ, ಅಜಯ ಕಡಪಟ್ಟಿ, ಬಸವರಾಜ ಮರನೂರ, ಕುಶಾಲ ವಾಘಮೋರೆ, ಪ್ರಶಾಂತ ಚರಕಿ, ಶ್ರೀಧರ ಕನ್ನೂರ, ಸಂಗಮೇಶ ದಳವಾಯಿ, ಪ್ರಶಾಂತ ಗಾಯಕವಾಡ ಇದ್ದರು.

ಪ್ರತ್ಯೇಕ ರಾಜ್ಯವೇ ಸೂಕ್ತ
ಸಮ್ಮಿಶ್ರ ಸರ್ಕಾರ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿಲ್ಲ. ಮುಖ್ಯಮಂತ್ರಿಯವರು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಈಗಿನ ಬೆಳವಣಿಗೆಯನ್ನು ನೋಡಿದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿಸುವುದು ಸೂಕ್ತ ಎಂಬ ಭಾವನೆ ಮೂಡುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಹೇಳಿದರು.

Leave a Reply

Your email address will not be published. Required fields are marked *