ಜಿಲ್ಲೆಗೆ ಗದ್ದಿಗೌಡರ ಶೂನ್ಯ

ಜಮಖಂಡಿ: ಸಂಸದ ಪಿ.ಸಿ.ಗದ್ದಿಗೌಡ ಅವರು 15 ವರ್ಷದಲ್ಲಿ ಜಿಲ್ಲೆಯಲ್ಲಿ ಕೇಂದ್ರದ ವಿಷೇಶ ಅನುದಾನ ತಂದಿಲ್ಲ, ಜಿಲ್ಲೆಯಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿಲ್ಲ ಎಂದು ಕಾಂಗ್ರೆಸ್ ೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಆರೋಪಿಸಿದರು.

ತಾಲೂಕಿನ ಮುತ್ತೂರು ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಭವ್ಯ ಬಾಗಲಕೋಟೆ ಜಿಲ್ಲೆ ನಿರ್ಮಿಸುವಲ್ಲಿ ಸಂಕಲ್ಪ ತೊಟ್ಟಿದ್ದೇನೆ ಎಲ್ಲರೂ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಜಿಪಂ ಅಧ್ಯಕ್ಷೆಯಾಗಿದ್ದ 28 ತಿಂಗಳ ಅವಧಿಯಲ್ಲಿ ಕುಡಿವ ನೀರಿಗಾಗಿ ಒಂದು ಕೋಟಿ ವಿಶೇಷ ಅನುದಾನ ತಂದಿದ್ದೇನೆ. ಆದರೆ ಇವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಒಂದು ಬಾರಿ ಅವಕಾಶ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಹೇಗೆ ಕಾರ್ಯ ನಿರ್ವಹಿಸುತ್ತೇನೆ ಎಂಬುದನ್ನು ನೋಡಿ ಎಂದರು.

ಮಾಜಿ ಶಾಸಕ ವಿಜಯನಾಂದ ಕಾಶಪ್ಪನವರ ಮಾತನಾಡಿ, ದಿ. ಸಿದ್ದು ನ್ಯಾಮಗೌಡ ಅವರ ಕನಸಿನ ಕೂಸು ಬಾಗಲಕೋಟೆ-ಕುಡಚಿ ರೈಲು ಮಾರ್ಗ ಖಜ್ಜಿಡೋಣಿಗೆ ಬಂದು ನಿಂತಿದೆ. ವೀಣಾ ಕಾಶಪ್ಪನವರ ಆಯ್ಕೆಯಾದರೆ ಆ ರೈಲನ್ನು ಜಮಖಂಡಿವರೆಗೆ ತಂದೆ ಇಲ್ಲಿಗೆ ಬರುತ್ತೇವೆ ಎಂದರು.

ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಮೋದಿ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ. ಅವರ ವೈಫಲ್ಯದಿಂದ 43 ಯೋಧರನ್ನು ಕಳೆದುಕೊಳ್ಳುವಂತಾಯಿತು. ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದೆ ಅದನ್ನು ಮರೆಮಾಚಲು ಯೋಧರನ್ನು, ದೇಶದ ರಕ್ಷಣೆ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಭೂ ಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ, ನ್ಯಾಯವಾದಿ ಎನ್.ಎಸ್. ದೇವರವರ, ಮುತ್ತಣ್ಣ ಹಿಪ್ಪರಗಿ, ಬಿ.ಕೆ. ಕೊಣ್ಣೂರ ಮಾತನಾಡಿದರು.

ಪಾಸಗೌಡ ಪಾಟೀಲ, ರಕ್ಷಿತಾ ಈಟಿ, ಶ್ಯಾಮರಾವ ಘಾಟಗೆ, ನಜೀರ ಕಂಗನೊಳ್ಳಿ, ಇಲಾಹಿ ಕಂಗನೊಳ್ಳಿ, ಮಹೇಶ ಕೋಳಿ, ಸಿದ್ದು ಮೀಶಿ, ಎಂ.ಎ. ಸದಲಗಿ, ಸುಂದ್ರವ್ವ ಬೆಳಗಲಿ ಇತರರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ ಸ್ವಾಗತಿಸಿ ನಿರೂಪಿಸಿದರು.

ಮತ ಉಡುಗೊರೆ ಕೊಡಿ
ಮುತ್ತೂರ ಗ್ರಾಮದಲ್ಲಿ ವೀಣಾ ಕಾಶಪ್ಪನವರ ಗ್ರಾಮ ದೇವತೆ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ನಿಮ್ಮನೆ ಮಗಳಾಗಿ ಮತಯಾಚನೆಗೆ ಬಂದಿದ್ದೇನೆ. ನನಗೆ ತವರು ಮನೆ ಉಡುಗೊರೆಯಾಗಿ ಪ್ರತಿಯೊಬ್ಬರೂ ಒಂದು ಮತವನ್ನು ನನ್ನ ಒಡಲಿಗೆ ಹಾಕಿ ಎಂದು ಮನವಿ ಮಾಡಿದರು.

ಜಾಲಿ ಮೂಡ್
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮುತ್ತೂರ ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬುಲೆಟ್ ಬೈಕ್ ಏರಿ ಕೆಲಹೊತ್ತು ಜಾಲಿ ರೈಡ್ ಮಾಡಿದರು.

Leave a Reply

Your email address will not be published. Required fields are marked *