ಬೇಡಿಕೆ ಇರುವ ಕೋರ್ಸ್ ತೆರೆಯಿರಿ

ಜಮಖಂಡಿ: ಪದವಿ ಪಡೆದ ನಂತರ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾವು ಆಯ್ಕೆಯಾಗುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿದಲ್ಲಿ ವಿಶ್ವವಿದ್ಯಾಲಯದ ಉದ್ದೇಶ ಈಡೇರಿದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಮುಧೋಳ ರಸ್ತೆ ಪಕ್ಕದ ಕಟ್ಟಡದಲ್ಲಿ ಆರಂಭಿಸಲಾಗಿರುವ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಪ್ರದಾಯಿಕ ಕೋರ್ಸ್‌ಗಳನ್ನು ತೆರೆಯದೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವ ಕೋರ್ಸ್‌ಗಳನ್ನು ತೆರೆಯಬೇಕು. ಇಂದು ಬದಲಾವಣೆ ಬಯಸುತ್ತದೆ. ಇದಕ್ಕೆ ವಿಶ್ವವಿದ್ಯಾಲಯ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಕುಲಪತಿ ಶಿವಾನಂದ ಹೊಸಮನಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಜಮಖಂಡಿಯಲ್ಲಿ ಸ್ನಾತಕೋತ್ತರ ಕೇಂದ್ರ ತೆರೆಯಲಾಗಿದೆ. ಉದ್ಯಮಿಗಳಿಗೆ ಮತ್ತು ವ್ಯಾಪಾರೀಕರಣಕ್ಕೆ ಬೇಕಾಗುವ ಕೋರ್ಸ್‌ಗಳನ್ನು ಸ್ನಾತಕೋತ್ತರ ಕೇಂದ್ರದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

ಶಾಸಕ ಆನಂದ ನ್ಯಾಮಗೌಡ, ಮಾಜಿ ಸಿಂಡಿಕೇಟ್ ಸದಸ್ಯ ಸಂದೀಪ ಬೆಳಗಲಿ, ಕುಲಸಚಿವ ಸಿದ್ದು ಆಲಗೂರ ಮಾತನಾಡಿದರು. ಸಿಂಡಿಕೇಟ್ ಸದಸ್ಯರಾದ ನರಸಿಂಹ ರಾಯಚೂರ, ಪೂರ್ಣಿಮಾ ಪಟ್ಟಣಶೆಟ್ಟಿ, ನರಸಿಂಗ ಚಲವಾದಿ, ಉಪವಿಭಾಗಾಧಿಕಾರಿ ಇಕ್ರಮ್, ತಹಸೀಲ್ದಾರ್ ಪ್ರಶಾಂತ ಚನಗೊಂಡ, ವಕೀಲ ಎನ್.ಎಸ್. ದೇವರವರ, ಸಿಂಡಿಕೇಟ್ ಮಾಜಿ ಸದಸ್ಯ ರಮೇಶ ಸವದಿ ಇದ್ದರು.

ಸ್ನಾತಕೋತ್ತರ ಕೇಂದ್ರದ ಸಂಯೋಜಕ ಪ್ರೊ. ಮಲ್ಲಿಕಾರ್ಜುನ ಮರಡಿ ಸ್ವಾಗತಿಸಿದರು. ಉಪನ್ಯಾಸಕ ಸಿದ್ದಪ್ಪ ಮ್ಯಾಗೇರಿ ನಿರೂಪಿಸಿದರು.

ಮನವಿ ಸಲ್ಲಿಕೆ
ಸ್ನಾತಕೋತ್ತರ ಕೇಂದ್ರಕ್ಕೆ ದಿ. ಸಿದ್ದು ನ್ಯಾಮಗೌಡ ಸ್ನಾತಕೋತ್ತರ ಕೇಂದ್ರ ಎಂದು ನಾಮಕರಣ ಮಾಡಲು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕುಲಪತಿಗೆ ನಾಗರಿಕರ ಪರವಾಗಿ ಮನವಿ ಸಲ್ಲಿಸಲಾಯಿತು.