ತೀರದ ನೀರಿನ ಸಮಸ್ಯೆ

ಜಮಖಂಡಿ (ಗ್ರಾ): ಅಧಿಕಾರಿಗಳ ಅಸಡ್ಡೆ ಹಾಗೂ ಗ್ರಾಪಂ ಸದಸ್ಯರ ಬೇಜವಾಬ್ದಾರಿಯಿಂದ ತಾಲೂಕಿನ ಕೊಣ್ಣೂರ ಗ್ರಾಮದ ತಳವಾರ ತೋಟದ ವಸತಿಯಲ್ಲಿ ಕುಡಿವ ನೀರಿನ ಸಮಸ್ಯೆ ಇದೂವರೆಗೂ ನಿವಾರಣೆಯಾಗಿಲ್ಲ.

ಗ್ರಾಮದ ತಳವಾರ ತೋಟದ ವಸತಿಯಲ್ಲಿ ಕುಡಿವ ನೀರಿಗೆ ತತ್ವಾರ ಉಂಟಾಗಿದ್ದು, ಹಲವು ದಿನಗಳ ಹಿಂದೆ ಇಲ್ಲಿನ ಸಮಸ್ಯೆ ಕುರಿತು ವಿಜಯವಾಣಿ ಪತ್ರಿಕೆ ವರದಿ ಪ್ರಕಟಿಸಿ ಗಮನ ಸೆಳದಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸ್ಥಳೀಯ ಗ್ರಾಪಂಗೆ ಭೇಟಿ ನೀಡಿ ಸಮಸ್ಯೆ ಅರಿತು ಅಲ್ಲಿನ ಗುಮ್ಮಿಗಳಿಗೆ ಸಮೀಪದ ಹುದ್ದಾರ ವಸತಿಯಿಂದ ಪೈಪ್‌ಲೈನ್ ಜೋಡಿಸಿ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದರು.

ಯೋಜನೆ ಅದಲು ಬದಲು
ತೋಟದ ವಸತಿ ಜನರಿಗೆ ಕುಡಿವ ನೀರು ಒದಗಿಸಲು ನೀರಿನ ಮೂಲ ಹೆಚ್ಚಿರುವ ಹುದ್ದಾರ ವಸತಿಯಿಂದ 900 ಮೀ. ದೂರದಲ್ಲಿರುವ ತಳವಾರ ವಸತಿಗೆ ಪೈಪ್‌ಲೈನ್ ಜೋಡಿಸಿ ಎರಡು ಗುಮ್ಮಿಗಳಲ್ಲಿ ನೀರು ಸಂಗ್ರಹಿಸುವ ಯೋಜನೆಗೆ ಕ್ರಿಯಾಯೋಜನೆ ತಯಾರಿಸಿ ಅಂದಾಜು 1 ಲಕ್ಷ ರೂ. ಪೈಪ್‌ಗಳನ್ನೂ ಖರೀದಿಸಲಾಗಿತ್ತು. ಇನ್ನೇನು ಕಾಮಗಾರಿ ಆರಂಭವಾಗಬೇಕು ಎನ್ನುವಷ್ಟರಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ತಕರಾರು ಮಾಡಿ ಹುದ್ದಾರ ವಸತಿ ಬದಲು ಮುಗಳಖೋಡ ವಸತಿಯಿಂದ ನೀರನ್ನು ಸರಬರಾಜು ಮಾಡುವ ತೀರ್ಮಾನ ಕೈಗೊಂಡಿದ್ದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಮುಗಳಖೋಡ ವಸತಿಯಲ್ಲಿರುವ ಬೋರ್‌ವೆಲ್ ನೀರು ಅಲ್ಲಿಯ ಜನರಿಗೆ ಸಾಕಾಗುವುದಿಲ್ಲ. ತಳವಾರ ತೋಟದ ವಸತಿಗೂ ಅಲ್ಲಿಂದ ನೀರು ಪೂರೈಸುವುದು ಮುಂದಾಗಿದ್ದಕ್ಕೆ ವಸತಿ ಜನ ಅಸಮಾಧಾನಗೊಂಡಿದ್ದಾರೆ.

ಜನಪ್ರತಿನಿಧಿಗಳ ದಬ್ಬಾಳಿಕೆ
ತೋಟದ ವಸತಿ ಜನರು ಕುಡಿವ ನೀರಿನ ತೊಂದರೆ ಅನುಭವಿಸುತ್ತಿದ್ದರೆ ಸ್ಥಳೀಯ ಜನಪ್ರತಿನಿಧಿಗಳು ಅವರಿಗೆ ನೆರವಾಗುವುದನ್ನು ಬಿಟ್ಟು, ನೀರಿನ ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ಬರುವಂತೆ ಮಾಡಿ ಗ್ರಾಮದ ಮರ್ಯಾದೆ ಹಾಳು ಮಾಡಿದ್ದೀರಿ. ನೀವು ಯಾರನ್ನು ಕೇಳಿ ಹೋರಾಟ ಮಾಡಿದ್ದಿರೋ, ಯಾವ ಪತ್ರಿಕೆಯಲ್ಲಿ ವರದಿ ಮಾಡಿಸಿದ್ದೀರೋ ಅವರಿಂದಲೇ ನೀರಿನ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೆದರಿಸುತ್ತಿರುವುದರಿಂದ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

ಉಪವಾಸ ಸತ್ಯಾಗ್ರಹ
ನೀರಿನ ಸಮಸ್ಯೆಯಿಂದ ಕಂಗಾಲಾಗಿರುವ ಜನರು ಸಮಸ್ಯೆ ಬಗೆಹರಿಸದ ಗ್ರಾಪಂ ಮತ್ತು ತಾಲೂಕಾಡಳಿತ ವಿರುದ್ಧ ಏ.8ರಂದು ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.
ಮುಗಳಖೋಡ ವಸತಿಯ ಬೋರ್‌ವೆಲ್ ನೀರು ತಳವಾರ ವಸತಿಗೆ ಪೂರೈಸಲು ನಿರ್ಧರಿಸಲಾಗಿತ್ತು. ಆ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ತಿಳಿದು ಬಂದಿದೆ. ಬೋರ್‌ವೆಲ್ 20 ಮೀ.ನ 2 ಪೈಪ್‌ಗಳು ಇಳಿಯುವಷ್ಟು ಆಳವಿದೆ. ಪೈಪ್‌ಗಳು ಇಳಿಸಿದ ನಂತರ ನೀರು ಹೆಚ್ಚಾದರೆ ಮಾತ್ರ ಅಲ್ಲಿಂದ ನೀರು ತರುತ್ತೇವೆ. ಇಲ್ಲದಿದ್ದರೆ ಹುದ್ದಾರ ವಸತಿಯಿಂದ ನೀರನ್ನು ಸರಬರಾಜು ಮಾಡಲಾಗುವುದು.
ಪಾಂಚಾಳ ಜಿಪಂ ಇಂಜಿನಿಯರ್