ಸಂಗಮೇಶ ಕೈ ಕುಂಚದಲ್ಲಿ ಮೂಡಿದ ಸಂತ್ರಸ್ತರ ಬವಣೆ

ಜಮಖಂಡಿ: ಪ್ರಸಕ್ತ ಪ್ರವಾಹದಿಂದ ಉಂಟಾದ ಅನಾಹುತಗಳು ಮತ್ತು ಸಂತ್ರಸ್ತರ ಬವಣೆ ಬಿಂಬಿಸುವ ಕಲಾಕೃತಿಯನ್ನು ತಾಲೂಕಿನ ತುಬಚಿ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಸಂಗಮೇಶ ಬಗಲಿ ರಚಿಸಿ ಗಮನ ಸೆಳೆದಿದ್ದಾರೆ.

ಮೇಘರಾಜನ ಆರ್ಭಟ, ಜಲಾಶಯದ ಉಗ್ರ ನರ್ತನದಿಂದ ಕೃಷ್ಣೆ, ಘಟಪ್ರಭೆ, ಮಲಪ್ರಭೆ, ಕಾವೇರಿ ತಟದ ಗ್ರಾಮಸ್ಥರು ತತ್ತರಿಸಿದ್ದಾರೆ. ಜನ-ಜಾನುವಾರು ಸಹಾಯಕ್ಕೆ ಕೈ ಚಾಚುತ್ತಿರುವುದು, ಹೆತ್ತ ಮಕ್ಕಳಂತೆ ಜಾನುವಾರುಗಳನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ಯುತ್ತಿರುವುದು, ಎನ್‌ಡಿಆರ್‌ಎಫ್ ಪಡೆ ಸಂತ್ರಸ್ತರನ್ನು ರಕ್ಷಿಸುತ್ತಿರುವುದು, ಸಂತ್ರಸ್ತರ ಮನೆ, ಬೆಳೆ, ಆಸ್ತಿಯನ್ನು ಗಂಗಾಮಾತೆ ತನ್ನ ಬಾಹುಗಳಿಂದ ಬಾಚಿಕೊಂಡಿರುವುದು ಸೇರಿ ಮತ್ತಿತರ ಪ್ರಸಕ್ತ ಘಟನಾವಳಿಗಳನ್ನು ತಮ್ಮ ಕುಂಚದಲ್ಲಿ ಸೆರೆಹಿಡಿದಿದ್ದಾರೆ.
ಎಲ್ಲರೂ ಒಂದೇ ಎಂಬ ಭಾವನೆ ಈ ಕಲಾಕೃತಿಯಲ್ಲಿ ಬಿಂಬಿತವಾಗಿದ್ದು, ನಮ್ಮನ್ನು ರಕ್ಷಿಸಬೇಕಾದ ದೇವರೇ ಸಂತ್ರಸ್ತರ ಕಷ್ಟ ನೋಡಿ ಕಣ್ಣೀರು ಸುರಿಸುವ ಚಿತ್ರ ಮನಕಲಕುತ್ತದೆ.

ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆ ದಿಸೆಯಲ್ಲಿ ಪ್ರಕೃತಿಯಲ್ಲಿರುವ ಆಕಾಶ, ಭೂಮಿ, ಅಗ್ನಿ, ವಾಯು, ಜಲ ಇವುಗಳನ್ನು ರಕ್ಷಿಸಿ ಪೂಜಿಸಿ ಗೌರವಿಸಿದರೆ ಮಾತ್ರ ಇಂತಹ ವಿಕೋಪಗಳಿಗೆ ಕಡಿವಾಣ ಹಾಕಲು ಸಾಧ್ಯ. ಈ ಕುರಿತು ಪರಿಸರ ಸ್ನೇಹಿಯಾಗಿ ಇರಬೇಕು ಎಂಬುದು ನಮ್ಮೆಲ್ಲರ ಉದ್ದೇಶವಾಗಿರಬೇಕು ಎಂದು ಚಿತ್ರಕಲಾ ಶಿಕ್ಷಕ ಡಾ.ಸಂಗಮೇಶ ಬಗಲಿ ಹೇಳುತ್ತಾರೆ.

ಜಾಗೃತಿ ಮೂಡಿಸುವ ಕಲಾಕೃತಿ
15 ವರ್ಷಗಳಿಂದ ಡಾ.ಸಂಗಮೇಶ ಬಗಲಿ ಶಿಕ್ಷಕ ವೃತ್ತಿ ಜತೆಗೆ ಕಲಾಕೃತಿ ರಚಿಸುತ್ತಿದ್ದಾರೆ. ಪರಿಸರ, ಸ್ವಾತಂತ್ರೃ ಹೋರಾಟಗಾರರು, ದಾರ್ಶನಿಕರು, ಶರಣರು, ಚಿಂತಕರು, ವಿಜ್ಞಾನಿಗಳು, ಸಾಹಿತಿಗಳ ಚಿತ್ರ ಬಿಡಿಸಿದ್ದಾರೆ. ಜತೆಗೆ ಸಮಾಜ, ಪರಿಸರ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತಮ್ಮ ರಕ್ತದಿಂದ ಕಲಾಕೃತಿಗಳನ್ನು ರಚಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *