ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಜಮಖಂಡಿ: ರೈತರ ಸಾಲಮನ್ನಾ, ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಕೊಯ್ನ ಅಣೆಕಟ್ಟೆಯಿಂದ 4 ಟಿಎಂಸಿ ನೀರು ಬಿಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ರೈತ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.

ನಗರದ ಎ.ಜಿ. ದೇಸಾಯಿ ವೃತ್ತದಲ್ಲಿ ಕೆಲಕಾಲ ರಸ್ತೆ ಸಂಚಾರ ತಡೆದು ಬಳಿಕ ಮಿನಿ ವಿಧಾನಸೌಧವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿ ಹಣ ಕೊಡಿಸಬೇಕು. ಬಾಕಿ ಕೊಡದ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕೃಷ್ಣಾ ನದಿಗೆ ಕೊಯ್ನ ಜಲಾಶಯದಿಂದ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಬೆಳೆಗಳು ಒಣಗುತ್ತಿದ್ದು, ಸರ್ಕಾರ ರೈತರಿಗೆ ಪರಿಹಾರ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ಕಲ್ಲಪ್ಪ ಬಿರಾದಾರ, ಡಿಎಸ್‌ಎಸ್ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಮಾತನಾಡಿದರು. ಶಿರಗುಪ್ಪಿಯ ಮಂಗಲಾದೇವಿ ಮಠದ ಸಿದ್ಧಲಿಂಗೇಶ್ವರ ಸಾಧು ಮಹಾರಾಜರು, ದಾನೇಶ್ವರ ನಾಯಿಕ, ರಾಘವೇಂದ್ರ ಸಕಾನಟ್ಟಿ, ಶ್ರೀಶೈಲ ಭೂಮಾರ, ರಾಜು ನದಾಫ್, ಸಿದ್ದಪ್ಪ ಬಣಜನ್ನವರ, ಈಶ್ವರಯ್ಯ ಪೂಜಾರಿ, ಕಲ್ಲು ಮಹಿಷವಾಡಗಿ, ಆನಂದ ತಳವಾರ, ಬಸಪ್ಪ ಚೆನ್ನವೀರ, ಈಶ್ವರ ತೇಲಿ, ವೆಂಕಪ್ಪ ಗೊನಪ್ಪನ್ನವರ, ರುದ್ರಪ್ಪ ಬುರ್ಲಿ, ರವಿ ಬಬಲೇಶ್ವರ, ಪರಸಪ್ಪ ಕವಟಗಿ, ಹನುಮಂತ ಮಸ್ಕಿ, ಶಿವಪ್ಪ ಗಾಣಗೇರ, ಹನುಮಂತ ಬಿರಾದಾರ, ಸುರೇಶ ಮರನೂರ ಇತರರಿದ್ದರು. ಪಿಎಸ್‌ಐ ದಿನೇಶ ಜವಳಗಿ, ಎಎಸ್‌ಐ ಡಿ.ಎಂ. ಸಂಗಾಪುರ ಹಾಗೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.

Leave a Reply

Your email address will not be published. Required fields are marked *