ಬಸ್ ಹಾಯ್ದು ಬಾಲಕ ಸಾವು

ಜಮಖಂಡಿ: ನಗರದ ಹೊರವಲಯದ ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಪಕ್ಕದ ಆಜಾದ್ ನಗರದಲ್ಲಿ ಇಬ್ಬರು ಬಾಲಕರ ಮೇಲೆ ಬಸ್ ಹಾಯ್ದು ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ.

ಸೋಹೆಲ್ ಹುಸೇನ್ ಅಂಬಿ (10) ಮೃತ ಬಾಲಕ. ಮಸ್ತಾನ್ ಬಸೀರ್‌ವಾಲಿಕಾರ (10) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಎಲ್‌ಪಿಎಸ್ ಸರ್ಕಾರಿ ಉರ್ದು ಶಾಲೆಯಲ್ಲಿ ಸೋಹೆಲ್ 4ನೇ ತರಗತಿಯಲ್ಲಿ ಓದುತ್ತಿದ್ದ. ಬೆಳಗ್ಗೆ ಪರೀಕ್ಷೆಗೆಂದು ಶಾಲೆಗೆ ತೆರಳಿ ಶಾಲೆಯಿಂದ ಮಧ್ಯಾಹ್ನ ಶುಕ್ರವಾರದ ನಮಾಜ್‌ಗೆಂದು ಸಹಪಾಠಿಯೊಡನೆ ಮಸೀದಿಯತ್ತ ತೆರಳುತ್ತಿದ್ದಾಗ ಜವರಾಯನಂತೆ ಬಂದ ಬೆಳಗಾವಿ ಜಿಲ್ಲೆ ಖಾನಾಪುರ ಡಿಪೋಗೆ ಸೇರಿದ ಬಸ್ ಬಾಲಕನ ಮೇಲೆ ಹಾಯ್ದಿದೆ. ಬಾಲಕ ಸೋಹೆಲ್‌ನ ತಲೆ, ದೇಹದ ಭಾಗ ಛಿದ್ರ ಛಿದ್ರವಾಗಿದೆ. ಬಸ್ ಮೇಲೆ ಉದ್ರಿಕ್ತರು ಕಲ್ಲು ತೂರಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಚಾಲಕ ಹಾಗೂ ನಿರ್ವಾಹಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಮಹಾಂತೇಶ ಹೊಸಪೇಟ, ಪಿಎಸ್‌ಐ ದಿನೇಶ ಜವಳೆಕರ್ ಭೇಟಿ ನೀಡಿದರು.

ಪಾಲಕರ ಆಕ್ರಂದನ
ಮನೆ ಬೆಳಕಾಗಿದ್ದ ಮಗನನ್ನು ಕಳೆದುಕೊಂಡು ಸೋಹೆಲ್‌ನ ತಂದೆ ಹುಸೈನ್, ತಾಯಿ ಮಹಾಬೂಬಿ ಆಕ್ರಂದನ ಕಂಡು ನೆರದ ಜನಸ್ತೋಮದ ಕಣ್ಣಾಲಿಗಳು ನೀರಾದವು.

ಪ್ರಜ್ಞೆ ತಪ್ಪಿದ ಶಿಕ್ಷಕಿ
ಮರಣೋತ್ತರ ಪರೀಕ್ಷೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ತಂದಿದ್ದ ಮೃತ ಬಾಲಕನ ಮುಖ ನೋಡುತ್ತಿದ್ದಂತೆ ಶಾಲೆ ಶಿಕ್ಷಕಿಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದರು. ಶಾಲೆಯಲ್ಲಿ ಓದುವುದರಲ್ಲಿ ಮುಂದಿದ್ದ. ತುಂಟತನದಿಂದ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ ಎಂದು ಶಿಕ್ಷಕರು ಮಮ್ಮಲ ಮರುಗಿದರು.

ಶಾಲೆಗೆ ಬಂದ ವಿದ್ಯಾರ್ಥಿ ನಮಾಜ್‌ಗೆಂದು ತೆರಳಿದಾಗ ಅಪಘಾತವಾಗಿದೆ. ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು.
– ಎಂ.ಬಿ. ಮೋರಟಗಿ, ಬಿಇಒ ಜಮಖಂಡಿ