ಆರೋಪಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಜಮಖಂಡಿ: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಬಾಡಿಗೆ ಕಾರು ಚಾಲಕನನ್ನು ಕೊಲೆ ಮಾಡಿ ಕಾರು ಅಪಹರಿಸಿದ್ದ ಪ್ರಕರಣದ ಆರೋಪಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗುಂದಗಿ ಗ್ರಾಮದ ಶರಣಬಸವ ದೇಗಿನಾಳನಿಗೆ ಗಲ್ಲು ಶಿಕ್ಷೆ, ಆತನ ಸಹಚರರಾದ ರೇಬಣ್ಣ ಸೀತಿಮನಿ, ಅಯಾಳಸಿದ್ದ ದೊಡಮನಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಎರಡು ಲಕ್ಷ ರೂ. ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎ.ಕೆ. ನವೀನಕುಮಾರಿ ತೀರ್ಪು ನೀಡಿದ್ದಾರೆ.

ಮೃತನ ಪತ್ನಿಗೆ 3.5 ಲಕ್ಷ ರೂ. ಹಾಗೂ ಆತನ ತಾಯಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಘಟನೆ ವಿವರ: ನಗರದ ಕಾರು ಸ್ಟಾೃಂಡ್‌ನಲ್ಲಿ 2012 ಆಗಸ್ಟ್ 13 ರಂದು ಗುಂದಗಿ ಗ್ರಾಮದ ಮೂವರು ಆರೋಪಿಗಳು ಬೆಳಗಾವಿ ಜಿಲ್ಲೆ ಸವದತ್ತಿಗೆ ಹೋಗುವುದಿದೆ ಎಂದು ಬಾಡಿಗೆ ಕಾರು ಪಡೆದಿದ್ದರು. ಕಾರು ಚಾಲಕ ರಾಘವೇಂದ್ರ ಚನ್ನಪ್ಪ ಸಂಗೊಳ್ಳಿ ಅವರನ್ನು ರಾಮದುರ್ಗ ಸಮೀಪದಲ್ಲಿ ಕೈ ಕಾಲುಗಳನ್ನು ಕಟ್ಟಿ ಕಾರು ಅಪಹರಿಸಿ ರಾತ್ರಿ ಹುಬ್ಬಳ್ಳಿ- ವಿಜಯಪುರ ಹೆದ್ದಾರಿಯಲ್ಲಿರುವ ಕೊಲ್ಹಾರ ಹತ್ತಿರ ಕೃಷ್ಣಾ ನದಿಗೆ ಜೀವಂತವಾಗಿ ಎಸೆದು ಕೊಲೆ ಮಾಡಿದ್ದರು.

ನಂತರ ರಾಘವೇಂದ್ರನ ಶವ ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಶವದ ಬಟ್ಟೆಯಲ್ಲಿನ ಜಮಖಂಡಿ ಟೇಲರ್ ಎಂದಿರುವುದನ್ನು ಗುರುತಿಸಿ ಪೊಲೀಸರು ಜಮಖಂಡಿ ಠಾಣೆಗೆ ವಿಷಯ ತಲುಪಿಸಿದ್ದರು. ಮೃತನ ತಾಯಿ ಶಾಂತವ್ವ ಸಂಗೊಳ್ಳಿ ಮಗ ಕಾಣೆಯಾದ ಬಗ್ಗೆ ಜಮಖಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಾಂತವ್ವ ಅವರನ್ನು ನಿಡಗುಂದಿಗೆಗೆ ಕರೆಸಿಕೊಂಡು ಶವ ತೋರಿಸಿದಾಗ ಅದು ತಮ್ಮ ಮಗನ ಶವವೆಂದು ಗುರುತಿಸಿದ್ದರು. ತಮ್ಮ ಮಗನ ಕೊಲೆಯಾಗಿದ್ದು, ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.

ಹೊಸಪೇಟೆ ಪೊಲೀಸರಿಂದ ಬಂಧನ

ಜಮಖಂಡಿಯಲ್ಲಿ ಅಪಹರಿಸಿದ ಕಾರು ಮಾರಾಟಕ್ಕೆ ಆರೋಪಿಗಳು ಪುಣೆಯಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸಿದ್ದರು. ಆದರೆ, ಅವರು ತಮಗೆ ದೊಡ್ಡ ವಾಹನ ಬೇಕೆಂದು ಹೇಳಿದ್ದರು. ದೊಡ್ಡ ಕಾರಿಗಾಗಿ ಆರೋಪಿಗಳು ಹೊಸಪೇಟೆಗೆ ತೆರಳಿದ್ದರು. ಅಲ್ಲಿಯೂ ಕೂಡ ಬಳ್ಳಾರಿಗೆ ಹೋಗಬೇಕೆಂದು ಟವೆರಾ ವಾಹನ ಬಾಡಿಗೆ ಪಡೆದು ನಂತರ ಚಾಲಕನನ್ನು ಕೊಲೆ ಮಾಡಿ ನದಿಗೆ ಎಸೆದಿದ್ದರು. ಹೊಸಪೇಟೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಜಮಖಂಡಿಯ ಅಂದಿನ ಸಿಪಿಐ ಯು.ಬಿ. ಚಿಕ್ಕಮಠ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.