ಅಧ್ಯಾತ್ಮದಲ್ಲಿ ಅಪಾರ ಶಕ್ತಿ

ಜಮಖಂಡಿ: ಹಣ, ಆಸ್ತಿ, ಹೆಂಡತಿ, ಮಕ್ಕಳು ನಮ್ಮ ಜತೆ ಬರುವುದಿಲ್ಲ, ನಾವು ಮಾಡಿದ ಪುಣ್ಯದ ಕಾರ್ಯಗಳೇ ನಮ್ಮೊಂದಿಗೆ ಬರುತ್ತವೆ. ಅವುಗಳಿಂದ ನಮಗೆ ಮೋಕ್ಷ ಸಿಗುತ್ತದೆ ಎಂದು ಕರ್ನಾಟಕ ಕೇಸರಿ ಕುಲರತ್ನ ಭೂಷಣ ಮುನಿಮಹಾರಾಜರು ಹೇಳಿದರು.

ತಾಲೂಕಿನ ಹಿರೇಪಡಸಲಗಿ ಗ್ರಾಮದ ಜಮಖಂಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾರತ ಗೌರವ ಆಚಾರ್ಯ ರತ್ನ 1008 ದೇಶಭೂಷಣ ಮಹಾರಾಜರ ಸಭಾ ಮಂಟಪದಲ್ಲಿ ಭಗವಾನ ಮಹಾವೀರ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೂಲಮಂತ್ರ ಶ್ರೀನಮೋಕಾರ ಮಹಾಮಂತ್ರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವರೂಪಿ ದೇಹದ ಹೃದಯದಲ್ಲಿ ಪ್ರತಿಯೊಬ್ಬರೂ ದೇವರನ್ನು ಸ್ಥಾಪಿಸಿಕೊಳ್ಳಬೇಕು. ಅಧ್ಯಾತ್ಮದಲ್ಲಿ ಅಪಾರ ಶಕ್ತಿ ಇದೆ. ಗುರುವಿನ ಮೇಲೆ ದೃಢ ವಿಶ್ವಾಸ ಇದ್ದರೆ ಎಲ್ಲವನ್ನು ಪಡೆಯಲು ಸಾಧ್ಯ ಎಂದರು.

ಮರಣ ಉತ್ಸವ ಮಾಡುವುದು ಜೈನ ಧರ್ಮದಲ್ಲಿ ಮಾತ್ರ. ಅಸ್ತಿಯನ್ನು ನದಿಯಲ್ಲಿ ಬಿಡಬಾರದು, ಭೂಮಿಯಲ್ಲಿ ಹೂಳಬೇಕು. ನಮ್ಮ ಕರ್ಮಗಳೇ ನಮಗೆ ಹಿತಶತ್ರುಗಳಾಗಿವೆ ಎಂದರು.

ನಮೋಕಾರ ಮಂತ್ರ ಜೈನ ಧರ್ಮದ ಪವಿತ್ರ ಮಂತ್ರವಾಗಿದೆ. ಭಗವಾನರು ಭಕ್ತಿಯಿಂದ ಭಗವಾನರಾಗಿದ್ದಾರೆ. ಜೈನ ಧರ್ಮದ ಮುಖ್ಯ ಗುರಿ ಆತನ ಮುಕ್ತಿ ಮತ್ತು ಲೌಕಿಕ ಸಂಬಂಧಗಳಿಂದ ಶಾಶ್ವತ ಬಿಡುಗಡೆ. ಮಹಾವೀರರ ತತ್ತ್ವಗಳು ಅಹಿಂಸೆ, ಸತ್ಯ ಸಂಧತೆ, ಸಂಪತ್ತಿನ ಬಗ್ಗೆ ವ್ಯಾಮೋಹ ಕೂಡದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಕೃಷ್ಣಾ ತೀರ ರೈತ ಸಂಘದ ಅಧ್ಯಕ್ಷ ರಾಜೇಂದ್ರ ಪಾಟೀಲ, ತಾಪಂ ಮಾಜಿ ಸದಸ್ಯ ಪದ್ಮಣ್ಣ ಜಕನೂರ ಇತರರು ಪೂಜೆ ಸಲ್ಲಿಸಿದರು.

ನಾಗನೂರ ಗ್ರಾಮದಿಂದ ಕಾರ್ಖಾನೆ ಆವರಣದವರೆಗೆ ಮಹಾವೀರ ತಿರ್ಥಂಕರರ ಮೂರ್ತಿಯನ್ನು ಸಕಲ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಪೂಜಾ ವಿಧಿ ವಿಧಾನಗಳು ವೇದಿಕೆಯಲ್ಲಿ ಜರುಗಿದವು.

ಸಿದ್ದು ನ್ಯಾಮಗೌಡ ಅಜರಾಮರ

ಬೇಸಿಗೆಯಲ್ಲಿ ನದಿ ಬತ್ತಿ ರೈತರು, ಪಶು, ಪಕ್ಷಿಗಳು ಸಂಕಷ್ಟ ಪಡಬಾರದು ಎಂದು ದಿ.ಸಿದ್ದು ನ್ಯಾಮಗೌಡರು ಬ್ಯಾರೇಜ್ ನಿರ್ಮಿಸಿ ನದಿ ತೀರದಲ್ಲಿ ಹಸಿರು ವೃದ್ಧಿಸಿದ್ದಾರೆ. ಅವರು ಯಾವಾಗಲೂ ಅಜರಾಮರವಾಗಿರುತ್ತಾರೆ. ಅವರು ಪುಣ್ಯದ ಕೆಲಸ ಮಾಡಿದ್ದಾರೆ ಎಂದು ದಿ. ಸಿದ್ದು ನ್ಯಾಮಗೌಡ ಅವರನ್ನು ಜೈನ ಮುನಿಗಳು ಸ್ಮರಿಸಿದರು.

ಭಾವುಕರಾದ ಸಿದ್ದು ನ್ಯಾಮಗೌಡರ ಪುತ್ರ-ಸೊಸೆ

ಕುಲರತ್ನ ಭೂಷಣ ಮಹಾರಾಜರು ದಿ.ಸಿದ್ದು ನ್ಯಾಮಗೌಡ ಕುರಿತು ಮಾತನಾಡುವ ವೇಳೆ ವೇದಿಕೆಯಲ್ಲಿ ಪೂಜೆೆಯಲ್ಲಿ ನಿರತರಾಗಿದ್ದ ಸಿದ್ದು ನ್ಯಾಮಗೌಡ ಪುತ್ರ ಬಸವರಾಜ ನ್ಯಾಮಗೌಡ, ಕಾವ್ಯಾ ಬಸವರಾಜ ನ್ಯಾಮಗೌಡ ಭಾವುಕರಾಗಿ ಕಣ್ಣೀರು ಹಾಕಿದರು.